Cyber Crime: ಡಿಜಿಟಲ್​ ಅರೆಸ್ಟ್​ ಮೂಲಕ ಬೆಂಗಳೂರಿನ ಟೆಕ್ಕಿಗೆ 11 ಕೋಟಿ ರೂ. ವಂಚನೆ

| Updated By: ವಿವೇಕ ಬಿರಾದಾರ

Updated on: Dec 23, 2024 | 1:03 PM

ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ವಿಜಯ್ ಕುಮಾರ್ ಅವರು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರೆಂದು ಹೇಳಿಕೊಂಡ ಸೈಬರ್ ವಂಚಕರಿಂದ 11 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ವಂಚಕರು ಡಿಜಿಟಲ್ ಅರೆಸ್ಟ್‌ ಎಂದು ಹೇಳಿಕೊಂಡು, ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಯನ್ನು ಟಾರ್ಗೆಟ್ ಮಾಡಿ, ಹಂತ ಹಂತವಾಗಿ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಈ ಘಟನೆಯಿಂದಾಗಿ ಸೈಬರ್ ಭದ್ರತೆಯ ಮಹತ್ವವನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Cyber Crime: ಡಿಜಿಟಲ್​ ಅರೆಸ್ಟ್​ ಮೂಲಕ ಬೆಂಗಳೂರಿನ ಟೆಕ್ಕಿಗೆ 11 ಕೋಟಿ ರೂ. ವಂಚನೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಡಿಸೆಂಬರ್​ 23: ಮುಂಬೈ ಕ್ರೈಂ ಬ್ರ್ಯಾಂಚ್​ ಪೊಲೀಸರೆಂದು (Crime Branch Police) ಹೇಳಿಕೊಂಡು ಸೈಬರ್​ ವಂಚಕರು (Cyber Crime) ಬೆಂಗಳೂರಿನ (Bengaluru) ಸಾಫ್ಟ್​ವೇರ್​ ಇಂಜಿನಿಯರ್​​​ಗೆ 11 ಕೋಟಿ ರೂ. ವಂಚನೆ ಮಾಡಿದ್ದಾರೆ. ವಿಜಯ್ ಕುಮಾರ್​​ ವಂಚನೆ ಒಳಗಾದ ಸಾಫ್ಟ್​ವೇರ್​ ಇಂಜಿನಿಯರ್.

ಮುಂಬೈ ಕ್ರೈಂ ಬ್ರ್ಯಾಂಚ್​ ಪೊಲೀಸರೆಂದು ಹೇಳಿಕೊಂಡು ಸೈಬರ್​ ವಂಚಕರು ವಿನಯ್​ ಕುಮಾರ್ ಅವರಿಗೆ ಕರೆ ಮಾಡಿದ್ದಾರೆ. “ಮುಂಬೈನ ಕೊಲಾಬಾದಲ್ಲಿ ನಿಮ್ಮ ಮೇಲೆ ಪ್ರಕರಣವೊಂದು ದಾಖಲಾಗಿದೆ. ನಿಮ್ಮ ಆಧಾರ್ ಕಾರ್ಡ್​ ಬಳಸಿಕೊಂಡು ಹಣ ವರ್ಗಾವಣೆಯಾಗಿದೆ. 6 ಕೋಟಿ ರೂ. ವಂಚನೆಯಾಗಿದೆ. ಈಗ ಕೇಸ್​ ಸುಪ್ರೀಂಕೋರ್ಟ್​​ನಲ್ಲಿ ಇದೆ ಎಂದು ಹೆದರಿಸಿದ್ದಾರೆ.

ಬಳಿಕ, ವಂಚಕರು ವಿಡಿಯೋ ಕಾಲ್ ಮಾಡಿ ಒಂದು‌ ತಿಂಗಳ ಕಾಲ ವಿನಯ್​ ಕುಮಾರ್​ ಅವರನ್ನು ಡಿಜಿಟಲ್ ಅರೆಸ್ಟ್ (Digital Arrest) ಮಾಡಿದ್ದಾರೆ. ಒಂದು ತಿಂಗಳ ಕಾಲ ಮನೆಯಲ್ಲಿ ಇರದಂತೆ ಹೇಳಿದ್ದಾರೆ. ಹೀಗಾಗಿ ವಿಜಯ್ ಕುಮಾರ್ ಅವರು ಯಲಹಂಕದ ಲಾಡ್ಜ್​ವೊಂದರಲ್ಲಿ ಇದ್ದರು.

ವಿಜಯ್ ಕುಮಾರ್ ಕಳೆದ ಹಲವು ವರ್ಷಗಳಿಂದ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ದರು. ಇದನ್ನೇ ಟಾರ್ಗೆಟ್​ ಮಾಡಿದ ಸೈಬರ್ ವಂಚಕರು ಟೆಕ್ಕಿ ವಿನಯ್​ ಕುಮಾರ್​ ಅವರಿಂದ ಷೇರುಗಳನ್ನು ಮಾರಾಟ ಮಾಡಿಸಿದ್ದಾರೆ. ಬಳಿಕ ಹಂತ ಹಂತವಾಗಿ ಒಂದು ತಿಂಗಳ ಕಾಲ ವಿನಯ್​ ಕುಮಾರ್​ ಅವರಿಂದ 11 ಕೋಟಿ 83 ಕೋಟಿ ರೂ. ಅನ್ನು ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸೈಬರ್ ವಂಚಕರಿಗೆ ಭಾರತದಿಂದ 500ಕ್ಕೂ ಹೆಚ್ಚು ಸಿಮ್ ಪೂರೈಸಿದ್ದ ಆರೋಪಿ ಬಂಧನ

ಸೈಬರ್ ವಂಚಕರು ಮೊದಲಿಗೆ ಮುಂಬೈನ ಕ್ರೈಮ್ ಬ್ರ್ಯಾಂಚ್​ ಎಂದು ಹೇಳಿಕೊಂಡಿದ್ದಾರೆ. ನಂತರ ಇಡಿ, ಐಟಿ ಅಧಿಕಾರಿಗಳು ಎಂದು ಹೇಳಿಕೊಂಡು ವಂಚನೆ ಎಸಗಿದ್ದಾರೆ. ಬೆಂಗಳೂರಿನ ಈಶಾನ್ಯ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಡಿಜಿಟಲ್​ ಅರೆಸ್ಟ್​​

ಡಿಜಿಟಲ್​ ಅರೆಸ್ಟ್​ ಸೈಬರ್​ ವಂಚನೆಯಾಗಿದೆ. ಪೊಲೀಸ್​, ಜಾರಿ ನಿರ್ದೇಶನಾಲಯ (ಇಡಿ), ಸಿಬಿಐ ಮುಂತಾದ ಸಂಸ್ಥೆಗಳ ಅಧಿಕಾರಿಗಳ ಹೆಸರಿನಲ್ಲಿ ಜನರಿಗೆ ಕರೆ ಮಾಡಿ, ಅವರ ಮೇಲೆ ಸುಳ್ಳು ಆರೋಪ ಹೊರಿಸಿ, ಹೆದರಿಸಿ, ಬೆದರಿಸಿ, ನಂತರ ಹಣಕ್ಕೆ ಬೇಡಿಕೆ ಇಡುತ್ತಾರೆ. ಆನ್​ಲೈನ್​ ಬ್ಯಾಂಕಿಂಗ್​ ಸೇರಿದಂತೆ ಹಲವು ಮಾರ್ಗಗಳ ಮುಖಾಂತರ ಅವರಿಂದ ಹಣ ಸುಲಿಗೆ ಮಾಡುತ್ತಾರೆ. ವಂಚಕರು ಸಂತ್ರಸ್ತರಿಂದ ಲಕ್ಷ, ಕೋಟಿಗಳ ಲೆಕ್ಕದಲ್ಲಿ ಹಣ ಸುಲಿಗೆ ಮಾಡುತ್ತಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ