ರಾಯಚೂರು ಬಿಜೆಪಿ ಶಾಸಕನ ಜೊತೆ ಮದ್ಯವ್ಯಸನಿಯ ಕಿರಿಕ್, ಕತ್ತಿಯಿಂದ ಹಲ್ಲೆಗೆ ಯತ್ನ
ಗದ್ವಾಲ್ ರಸ್ತೆಯ ಆಂಜನೇಯ ದೇವಸ್ಥಾನಕ್ಕೆ ತೆರಳಿದ್ದ ರಾಯಚೂರು ನಗರ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಅವರ ಮೇಲೆ ಮದ್ಯವ್ಯಸನಿಯೊಬ್ಬ ಕತ್ತಿಯಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಚಾಂದಪಾಷಾ ಹಲ್ಲೆ ಮಾಡಲು ಯತ್ನಿಸಿದ ವ್ಯಕ್ತಿ.
ರಾಯಚೂರು, ಏಪ್ರಿಲ್ 01: ಮದ್ಯವ್ಯಸನಿಯೊಬ್ಬ ರಾಯಚೂರು (Raichur) ನಗರ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ (BJP MLA Shivaraj Patil) ಮೇಲೆ ಕತ್ತಿಯಿಂದ ಹಲ್ಲೆ ಮಾಡಲು ಯತ್ನಿಸಿದ ಘಟನೆ ನಗರದ ಗದ್ವಾಲ್ ರಸ್ತೆಯಲ್ಲಿ ನಡೆದಿದೆ. ಚಾಂದಪಾಷಾ ಹಲ್ಲೆ ಮಾಡಲು ಯತ್ನಿಸಿದ ವ್ಯಕ್ತಿ.
ಗದ್ವಾಲ್ ರಸ್ತೆಯ ಆಂಜನೇಯ ದೇವಸ್ಥಾನಕ್ಕೆ ಶಾಸಕ ಶಿವರಾಜ್ ಪಾಟೀಲ್ ಹೋಗಿದ್ದರು. ಈ ವೇಳೆ ಮದ್ಯವ್ಯಸನಿ ಚಾಂದಪಾಷಾ ಶಾಸಕರನ್ನು ನೋಡಿ ಅವರ ಬಳಿಗೆ ಓಡೋಡಿ ಬಂದಿದ್ದಾನೆ. ನಂತರ ನಮ್ಮ ಮನೆಗೆ ನಲ್ಲಿ ಹಾಕಿಸಿಲ್ಲ ಅಂತ ಹೇಳಿದ್ದಾನೆ. ಚಾಂದ್ಪಾಷಾ 3-4 ಕತ್ತಿಗಳನ್ನು ಹಿಡಿದಿದ್ದು, ಶಾಸಕರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಕೂಡಲೆ ಅಂಗರಕ್ಷಕರು ತಡೆದಿದ್ದಾರೆ. ಬಳಿಕ ಚಾಂದ್ಪಾಷಾನನ್ನು ಮಾರ್ಕೆಟ್ ಯಾರ್ಡ್ ಠಾಣೆಗೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ, ಹಲ್ಲೆ ಮಾಡಲು ಹೋಗಿರಲಿಲ್ಲ, ಅವರೊಂದಿಗೆ ಮಾತನಾಡಲು ಹೋಗಿದ್ದೆ ಎಂದು ಚಾಂದ್ಪಾಷಾ ಹೇಳಿದ್ದಾನೆ. ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಆನೇಕಲ್ ನಡುರಸ್ತೆಯಲ್ಲೇ ಕಾಂಗ್ರೆಸ್ ಮುಖಂಡನಿಂದ ಹೆಡ್ ಕಾನ್ಸ್ಟೇಬಲ್ ಮೇಲೆ ಹಲ್ಲೆ
KSRTC ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ
ಪತ್ನಿ ಫ್ರೀ ಬಸ್ನಲ್ಲಿ ತವರಿಗೆ ಹೋಗಿದ್ದನ್ನ ಕಂಡು ಸಿಟ್ಟಿಗೆದ್ದ ಕುಡುಕ ಗಂಡ ಕೆಎಸ್ಆರ್ಟಿಸಿ ಸಿಬ್ಬಂದಿ ಮೇಲೆ ಚಾಕು, ದೊಣ್ಣೆಯಿಂದ ಹಲ್ಲೆಗೆ ಯತ್ನಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ನಡೆದಿತ್ತು. ಉಚಿತ ಬಸ್ ಇದೆ ಎಂದು ತನಗೆ ಹೇಳದೆ ಪತ್ನಿ ತವರಿಗೆ ಹೊಗಿದ್ದಾಳೆ ಎಂದು ಚಿಕ್ಕಸಂದ್ರದ ನಾಗ ಎಂಬಾತ ಸಿಟ್ಟಿಗೆದ್ದು ರಂಪಾಟ ನಡೆಸಿದ್ದನು. ಮೊದಲು ಚಾಕು ಹಿಡಿದು ಹಲ್ಲೆ ನಡೆಸಲು ಯತ್ನಿಸಿದಾಗ ಸ್ಥಳೀಯರು ತಡೆದಿದ್ದರು. ಬಳಿಕ ದೊಣ್ಣೆ ಹಿಡಿದುಕೊಂಡು ಹಲ್ಲೆಗೆ ಮುಂದಾದಾಗ ಅಲ್ಲೇ ಇದ್ದ ವ್ಯಕ್ತಿಯೊಬ್ಬರು ನಾಗನನ್ನು ತಡೆದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ