Crime News ಅಪರಾಧ ಸುದ್ದಿ ರೌಂಡಪ್: ರೈಲಿಗೆ ತಲೆ ಕೊಟ್ಟ ಪ್ರೇಮಿಗಳು, ಡ್ರಗ್ಸ್ ಪೆಡ್ಲರ್ ಅರೆಸ್ಟ್
ರೈಲಿಗೆ ತಲೆ ಕೊಟ್ಟು ಆಂಧ್ರಪ್ರದೇಶ ಮೂಲದ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ರಾಯಚೂರು-ತೆಲಂಗಾಣ ಗಡಿ ಭಾಗದ ಕೃಷ್ಣ ರೈಲ್ವೆ ನಿಲ್ದಾಣ ಬಳಿ ನಡೆದಿದೆ.
ರಾಯಚೂರು: ರೈಲಿಗೆ ತಲೆ ಕೊಟ್ಟು ಆಂಧ್ರಪ್ರದೇಶ (Andhra Pradesh) ಮೂಲದ ಪ್ರೇಮಿಗಳಿಬ್ಬರು ಆತ್ಮಹತ್ಯೆ (suicide) ಮಾಡಿಕೊಂಡಿರುವಂತಹ ಘಟನೆ ರಾಯಚೂರು-ತೆಲಂಗಾಣ ಗಡಿ ಭಾಗದ ಕೃಷ್ಣ ರೈಲ್ವೆ ನಿಲ್ದಾಣ ಬಳಿ ನಡೆದಿದೆ. ಕರ್ನೂಲ್ ಮೂಲದ ಶಿವಕುಮಾರ(26), ಅನಿತಾ(19) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಪ್ರೀತಿಗೆ ಕುಟುಂಬಸ್ಥರ ವಿರೋಧ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಸ್ಥಳಕ್ಕೆ ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಮೆಹಬೂಬನಗರ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಮೈಸೂರಿನಲ್ಲಿ ಸಿಸಿಬಿಯಿಂದ ಇಬ್ಬರು ಡ್ರಗ್ ಪೆಡ್ಲರ್ಗಳ ಬಂಧನ ಮಾಡಿದ್ದು, 31 ಗ್ರಾಂ MDMA, ಎಕ್ಸ್ಟೆಸ್ಸಿ ಮಾತ್ರೆ, LSD, 5 ಸಾವಿರ ನಗದು, 2 ಮೊಬೈಲ್ ಫೋನ್, 1 ಬೈಕ್ ವಶಕ್ಕೆ ಪಡೆದಿದ್ದಾರೆ. ಕುವೆಂಪುನಗರದ ಕೆ ಬ್ಲಾಕ್ನ ಆದಿಚುಂಚನಗಿರಿ ರಸ್ತೆಯಲ್ಲಿ ಅರೆಸ್ಟ್ ಮಾಡಲಾಗಿದೆ. 1ನೇ ಆರೋಪಿ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿ, ಎರಡನೇ ಆರೋಪಿ ವೃತ್ತಿಯಲ್ಲಿ ವಕೀಲನಾಗಿದ್ದಾನೆ. ಇಬ್ಬರು ಆರೋಪಿಗಳು ಮಾದಕ ವಸ್ತುಗಳನ್ನು ಎಲ್ಲಿಂದ ತಂದರು? ಯಾರಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮೈಸೂರು ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
ಸಾತೊಡಿ ಜಲಪಾತದ ನೀರಲ್ಲಿ ಮುಳುಗಿ ವ್ಯಕ್ತಿ ಸಾವು
ಕಾರವಾರ: ಸಾತೊಡಿ ಜಲಪಾತದ ನೀರಲ್ಲಿ ಮುಳುಗಿ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸಾತೊಡಿ ಜಲಪಾತದಲ್ಲಿ ನಡೆದಿದೆ. ಹುಬ್ಬಳ್ಳಿಯ ಪೋತುಲ್ ರಾಮನೇಂದ್ರ ರಾವ್ (59) ಮೃತ ದುರ್ದೈವಿ. ನಿನ್ನೆ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಜಲಪಾತ ನೋಡಲು ಬಂದಿದ್ದರು. ತಮ್ಮ ಮಗನೊಂದಿಗೆ ನೀರಿಗಿಳಿದು ಸ್ನಾನ ಮಾಡುತ್ತಿದ್ದಾಗ ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Kalaburgi: ಚಾಕೊಲೇಟ್ ಆಸೆ ತೋರಿಸಿ ಅಪ್ರಾಪ್ತ ಬಾಲಕಿ ಮೇಲೆ 16 ವರ್ಷದ ಬಾಲಕನಿಂದ ಅತ್ಯಾಚಾರಕ್ಕೆ ಯತ್ನ
ಬೈಕ್ಗೆ ಕಾರ್ ಡಿಕ್ಕಿ: ಬೈಕ್ ಸವಾರರಿಗೆ ಗಾಯ
ಚಿತ್ರದುರ್ಗ: ಜಿಲ್ಲೆಯ ಹೊಸಪೇಟೆ ರಸ್ತೆಯಲ್ಲಿ ಬೈಕ್ಗೆ ಕಾರ್ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿರುವಂತಹ ಘಟನೆ ನಡೆದಿದೆ. ಚಿತ್ರದುರ್ಗದ ಫಾರ್ಮಸಿ ವಿದ್ಯಾರ್ಥಿ ಶರತ್(19), ಬೆಂಗಳೂರಿನ ಮೆಡಿಕಲ್ ವಿದ್ಯಾರ್ಥಿನಿ ಶಿರೀಷಾ(19) ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬೆಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಚಿತ್ರದುರ್ಗ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ನಡೆದಿದೆ.
ಸಾಗರದ ಹೊರವಲಯದಲ್ಲಿ ಬೆಂಕಿ ಅವಘಡ
ಶಿವಮೊಗ್ಗ: ಸಾಗರದ ಹೊರವಲಯದಲ್ಲಿ ಬೆಂಕಿ ಅವಘಡ ಉಂಟಾಗಿದ್ದು, ಅಂದಾಜು 50 ಲಕ್ಷ ವೆಚ್ಚದ ವಸ್ತು ಬೆಂಕಿಗಾಹುತಿ ಆಗಿರುವಂತಹ ಘಟನೆ ರಾಜ್ ಹ್ಯಾಂಡಿಕ್ರಾಫ್ಟ್ ಫ್ಯಾಕ್ಟರಿಯಲ್ಲಿ ನಡೆದಿದೆ. ಲಾವಣ್ಯ ಎಂಬವರಿಗೆ ಸೇರಿದ ಹ್ಯಾಂಡಿಕ್ರಾಫ್ಟ್ ಫ್ಯಾಕ್ಟರಿ. ಸಾಗರ, ಸೊರಬ ಅಗ್ನಿಶಾಮಕ ದಳ ಸಿಬ್ಬಂದಿಗಳ ಜಂಟಿ ಕಾರ್ಯಾಚರಣೆ ಮಾಡಿ ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ. ಬೆಂಕಿ ಅವಘಡಕ್ಕೆ ವಸ್ತುಗಳು ಸುಟ್ಟು ಭಸ್ಮವಾಗಿವೆ. ಸಾಗರ ನಗರ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಚಾಕುವಿನಿಂದ ಇರಿದು ಇಬ್ಬರ ಬರ್ಬರ ಹತ್ಯೆ
Mysore: ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು
ಮೈಸೂರು: ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವನ್ನಪ್ಪಿದ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಮಹದೇವನಗರದ ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ನಡೆದಿದೆ. ಯುವೀನ್ ಬಸವಣ್ಣ ಎಂಬುವರ ಪುತ್ರ ಯುವೀನ್(7) ಸಾವನ್ನಪ್ಪಿದ ಬಾಲಕ. ಕುಡಿಯುವ ನೀರಿನ ಘಟಕದಲ್ಲಿ ವಿದ್ಯುತ್ ಪ್ರವಹಿಸಿ ಈ ದುರ್ಘಟನೆ ನಡೆದಿದೆ. ಬಸವಣ್ಣ ಕುಟುಂಬ ಮೊರಾರ್ಜಿ ವಸತಿಶಾಲೆಯಲ್ಲಿ ವಾಸವಿದ್ದರು. ಅದರಂತೆ ತಂದೆಯ ಜೊತೆ ನೀರು ತರಲು ಹೋಗಿದ್ದಾಗ ಆಕಸ್ಮಿಕವಾಗಿ ಬಾಲಕನಿಗೆ ವಿದ್ಯುತ್ ಸ್ಪರ್ಶಿಸಿದೆ. ಘಟನೆಯಿಂದ ಅಸ್ವಸ್ಥಗೊಂಡಿದ್ದ ಬಾಲಕನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ಘಟನೆ ಸಂಬಂಧ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.