ಕೆಲಸಕ್ಕೆಂದು ಕರೆದು 47 ವರ್ಷದ ವ್ಯಕ್ತಿಯಿಂದ 21 ವರ್ಷದ ಯುವತಿಯ ಅತ್ಯಾಚಾರ
ಕೆಲಸಕ್ಕೆಂದು ಬುಕ್ ಮೈ ಬಾಯಿ ಆ್ಯಪ್ ಮೂಲಕ ಯುವತಿ ಕರೆಸಿಕೊಂಡು ಆಕೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಬೆಂಗಳೂರು ನಗರದ ಆನೇಕಲ್ ತಾಲೂಕಿನಲ್ಲಿ ನಡೆದಿದೆ.
ಆನೇಕಲ್: ಕೆಲಸಕ್ಕೆಂದು ಯುವತಿಯನ್ನು ಬುಕ್ ಮೈ ಬಾಯಿ ಎಂಬ ಆ್ಯಪ್ (BookMyBai App) ಮೂಲಕ ಕರೆಸಿಕೊಂಡು ಅತ್ಯಾಚಾರ (Rape on young girl) ಎಸಗಿದ ಘಟನೆ ತಾಲೂಕಿನ ಪರಪ್ಪನ ಅಗ್ರಹಾರ ವ್ಯಾಪ್ತಿಯ ಕೂಡ್ಲು ಬಡಾವಣೆಯಲ್ಲಿ ನಡೆದಿದೆ. ಬುಕ್ ಮೈ ಬಾಯಿ ಆ್ಯಪ್ನಿಂದ 21 ವರ್ಷದ ಯುವತಿಯನ್ನು ಮನೆಗೆ ಕರೆಸಿದ 47 ವರ್ಷದ ಬಾಬು ಈ ಹೇಯ ಕೃತ್ಯ ಎಸಗಿದ್ದು, ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬುಕ್ ಮೈ ಬಾಯಿ ಆ್ಯಪ್ ಮನೆಗೆಲಸಕ್ಕೆ ಮಹಿಳೆಯರನ್ನು ಒದಗಿಸುವ ಆನ್ಲೈನ್ ಕಂಪನಿಯಾಗಿದ್ದು, ವಿಲ್ಸನ್ ಗಾರ್ಡನ್ ಬಳಿ ಕಚೇರಿ ಇದೆ. ಈ ಆ್ಯಪ್ ಮೂಲಕ ವೃದ್ಧೆ ತಾಯಿಯನ್ನು ನೋಡಿಕೊಳ್ಳಲೆಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಕೂಡ್ಲು ಬಡಾವಣೆ ನಿವಾಸಿ ಬಾಬು ಒರಿಸ್ಸಾ ಮೂಲದ 21 ವರ್ಷದ ಯುವತಿಯನ್ನು ಕರೆಸಿಕೊಂಡಿದ್ದಾನೆ. ಯುವತಿ ಮನೆಗೆ ಬಂದ ತಕ್ಷಣವೇ ಆಕೆಯ ಮೇಲೆ ಅತ್ಯಾಚಾರ ಎಸಗಿ ಯಾರಿಗಾದರೂ ಹೇಳಿದರೆ ಕೊಲೆ ಮಾಡಿ ಬಿಡುತ್ತೇನೆ ಎಂದು ಜೀವಬೆದರಿಕೆ ಹಾಕಿ ಮನೆಯಲ್ಲಿ ಕೂಡಿ ಹಾಕಿ ಕೆಲಸಕ್ಕೆ ತೆರಳಿದ್ದಾನೆ.
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಅಪ್ರಾಪ್ತ ಬಾಲಕಿ ಮೇಲೆ 12 ಗಂಟೆಗಳ ಕಾಲ ನಿರಂತರ ಸಾಮೂಹಿಕ ಅತ್ಯಾಚಾರ: 8 ಆರೋಪಿಗಳ ಬಂಧನ
ತನ್ನ ಬಳಿ ಇದ್ದ ಮೊಬೈಲ್ನಿಂದ ಕಂಪನಿಗೆ ಕರೆ ಮಾಡಿದ ಯುವತಿ, ನಡೆದಿರುವ ಕೃತ್ಯವನ್ನು ಹೇಳಿಕೊಂಡಿದ್ದಾಳೆ. ಕೂಡಲೇ ಎಚ್ಚೆತ್ತ ಕಂಪನಿ, ಕೃತ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದೆ. ಈ ಹಿನ್ನೆಲೆ ಪ್ರಕರಣ ದಾಖಲಿಸಿದ ಪೊಲೀಸರು, ಆರೋಪಿ ಬಾಬುನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ನವೆಂಬರ್ 31ರ ರಾತ್ರಿ ಈ ಘಟನೆ ನಡೆದಿದ್ದು, ಡಿ.2 ರಂದು ಪರಪ್ಪನ ಅಗ್ರಹಾರ ಪೊಲೀಸರು ಸಂತ್ರಸ್ತೆಯಿಂದ ಹೇಳಿಕೆ ಪಡೆದುಕೊಂಡಿದ್ದರು. ಸದ್ಯ ಈ ಘಟನೆ ನಂತರ ಆನ್ಲೈನ್ ಕಂಪನಿಗಳಲ್ಲಿಯೂ ಆತಂಕ ಹೆಚ್ಚಳವಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:38 am, Mon, 19 December 22