Real Estate Investment: ನಿಮಗೆ ಉತ್ತಮ ಹೂಡಿಕೆಯ ಲಾಭ ಸಿಗಬೇಕೇ? ಆಸ್ತಿ ಮಾರ್ಕೆಟ್‌ನಲ್ಲಿ ಕೇವಲ 5000 ರೂಪಾಯಿ ಹೂಡಿ

ಕನಿಷ್ಠ 5000 ರೂಪಾಯಿ ಮೊತ್ತದೊಂದಿಗೆ ರಿಯಲ್ ಎಸ್ಟೇಟ್ ಆಸ್ತಿಯಲ್ಲಿ ಹೂಡಿಕೆ ಮಾಡುವ ಅವಕಾಶ ಇದೆ. ಅದು ಹೇಗೆ ಎಂಬುದರ ಬಗ್ಗೆ ವಿವರ ಇಲ್ಲಿದೆ.

Real Estate Investment: ನಿಮಗೆ ಉತ್ತಮ ಹೂಡಿಕೆಯ ಲಾಭ ಸಿಗಬೇಕೇ? ಆಸ್ತಿ ಮಾರ್ಕೆಟ್‌ನಲ್ಲಿ ಕೇವಲ 5000 ರೂಪಾಯಿ ಹೂಡಿ
ಸಾಂದರ್ಭಿಕ ಚಿತ್ರ

ಕೊರೊನಾ ಸೋಂಕು ಎಲ್ಲ ಕ್ಷೇತ್ರಗಳನ್ನು ಬಾಧಿಸಿದಂತೆಯೇ ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೂ ಹೊಡೆತ ಕೊಟ್ಟಿತ್ತು. ಆದರೆ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದಂತೆಯೇ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಮತ್ತೆ ವ್ಯಾಪಾರ ಚಟುವಟಿಕೆಗಳು ಗರಿಗೆದರಿವೆ. ರಿಯಾಲ್ಟಿ ಕ್ಷೇತ್ರದಲ್ಲಿ ಉತ್ಸಾಹ ಪುಟಿದೆದ್ದಿದೆ. ಈ ವೇಗಕ್ಕೆ ತರಹೇವಾರಿ ರಿಯಲ್ ಎಸ್ಟೇಟ್ ಹೂಡಿಕೆ ಟ್ರಸ್ಟ್‌ಗಳು (ಆರ್‌ಇಐಟಿ) ದೊಡ್ಡ ಮಟ್ಟದ ಕೊಡುಗೆ ನೀಡಿವೆ. ಹೀಗಾಗಿಯೇ ಅನುಕೂಲಸ್ಥರು ಬಾಡಿಗೆ ರೂಪದಲ್ಲಿ ಆದಾಯ ತರುವ ವಾಣಿಜ್ಯ ಸ್ವತ್ತುಗಳಲ್ಲಿ ಹೂಡಿಕೆ ಮಾಡುವ ಆಯ್ಕೆ ಬಗ್ಗೆ ಆಸಕ್ತಿ ತೋರುತ್ತಿರುವ ಟ್ರೆಂಡ್‌ ಹೆಚ್ಚುತ್ತಿದೆ. ಐಸಿಐಸಿಐ ಸೆಕ್ಯೂರಿಟೀಸ್‌ ವರದಿ ಅನುಸಾರ, 2021-22ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಆರ್‌ಇಐಟಿಗಳು ಶೇಕಡಾ 99ರಷ್ಟು ಹೂಡಿಕೆಯ ಲಾಭ ತಂದುಕೊಟ್ಟಿವೆ. ಎರಡನೇ ತ್ರೈಮಾಸಿಕದಲ್ಲಿ ಭೋಗ್ಯದ ಅರ್ಥಾತ್‌ ಗುತ್ತಿಗೆ ವ್ಯವಹಾರ ಶೇಕಡಾ 140ರಷ್ಟು ಏರಿಕೆ ಕಂಡು, 135 ದಶಲಕ್ಷ ಚದರ ಅಡಿವರೆಗೂ ವಹಿವಾಟು ವಿಸ್ತರಣೆಗೊಂಡಿದೆ. ಸದ್ಯದ ಟ್ರೆಂಡ್‌ ನೋಡಿದರೆ, ಮುಂದಿನ ದಿನಮಾನದಲ್ಲಿ ಆರ್‌ಇಐಟಿ ವ್ಯವಹಾರವು ಅತೀ ವೇಗವಾಗಿ ಹೆಚ್ಚಾಗುವ ಸೂಚನೆಗಳಿವೆ.

ನಿಜಕ್ಕೂ ಉತ್ತಮ ಆದಾಯ ತಂದುಕೊಡುವ ಆರ್‌ಇಐಟಿ ಅಂದರೆ ಏನು? ಅದರಲ್ಲಿ ನೀವು ಹೇಗೆ ಹೂಡಿಕೆ ಮಾಡಬೇಕು ಎಂಬ ಕುತೂಹಲವೇ? ಆ ಬಗ್ಗೆಯೇ ತಿಳಿಸಿಕೊಡುವ ಲೇಖನ ಇದು. ಅಮಿತ್‌ ಅವರ ತಂದೆ ಅಮೀರ್‌ಚಾಂದ್‌ ಇತ್ತೀಚಿನ ದಿನದಲ್ಲಿ ತಮ್ಮ ಕೌಟುಂಬಿಕ ಆರ್ಥಿಕ ಸ್ಥಿತಿಗತಿ ಕುರಿತು ಬಹಳವೇ ಚಿಂತಿತರಾಗಿದ್ದರು. ರಿಯಲ್‌ ಎಸ್ಟೇಟ್‌ ಹೂಡಿಕೆ ಯಾವತ್ತೂ ಕೈಬಿಡಲ್ಲ ಎಂಬ ಅಪಾರ ನಂಬಿಕೆ ಅವರಿಗೆ. ಹಾಗಾಗಿಯೇ ಒಂದಷ್ಟು ಮೊತ್ತವನ್ನು ಹೂಡಿಕೆಯೂ ಮಾಡಿದ್ದರು. ಆದರೆ ಕೊವಿಡ್‌ ಸೋಂಕು ಅವರ ಯೋಜನೆಗಳನ್ನೆಲ್ಲಾ ಬುಡಮೇಲಾಗಿಸಿತು. ಎರಡು ವರ್ಷದ ಹಿಂದೆ ಖರೀದಿಸಿದ ಫ್ಲ್ಯಾಟ್‌ ಇಂದು ಪ್ರೀಮಿಯಂ ಹೊರತುಪಡಿಸಿ ಖರೀದಿಸಿದ ಮೊತ್ತಕ್ಕೇ ಮಾರಾಟ ಮಾಡಲು ಹೋದರೂ ಆ ಬೆಲೆ ಸಿಗದಂತಾಗಿದೆ. ಈ ಹೊತ್ತಲ್ಲಿ ಅಮಿತ್‌ ಅವರು ಹಣಕಾಸು ಸಲಹೆಗಾರರ ಸಲಹೆ ಅನುಸರಿಸಿ ಎರಡು ಹೆಜ್ಜೆ ಮುಂದಿಟ್ಟರು. ತಡಮಾಡದೇ ಅವರು ಆರ್‌ಇಐಟಿಗಳಲ್ಲಿ ಹೂಡಿಕೆ ಮಾಡಲು ಶುರು ಮಾಡಿದರು.

ಸೋಜಿಗದ ವಿಚಾರವೆಂದರೆ, ವಾಸ್ತವದಲ್ಲಿ ಆಸ್ತಿಯನ್ನು ಖರೀದಿಸದೆ ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಆರ್‌ಇಐಟಿಗಳು ಹೇಳಿ ಮಾಡಿಸಿದಂತಿವೆ. ಇಲ್ಲಿ ನಿಮಗೆ ಆಸ್ತಿ ಮೇಲೆ ಹೂಡಿಕೆ ಮಾಡಲು ಲಕ್ಷಗಟ್ಟಲೆ ಹಣ ಬೇಕಿಲ್ಲ. ಈ ಹೊಸ ಹೂಡಿಕೆ ಆಯ್ಕೆ ವಿಧಾನದಲ್ಲಿ ಆಸ್ತಿ ಹುಡುಕಾಟ, ಖರೀದಿ, ಇಎಂಐ, ನಿರ್ವಹಣಾ ವೆಚ್ಚ ಇತ್ಯಾದಿಗಳ ರಗಳೆ ಇಲ್ಲದೇ ಕೂತಲ್ಲಿಯೇ ಸ್ಮಾರ್ಟ್‌ ಆಗಿ ಯೋಗ್ಯ ರೂಪದ ಆದಾಯ ಗಳಿಸುವ ಅವಕಾಶಗಳಿವೆ. ಖಂಡಿತವಾಗಿಯೂ ನೀವು ಆರ್‌ಇಐಟಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಉತ್ತಮ ಆದಾಯ ಪಡೆಯಬಹುದು. ಇಷ್ಟೆಲ್ಲಾ ಹೇಳಿದ ಮೇಲೆ ನಿಮ್ಮ ತಲೆಯಲ್ಲೀಗ ಇದು ಹೇಗೆ ಕೆಲಸ ಮಾಡುತ್ತದೆ ಎಂಬ ಪ್ರಶ್ನೆ ಮೂಡಬಹುದು. ಇದು ನೀವು ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಿದಷ್ಟೇ ಸರಳ ಹಾಗೂ ಸುಲಭ. ನಮ್ಮ-ನಿಮ್ಮಂಥವರು ಹೂಡಿದ ಹಣವನ್ನು ಆರ್‌ಇಐಟಿಗಳು ಬಾಡಿಗೆ ತರುವ ಸ್ವತ್ತುಗಳಲ್ಲಿ ಹೂಡಿಕೆ ಮಾಡುತ್ತವೆ. ಈ ಗಳಿಕೆಯಲ್ಲಿ, ನಿಮ್ಮ ಹೂಡಿಕೆಗೆ ಅನುಪಾತದಲ್ಲಿ ಆದಾಯ ಪಡೆಯುತ್ತೀರಿ.

ಆದರೆ, ಆರ್‌ಇಐಟಿ ಸ್ವರೂಪ ಏನು? ಅವುಗಳನ್ನು ಸುರಕ್ಷಿತ ಹೂಡಿಕೆಯ ತಾಣ ಎಂದು ನಂಬುವುದಾದರೂ ಹೇಗೆ? ಇದು ಆಸ್ತಿಯಲ್ಲಿ ಹೂಡಿಕೆ ಸ್ವರೂಪವನ್ನು ಹೇಗೆ ಬದಲಾಯಿಸುತ್ತಿದೆ ಎಂಬುದನ್ನು ನೋಡುವುದಾದರೆ, ಪ್ರಮುಖವಾಗಿ ಆರ್‌ಇಐಟಿಗಳಲ್ಲಿ ಎರಡು ವಿಧ. ಮೊದಲನೆಯದು ಷೇರು ಮಾರುಕಟ್ಟೆಯಲ್ಲಿ ಮೊದಲೇ ಲಿಸ್ಟಿಂಗ್ ಮಾಡಲಾದ ಆರ್‌ಇಐಟಿಗಳು. ಇವುಗಳನ್ನು ನೀವು ಷೇರುಗಳ ರೀತಿಯಲ್ಲಿ ಖರೀದಿಸಿ, ನಂತರ ಮಾರಾಟ ಮಾಡಬಹುದು. ಸದ್ಯಕ್ಕೆ ಭಾರತದಲ್ಲಿ ಎಂಬೆಸಿ ಆಫೀಸ್ ಪಾರ್ಕ್, ಬ್ರೂಕ್ ಫೀಲ್ಡ್ ಇಂಡಿಯಾ ಮತ್ತು ಮೈಂಡ್ ಸ್ಪೇಸ್ ಬಿಸಿನೆಸ್ ಪಾರ್ಕ್ ಎಂಬ ಮೂರು ಆರ್‌ಇಐಟಿಗಳು ಷೇರು ರೀತಿಯಲ್ಲಿ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿವೆ. ನೀವು ಹೀಗೆ ಪಟ್ಟಿ ಮಾಡಲಾದ ಆರ್‌ಇಐಟಿಗಳಲ್ಲಿ ಒಂದು ಷೇರನ್ನು ಖರೀದಿಸುವ ಮೂಲಕ ಹೂಡಿಕೆ ಪ್ರಾರಂಭಿಸಬಹುದು.

ಇನ್ನು ಎರಡನೇ ಬಗೆಯದ್ದೆಂದರೆ ನೀವು ಮ್ಯೂಚುವಲ್‌ ಫಂಡ್‌ಗಳ ಮೂಲಕ ಆರ್‌ಇಐಟಿಗಳಲ್ಲಿ ಹೂಡಿಕೆ ಮಾಡಬಹುದು. ಹೂಡಿಕೆಗೆ ಇದೂ ಒಂದು ಮಾರ್ಗವಾಗಿದೆ. ಈ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳು ತಮ್ಮ ಬಂಡವಾಳ ನಿಧಿಗಳ ಮೂಲಕ ಜಾಗತಿಕ ಮಟ್ಟದಲ್ಲಿ ಆರ್‌ಇಐಟಿಗಳಲ್ಲಿ ಹೂಡಿಕೆ ಮಾಡುವ ನಿಧಿಗಳಾಗಿ ಗುರುತಿಸಿಕೊಳ್ಳುತ್ತವೆ. ಅಂದರೆ, ಆ ಸಂಸ್ಥೆಗಳು ವಿದೇಶಗಳಲ್ಲಿ ಇರುವ ಆಸ್ತಿಗಳಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಹಣಕ್ಕೆ ಆದಾಯ ಬರುವಂತೆ ಮಾಡುತ್ತವೆ. ಭಾರತದಲ್ಲಿ ಈ ವಿಭಾಗದಲ್ಲಿ ಕೊಟಕ್ ಇಂಟರ್ ನ್ಯಾಷನಲ್, ಮಹೀಂದ್ರಾ ಮ್ಯಾನುಲೈಫ್‌ ಮತ್ತು ಇತ್ತೀಚೆಗೆ ಮಾರುಕಟ್ಟೆ ಪ್ರವೇಶಿಸಿದ ಪಿಜಿಐಎಂ ಇಂಡಿಯಾ ಗ್ಲೋಬಲ್ ಸೆಲೆಕ್ಟ್ ರಿಯಲ್ ಎಸ್ಟೇಟ್ ನಿಧಿಗಳು ಕಾರ್ಯ ನಿರ್ವಹಿಸುತ್ತಿವೆ. ಸದ್ಯ ಇವು ಹೂಡಿಕೆಗೆ ಶೇಕಡಾ 8ರಿಂದ 12ರಷ್ಟು ಆದಾಯ ನೀಡುತ್ತಿವೆ.

ನಾವಿಲ್ಲಿ ಗಮನಿಸಬೇಕೆಂದರೆ ಆರ್ ಇಐಟಿಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. 1. ಲಿಸ್ಟ್ ಮಾಡಿದ ಆರ್‌ಇಐಟಿಗಳು ಎ) ಎಂಬೆಸಿ ಆಫೀಸ್ ಪಾರ್ಕ್ ಬಿ) ಬ್ರೂಕ್ ಫೀಲ್ಡ್ ಇಂಡಿಯಾ ಸಿ) ಮೈಂಡ್ ಸ್ಪೇಸ್ ಬಿಸಿನೆಸ್ ಪಾರ್ಕ್

2. ಕೇವಲ ಒಂದು ಷೇರಿನೊಂದಿಗೆ ಹೂಡಿಕೆ ಮಾಡಿ

3. ಆರ್‌ಇಐಟಿ ನಿಧಿಗಳ ಬಂಡವಾಳ ನಿಧಿ ಎ) ಕೊಟಕ್‌ ಇಂಟರ್‌ನ್ಯಾಷನಲ್‌ ಬಿ) ಮಹೀಂದ್ರಾ ಮ್ಯಾನುಲೈಫ್ ಸಿ) ಪಿಜಿಐಎಂ ಇಂಡಿಯಾ ಗ್ಲೋಬಲ್ ಸೆಲೆಕ್ಟ್ ರಿಯಲ್ ಎಸ್ಟೇಟ್

ಷೇರು ಮಾರುಕಟ್ಟೆಯಲ್ಲಿ ಮೊದಲೇ ಲಿಸ್ಟ್ ಮಾಡಲಾದ ಆರ್‌ಇಐಟಿಗಳು ಲಾಭ ನೀಡಿದ ವಿವರ ಹೀಗಿದೆ: – ಎಂಬೆಸಿ ಆಫೀಸ್‌ ಪಾರ್ಕ್‌ ಶೇ 21 (2019ರ ಏಪ್ರಿಲ್‌ನಿಂದ ಮಾಡಿದ ಲೆಕ್ಕಾಚಾರ) – ಬ್ರೂಕ್ ಫೀಲ್ಡ್ ಇಂಡಿಯಾ ರಿಯಲ್ ಎಸ್ಟೇಟ್ ಶೇ 10 (2021ರ ಫೆಬ್ರವರಿಯಿಂದ ಮಾಡಿದ ಲೆಕ್ಕಾಚಾರ) – ಮೈಂಡ್ ಸ್ಪೇಸ್ ಬಿಜಿನೆಸ್ ಆರ್‌ಇಐಟಿ ಶೇ 8 (2020ರ ಆಗಸ್ಟ್‌ನಿಂದ ಮಾಡಿದ ಲೆಕ್ಕಾಚಾರ)

ಆರ್‌ಇಐಟಿ ನಿಧಿಗಳ ಬಂಡವಾಳ ನಿಧಿಗೆ ಕನಿಷ್ಠ ಹೂಡಿಕೆ 5000 ರೂಪಾಯಿ. ಕೊಟಕ್‌ ಇಂಟರ್ ನ್ಯಾಷನಲ್ ಆರ್‌ಇಐಟಿ ನಿಧಿಗಳ ಬಂಡವಾಳ ನಿಧಿಯು ಹಾಂಕಾಂಗ್‌, ಸಿಂಗಾಪೂರ, ಜಪಾನ್ ಮತ್ತು ಆಸ್ಟ್ರೇಲಿಯಾದಲ್ಲಿ ಆಧಾರವಾಗಿರುವ ಅತ್ಯಂತ ಹಳೆಯ ಸ್ವತ್ತುಗಳ ಮೇಲೆ ಹೂಡಿಕೆ ಹೊಂದಿರುವುದು ವಿಶೇಷವೆನಿಸಿದೆ.

ಆರ್‌ಇಐಟಿ ನಿಧಿಗಳ ಬಂಡವಾಳ ನಿಧಿ 1) ಅಗತ್ಯವಿರುವ ಕನಿಷ್ಠ ಹೂಡಿಕೆ 5,000 ರೂಪಾಯಿ 2) ಕೊಟಕ್ ಇಂಟರ್ ನ್ಯಾಷನಲ್ ಫಂಡ್ ಆಫ್ ಫಂಡ್ ಅತ್ಯಂತ ಹಳೆಯದು 3) ಹಾಂಕಾಂಗ್‌, ಸಿಂಗಾಪೂರ, ಜಪಾನ್ ಮತ್ತು ಆಸ್ಟ್ರೇಲಿಯಾದಲ್ಲಿ ಹೂಡಿಕೆ ಹೊಂದಿದೆ

ನಮ್ಮಲ್ಲಿ ಭಾರತೀಯ ಷೇರು ಮತ್ತು ವಿನಿಮಯ ಮಂಡಳಿ ಎಂಬುದಿದೆ. ನಾವೆಲ್ಲರೂ ಸಾಮಾನ್ಯವಾಗಿ ಅದನ್ನು ಸೆಬಿ ಎಂದು ಕರೆಯುತ್ತೇವೆ. ಸೆಬಿಯು ಷೇರು ಮತ್ತು ಮ್ಯೂಚುವಲ್‌ ಫಂಡ್‌ಗಳ ರೀತಿಯಲ್ಲಿ ಆರ್‌ಇಐಟಿಗಳನ್ನು ನಿಯಂತ್ರಿಸುತ್ತದೆ. ಅದರ ಮಾರ್ಗಸೂಚಿಗಳ ಪ್ರಕಾರ, ಆರ್‌ಇಐಟಿಗಳು ಶೇಕಡಾ 80ರಷ್ಟು ಮೊತ್ತವನ್ನು ತಕ್ಷಣಕ್ಕೆ ವಾಸಯೋಗ್ಯ ಎನಿಸುವ ಅಂದರೆ ರೆಡಿ ಟು ಮೂವ್‌ ಹಾಗೂ ಬಾಡಿಗೆ ಪಾವತಿಸುವಂತಹ ಅಂದರೆ ರೆಂಟ್‌ ಪೇಯಿಂಗ್‌ ಆಸ್ತಿಗಳಲ್ಲಿ ಹೂಡಿಕೆ ಮಾಡಬೇಕು. ಇನ್ನು ಷೇರು ಮಾರುಕಟ್ಟೆಯಲ್ಲಿ ಮೊದಲೇ ಲಿಸ್ಟ್ ಮಾಡಲಾದ ಆರ್​ಇಐಟಿಗಳು ತಮ್ಮ ಆದಾಯದ ಶೇಕಡಾ 90ರಷ್ಟನ್ನು ಹೂಡಿಕೆದಾರರಿಗೆ ಪಾವತಿಸಬೇಕು. ಹೂಡಿಕೆದಾರ ಇದನ್ನು ಲಾಭಾಂಶ ಮತ್ತು ಬಡ್ಡಿಯ ರೂಪದಲ್ಲಿ ಪಡೆಯುವುದುಂಟು. ಗಮನಿಸುವ ಅಂಶವೆಂದರೆ ಸದ್ಯ ಅಸ್ತಿತ್ವದಲ್ಲಿರುವ ಎಲ್ಲ ಆರ್‌ಇಐಟಿಗಳು ವಾಣಿಜ್ಯ ಸ್ವರೂಪದ ಆಸ್ತಿಗಳಲ್ಲಿ ಮಾತ್ರ ಹೂಡಿಕೆ ಮಾಡುತ್ತಿವೆ. ಈ ಕ್ಷೇತ್ರದಲ್ಲಿ ಇತ್ತೀಚೆಗೆ ಆರ್‌ಬಿಐ ವಿದೇಶಿ ಬಂಡವಾಳ ಹೂಡಿಕೆದಾರರನ್ನೂ ಪರಿಚಯಿಸಿದೆ.

ದೇಶೀಯ ಆರ್‌ಇಐಟಿಗಳಲ್ಲಿಯೂ ಬಂಡವಾಳ ಹೂಡಲು ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಅವಕಾಶ ಸಿಕ್ಕಿದೆ. ಇದು ಮುಂಬರುವ ದಿನಗಳಲ್ಲಿ ಆರ್‌ಇಐಟಿಗಳ ವಹಿವಾಟು ದೊಡ್ಡ ಮಟ್ಟದಲ್ಲಿ ವಿಸ್ತರಣೆ ಆಗುವ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಲಾಭ ಗಳಿಸಲು ಉತ್ತಮ ಮಾರ್ಗ ಎನಿಸಿಕೊಳ್ಳಲಿದೆ.

ಆರ್‌ಇಐಟಿಗಳ ರಚನೆಯ ಸ್ವರೂಪ – ಶೇಕಡಾ 80ರಷ್ಟು ಮೊತ್ತ ತಕ್ಷಣಕ್ಕೆ ವಾಸಯೋಗ್ಯ ಎನಿಸುವ ಹಾಗೂ ಬಾಡಿಗೆ ಪಾವತಿಸುವಂತಹ ಆಸ್ತಿಗಳಲ್ಲಿ ಹೂಡಿಕೆ – ಶೇಕಡಾ 90ರಷ್ಟು ಆದಾಯವನ್ನು ಹೂಡಿಕೆದಾರರಿಗೆ ಪಾವತಿಸುವುದು (ಆರ್‌ಇಐಟಿಗಳು ವಾಣಿಜ್ಯ ಸ್ವರೂಪದ ಸ್ವತ್ತುಗಳ ಮೇಲೆ ಹೂಡಿಕೆ ಮಾಡುತ್ತಿರುವುದು) (ಆರ್‌ಇಐಟಿಗಳಲ್ಲೂ ಹೂಡಿಕೆ ಮಾಡಲು ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಅವಕಾಶ ಕಲ್ಪಿಸಿರುವುದು)

ಎಸ್‌ಆರ್‌ಇ ವೆಲ್ತ್‌ನ ಸಹ-ಸಂಸ್ಥಾಪಕ ಕೀರ್ತನ್ ಷಾ ಅವರ ಅಭಿಪ್ರಾಯ ಹೀಗಿದೆ: ಆರ್‌ಇಐಟಿಯು ರಿಯಲ್‌ ಎಸ್ಟೇಟ್‌ನಲ್ಲಿ ಕಡಿಮೆ ಮೊತ್ತದಲ್ಲಿ ಹೂಡಿಕೆ ಮಾಡಲು ಅವಕಾಶ ನೀಡುತ್ತದೆ. ಒಬ್ಬ ವ್ಯಕ್ತಿ ತನ್ನ ಖಾತೆಯಲ್ಲಿ ಶೇಕಡಾ 5ರಷ್ಟು ಆರ್‌ಇಐಟಿಗಳ ಷೇರು ಹೊಂದಬಹುದು. ಷೇರು ಮಾರುಕಟ್ಟೆಯಲ್ಲಿ ಈ ಮೊದಲೇ ಲಿಸ್ಟ್ ಮಾಡಲಾದ ಆರ್‌ಇಐಟಿಗಳಲ್ಲಿ ಹೂಡಿಕೆ ಮಾಡವವರಿಗೆ ತೆರಿಗೆ ವಿನಾಯಿತಿ ಮತ್ತು ಆದಾಯ ಗಳಿಕೆಯಲ್ಲಿ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಲಿಸ್ಟ್ ಮಾಡಲಾದ ಆರ್‌ಇಐಟಿಗಳಲ್ಲಿ ತ್ರೈಮಾಸಿಕ ಆಧಾರದ ಮೇಲೆ ಪಾವತಿಸುವ ಬಡ್ಡಿ ಮತ್ತು ಲಾಭಾಂಶವು ತೆರಿಗೆ ವಿನಾಯಿತಿ ವ್ಯಾಪ್ತಿಗೆ ಒಳಪಟ್ಟಿರುತ್ತದೆ.

ರಿಯಲ್‌ ಎಸ್ಟೇಟ್‌ ವಲಯದಲ್ಲಿ ಅತಿ ಕಡಿಮೆ ಮೊತ್ತದಲ್ಲಿ ಹೂಡಿಕೆಯ ಆಯ್ಕೆಗಳನ್ನು ಆರ್‌ಇಐಟಿಗಳು ಗ್ರಾಹಕರಿಗೆ ನೀಡುತ್ತವೆ. ಇದು ಒಬ್ಬ ವ್ಯಕ್ತಿಯ ಪೋರ್ಟ್‌ಪೋಲಿಯೊದ ಶೇಕಡಾ 5ರಷ್ಟು ಒಳಗೊಂಡಿರಬಹುದು. ಆರ್‌ಇಐಟಿಗಳಲ್ಲಿ ಹೂಡಿಕೆ ಮಾಡುವವರಿಗೆ ತೆರಿಗೆ ವಿನಾಯಿತಿ ಮತ್ತು ಆದಾಯ ಗಳಿಕೆ ವಿಚಾರದಲ್ಲಿ ಹೆಚ್ಚಿನ ಅನುಕೂಲಗಳು ಸಿಗುತ್ತವೆ. ತ್ರೈಮಾಸಿಕ ಆಧಾರದಲ್ಲಿ ಪಾವತಿಯಾಗುವ ಬಡ್ಡಿ ಮತ್ತು ಲಾಭಾಂಶಕ್ಕೂ ತೆರಿಗೆ ಕಟ್ಟುವ ತಲೆಬಿಸಿ ಇರುವುದಿಲ್ಲ.

ಸೆಬಿ ನೋಂದಾಯಿತ ಹೂಡಿಕೆ ಸಲಹೆಗಾರ ಜಿತೇಂದ್ರ ಸೋಲಂಕಿ ಹೇಳುವಂತೆ, “ಸಣ್ಣ ಸಣ್ಣ ಮೊತ್ತದಲ್ಲಿ ಹೂಡಿಕೆ ಮಾಡುವ ಪ್ರತಿ ಹೂಡಿಕೆದಾರರಿಗೂ ಮಾರುಕಟ್ಟೆಗೆ ಸಂಬಂಧಿತ ಏರಿಳಿತದ ಅಪಾಯ ತಡೆದುಕೊಳ್ಳಲು ಸಾಧ್ಯವಿಲ್ಲ. ಈ ದೃಷ್ಟಿಯಿಂದ ಜಾಗತಿಕ ಆರ್‌ಇಐಟಿ ನಿಧಿಗಳ ಬಂಡವಾಳ ನಿಧಿಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಆಯ್ಕೆಯಾಗಿದೆ. ಲಿಸ್ಟ್ ಮಾಡಲಾದ ಆರ್‌ಇಐಟಿನಲ್ಲಿ ನೀವು ಒಂದು ಕಂಪೆನಿಯ ಷೇರು ಖರೀದಿಸಬಹುದು. ಆದರೆ ಆರ್‌ಇಐಟಿ ನಿಧಿಗಳ ಬಂಡವಾಳ ನಿಧಿಯಲ್ಲಿ ನೀವು ಹೂಡಿಕೆ ಮಾಡಿದರೆ ಅದು ಜಾಗತಿಕ ಕಂಪೆನಿಗಳಲ್ಲಿ ಹೂಡಿಕೆ ಮಾಡಿದಂತೆ.

ಯಾವಾಗಲೂ ಹೂಡಿಕೆದಾರರು ಅಪಾಯ ತಡೆದುಕೊಳ್ಳುವ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹೂಡಿಕೆ ಮಾಡುವುದು ಜಾಣತನ. ಜಾಗತಿಕ ಆರ್‌ಇಐಟಿ ನಿಧಿಗಳ ಬಂಡವಾಳ ನಿಧಿಯು ನಿಮ್ಮ ಪೋರ್ಟ್‌ಪೋಲಿಯೊಗೆ ಅಂತಾರಾಷ್ಟ್ರೀಯ ಮಾನ್ಯತೆ ತಂದುಕೊಡುತ್ತದೆ. ಲಿಸ್ಟ್ ಮಾಡಲಾದ ಆರ್‌ಇಐಟಿಗಳಲ್ಲಿ ನೀವು ಒಂದು ಕಂಪೆನಿಯ ಷೇರು ಖರೀದಿಸಿದಂತಾಗುತ್ತದೆ. ಆದರೆ ಆರ್‌ಇಐಟಿ ನಿಧಿಗಳ ಬಂಡವಾಳ ನಿಧಿಯಲ್ಲಿ ನೀವು ಹೂಡಿಕೆ ಮಾಡಿದ್ದೇ ಆದಲ್ಲಿ ಜಾಗತಿಕ ಆರ್‌ಇಐಟಿಗಳಲ್ಲಿ ಹೂಡಿಕೆ ಮಾಡಿದಂತಾಗುತ್ತದೆ.

ಇನ್ನು ಮೊದಲಿನ ಉದಾಹರಣೆಗೆ ಬರುವುದಾದರೆ, ಅಮಿತ್ ತಮ್ಮ ತಂದೆಗೆ ವಿವರಿಸಿದ್ದೇನು? ಅಪ್ಪಾ, ನೀವು ಯಾವುದೇ ಆಸ್ತಿಯನ್ನೂ ಖರೀದಿಸದೇ ರಿಯಲ್ ಎಸ್ಟೇಟ್‌ ಕ್ಷೇತ್ರದಲ್ಲಿ ಹೂಡಿಕೆ ಮಾಡಬಹುದು. ನಿಮ್ಮ ಜೀವನದ ಉಳಿತಾಯದ ಬೊಕ್ಕಸದಿಂದ ಲಕ್ಷಗಟ್ಟಲೆ ಹಣ ಸುರಿಯುವುದೂ ಇದಕ್ಕೆ ಬೇಕಿಲ್ಲ. ಕೇವಲ 5000 ರೂಪಾಯಿಯೊಂದಿಗೆ ನೀವು ಆರ್‌ಇಐಟಿಗಳಲ್ಲಿ ಹೂಡಿಕೆ ಮಾಡಬಹುದು. ಅದೂ ಆಗದಿದ್ದರೆ ಲಿಸ್ಟ್ ಮಾಡಲಾದ ಆರ್‌ಇಐಟಿನಲ್ಲಿ ಕಂಪೆನಿಯ ಒಂದು ಷೇರನ್ನು ಖರೀದಿಸುವ ಮೂಲಕ ಹೂಡಿಕೆ ಆರಂಭಿಸಬಹುದು.

ನಮ್ಮ ಶಿಫಾರಸು ಏನು? ಬಂಡವಾಳ ಮಾರುಕಟ್ಟೆಯಲ್ಲಿ ಆರ್‌ಇಐಟಿ ಒಂದು ಹೊಸ ಹೂಡಿಕೆಯ ಆಯ್ಕೆಯಾಗಿದೆ. ಹಾಗಂತ ನೀವು ಮನಸೋಇಚ್ಛೆ ಹೂಡಿಕೆ ಮಾಡಿ ಕೈಕೈ ಹಿಸುಕಿಕೊಳ್ಳಬೇಡಿ. ಹೂಡಿಕೆ ಮಾಡುವ ಮೊದಲು ನೀವು ಮಾರುಕಟ್ಟೆಯ ಟ್ರೆಂಡ್‌, ಏರಿಳಿತವನ್ನು ಸರಿಯಾಗಿ ಅಭ್ಯಸಿಸುವ ಹೋಮ್‌ವರ್ಕ್‌ ಮಾಡಿ. ಇದು ಬಹಳ ಮುಖ್ಯವೇ ಆಗಿರುತ್ತದೆ. ಮ್ಯೂಚುವಲ್ ಫಂಡ್‌ಗಳಂತೆ ಈ ಹೂಡಿಕೆಯೂ ಅಪಾಯಕಾರಿ ಎನಿಸಿಕೊಳ್ಳಬಹುದು. ಈ ಅಪಾಯ ಎಷ್ಟು ದೊಡ್ಡದಾಗಿರುತ್ತದೆ ಎಂಬ ಜ್ಞಾನ ಸಂಪಾದಿಸಿ, ಹೂಡಿಕೆ ಮೇಲೆ ಹಿಡಿತ ಸಾಧಿಸಿ. ನಿಮ್ಮ ಹೂಡಿಕೆಯ ಪಟ್ಟಿಯಲ್ಲಿ ಆರ್‌ಇಐಟಿಗಳನ್ನೂ ಸೇರಿಸಿಕೊಳ್ಳಿ. ಹಾಗಂತ ಪೂರ್ಣ ಪ್ರಮಾಣದಲ್ಲಿ ಎಲ್ಲ ಹಣವನ್ನೂ ಇಲ್ಲೇ ಸುರಿಯಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

ನಮ್ಮ ಕಡೆಯಿಂದ ಪ್ರಮುಖ ಸಲಹೆಗಳಿವು – ಯಾವುದೇ ಹೂಡಿಕೆ ಇದ್ದರೂ ಸರಿ, ಹಣ ಹೂಡುವ ಮುನ್ನ ಮಾರ್ಕೆಟ್‌ ಬಗ್ಗೆ ಒಂದಷ್ಟು ಹೋಮ್‌ವರ್ಕ್‌ ಮಾಡಿಕೊಳ್ಳಿ. – ಹಣ ಹೂಡಿಕೆ ಮಾಡುವ ಮೊದಲು ಸಂಭಾವ್ಯ ಅಪಾಯವನ್ನು ಅರ್ಥ ಮಾಡಿಕೊಳ್ಳಿ. ನಂತರವೇ ಮುಂದಿನ ಹೆಜ್ಜೆ ಇಡಿ. – ಒಂದೇ ಕಡೆ ಎಲ್ಲ ಹಣವನ್ನೂ ಹೂಡಿಕೆ ಮಾಡಬೇಡಿ. ತರಹೇವಾರಿ ವಿಧಾನ, ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ಸಮತೋಲನ ಕಾಯ್ದುಕೊಳ್ಳಿ.

(ಮೂಲ: ಮನಿ9.ಕಾಮ್)

Published On - 1:09 pm, Sat, 4 December 21

Click on your DTH Provider to Add TV9 Kannada