Crime News: ಮಲ ವಿಸರ್ಜನೆಗೆ ಹೋದ 17 ವರ್ಷದ ಬಾಲಕಿಯ ಶವ ಹೊಲದಲ್ಲಿ ಬೆತ್ತಲಾಗಿ ಪತ್ತೆ
ಆಕೆ ಬೆಳಗ್ಗೆ ಮಲ ವಿಸರ್ಜನೆಗೆಂದು ಹೊರಗೆ ಹೋಗಿದ್ದಳು. ಎಷ್ಟು ಹೊತ್ತಾದರೂ ಆಕೆ ಹೊಲದಿಂದ ವಾಪಾಸ್ ಮನೆಗೆ ಬಾರದೇ ಇದ್ದುದರಿಂದ ಆಕೆಗಾಗಿ ಹುಡುಕಾಟ ನಡೆಸಿದ್ದೆವು. ಆಗ ಗದ್ದೆಯಲ್ಲಿ ಆಕೆ ಬೆತ್ತಲಾಗಿ ಬಿದ್ದಿದ್ದಳು ಎಂದು ಬಾಲಕಿಯ ಕುಟುಂಬಸ್ಥರು ಹೇಳಿದ್ದಾರೆ.
ನವದೆಹಲಿ: ರಾಗಿ ಹೊಲದಲ್ಲಿ 17 ವರ್ಷದ ಬಾಲಕಿಯ ಶವ ಬೆತ್ತಲೆಯಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ (Shocking News) ಉತ್ತರ ಪ್ರದೇಶದ ಔರೈಯಾದಲ್ಲಿನ ದಿಬಿಯಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಬಾಲಕಿಯ ಮನೆಯವರು ತಮ್ಮ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ (Murder) ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕೇಸ್ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
17 ವರ್ಷದ ಬಾಲಕಿಯ ಸಾವು ಈಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಕಾಂಗ್ರೆಸ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ವಿಡಿಯೋವನ್ನು ಅಪ್‌ಲೋಡ್ ಮಾಡಿದೆ. ಪೊಲೀಸರು ಆಕೆಯ ಶವ ಎತ್ತಿಕೊಂಡು ಓಡಿಹೋಗಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದ್ದು, ಪೊಲೀಸ್ ಅಧಿಕಾರಿಗಳು ಈ ಆರೋಪವನ್ನು ನಿರಾಕರಿಸಿದ್ದಾರೆ.
ಬಾಲಕಿಯ ಕುಟುಂಬಸ್ಥರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಆಕೆ ಬೆಳಗ್ಗೆ ಮಲ ವಿಸರ್ಜನೆಗೆಂದು ಹೊರಗೆ ಹೋಗಿದ್ದಳು. ಎಷ್ಟು ಹೊತ್ತಾದರೂ ಆಕೆ ಹೊಲದಿಂದ ವಾಪಾಸ್ ಮನೆಗೆ ಬಾರದೇ ಇದ್ದುದರಿಂದ ಆಕೆಗಾಗಿ ಹುಡುಕಾಟ ನಡೆಸಿದ್ದೆವು. ಆಗ ಗದ್ದೆಯಲ್ಲಿ ಆಕೆ ಬೆತ್ತಲಾಗಿ ಬಿದ್ದಿದ್ದಳು. ಆಕೆಯ ಮೈಮೇಲೆ ಗಾಯಗಳಾಗಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: Uttar Pradesh: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ, ಆಸ್ಪತ್ರೆಗೆ ಕರೆಸಿ ಮಹಿಳೆಯನ್ನು ಅತ್ಯಾಚಾರ ಮಾಡಿದ 3 ವೈದ್ಯರು
ಈ ಪ್ರಕರಣವನ್ನು ಭೇದಿಸಲು ವಿಶೇಷ ಕಾರ್ಯಾಚರಣೆಗೆ 10 ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ. ಪೊಲೀಸರು ಶವವನ್ನು ಹೊತ್ತೊಯ್ಯುತ್ತಿರುವ ಮತ್ತು ಮಹಿಳೆಯೊಬ್ಬರು ಅವರ ಹಿಂದೆ ಹೋಗುತ್ತಿರುವ ವೀಡಿಯೊವನ್ನು ಕಾಂಗ್ರೆಸ್ ಹಂಚಿಕೊಂಡಿದೆ. ಈ ಬಗ್ಗೆ ಕಾಂಗ್ರೆಸ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ಔರೈಯಾದಲ್ಲಿ 17 ವರ್ಷದ ಬಾಲಕಿಯ ಬೆತ್ತಲೆ ದೇಹವು ಗದ್ದೆಯಲ್ಲಿ ಪತ್ತೆಯಾಗಿದೆ. ಪೊಲೀಸರು ಆ ಶವದೊಂದಿಗೆ ಓಡಿಹೋಗಲು ಪ್ರಾರಂಭಿಸಿದರು. ಆ ಬಾಲಕಿಯ ಬಡ ಕುಟುಂಬಸ್ಥರು ಪೊಲೀಸರ ಹಿಂದೆ ಓಡುತ್ತಿದ್ದಾರೆ. ಉತ್ತರ ಪ್ರದೇಶ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ‘ನಂಬರ್ 1’ ಆಗಿದೆ ಎಂದು ಟ್ವೀಟ್ ಮಾಡಿದೆ.
ಈ ಆರೋಪವನ್ನು ತಳ್ಳಿಹಾಕಿರುವ ಎಸ್ಪಿ ನಿಗಮ್, ಪೊಲೀಸರು ಎಲ್ಲಾ ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿ, ಮೃತ ಬಾಲಕಿಯ ಕುಟುಂಬವನ್ನು ಸಮಾಧಾನಪಡಿಸಿದ ನಂತರವೇ ಶವವನ್ನು ಸ್ವಾಧೀನಕ್ಕೆ ತೆಗೆದುಕೊಂಡಿದ್ದಾರೆ ಎಂದಿದ್ದಾರೆ.