Crime News: ಮಾವಿನ ಹಣ್ಣಿಗಾಗಿ ತಾಯಿಯನ್ನೇ ಕೊಂದ ಪಾಪಿ ಮಗ..!
Crime News In Kannada: ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಿಳೆಯ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಲ್ಲದೆ ಘಟನಾ ಸ್ಥಳದಿಂದ ಹರಿತವಾದ ಆಯುಧಗಳನ್ನು, ಇತರೆ ಹಲವು ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ.
Crime News In Kannada: ನಮ್ಮ ದೇಶದಲ್ಲಿ ಎಂತೆಂತಹ ಕ್ಷುಲ್ಲಕ ಕಾರಣಗಳಿಗೆ ಕೊಲೆಗಳಾಗುತ್ತವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕೇವಲ ಮಾವಿನ ಹಣ್ಣಿಗಾಗಿ ಶುರುವಾದ ಜಗಳವು ಒಂದು ಕೊಲೆಯಲ್ಲಿ ಅಂತ್ಯಗೊಳ್ಳುತ್ತದೆ ಎಂದರೆ ಅಚ್ಚರಿಯಾಗದೇ ಇರದು. ಇಂತಹದೊಂದು ಹೃದಯ ವಿದ್ರಾವಕ ಘಟನೆ ನಡೆದಿರುವುದು ಬಿಹಾರದ ಕುಚಯ್ಕೋಟ್ನ ಸಿರಿಶಿಯಾ ಎನ್ನುವ ಊರಲ್ಲಿ. ಈ ಜಗಳ ಶುರುವಾಗಿದ್ದು ಕೇವಲ ಮಾವಿನ ಹಣ್ಣನ್ನು ನೀಡುವ ವಿಚಾರಕ್ಕೆ ಅಷ್ಟೇ. ಆದರೆ ಅದು ಕೊನೆಗೊಂಡಿದ್ದು ಹತ್ಯೆಯಲ್ಲಿ. ಹೀಗೆ ಕೊಲೆಯಾದ ಮಹಿಳೆಯ ಹೆಸರು ಬಟೋರಾ ದೇವಿ. ಪೊಲೀಸರ ಮಾಹಿತಿ ಪ್ರಕಾರ, ಸಿರಿಶಿಯಾ ಗ್ರಾಮದಲ್ಲಿ ಬಟೋರಾ ದೇವಿ ಅವರ ಜಾಗದಲ್ಲಿ ಮಾವಿನ ಮರವಿದೆ. ಆ ಮರದಿಂದ ಕೆಲದಿನಗಳ ಹಿಂದೆ ಮಾವುಗಳನ್ನು ಕೊಯ್ಯಲಾಗಿತ್ತು. ಇದನ್ನು ಹಂಚುವ ವಿಚಾರವಾಗಿ ಬಟೋರಾ ದೇವಿಯ ನಾಲ್ವರು ಪುತ್ರರ ನಡುವೆ ಜಗಳ ಶುರುವಾಗಿ ಕೊಲೆಯಲ್ಲಿ ಅಂತ್ಯಗೊಂಡಿದೆ.
ಕೆಲ ದಿನಗಳ ಹಿಂದೆ ಕೊಯ್ಯಲಾಗಿದ್ದ ಮಾವಿನ ಹಣ್ಣನ್ನು ಮಕ್ಕಳಿಗೆ ಹಂಚಲು ತಾಯಿ ಮುಂದಾಗಿದ್ದಳು. ಆದರೆ ಹಣ್ಣಿಗಾಗಿ ಮಕ್ಕಳ ನಡುವಣ ಜಗಳ ತಾರಕ್ಕೇರಿದೆ. ಈ ವೇಳೆ ತಾಯಿ ಬಟೋರಾ ದೇವಿ ಮಧ್ಯ ಪ್ರವೇಶಿಸಿದ್ದರು. ಇದಾಗ್ಯೂ ಜಗಳ ನಿಂತಿರಲಿಲ್ಲ. ಆದರೆ ಎಲ್ಲರನ್ನೂ ಸಮಾಧಾನಪಡಿಸಲು ಮತ್ತೆ ಮುಂದಾಗಿದ್ದಾಳೆ. ಮತ್ತೊಂದೆಡೆ ಸಹೋದರರು ಕೈ ಕೈ ಮಿಲಾಯಿಸಲು ಪ್ರಾರಂಭಿಸಿದ್ದರು. ಈ ವೇಳೆ ಮಧ್ಯೆ ಪ್ರವೇಶಿಸಿದ್ದ ತಾಯಿಯ ಮೇಲೆ ಹಿರಿಯ ಮಗ ರಾಮಶಂಕರ್ ಮಿಶ್ರಾ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಮಗನ ಈ ಮಾರಣಾಂತಿಕ ಹಲ್ಲೆಯಿಂದ ಬಟೋರಾ ದೇವಿ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಕುಚಯ್‌ಕೋಟ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಿಳೆಯ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಲ್ಲದೆ ಘಟನಾ ಸ್ಥಳದಿಂದ ಹರಿತವಾದ ಆಯುಧಗಳನ್ನು, ಇತರೆ ಹಲವು ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಅಷ್ಟರಲ್ಲಾಗಲೇ ಆರೋಪಿ ರಾಮಶಂಕರ್ ಮಿಶ್ರಾ ಸ್ಥಳದಿಂದ ಕಾಲ್ಕಿತ್ತಿದ್ದ.
ತಕ್ಷಣವೇ ಗೋಪಾಲ್‌ಗಂಜ್ ಜಿಲ್ಲೆಯ ಇತರೆ ಪೊಲೀಸ್ ಠಾಣೆಗಳಿಗೆ ಕುಚಯ್‌ಕೋಟ್ ಪೊಲೀಸರು ಮಾಹಿತಿ ನೀಡಿದ್ದರು. ಅದರಂತೆ ಕಾರ್ಯ ಪ್ರವೃತ್ತರಾದ ಪೊಲೀಸರಿಗೆ ರಾಮಶಂಕರ್ಗೆ ಸಿಕ್ಕಿಬಿದ್ದಿದ್ದಾನೆ. ಅಲ್ಲದೆ ಕೊಲೆಗಡುಕ ಮಗನನ್ನು ಬಂಧಿಸಿ ಪ್ರಾಥಮಿಕ ವಿಚಾರಣೆ ನಡೆಸಿದಾಗ ಮಾವಿನ ಹಣ್ಣಿಗಾಗಿ ಶುರುವಾದ ಜಗಳದಿಂದ ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಎಸ್‌ಡಿಪಿಒ ಸಂಜೀವ್ ಕುಮಾರ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಕೇವಲ ಮಾವಿನ ಹಣ್ಣಿಗಾಗಿ ನಡೆದ ಭೀಕರ ಕೊಲೆಯ ಸುದ್ದಿ ಕೇಳಿ ಕುಚಯ್ಕೋಟ್ನ ಸಿರಿಶಿಯಾ ಗ್ರಾಮಸ್ಥರು ದಂಗಾಗಿದ್ದಾರೆ.