
ನವದೆಹಲಿ, ಮಾರ್ಚ್ 17: ಭಾರತದಲ್ಲಿ ಸಗಟು ಮಾರಾಟ ದರದ ಹಣದುಬ್ಬರ (WPI Inflation) ಫೆಬ್ರುವರಿಯಲ್ಲಿ ಅಲ್ಪ ಏರಿಕೆ ಕಂಡಿದೆ. ಹಿಂದಿನ ತಿಂಗಳಲ್ಲಿ (ಜನವರಿ) ಶೇ. 2.31ರಷ್ಟಿದ್ದ ಡಬ್ಲ್ಯುಪಿಐ ಫೆಬ್ರುವರಿಯಲ್ಲಿ ಶೇ. 2.38ಕ್ಕೆ ಏರಿದೆ. ರೀಟೇಲ್ ಹಣದುಬ್ಬರ ಫೆಬ್ರುವರಿಯಲ್ಲಿ ಶೇ. 3.61ಕ್ಕೆ ಇಳಿದಿತ್ತು. ಕಳೆದ ಏಳು ತಿಂಗಳಲ್ಲೇ ಅದು ಗರಿಷ್ಠ ಹಣದುಬ್ಬರ ದರ ಎನಿಸಿದೆ. ತರಕಾರಿ ಬೆಲೆಗಳಲ್ಲಿ ಗಣನೀಯ ಇಳಿಕೆ ಆಗಿದ್ದು ರೀಟೇಲ್ ಇನ್ಫ್ಲೇಶನ್ ಕಡಿಮೆ ಆಗಲು ಪ್ರಮುಖ ಕಾರಣವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಹೋಲ್ಸೇಲ್ ಹಣದುಬ್ಬರ ದರ ಫೆಬ್ರುವರಿಯಲ್ಲಿ ಏರಿಕೆ ಆಗಿದೆ. ಆಹಾರ ಉತ್ಪನ್ನಗಳ ತಯಾರಿಕಾ ವೆಚ್ಚ ಹೆಚ್ಚಳ ಆಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.
‘ಸಗಟು ಮಾರಾಟ ಸೂಚಿ (ಡಬ್ಲ್ಯುಪಿಐ) ಆಧಾರಿತ ವಾರ್ಷಿಕ ಹಣದುಬ್ಬರ ದರ ಫೆಬ್ರುವರಿ ತಿಂಗಳಲ್ಲಿ ಶೇ. 2.38ರಷ್ಟಿದೆ. ಆಹಾರ ಉತ್ಪನ್ನಗಳು, ಆಹಾರ ವಸ್ತುಗಳ ತಯಾರಿಕಾ ವೆಚ್ಚ, ಆಹಾರೇತರ ವಸ್ತುಗಳು, ಜವಳಿ ಉತ್ಪನ್ನಗಳ ತಯಾರಿಕೆಯ ಬೆಲೆಗಳು ಹೆಚ್ಚಿರುವುದು ಸಗಟು ಮಾರಾಟ ದರ ಹಣದುಬ್ಬರ ಹೆಚ್ಚಲು ಕಾರಣವಾಗಿದೆ’ ಎಂದು ವಾಣಿಜ್ಯ ಮತ್ತು ಉದ್ಯಮ ಸಚಿವಾಲಯ ಇಂದು ಸೋಮವಾರ ಹೇಳಿಕೆ ನೀಡಿದೆ.
ಇದನ್ನೂ ಓದಿ: ಐಫೋನ್ ಆಯ್ತು ಈಗ ಆ್ಯಪಲ್ ಏರ್ಪೋಡ್ಗಳ ಸರದಿ; ಅಮೆರಿಕ, ಯೂರೋಪ್ಗೆ ರಫ್ತಾಗಲಿವೆ ಮೇಡ್ ಇನ್ ಇಂಡಿಯಾ ಏರ್ಪೋಡ್ಗಳು
ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಉತ್ಪಾದಿತ ಆಹಾರ ವಸ್ತುಗಳ ಹಣದುಬ್ಬರ ಶೇ. 11.06ರಷ್ಟು ಏರಿದೆ. ಅಡುಗೆ ಎಣ್ಣೆ ಬೆಲೆ ಶೇ. 33.59ರಷ್ಟು ಏರಿದೆ. ಇನ್ನೊಂದೆಡೆ, ಪಾನೀಯಗಳ ತಯಾರಿಕೆಯ ಹಣದುಬ್ಬರವು ಶೇ. 1.66ರಷ್ಟು ಮಾತ್ರವೇ ಏರಿಕೆ ಆಗಿರುವುದು.
ಆದರೆ, ಒಟ್ಟಾರೆ ಹಣದುಬ್ಬರದಲ್ಲಿ ಸಮತೋಲನ ಬರಲು ತರಕಾರಿ ಬೆಲೆಗಳಲ್ಲಿ ಇಳಿಕೆಯ ಪಾತ್ರ ಮಹತ್ವದ್ದಿದೆ. ಆಲೂಗಡ್ಡೆ ಬೆಲೆಯಲ್ಲಿ ಗಣನೀಯ ಇಳಿಕೆಯಾದ ಪರಿಣಾಮ ಒಟ್ಟಾರೆ ತರಕಾರಿ ಬೆಲೆಗಳು ಶಾಂತಗೊಂಡಿವೆ. ಇಂಧನ ಮತ್ತು ವಿದ್ಯುತ್ ವಿಭಾಗದಲ್ಲಿ ಹಣದುಬ್ಬರವು ಜನವರಿಯಲ್ಲಿ ಶೇ. 2.78ರಷ್ಟು ಇಳಿಕೆಯಾಗಿತ್ತು. ಫೆಬ್ರುವರಿಯಲ್ಲಿ ಶೇ. 0.71ರಷ್ಟು ಇಳಿದಿದೆ. ಅಂದರೆ, ಶೇ. 0.71ರಷ್ಟು ಡೀಫ್ಲೇಶನ್ ಆಗಿದೆ.
ರೀಟೇಲ್ ಹಣದುಬ್ಬರವು ಗ್ರಾಹಕ ಬೆಲೆ ಅನುಸೂಚಿ ಆಧಾರದ ಮೇಲೆ ಎಣಿಕೆ ಆಗುತ್ತದೆ. ಅಂದರೆ, ರೀಟೇಲ್ ಮಾರುಕಟ್ಟೆಯಲ್ಲಿ ಸರಕು ಮತ್ತು ಸೇವೆಗಳಿಗೆ ಇರುವ ಬೆಲೆಯನ್ನು ಗಣಿಸಿ, ಹಣದುಬ್ಬರವನ್ನು ಲೆಕ್ಕ ಮಾಡಲಾಗುತ್ತದೆ.
ಇದನ್ನೂ ಓದಿ: ಠೇವಣಿ, ಡಿವಿಡೆಂಡ್, ಬಾಡಿಗೆ ಇತ್ಯಾದಿ ಆದಾಯಗಳಿಗೆ ಹೊಸ ಟಿಡಿಎಸ್ ದರ; ಏಪ್ರಿಲ್ 1ರಿಂದ ಜಾರಿ
ಹೋಲ್ಸೇಲ್ ಹಣದುಬ್ಬರವನ್ನು ಹೋಲ್ಸೇಲ್ ಬೆಲೆ ಸೂಚಿ ಆಧಾರಿತವಾಗಿ ಎಣಿಸಲಾಗುತ್ತದೆ. ಇದು ಒಂದು ಸರಕಿನ ಉತ್ಪಾದನಾ ಮಟ್ಟದಲ್ಲಿರುವ ಬೆಲೆಯನ್ನು ಗಣಿಸುತ್ತದೆ. ಈ ಮಟ್ಟದಿಂದ ಒಂದು ಸರಕು ರೀಟೇಲ್ ಮಾರುಕಟ್ಟೆಯನ್ನು ತಲುಪುತ್ತದೆ. ಹೀಗಾಗಿ, ಅದರ ಪ್ರಭಾವವು ರೀಟೇಲ್ ದರದ ಮೇಲೆ ಇರುವ ಸಾಧ್ಯತೆ ದಟ್ಟವಾಗಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ