
ಬೆಂಗಳೂರು, ಮೇ 05: ತಂದೆಯ ಕೊಲೆ ಪ್ರತೀಕಾರಕ್ಕಾಗಿ ಪುತ್ರ ತನ್ನ ಮಾವನನ್ನು (Father in Law) ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು (Bengaluru) ರಾಮಮೂರ್ತಿನಗರ ಠಾಣಾ ವ್ಯಾಪ್ತಿಯ ಟಿನ್ ಫ್ಯಾಕ್ಟರಿ ಬಳಿ ನಡೆದಿದೆ. ಸಿರಾಜ್ (32) ಕೊಲೆಯಾದ ವ್ಯಕ್ತಿ. ಫಹಾದ್ ಕೊಲೆ ಮಾಡಿದ ಆರೋಪಿ. ಆರೋಪಿ ಫಹಾದ್ ಚಿಕ್ಕವನಿದ್ದಾಗ ಆತನ ಕಣ್ಣೆದುರೇ ತಂದೆ ಅನ್ಸರ್ ಪಾಷಾನನ್ನು ಸಿರಾಜ್ ಕೊಚ್ಚಿ ಕೊಂದಿದ್ದನು. ತನ್ನ ತಂದೆಯ ಸಾವಿಗೆ ಪ್ರತಿಕಾರಕ್ಕಾಗಿ 16 ವರ್ಷಗಳ ಕಾಲ ಕಾಯ್ದು ಮಾವ ಸಿರಾಜ್ನನ್ನು ಫಹಾದ್ ಕೊಲೆ ಮಾಡಿದ್ದಾನೆ.
ಅನ್ಸರ್ ಪಾಷಾ ಹತ್ಯೆ ಪ್ರಕರಣದಲ್ಲಿ ಸಿರಾಜ್ 10 ವರ್ಷ ಜೈಲಿನಲ್ಲಿದ್ದನು. ಸಿರಾಜ್ ಜೈಲಿಂದ ಹೊರಗೆ ಬಂದ ಮೇಲೆ ತನ್ನ ಪ್ರತಿಕಾರವನ್ನು ಫಹಾದ್ ತೀರಿಸಿಕೊಂಡಿದ್ದಾನೆ. ಕೊಲೆಯಾದ ಸಿರಾಜ್, ಅನ್ಸರ್ ಪಾಷಾನ ಸಹೋದರಿಯ ಪುತ್ರನಾಗಿದ್ದನು. ಕೊಲೆಯಾದ ಸಿರಾಜ್ ಹೋಟೆಲ್ವೊಂದರಲ್ಲಿ ಉಳಿದುಕೊಂಡಿದ್ದನು. ರವಿವಾರ (ಮೇ.4) ರಂದು ರಾತ್ರಿ ನಡುರಸ್ತೆಯಲ್ಲಿ ಅಟ್ಟಾಡಿಸಿ ಸಿರಾಜ್ನನ್ನು ಫಹಾದ್ ಕೊಲೆ ಮಾಡಿದ್ದಾನೆ. ಆರೋಪಿ ಫಹಾದ್ನನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.
ರಾಯಚೂರು: ಅಪ್ಪ- ಅಮ್ಮ ಬುದ್ಧಿಮಾತು ಹೇಳಿದಕ್ಕೆ ಮನನೊಂದು ಯುವಕ ವಿದ್ಯುತ್ ಕಂಬಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ತಾಲ್ಲೂಕಿನ ಶಕ್ತಿನಗರದಲ್ಲಿ ನಡೆದಿದೆ.
ಸಂದೀಪ್ ಕುಮಾರ್ (21) ಮೃತ ದುರ್ವೈವಿ. ಸಂದೀಪ್ ಕುಮಾರ್ ಖಾಸಗಿ ಕಂಪನಿಯಲ್ಲಿ ಹೆಲ್ಪರ್ ಆಗಿದ್ದರು.
ಸಂದೀಪ್ ಕುಮಾರ್ ನಿತ್ಯ ಮನೆಗೆ ತಡವಾಗಿ ಬರುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೋಷಕರು ಬೈದು ಬುದ್ದಿವಾದ ಹೇಳಿದ್ದರು. ಇದರಿಂದ ಮನನೊಂದು ಸಂದೀಪ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ತನಗಿಂತ 2 ವರ್ಷ ದೊಡ್ಡವಳೊಂದಿಗೆ ಲವ್: ವಾರ್ನ್ ಮಾಡಿದ್ರೂ ಯುವತಿ ಹಿಂದೆ ಬಿದ್ದ ಯುವಕ ಹತ್ಯೆ
ಹಾವೇರಿ: ಹಾವೇರಿ ತಾಲೂಕಿನ ಗೌರಾಪುರ ಗ್ರಾಮದ ಬಳಿ ಲಾರಿ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಾನಗಲ್ ತಾಲೂಕಿನ ವರ್ದಿ ಗ್ರಾಮದ ನಿವಾಸಿ ಗಾಯಗೊಂಡಿದ್ದಾನೆ. ನಾಗರಾಜ್ ಪವಾಡಿ (35) ಮೃತ ಬೈಕ್ ಸವಾರ. ಹೊಸ ಬೈಕ್ ಖರೀದಿಸಿ ಊರಿಗೆ ಹೋಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:29 pm, Mon, 5 May 25