ಕ್ರೇನ್​ ಹರಿದು ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು

TV9kannada Web Team

TV9kannada Web Team | Edited By: Rakesh Nayak Manchi

Updated on: Nov 04, 2022 | 11:50 AM

ಕ್ರೇನ್​ ಹರಿದು ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿ ನೂರ್ ಪೀಜಾ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಕ್ರೇನ್ ಚಾಲಕನ ಅಜಾಗರೂಕತೆಯಿಂದ ನಡೆದ ಅಪಘಾತ ಇದಾಗಿದೆ.

ಕ್ರೇನ್​ ಹರಿದು ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು
ಕ್ರೇನ್​ ಹರಿದು ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು

ದೇವನಹಳ್ಳಿ: ಬೆಂಗಳೂರು ಪೂರ್ವ ತಾಲೂಕಿನ ಕನ್ನಮಂಗಲ ಗೇಟ್​ ಬಳಿ ಕ್ರೇನ್​ ಹರಿದು ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿ ನೂರ್ ಪೀಜಾ(19) ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ವೈಟ್​ಫೀಲ್ಡ್​ ಬಳಿಯ ಕನ್ನಮಂಗಲ ನಿವಾಸಿ ನೂರ್​ ಪೀಜಾಗೆ ಕ್ರೇನ್ ಡಿಕ್ಕಿ ಹೊಡೆದ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕ್ರೇನ್ ಚಾಲಕನ ಅಜಾಗರೂಕತೆಯಿಂದ ನಡೆದ ಅಪಘಾತ ಇದಾಗಿದೆ.

ಬುಧವಾರ ಮಧ್ಯಾಹ್ನದ ವೇಳೆ ವಿದ್ಯಾರ್ಥಿನಿ ನೂರ್ ಪೀಜಾ ನಡೆದುಕೊಂಡು‌‌ ಹೋಗುತ್ತಿದ್ದಾಗ ಹಿಂಬದಿಯಿಂದ ಅಜಾಗರೂಕವಾಗಿ ಚಾಲನೆ ಮಾಡಿಕೊಂಡು ಬಂದ ವಿದ್ಯಾರ್ಥಿನಿ ನೂರ್ ಪೀಜಾ ಮೇಲೆ ಹಿಂದೆಯಿಂದ ಚಾಲಕನೊಬ್ಬ ಕ್ರೇನ್ ಅನ್ನು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ನೂರ್ ಗಂಭೀರವಾಗಿ ಗಾಯಗೊಂಡಿದ್ದು, ಭೀಕರ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ನೂರ್​ಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅದರಂತೆ ಎರಡು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ನೂರ್ ಪೀಜಾ ಇದೀಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.

ಮರ್ಡರ್ ಮಾಡಿದ ಬಾಲಾಪರಾಧಿಯ ಬಂಧನ

ಬೆಂಗಳೂರು: ಕುಡಿದ ಅಮಲಿನಲ್ಲಿ ಪರಿಚಿತನನ್ನ ಹತ್ಯೆಗೈದಿದ್ದ ಬಾಲಾಪರಾಧಿಯನ್ನು ಕೆ.ಎಸ್.ಲೇಔಟ್ ಪೊಲೀಸರು ಬಿಹಾರದಲ್ಲಿ ಬಂಧಿಸಿದ್ದಾರೆ. ಅ.21ರಂದು ಕೆ.ಎಸ್.ಲೇಔಟ್ ಠಾಣಾ ವ್ಯಾಪ್ತಿಯ ಕಾಶಿನಗರ ಸರ್ಕಲ್​ನಲ್ಲಿ ಬಾಲಕನೊಬ್ಬ ‌ ಮರದ ದೊಣ್ಣೆಯಿಂದ ಮುಖೇಶ್ ಎಂಬಾತನ ತಲೆಗೆ ಹೊಡೆದು ಹತ್ಯೆಗೈದಿದ್ದ. ಕೊಲೆಯಾದ ಮುಖೇಶ್ ಹಾಗೂ ಆರೋಪಿ ಇಬ್ಬರೂ ಸಹ ಬಿಹಾರ ಮೂಲದವರಾಗಿದ್ದಾರೆ.

ಮುಕೇಶ್ ಆರೋಪಿಯನ್ನ ಟೈಲ್ಸ್ ವರ್ಕ್ ಕೆಲಸಕ್ಕೆ ಕರೆದುಕೊಂಡು ಬಂದಿದ್ದ. ಇಬ್ಬರು ಕೂಡ ಕಾಶಿನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಉಳಿದುಕೊಳ್ಳುತ್ತಿದ್ದರು. ಇವರಿಬ್ಬರು ಅ.21ರಂದು ಮದ್ಯ ಸೇವನೆ ಮಾಡಿ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಆರೋಪಿ ಮುಕೇಶ್​ ಮೇಲೆ ದೊಣ್ಣೆಯಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದನು. ಕೃತ್ಯದ ಬಳಿಕ ಆರೋಪಿ ಪಾಟ್ನಾ ರೈಲು ಹತ್ತಿ ಊರು ಸೇರಿದ್ದನು. ಕೊಲೆ ಪ್ರಕರಣ ದಾಖಲಿಸಿದ್ದ ಪೊಲೀಸರು, ಆರೋಪಿ ಪಾಟ್ನಾದಲ್ಲಿ ಇರುವ ಬಗ್ಗೆ ಮಾಹಿತಿ ಪಡೆದು ಅಲ್ಲಿಗೆ ತೆರಳಿ ಬಂಧಿಸಿದ್ದಾರೆ.

11ಕೆವಿ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

ಆನೇಕಲ್: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ದೊಮ್ಮಸಂದ್ರದ ಸಂತೆ ಬೀದಿಯ ಕಾವೇರಮ್ಮ ದೇಗುಲ ಬಳಿ ನಡೆದಿದೆ. ಮಹೇಶ್ (47) ದುರ್ಮರಣ ಹೊಂದಿದ ವ್ಯಕ್ತಿ. ಕೂಲಿ ಕೆಲಸಕ್ಕೆಂದು ತಿಗಳ ಚೌಡದೇನಹಳ್ಳಿಯಿಂದ ದೊಮ್ಮಸಂದ್ರದ ಕಡೆಗೆ ಸೈಕಲ್​ನಲ್ಲಿ ತೆರಳುತ್ತಿದ್ದಾಗ ತುಂಡಾಗಿ ಬಿದ್ದಿದ್ದ 11ಕೆವಿ ವಿದ್ಯುತ್ ತಂತಿ ತಗುಲಿ ಮಹೇಶ್ ಸಾವನ್ನಪ್ಪಿದ್ದಾರೆ.

ತಂತಿಗಳ‌ ಬಗ್ಗೆ ಈ ಹಿಂದೆ ಗ್ರಾಮಸ್ಥರು ದೂರು ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ. ಘಟನೆ ಬಗ್ಗೆ ಬೆಸ್ಕಾಂ ಅಧಿಕಾರಿ ದಿನೇಶ್​ಗೆ ಮಾಹಿತಿ ನೀಡಿದರೂ ನಿರ್ಲಕ್ಷ್ಯ ತೋರಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಮಹೇಶ್​ ಮೃತಪಟ್ಟಿದ್ದಾನೆಂದು ಆಕ್ರೋಶ ವ್ಯಕ್ತವಾಗಿದೆ. ಸದ್ಯ ಸ್ಥಳಕ್ಕೆ ಸರ್ಜಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನೀರು ಮುಟ್ಟಿ ಆಣೆ ಮಾಡಲು ಹೋಗಿದ್ದ ಇಬ್ಬರು ನೀರುಪಾಲು

ಹಾಸನ: ನೀರು ಮುಟ್ಟಿ ಆಣೆ ಮಾಡಲು ಹೋಗಿದ್ದ ಇಬ್ಬರು ನೀರುಪಾಲಾದ ಘಟನೆ ತಾಲೂಕಿನ ತೇಜೂರು ಗ್ರಾಮದಲ್ಲಿ ನಡೆದಿದೆ. ತೇಜೂರು ಗ್ರಾಮದ ಚಂದ್ರು(35) ಮತ್ತು ಆನಂದ್(30) ಸಾವನ್ನಪ್ಪಿದವರು. ಹಣಕಾಸು ವ್ಯವಹಾರದ ವಿಚಾರಕ್ಕೆ ಗಂಗೆ ಮೇಲೆ ಆಣೆ, ಪ್ರಮಾಣ ಮಾಡಲು ಹೋದಾಗ ಕೆರೆಗೆ ಬಿದ್ದು ಸಾವನ್ನಪ್ಪಿದ್ದು, ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಂದ್ರು ಮತ್ತು ಆನಂದ್ ವ್ಯವಹಾರದ ವಿಚಾರವಾಗಿ ಗಂಗೆ ಮೇಲೆ ಆಣೆ ಮಾಡಲು ನಿನ್ನೆ ರಾತ್ರಿ ತೇಜೂರು ಕೆರೆಯ ಬಳಿ ಹೋಗಿದ್ದಾರೆ. ಈ ವೇಳೆ ಕಾಲುಜಾರಿ ಇಬ್ಬರು ಸಾವನ್ನಪ್ಪಿದ್ದಾರೆ. ವಿಚಾರ ತಿಳಿದ ಸ್ಥಳೀಯರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಕೆರೆಯಲ್ಲಿ ಶೋಧ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada