ಪೋಷಕರೇ ಎಚ್ಚರ: ಬೆಳಗಾವಿಯಲ್ಲಿ ಮತ್ತೊಂದು ಮಕ್ಕಳ ಮಾರಾಟ ಜಾಲ ಪತ್ತೆ!
ಹುಕ್ಕೇರಿ ಪೊಲೀಸರು ಮಕ್ಕಳ ಮಾರಾಟ ಜಾಲವನ್ನು ಪತ್ತೆ ಹಚ್ಚಿ ಮೂವರನ್ನು ಬಂಧಿಸಿದ್ದಾರೆ. ಈ ಜಾಲವು ವಿಧವೆಯರನ್ನು ಗುರಿಯಾಗಿಸಿಕೊಂಡು ಅವರ ಮಕ್ಕಳನ್ನು ಮಾರಾಟ ಮಾಡುತ್ತಿತ್ತು. 3 ಲಕ್ಷ ರೂಪಾಯಿಗೆ ಮಗುವನ್ನು ಮಾರಾಟ ಮಾಡಿದ ಪ್ರಕರಣದಲ್ಲಿ ಮೂವರು ಆರೋಪಿಗಳು ಬಂಧನಕ್ಕೊಳಗಾಗಿದ್ದಾರೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಬೆಳಗಾವಿ, ಜನವರಿ 27: ಬೆಳಗಾವಿ (Belagavi) ಜಿಲ್ಲೆಯಲ್ಲಿ ಮತ್ತೊಂದು ಮಗು ಮಾರಾಟ ಜಾಲ ಪತ್ತೆಯಾಗಿದ್ದು, ಹುಕ್ಕೇರಿ ಪೊಲೀಸರು (Hukkeri Police) ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಆರೋಪಿಗಳಾದ ಸಂಗೀತಾ ಗೌಳಿ, ಸಂಗೀತಾ ತಾವಡೆ, ಮೋಹನ್ ತಾವಡೆ ಬಂಧಿತರು. ಉಳಿದ ಆರೋಪಿಗಳಾದ ನಂದಕುಮಾರ ಡೋರಲೇಕರ, ನಂದಿನಿ ಡೋರಲೇಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಮಕ್ಕಳ ಮಾರಾಟ ಗ್ಯಾಂಗ್ ವಿದವೆಯರನ್ನೇ ಟಾರ್ಗೆಟ್ ಮಾಡುತ್ತದೆ. ಮಗು ಇದ್ದು ಗಂಡನಿಲ್ಲದ ಮಹಿಳೆಯರಿಗೆ ಎರಡನೇ ಮದುವೆ ಮಾಡಿಸುತ್ತೆ. ಹುಕ್ಕೇರಿ ತಾಲೂಕಿನ ಸುಲ್ತಾನಪುರ ಗ್ರಾಮದ ಅರ್ಚನಾ ಎಂಬುವರನ್ನು ರಾಜು ಮಗ್ದುಮ ಜೊತೆ ಎರಡನೇ ಮದುವೆ ಮಾಡಿಸಿತ್ತು. ಅರ್ಚನಾ ಅವರ ಮೊದಲ ದಾಂಪತ್ಯದ ಸಾಕ್ಷಿಯಾಗಿ ಗಂಡು ಮಗು ಜನಿಸಿತ್ತು. ಈ ಗಂಡು ಮಗು ಅರ್ಚನಾ ಅವರ ಬಳಿ ಇದೆ. ಆದರೆ, ಈ ಮಗು ಅನಾರೋಗ್ಯದಿಂದ ಬಳಲುತ್ತಿತ್ತು.
ಇದನ್ನೂ ಓದಿ: 4 ಲಕ್ಷ ರೂ.ಗೆ ಏಳು ವರ್ಷದ ಬಾಲಕನ ಮಾರಾಟ: ಬೆಳಗಾವಿಯಲ್ಲಿ ನಾಲ್ವರ ಬಂಧನ
ಚಿಕಿತ್ಸೆ ಕೊಡಿಸುವುದಾಗಿ ಹೇಳಿ ಆರೋಪಿಗಳಾದ ತಾವಡೆ ದಂಪತಿ ಮಗುವನ್ನು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಗಡಹಿಂಗ್ಲಜ್ಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ, ಸಂಗೀತಾ ಗೌಳಿ ಮನೆಯಲ್ಲಿ ನಂದಕುಮಾರ ಡೋರಲೇಕರ ದಂಪತಿಗೆ 3 ಲಕ್ಷ ರೂ.ಗೆ ಮಗು ಮಾರಾಟ ಮಾಡಿದ್ದರು. ಮಗು ಮಾರಾಟದಿಂದ ಬಂದ ಹಣವನ್ನು ಮೂವರು ಆರೋಪಿಗಳು ಹಂಚಿಕೊಂಡಿದ್ದರು. ಈ ಸಂಬಂಧ ಹುಕ್ಕೇರಿ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಮೂವರನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಹುಡುಕಾಟ ನಡೆಸಿದ್ದಾರೆ.
ವಾರದ ಹಿಂದೆ ಇದೇ ಊರಲ್ಲಿ ಸಂಗೀತಾ ಎಂಬುವರ ಮಗು ಮಾರಾಟವಾಗಿತ್ತು. ಸಂಗೀತಾ ಅವರಿಗೂ ಕೂಡ ಎರಡನೇ ಮದುವೆ ಮಾಡಿಸಿ, ಅವರ ಮೊದಲ ಮಗುವನ್ನು 4 ಲಕ್ಷ ರೂ.ಗೆ ಮಾರಲಾಗಿತ್ತು. ಈ ಪ್ರಕರಣದಲ್ಲಿ ಹುಕ್ಕೇರಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ