ಹೈದರಾಬಾದ್: ಎಐಎಂಐಎಂ ಪಕ್ಷದ ಸ್ಥಳೀಯ ಕಾರ್ಪೊರೇಟರ್ ಕಚೇರಿಯೊಳಗೆ ಯುವಕನ ಹತ್ಯೆ
ಕೊಲೆಯಾದ ವ್ಯಕ್ತಿಯನ್ನು ಮುರ್ತಾಜಾ ಅನಸ್ ಎಂದು ಗುರುತಿಸಲಾಗಿದ್ದು, ಕಾರ್ಪೊರೇಟರ್ ಸೋದರಳಿಯ ಎಂದು ಹೇಳಲಾಗಿದೆ. ಆತನನ್ನು ಓವೈಸಿ ಆಸ್ಪತ್ರೆಗೆ ಸಾಗಿಸಿದ್ದರೂ ಪ್ರಾಣ ಉಳಿಸಲಾಗಲಿಲ್ಲ
ಹೈದರಾಬಾದ್: ಹೈದರಾಬಾದ್‌ನ ಅಸಾದುದ್ದೀನ್ ಓವೈಸಿ (Asaduddin Owaisi) ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM)ಪಕ್ಷದ ಸ್ಥಳೀಯ ಕಾರ್ಪೊರೇಟರ್ ಕಚೇರಿಯೊಳಗೆ ಅಪರಿಚಿತ ವ್ಯಕ್ತಿಯಿಂದ ಇರಿತಕ್ಕೊಳಗಾಗಿ 22 ವರ್ಷದ ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ನಗರದ ಲಲಿತಾ ಬಾಗ್ (Lalitha Bagh) ಪ್ರದೇಶದಲ್ಲಿ ಕಚೇರಿ ಇದೆ. ಕೊಲೆಯಾದ ವ್ಯಕ್ತಿಯನ್ನು ಮುರ್ತಾಜಾ ಅನಸ್ ಎಂದು ಗುರುತಿಸಲಾಗಿದ್ದು, ಕಾರ್ಪೊರೇಟರ್ ಸೋದರಳಿಯ ಎಂದು ಹೇಳಲಾಗಿದೆ. ಆತನನ್ನು ಓವೈಸಿ ಆಸ್ಪತ್ರೆಗೆ ಸಾಗಿಸಿದ್ದರೂ ಪ್ರಾಣ ಉಳಿಸಲಾಗಲಿಲ್ಲ. ಪೊಲೀಸರು ಸ್ಥಳದಲ್ಲಿದ್ದು ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ವರದಿಗಳ ಪ್ರಕಾರ, ದಾಳಿಕೋರರು ಕಚೇರಿಗೆ ನುಗ್ಗಿ ಯುವಕನ ಮೇಲೆ ಚಾಕುವಿನಿಂದ ಹಲವಾರು ಬಾರಿ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಆತ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.
ಮಾಹಿತಿ ಪಡೆದ ದಕ್ಷಿಣ ವಲಯ ಡಿಸಿಪಿ ಪಿ ಸಾಯಿ ಚೈತನ್ಯ ಹಾಗೂ ಭವಾನಿನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. CLUES ತಂಡವನ್ನು ಸಹ ಸೇವೆಗೆ ಬಳಸಲಾಗಿದೆ.ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಘಟನೆ ವರದಿಯಾದ ಕೂಡಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ವಿಚಾರದಲ್ಲಿ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:50 pm, Mon, 19 December 22