AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಪೊಲೀಸ್ ಕಾನ್ಸ್​​ಟೇಬಲ್ ಸಾವಿನ ರಹಸ್ಯ ಬೇಧಿಸಲು ಬೇಕಾಯ್ತು 250 ಸಿಸಿಟಿವಿ!

ಪೊಲೀಸರು ಮನಸು ಮಾಡಿದರೆ ಎಂಥ ಪ್ರಕರಣವನ್ನೂ ಬಯಲಿಗೆಳೆಯಬಲ್ಲರು ಎಂಬುದಕ್ಕೆ ಇದುವೇ ಸಾಕ್ಷಿ. ಬೆಂಗಳೂರಿನ ಪೊಲೀಸ್ ಕಾನ್ಸ್​​ಟೇಬಲ್ ಒಬ್ಬರ ಸಾವಿನ ಜಾಡು ಹಿಡಿದು ಹೊರಟ ಪೊಲೀಸರು, ಮೃತದೇಹ ಪತ್ತೆ ಮಾಡಲು ಬರೋಬ್ಬರಿ 250 ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಿದ್ದಾರೆ. ಕೊನೆಗೂ ನಡೆದಿದ್ದೇನು? ಸಾವು ಹೇಗಾಯ್ತು ಎಂಬುದನ್ನು ಬೆಳಕಿಗೆ ತಂದಿದ್ದಾರೆ. ಆ ಬಗ್ಗೆ ವಿವರ ಇಲ್ಲಿದೆ.

ಬೆಂಗಳೂರು: ಪೊಲೀಸ್ ಕಾನ್ಸ್​​ಟೇಬಲ್ ಸಾವಿನ ರಹಸ್ಯ ಬೇಧಿಸಲು ಬೇಕಾಯ್ತು 250 ಸಿಸಿಟಿವಿ!
ಸಿಸಿಟಿವಿ ದೃಶ್ಯದ ಸ್ಕ್ರೀನ್​ಗ್ರ್ಯಾಬ್ ಮತ್ತು ಒಳಚಿತ್ರದಲ್ಲಿ ಪೊಲೀಸ್ ಕಾನ್ಸ್​​​ಟೇಬಲ್ ಶಿವರಾಜ್
Shivaprasad B
| Updated By: Ganapathi Sharma|

Updated on: Jul 02, 2024 | 10:31 AM

Share

ಬೆಂಗಳೂರು, ಜುಲೈ 2: ಬೆಂಗಳೂರಿನ ಮಡಿವಾಳ ಪೊಲೀಸ್ ಕಾನ್ಸ್​​​ಟೇಬಲ್ ಶಿವರಾಜ್ ಆತ್ಮಹತ್ಯೆ ಪ್ರಕರಣ ಮಾಡಿಕೊಂಡಿದ್ದು, ಪ್ರಕರಣದ ಜಾಡು ಹಿಡಿದು ಹೊರಟ ಬೆಂಗಳೂರು ಪೊಲೀಸರಿಗೆ ಸಿಸಿಟಿವಿ ದೃಶ್ಯಗಳ ಪರಿಶೀಲನೆಯೇ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು ಎಂಬುದು ತಿಳಿದುಬಂದಿದೆ. ಕೊನೆಗೂ ಶಿವರಾಜ್ ಮೃತದೇಹ ಪತ್ತೆ ಮಾಡಲು ಪೊಲೀಸರು ಬರೋಬ್ಬರಿ 250 ಸಿಸಿಟಿವಿ ದೃಶ್ಯಗಳ ಪರಿಶೀಲನೆ ಮಾಡಬೇಕಾಗಿ ಬಂದಿತ್ತು ಎಂಬುದು ಗೊತ್ತಾಗಿದೆ. ಸುಬ್ರಮಣ್ಯಪುರ ಪೊಲೀಸರು ಹಾಗೂ ಮಡಿವಾಳ ಪೊಲೀಸರಿಂದ ಶಿವರಾಜ್​​ಗಾಗಿ ಹುಡುಕಾಟ ನಡೆದಿತ್ತು. ಆದರೆ, ಮಡಿವಾಳ ಪೊಲೀಸ್ ಸಿಬ್ಬಂದಿಯಾಗಿದ್ದ ಕಾರಣ ಅಲ್ಲಿನ ಪೊಲೀಸರೇ ಹುಡುಕಾಟ ಶುರು ಮಾಡಿದ್ದರು.

ಇನ್ಸ್​​​ಪೆಕ್ಟರ್ ಮೌಖಿಕ ಆದೇಶದ ಹಿನ್ನಲೆ ಹುಡುಕಾಟ ನಡೆಸಲಾಗಿದ್ದು, ಸುಬ್ರಮಣ್ಯಪುರದಿಂದ ಮೈಸೂರು ರಸ್ತೆಯ ಜ್ಞಾನಭಾರತಿ ಮೆಟ್ರೋ ಸ್ಟೇಷನ್ ವರೆಗೂ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಲಾಗಿದೆ.

ಐದು ದಿನ ನಿರಂತರ ಹುಡುಕಾಟ

ಶಿವರಾಜ್​​ ನಾಪತ್ತೆಯಾಗಿ ಐದು ದಿನಗಳಿಂದ ನಿರಂತರವಾಗಿ ಅವರಿಗಾಗಿ ಮಡಿವಾಳ ಪೊಲೀಸರು ಹುಡುಕಾಟ ನಡೆಸಿದ್ದರು. ನಿರಂತರವಾಗಿ ಸಿಸಿಟಿವಿ ಪರಿಶೀಲನೆ ನಡೆಸಿದ್ದ ಪೊಲೀಸರಿಗೆ, ಕೊನೆಯಲ್ಲಿ ಶಿವರಾಜ್ ಜ್ಞಾನಭಾರತಿ ಮೆಟ್ರೋ ಸ್ಟೇಷನ್​​​ಗೆ ಬಂದು ಪಾರ್ಕಿಂಗ್ ಜಾಗದಲ್ಲಿ ಬೈಕ್ ನಿಲ್ಲಿಸಿದ್ದು ಕಾಣಿಸಿತ್ತು. ನಂತರ ನೀರಿನ ಬಾಟಲಿ ಹಿಡಿದು ಬೆಂಗಳೂರು ವಿವಿ ಆವರಣದ ಒಳಗೆ ನಡೆದುಕೊಂಡು ತೆರಳಿದ್ದು ಕಾಣಿಸಿತ್ತು.

ಬೆಂಗಳೂರು ವಿವಿ ಆವರಣದೊಳಗೆ ನಡೆಯಿತು ಶೋಧ

ಸಿಸಿಟಿವಿ ದೃಶ್ಯಗಳ ಪರಿಶೀಲನೆಯ ಆಧಾರದಲ್ಲಿ ಸೋಮವಾರ ಬೆಳಗ್ಗೆ ಬೆಂಗಳೂರು ವಿವಿ ಆವರಣದೊಳಗೆ ಮಡಿವಾಳ ಪೊಲೀಸರು ಶೋಧ ನಡೆಸಿದ್ದರು. ಈ ವೇಳೆ ವಿವಿ ಆವರಣದಲ್ಲಿ ಪಾಳು ಬಿದ್ದ ಬಾವಿಯಲ್ಲಿ ಶಿವರಾಜ್ ಮೃತದೇಹ ತೇಲುತ್ತಿತ್ತು. ಕೂಡಲೇ ಜ್ಞಾನಭಾರತಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಜ್ಞಾನಭಾರತಿ ಪೊಲೀಸರು ಸ್ಥಳಕ್ಕೆ ಬಂದು ಮೃತದೇಹ ಹೊರತೆಗೆಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ನಂತರ ಪೊಲೀಸರು ಶಿವರಾಜ್ ಕೊಲೆಯಾಗಿಲ್ಲ, ಇದು ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಇದನ್ನೂ ಓದಿ: ನಾಪತ್ತೆಯಾಗಿದ್ದ ಪೊಲೀಸ್ ಕಾನ್ಸ್​ಟೇಬಲ್ ಶವವಾಗಿ ಪತ್ತೆ: ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಶಂಕೆ

ವಿವಿ ಆವರಣದೊಳಗೆ ಶಿವರಾಜ್ ಒಬ್ಬೊಂಟಿಯಾಗಿ ನಡೆದು ಬಂದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹೀಗಾಗಿಯೇ ಪೊಲೀಸರು ಇದು ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇಷ್ಟೇ ಅಲ್ಲದೆ, ಬೆನ್ನಿಗೆ ಕಲ್ಲು ಕಟ್ಟಿಕೊಂಡು ಶಿವರಾಜ್ ಬಾವಿಗೆ ಹಾರಿರುವುದು ಗೊತ್ತಾಗಿದೆ. ಮೃತದೇಹ ಹೊರತೆಗೆದಾಗ ಮೃತದೇಹಕ್ಕೆ ಕಲ್ಲು ಕಟ್ಟಿಕೊಂಡಿರುವುದು ಪತ್ತೆಯಾಗಿದೆ.

ಕೊಲೆಯಲ್ಲ ಆತ್ಮಹತ್ಯೆ

ಆರಂಭದಲ್ಲಿ ಕಾನ್ಸ್​​ಟೇಬಲ್ ಶಿವರಾಜ್​ ಕೊಲೆಯಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ, ಸಿಸಿಟಿವಿಯಲ್ಲಿ ಒಬ್ಬನೇ ತೆರಳಿರುವುದು ಗೊತ್ತಾದ ಕಾರಣ ಪೊಲೀಸರು ಇದೊಂದು ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಆತ್ಮಹತ್ಯೆಗೆ ಕಾರಣವೇನು?

ಕೌಟುಂಬಿಕ ಕಾರಣಗಳಿಂದಾಗಿ ಶಿವರಾಜ್ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಮೂರು ತಿಂಗಳ ಹಿಂದಷ್ಟೇ ಶಿವರಾಜ್ ವಿವಾಹವಾಗಿತ್ತು. ಆದರೆ, ಅವರ ಕುಟುಂಬದಲ್ಲಿ ಎಲ್ಲವೂ ಸರಿ ಇರಲಿಲ್ಲ. ಶಿವರಾಜ್ ಮತ್ತು ಕುಟುಂಬದವರ ವಿರುದ್ಧ ಅವರ ಪತ್ನಿ ದಾವಣಗೆರೆಯಲ್ಲಿ ದೂರು ದಾಖಲಿಸಿದ್ದರು ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಕೆಲಸಕ್ಕೆಂದು ಹೊರಟಿದ್ದ ಶಿವರಾಜ್ ನಾಪತ್ತೆಯಾಗಿದ್ದರು. ಘಟನೆ ಸಂಬಂಧ ಅವರ ಸಹೋದರ ದೂರು ನೀಡಿದ್ದರು.

ನಂತರ ಶಿವರಾಜ್​ ಪತ್ತೆಗೆ ಕಾರ್ಯಾಚರಣೆಗಿಳಿದ ಪೊಲೀಸರು ಕೊನೆಗೂ ಅವರ ಮೃತದೇಹ ಪತ್ತೆಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ