2050 ಕೋಟಿ ಅಮೆರಿಕನ್ ಡಾಲರ್, ಭಾರತದ ರೂಪಾಯಿ ಲೆಕ್ಕದಲ್ಲಿ 1,56,872.77 (1.56 ಲಕ್ಷ ಕೋಟಿ ರೂಪಾಯಿ) ಸಂಪತ್ತು ಕೆಲವೇ ಗಂಟೆಗಳಲ್ಲಿ ಕರಗಿಹೋಯಿತು. ಜಗತ್ತಿನ ಎರಡನೇ ಅತಿದೊಡ್ಡ ಶ್ರೀಮಂತ ಜೆಫ್ ಬೆಜೋಸ್ (Jeff Bezos) ಶುಕ್ರವಾರ ಕಳೆದುಕೊಂಡ ಹಣದ ಲೆಕ್ಕಾಚಾರ ಇದು. ಅಮೆಜಾನ್.ಕಾಮ್ ಇಂಕ್ನ ಫಲಿತಾಂಶದಿಂದ ಹೂಡಿಕೆದಾರರು ನಿರಾಶೆಗೊಂಡಿದ್ದಾರೆ, ಇದರ ಜತೆಗೆ ಟೆಕ್ನಾಲಜಿ ಸ್ಟಾಕ್ಗಳಿಗೆ ವರ್ಷಗಳಲ್ಲೇ ಬಹಳ ಕೆಟ್ಟ ತಿಂಗಳು ಇದು. ಶುಕ್ರವಾರದಂದು ಅಮೆಜಾನ್ನ ತ್ರೈಮಾಸಿಕ ಫಲಿತಾಂಶ ಪ್ರಕಟವಾಯಿತು. ಅದರಲ್ಲಿ ನಷ್ಟ ವರದಿ ಮಾಡಲಾಗಿದ್ದು, 2001ನೇ ಇಸವಿಯ ನಂತರದಲ್ಲಿ ಮಾರಾಟದ ಬೆಳವಣಿಗೆ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ. ಇತ್ತ ಜೆಫ್ ಬೆಜೋಸ್ ನಿವ್ವಳ ಆಸ್ತಿ ಮೌಲ್ಯ 14,840 ಕೋಟಿ ಅಮೆರಿಕನ್ ಡಾಲರ್ಗೆ ಕುಸಿಯಿತು ಎಂದು ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕ ವರದಿ ಮಾಡಿದೆ. ನಿಮಗೆ ಗೊತ್ತಾ, ಇದೇ ವರ್ಷದಲ್ಲಿ ಬೆಜೋಸ್ರ ಆಸ್ತಿ ಗರಿಷ್ಠ ಮಟ್ಟ 21,000 ಕೋಟಿ ಅಮೆರಿಕನ್ ಡಾಲರ್ ಮುಟ್ಟಿತ್ತು.
ಷೇರು ಮಾರುಕಟ್ಟೆಯಲ್ಲಿನ ಕುಸಿತದ ಕಾರಣಕ್ಕೆ ವಿಶ್ವದ 500 ಸಿರಿವಂತ ವ್ಯಕ್ತಿಗಳ ಸಂಪತ್ತು ಒಟ್ಟಾರೆಯಾಗಿ 5400 ಕೋಟಿ ಅಮೆರಿಕನ್ ಡಾಲರ್ಗೂ ಹೆಚ್ಚು ಕರಗಿದೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ. ಎಸ್ಅಂಡ್ಪಿ 500 ಸೂಚ್ಯಂಕವು ಶೇ 3.6ರಷ್ಟು ಕುಸಿದರೆ, ನಾಸ್ಡಾಕ್ 100 ಶೇ 4.5ರಷ್ಟು ನೆಲ ಕಚ್ಚಿತು. ಆ ಮೂಲಕ 2008ರಿಂದ ಈಚೆಗೆ ಅತಿ ಕೆಟ್ಟ ತಿಂಗಳನ್ನು 2022ರ ಏಪ್ರಿಲ್ನಲ್ಲಿ ಕಂಡಂತಾಯಿತು.
58 ವರ್ಷ ವಯಸ್ಸಿನ ಬೆಜೋಸ್, ವಿಶ್ವದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ. ಅವರಿಗಿಂತ ಮುಂದಿರುವವರು ಎಲಾನ್ ಮಸ್ಕ್. ಇದೀಗ 2022ರಲ್ಲಿ ಅತಿ ಹೆಚ್ಚು ಸಂಪತ್ತು ನಷ್ಟ ಅನುಭವಿಸಿದ ಮೂರನೇ ವ್ಯಕ್ತಿ ಎನಿಸಿಕೊಂಡಿದ್ದಾರೆ. ಜನವರಿ 1, 2022ರಿಂದ ಈಚೆಗೆ 4400 ಕೋಟಿ ಅಮೆರಿಕನ್ ಡಾಲರ್ ನಿವ್ವಳ ಆಸ್ತಿ ಮೌಲ್ಯ ಇಳಿದಿದೆ. ಅಮೆಜಾನ್ಗೆ ಹೆಚ್ಚಿನ ಕಾರ್ಮಿಕ ವೆಚ್ಚದ ಹೊರೆ ಬಿದ್ದಿದೆ. ಜತೆಗೆ ಕೊರೊನಾ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ನೇಮಕಾತಿ ಮಾಡಿಕೊಳ್ಳಲಾಯಿತು. ಹಣದುಬ್ಬರದ ಏರಿಕೆಯಿಂದಾಗಿ ಮಾರಾಟಕ್ಕೆ ಪೆಟ್ಟು ಬಿದ್ದಿದೆ.
ಮಾರ್ಚ್ 31, 2022ಕ್ಕೆ ಕೊನೆಯಾದ ತ್ರೈಮಾಸಿಕಕ್ಕೆ ಅಮೆಜಾನ್ 380 ಕೋಟಿ ಅಮೆರಿಕನ್ ಡಾಲರ್ ನಿವ್ವಳ ನಷ್ಟವನ್ನು ದಾಖಲಿಸಿದೆ. ಅದೇ ಕಳೆದ ವರ್ಷ ಇದೇ ಅವಧಿಗೆ 810 ಕೋಟಿ ಅಮೆರಿಕನ್ ಡಾಲರ್ ವರದಿ ಮಾಡಿತ್ತು.
ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ