ಬೆಂಗಳೂರಿಗೆ ವಿಚಿತ್ರ ಮುಸುಕುದಾರಿ ಕಳ್ಳರ ಎಂಟ್ರಿ: ಅಂಡರ್ವೇರ್ ಇವರ ಡ್ರೆಸ್ ಕೋಡ್
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಚಂದಾಪುರದ ಹೆಡ್ ಮಾಸ್ಟರ್ ಲೇಔಟ್ನಲ್ಲಿ ಇಬ್ಬರು ಖದೀಮರು ಕಳ್ಳತನ ಮಾಡಿದ್ದಾರೆ. ತಲೆಗೆ ಟೋಪಿ, ಮುಖಕ್ಕೆ ಬಟ್ಟೆ ಸುತ್ತಿಕೊಂಡು ಅಂಡರ್ವೇರ್ ಧರಿಸಿ, ವಿಚಿತ್ರ ಡ್ರೆಸ್ ಕೋಡ್ ಮೂಲಕ ಎಂಟ್ರಿ ಕೊಡುತ್ತಾರೆ. ಇವರನ್ನು ನೋಡಿದರೆ ಎಂತವರಿಗೂ ಶಾಕ್ ಆಗುತ್ತದೆ.
ಆನೇಕಲ್, ಡಿಸೆಂಬರ್ 17: ಸಿಲಿಕಾನ್ ಸಿಟಿ ಬೆಂಗಳೂರಿಗೆ ವಿಚಿತ್ರ ಮುಸುಕುದಾರಿ ಕಳ್ಳರು (thieves) ಎಂಟ್ರಿ ನೀಡಿದ್ದಾರೆ. ಇವರ ಡ್ರೆಸ್ ಕೋಡ್ ನೋಡಿದರೆ ಎಂತವರಿಗೂ ಶಾಕ್ ಆಗುತ್ತದೆ. ತಲೆಗೆ ಟೋಪಿ, ಮುಖಕ್ಕೆ ಬಟ್ಟೆ ಸುತ್ತಿಕೊಂಡು ಅಂಡರ್ವೇರ್ ಧರಿಸಿ ಇಬ್ಬರು ಕಳ್ಳರು ಬಂದಿದ್ದರು. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಚಂದಾಪುರದ ಹೆಡ್ ಮಾಸ್ಟರ್ ಲೇಔಟ್ನಲ್ಲಿ ಕಳೆದ ರಾತ್ರಿ ಒಂದು ಗಂಟೆಯ ಸುಮಾರಿಗೆ ಕಳ್ಳತನಕ್ಕೆ ಯತ್ನಿಸಿದ್ದಾರೆ. ಖತರ್ನಾಕ್ ಕಳ್ಳರ ಓಡಾಟದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಆಗಿದೆ.
ಕೈಯಲ್ಲಿ ಮಾರಕಾಸ್ತ್ರಗಳನ್ನ ಹಿಡಿದು ಬಂದಿದ್ದ ಕಳ್ಳರು, ಮನೆಯ ಗೇಟ್ ಬಳಿ ಬಂದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಈ ವೇಳೆ ಮನೆಯ ಮಾಲೀಕ ಎಚ್ಚೆತ್ತುಕೊಂಡು ಲೈಟ್ ಹಾಕುತ್ತಿದ್ದಂತೆ ಕಳ್ಳರು ಎಸ್ಕೇಪ್ ಆಗಿದ್ದಾರೆ. ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಮತ್ತೊಂದು ಮನೆಗೆ ಕನ್ನ: ಚಿನ್ನಾಭರಣ ಕದ್ದು ಪರಾರಿ
ಹೆಡ್ ಮಾಸ್ಟರ್ ಲೇಔಟ್ನ ಆರನೇ ಕ್ರಾಸ್ನಲ್ಲಿನ ಮತ್ತೊಂದು ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ. ಮನೆಯ ಬಾಗಿಲು ಮುರಿದು ಕಳ್ಳತನ ಮಾಡಿದ್ದಾರೆ. ಮನೆಗೆ ಬೀಗಹಾಕಿಕೊಂಡು ಮಂತ್ರಾಲಯಕ್ಕೆ ಹೋಗಿದ್ದ ರಾಮಕೃಷ್ಣ ಎಂಬುವವರು ಮನೆಯಲ್ಲಿ ಖದೀಮರು ಕೈಚಳಕ ತೋರಿದ್ದಾರೆ. ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಇಪ್ಪತ್ತು ಸಾವಿರ ನಗದು ಕದ್ದು ಎಸ್ಕೇಪ್ ಆಗಿದ್ದಾರೆ.
ಕೆಲಸದ ಒತ್ತಡ: ಡೆತ್ನೋಟ್ ಬರೆದಿಟ್ಟು ಎಫ್ಡಿಎ ನೌಕರ ಆತ್ಮಹತ್ಯೆ
ಚಿತ್ರದುರ್ಗ: ಕೆಲಸದ ಒತ್ತಡದಿಂದ ಎಫ್ಡಿಎ ನೌಕರ ನೇಣಿಗೆ ಶರಣಾಗಿರುವಂತಹ ಘಟನೆ ಜಿಲ್ಲೆಯ ಚಳ್ಳಕೆರೆಯ ವಾಲ್ಮೀಕಿ ಬಡಾವಣೆ ಮನೆಯಲ್ಲಿ ನಡೆದಿದೆ. ಗುರುಲಿಂಗಪ್ಪ(52) ಮೃತ ಎಫ್ಡಿಎ ನೌಕರ. ತಾಲೂಕು ಕಚೇರಿ ಚುನಾವಣೆ ವಿಭಾಗದಲ್ಲಿ FDA ಆಗಿದ್ದರು.
ಇದನ್ನೂ ಓದಿ: ಕಾರವಾರ: ಹೊಳೆಯಲ್ಲಿ ಮುಳುಗುತ್ತಿರುವವನನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಐವರು ನೀರುಪಾಲು
ಕೆಲಸದ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆಂದು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಖಚಿತ ಮಾಹಿತಿ ನೀಡಿದ್ದಾರೆ. ಗುರುಲಿಂಗಪ್ಪ ಡೆತ್ನೋಟ್ನ್ನು ಚಳ್ಳಕೆರೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅನಧಿಕೃತವಾಗಿ ಮರಳು ಸಾಗಾಟ: ಮೂರು ವಾಹನ ಜಪ್ತಿ
ಹಾವೇರಿ: ಅಶೋಕ ಲೈಲ್ಯಾಂಡ್ ವಾಹನಗಳಲ್ಲಿ ಅನಧಿಕೃತವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಮೂರು ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ರಾಣೇಬೆನ್ನೂರು ಗ್ರಾಮೀಣ ಠಾಣೆಯ ಪೊಲೀಸರು ಕಾರ್ಯಚರಣೆ ಮಾಡಿ ಯಾವುದೇ ಪರವಾನಗಿ ಇಲ್ಲದೆ ಮೂರು ಅಶೋಕ ಲೈಲ್ಯಾಂಡ್ ವಾಹನಗಳಲ್ಲಿ ಮರಳು ತುಂಬಿ ಕಟ್ಟಿಗೆ ಹಲಗೆ, ತಾಡಪಲ್ ಹಾಕಿ ಸಾಗಿಸಲಾಗುತ್ತಿತ್ತು. ಸದ್ಯ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.