ಚುನಾವಣೆ ಹತ್ತಿರವಾಗುತ್ತಿದ್ದಂತೆ ರೌಡಿಗಳ ಮೇಲೆ ಪೊಲೀಸರ ಹದ್ದಿನಕಣ್ಣು: 35 ರೌಡಿಶೀಟರ್ಗಳು ಮತ್ತೆ ಜೈಲಿಗೆ
ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ನಗರದಲ್ಲಿ ರೌಡಿಗಳ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಾಂಡ್ ಉಲ್ಲಂಘಿಸಿ ಮತ್ತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ 35 ರೌಡಿಶೀಟರ್ಗಳನ್ನು ಪೊಲೀಸರು ಜೈಲಿಗಟ್ಟಿದ್ದಾರೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ನಗರದಲ್ಲಿ ರೌಡಿಗಳ (Rowdy sheeters) ಅಟ್ಟಹಾಸಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಾಂಡ್ ಉಲ್ಲಂಘಿಸಿ ಮತ್ತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಹಿನ್ನೆಲೆ ಈಗಾಗಲೇ 35 ರೌಡಿಶೀಟರ್ಗಳನ್ನು ಪೊಲೀಸರು ಮತ್ತೆ ಜೈಲಿಗಟ್ಟಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಸ್ಥಳೀಯ ಮುಖಂಡರೊಂದಿಗೆ ಓಡಾಟ, ಕೊಲೆ, ಕೊಲೆ ಯತ್ನ, ಕ್ರಿಮಿನಲ್ ಕೇಸ್ ಹಿನ್ನೆಲೆಯುಳ್ಳವರು ಸದ್ಯ ಜೈಲುಪಾಲಾಗಿದ್ದಾರೆ. ಬೆಂಗಳೂರು ಪೂರ್ವ ವಿಭಾಗದ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ, ಬಾಣಸವಾಡಿ, ಗೋವಿಂದಪುರ ಸೇರಿ ಹಲವು ಠಾಣಾ ವ್ಯಾಪ್ತಿಯ ರೌಡಿಗಳಾದ ಪಾಪಯ್ ಸುಹೇಲ್, ಛೋಟಾ ಸೈಯದ್, ಜೋಲು ಇಮ್ರಾನ್ ಹುಸೇನ್ @ ಮೆಕ್ಯಾನಿಕ್ ಹುಸೇನ್ ಸೇರಿ ಹಲವರು ಜೈಲುಪಾಲಾಗಿದ್ದಾರೆ.
ಐಪಿಸಿ ಸೆಕ್ಷನ್ 110ರ ಅಡಿ ಉಲ್ಲಂಘನೆ ಹಿನ್ನೆಲೆ ಬಂಧಿಸಿದ್ದು, 6 ತಿಂಗಳ ಕಾಲ ಎಲ್ಲ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ. ಪೊಲೀಸರ ಎಚ್ಚರಿಕೆ ನಡುವೆಯೂ ಮತ್ತೆ ಡ್ರಗ್ ಪೆಡ್ಲಿಂಗ್ ಸೇರಿ ಹಲವು ಕೃತ್ಯಗಳಲ್ಲಿ ರೌಡಿಗಳು ಭಾಗಿಯಾಗಿದ್ದರು. ಮುಂಜಾಗ್ರತೆಯಿಂದ ಕಾನೂನು ಮತ್ತು ಸುವ್ಯವಸ್ಥೆ ಹದಗೆಡದಂತೆ ಕ್ರಮಕೈಗೊಳ್ಳಲಾಗಿದ್ದು, ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಂತ ಹಂತವಾಗಿ ಪ್ರತಿ ವಿಭಾಗದಲ್ಲಿ ರೌಡಿಶೀಟರ್ಗಳ ಮಾಹಿತಿ ಸಂಗ್ರಹಿಸುತ್ತಿದ್ದು, ರೌಡಿಗಳ ಮೇಲೆ ಪೊಲೀಸರು ಹದ್ದಿನಕಣ್ಣಿಟ್ಟಿದ್ದಾರೆ.
ಇದನ್ನೂಓದಿ: ಮಂಗಳೂರು: ಹಾಡಹಗಲೇ ಜ್ಯುವೆಲರಿ ಶಾಪ್‌ಗೆ ನುಗ್ಗಿ ಚೂರಿ ಇರಿದು ವ್ಯಕ್ತಿಯ ಬರ್ಬರ ಹತ್ಯೆ
ಮಂಗಳೂರಲ್ಲಿ ಹಾಡಹಗಲೇ ಚೂರಿ ಇರಿದು ವ್ಯಕ್ತಿಯ ಬರ್ಬರ ಹತ್ಯೆ
ಮಂಗಳೂರು: ಹಾಡಹಗಲೇ ಚೂರಿ ಇರಿದು ವ್ಯಕ್ತಿಯ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಮಂಗಳೂರಿನ ಹಂಪನಕಟ್ಟದಲ್ಲಿರುವ ಜ್ಯುವೆಲರಿ ಶಾಪ್‌ನಲ್ಲಿ ನಡೆದಿದೆ. ಜ್ಯುವೆಲರಿ ಶಾಪ್‌ನಲ್ಲಿ ಕೆಲಸಕ್ಕಿದ್ದ ರಾಘವ(50) ಹತ್ಯೆಯಾದ ವ್ಯಕ್ತಿ. ಬೈಕ್‌ನಲ್ಲಿ ಜ್ಯುವೆಲರಿ ಶಾಪ್‌ಗೆ ಬಂದ ಅಪರಿಚಿತರು ಚೂರಿ ಇರಿದು ಪರಾರಿ ಆಗಿದ್ರು. ಆಸ್ಪತ್ರೆಗೆ ಸಾಗಿಸುವಾಗ ಗಾಯಗೊಂಡಿದ್ದ ರಾಘವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ: ರಾಯಚೂರು: ನದಿ ನೀರಲ್ಲಿ ಆಟವಾಡ್ತಿದ್ದ ಬಾಲಕನ ಮೇಲೆ ಮೊಸಳೆ ದಾಳಿ, ಸ್ಥಳೀಯರ ಸಮಯಪ್ರಜ್ಞೆಯಿಂದ ಉಳಿಯಿತು ಪುಟ್ಟ ಜೀವ
ವಿದ್ಯಾರ್ಥಿನಿ ಜೊತೆ ಅನುಚಿತವಾಗಿ ವರ್ತಿಸಿದ್ದ ಶಿಕ್ಷಕನ ಬಂಧನ
ಆನೇಕಲ್: ವಿದ್ಯಾರ್ಥಿನಿ ಜೊತೆ ಶಿಕ್ಷಕ ಅನುಚಿತವಾಗಿ ವರ್ತಿಸಿರುವಂತಹ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಖಾಸಗಿ ಶಾಲೆಯ ದೈಹಿಕ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ನ.30ರಂದು ವಿದ್ಯಾರ್ಥಿನಿಯನ್ನು ಕ್ರೀಡಾ ಕೋಣೆಗೆ ಕರೆದಿದ್ದ ಶಿಕ್ಷಕ, ಬಳಿಕ ವಿದ್ಯಾರ್ಥಿನಿ ಜೊತೆ ಸಲುಗೆ ಬೆಳೆಸಲು ಯತ್ನಿಸಿದ್ದ. ದೈಹಿಕ ಶಿಕ್ಷಕನ ವರ್ತನೆ ಬಗ್ಗೆ ಪ್ರಿನ್ಸಿಪಾಲ್ಗೆ ವಿದ್ಯಾರ್ಥಿನಿ ತಿಳಿಸಿದ್ದಾಳೆ. 1 ವಾರ ಶಾಲೆಗೆ ಬಾರದಂತೆ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ವಾಪಸ್ ಶಾಲೆಗೆ ಬಂದ ಬಳಿಕ ಬಾಲಕಿ ಫೋಟೋ ಕ್ಲಿಕ್ಕಿಸುವುದು, ವಿಡಿಯೋ ಮಾಡುತ್ತಿದ್ದ. ಶಿಕ್ಷಕನ ವರ್ತನೆಗೆ ರೋಸಿ ಹೋಗಿ ವಿದ್ಯಾರ್ಥಿನಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.