ರಾಜೀ-ಸಂಧಾನದ ಮೂಲಕ ಗಂಡನ ಮನೆಗೆ ಬಂದ ಪತ್ನಿ: ಬಳಿಕ ದುರಂತ ಅಂತ್ಯ ಕಂಡಳು
ಗಂಡ ಹೆಂಡತಿ ಪ್ರತಿದಿನ ಜಗಳ ಮಾಡುತ್ತಲೇ ಇದ್ದು, ನಿನ್ನೆ (ಅ.27) ರಾತ್ರಿ ಮಾತ್ರ ದಂಪತಿಗಳ ಜಗಳ ವಿಕೋಪಕ್ಕೆ ತಿರುಗಿ ದುರಂತ ಅಂತ್ಯ ಕಂಡಿದೆ
ಗಂಡ-ಹೆಂಡಿತಯ ಜಗಳ ಉಂಡು ಮಲಗುವ ತನಕ ಅಂತಾರೆ. ಆದರೆ ಇಲ್ಲಿ ಗಂಡ, ಹೆಂಡತಿ ಮಲಗಿದ್ದಾಗ ಕ್ರೂರ ಕೃತ್ಯವನ್ನು ಎಸಗಿದ್ದಾನೆ. ಕುಡುಕ ಗಂಡ ಹೆಂಡತಿಗೆ ನಿರಂತರವಾಗಿ ಕಾಟ ಕೊಡುತ್ತಿದ್ದನು. ಪ್ರತಿದಿನ ಜಗಳ ಮಾಡುತ್ತಲೇ ಇದ್ದು, ನಿನ್ನೆ (ಅ.27) ರಾತ್ರಿ ಮಾತ್ರ ದಂಪತಿಗಳ ಜಗಳ ವಿಕೋಪಕ್ಕೆ ತಿರುಗಿತ್ತು. ನೋಡ ನೋಡುತ್ತಿದ್ದಂತೆ ಗಂಡ ಕೊಡಲಿಯಿಂದ, ತಾಳಿ ಕಟ್ಟಿದ ಪತ್ನಿಯನ್ನೇ ಕೊಲೆ ಮಾಡಿದ್ದಾನೆ.
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಬೂದಿಹಾಳ ಗ್ರಾಮದಲ್ಲಿ 8 ವರ್ಷದ ಹಿಂದೆ ಪಾರ್ವತಿ ಹಾಗೂ ಮಲ್ಲಪ್ಪನ ಮದುವೆಯಾಗಿತ್ತು. ಕೆಲ ದಿನ ಅನ್ಯೋನ್ಯವಾಗಿಯೇ ಇದ್ದರು. ದಂಪತಿಗೆ ಎರಡು ಹೆಣ್ಣು ಮಕ್ಕಳಿದ್ದರು. ಆದರೆ ಮಲ್ಲಪ್ಪ ಮೊದಲಿಂದಲೂ ಕುಡಿತದ ದಾಸನಾಗಿದ್ದು, ಇತ್ತೀಚಿಗೆ ಕುಡಿತದ ಚಟ ವಿಪರೀತವಾಗಿ ದಾರಿ ತಪ್ಪಿದ್ದನು. ಪ್ರತಿದಿನ ಕುಡಿದು ಬಂದು ಪತ್ನಿ ಜೊತೆ ಸಣ್ಣಪುಟ್ಟ ವಿಚಾರಕ್ಕೂ ಜಗಳವಾಡುತ್ತಿದ್ದನು. ಪ್ರತಿದಿನ ಪತ್ನಿ ಮೇಲೆ ಹಲ್ಲೆ ಮಾಡುತ್ತಿದ್ದನು. ಇದರಿಂದ ಪತ್ನಿ ಕಳೆದ ಐದು ತಿಂಗಳ ಹಿಂದೆ ತವರು ಮನೆಗೆ ಹೋಗಿದ್ದಳು. ಹಿರಿಯರು ಮತ್ತು ಸಂಬಂಧಿಕರು ರಾಜಿ ಸಂಧಾನ ಮಾಡಿಸಿದ ಕಾರಣ, ಪಾರ್ವತಿ ಒಂದು ತಿಂಗಳ ಹಿಂದಷ್ಟೇ ಗಂಡನ ಮನೆಗೆ ವಾಪಸ್ ಆಗಿದ್ದಳು. ಇಷ್ಟಾದರೂ ಮಲ್ಲಪ್ಪ ಮತ್ತೆ ಅದೆ ಚಾಳಿ ಮುಂದುವರೆಸಿದ್ದನು.
ನಿನ್ನೆ ರಾತ್ರಿ ಪತಿ ಮಲ್ಲಪ್ಪ ಹೆರಕಲ್ ಪುನಃ ಕುಡಿದು ಬಂದು, ಪತ್ನಿ ಪಾರ್ವತಿ ಹೆರಕಲ್ (26) ಜೊತೆ ಜಗಳ ತೆಗೆದಿದ್ದಾನೆ. ಇಬ್ಬರ ಜಗಳ ವಿಕೋಪಕ್ಕೆ ತಿರುಗಿ ಮಲ್ಲಪ್ಪ ಹೆರಕಲ್, ಪತ್ನಿ ಪಾರ್ವತಿ ಹೆರಕಲ್ಳನ್ನು ಕೊಡಲಿಯಿಂದ ತಲೆ, ಕುತ್ತಿಗೆಗೆ ಹೊಡೆದು ಕೊಲೆ ಮಾಡಿದ್ದಾನೆ. ಕುಡುಕ ಗಂಡ ಮುಗ್ದ ಪತ್ನಿಯ ಬಲಿ ಪಡೆದು ಜೈಲು ಸೇರಿದರೆ, ಮಕ್ಕಳು ಅನಾಥರಾಗಿದ್ದಾರೆ. ಕುಡುಕನ ಕೃತ್ಯಕ್ಕೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.
ವರದಿ- ರವಿ ಮೂಕಿ ಟಿರ್ವಿ ಬಾಗಲಕೋಟೆ
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:50 pm, Fri, 28 October 22