Zee Entertainment: ಝೀ ಎಂಟರ್ಟೇನ್ಮೆಂಟ್ ಷೇರು ಭರ್ಜರಿ ಜಿಗಿತ; ಇನ್ವಸ್ಕೋದಿಂದ ಇಜಿಎಂ ಬೇಡಿಕೆ ವಾಪಸ್
ಝೀ ಎಂಟರ್ಟೇನ್ಮೆಂಟ್ ಷೇರುಗಳು ಗುರುವಾರ ಬೆಳಗ್ಗೆ ಸೆಷನ್ನಲ್ಲಿ ಭಾರೀ ಏರಿಕೆಯನ್ನು ದಾಖಲಿಸಿದೆ. ಆ ಏರಿಕೆ ಹಿಂದಿನ ಕಾರಣವನ್ನು ಇಲ್ಲಿ ವಿವರಿಸಲಾಗಿದೆ.
ಝೀ ಎಂಟರ್ಟೇನ್ಮೆಂಟ್ ಎಂಟರ್ಪ್ರೈಸಸ್ (Zee Entertainment Enterprises) ಷೇರು ಗುರುವಾರ (ಮಾರ್ಚ್ 24, 2022) ಬೆಳಗ್ಗೆ ಸೆಷನ್ನಲ್ಲಿ ಭರ್ಜರಿ ಏರಿಕೆ ಕಂಡಿದೆ. ಅತಿದೊಡ್ಡ ಷೇರುದಾರರಾದ ಇನ್ವೆಸ್ಕೋದಿಂದ ಕಂಪೆನಿಯ ಮಂಡಳಿ ಪುನರ್ರಚನೆಗೆ ಇದ್ದ ಬೇಡಿಕೆಯನ್ನು ಕೈ ಬಿಟ್ಟ ಸುದ್ದಿ ಹಿನ್ನೆಲೆಯಲ್ಲಿ ಈ ಭಾರೀ ಜಿಗಿತ ಕಂಡುಬಂದಿದೆ. ಮಾರ್ಚ್ 23ನೇ ತಾರೀಕಿನಂದು ಇನ್ವೆಸ್ಕೋ ಡೆವಲಪಿಂಗ್ ಮಾರ್ಕೆಟ್ಸ್ ಫಂಡ್ ಹೇಳಿರುವಂತೆ, ಸೋನಿ ಜತೆಗೆ ಝೀ ವಿಲೀನ ಆಗುವುದರಿಂದ ಮಂಡಳಿ ಬಲಗೊಳ್ಳಬೇಕು ಎಂಬ ಗುರಿ ಈಡೇರುತ್ತದೆ. ಆದ್ದರಿಂದ ಆರು ಸ್ವತಂತ್ರ ನಿರ್ದೇಶಕರನ್ನು ಸೇರ್ಪಡೆ ಮಾಡಬೇಕು ಎಂದು ಕರೆಯಲು ಉದ್ದೇಶಿಸಿದ್ದ ವಿಶೇಷ ಸಾಮಾನ್ಯ ಸಭೆಯನ್ನು ಕೈ ಬಿಡುತ್ತಿದ್ದೇವೆ ಎಂದಿತ್ತು.
“ನಾವು ವಿನಂತಿಸುವ ಉದ್ದೇಶವನ್ನು ಘೋಷಿಸಿದ ಮೇಲೆ ಸೋನಿಯೊಂದಿಗೆ ಝೀ ವಿಲೀನ ಒಪ್ಪಂದವನ್ನು ಮಾಡಿಕೊಂಡಿದೆ. ಈ ಒಪ್ಪಂದವು ಅದರ ಪ್ರಸ್ತುತ ರೂಪದಲ್ಲಿ ಝೀ ಷೇರುದಾರರಿಗೆ ಒಳ್ಳೆಯದನ್ನು ಮಾಡುವ ಶಕ್ತಿ ಹೊಂದಿದೆ ಎಂದು ನಾವು ನಂಬುತ್ತೇವೆ. ವಿಲೀನದ ನಂತರ ಹೊಸದಾಗಿ ಸಂಯೋಜಿತ ಕಂಪೆನಿಯ ಮಂಡಳಿಯನ್ನು ಗಣನೀಯವಾಗಿ ಪುನರ್ರಚಿಸಲಾಗುವುದು ಎಂದು ನಾವು ಗುರುತಿಸಿದ್ದೇವೆ. ಇದು ಕಂಪೆನಿಯ ಮಂಡಳಿ ಮೇಲ್ವಿಚಾರಣೆಯನ್ನು ಬಲಪಡಿಸುವ ನಮ್ಮ ಉದ್ದೇಶವನ್ನು ಈಡೇರಿಸುತ್ತದೆ,” ಎಂದು ಫಂಡ್ ಹೇಳಿದೆ.
“ಸದ್ಯಕ್ಕೆ ಪ್ರಸ್ತಾಪಿಸಿದಂತೆ ವಿಲೀನವನ್ನು ಪೂರ್ಣಗೊಳಿಸದಿದ್ದರೆ ಇನ್ವೆಸ್ಕೊದಿಂದ ಹೊಸದಾಗಿ ವಿಶೇಷ ಸಾಮಾನ್ಯ ಸಭೆಯನ್ನು ಕರೆಯುವಂತೆ ಒತ್ತಾಯಿಸುವ ಹಕ್ಕನ್ನು ಉಳಿಸಿಕೊಳ್ಳಲಾಗಿದೆ,” ಎಂದು ಅದು ಸೇರಿಸಿದೆ. ಬೆಳಗ್ಗೆ 9.50ರ ಹೊತ್ತಿಗೆ ಎನ್‌ಎಸ್‌ಇಯಲ್ಲಿ ಈ ಸ್ಟಾಕ್ ರೂ. 42.10 ಅಥವಾ ಶೇಕಡಾ 16.44ರಷ್ಟು ಏರಿಕೆಯಾಗಿ, ರೂ. 298.15ಕ್ಕೆ ವಹಿವಾಟು ನಡೆಸುತ್ತಿತ್ತು. ಇದು ಇಂಟ್ರಾಡೇ ಗರಿಷ್ಠ ರೂ. 307.25 ಮತ್ತು ಕನಿಷ್ಠ ಮಟ್ಟವಾದ ರೂ. 281.65 ಮುಟ್ಟಿದೆ.
ಈ ಸ್ಕ್ರಿಪ್ 9,77,155 ವಾಲ್ಯೂಮ್ನೊಂದಿಗೆ ವಹಿವಾಟು ನಡೆಸುತ್ತಿದ್ದು, ಐದು ದಿನಗಳ ಸರಾಸರಿ 8,21,338 ಷೇರುಗಳಿಗೆ ಹೋಲಿಸಿದರೆ ಶೇ 18.97ರಷ್ಟು ಹೆಚ್ಚಳವಾಗಿದೆ. ಈ ವರದಿಯು ಸಿದ್ಧವಾಗುವ ಹೊತ್ತಿಗೆ ಝೀ ಕಂಪೆನಿ ಷೇರಿನ ಬೆಲೆ ಎನ್‌ಎಸ್‌ಇಯಲ್ಲಿ ಶೇ 15.82ರಷ್ಟು ಅಥವಾ 40.45 ರೂಪಾಯಿಯಷ್ಟು ಹೆಚ್ಚಳವಾಗಿ 296.50 ರೂಪಾಯಿಯಲ್ಲಿ ವಹಿವಾಟನ್ನು ನಡೆಸುತ್ತಿತ್ತು.
ಇದನ್ನೂ ಓದಿ: ZEEL- Sony Pictures Merger: ಭಾರತದ ಮನರಂಜನಾ ಲೋಕದಲ್ಲಿ ಮಹಾವಿಲೀನ, ಒಂದಾಗುತ್ತಿವೆ ಝೀ ಹಾಗೂ ಸೋನಿ