ತ್ಯಾಗ ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬದಂದು ಮುಸ್ಲಿಮರು ಮೇಕೆ ಅಥವಾ ಕುರಿಯನ್ನು ಬಲಿ ನೀಡುವುದು ಸಂಪ್ರದಾಯ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಖತರ್ನಾಕ್ ಗ್ಯಾಂಗ್ವೊಂದು ಇದೀಗ ಪೊಲೀಸರ ವಶವಾಗಿದ್ದಾರೆ. ಅಚ್ಚರಿ ಎಂದರೆ ಈ ಖದೀಮರು ಬಕ್ರೀದ್ಗಾಗಿ ದೋಚಿದ್ದು ಬರೋಬ್ಬರಿ 250 ಮೇಕೆಗಳನ್ನು ಎಂದರೆ ನಂಬಲೇಬೇಕು. ಹೌದು, ಇಂತಹದೊಂದು ವಿಚಿತ್ರ ಪ್ರಕರಣ ಛತ್ತೀಸ್‌ಗಢದ ಬಲರಾಮ್‌ಪುರದಿಂದ ವರದಿಯಾಗಿದೆ. ಬಲರಾಮ್ಪುರದ ಅನೇಕ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಮೇಕೆಗಳು ಕಳುವಾಗುತ್ತಿತ್ತು. ಆದರೆ ಇದನ್ನು ಯಾರು ಕದಿಯುತ್ತಿದ್ದಾರೆ, ಹೇಗೆ ಕದ್ದೊಯ್ಯಲಾಗುತ್ತಿದೆ ಎಂಬುದರ ಸಣ್ಣ ಸುಳಿವು ಕೂಡ ಗ್ರಾಮಸ್ಥರಿಗೆ ಇರಲಿಲ್ಲ. ಹೀಗಾಗಿಯೇ ಮೇಕೆ ಸಾಕಿದ್ದ ಬಡ ರೈತರು ಚಿಂತಿತರಾಗಿದ್ದರು. ಅಲ್ಲದೆ ಈ ಬಗ್ಗೆ 7 ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಬಲರಾಮ್ಪುರ ಎಸ್ಪಿ ಮೋಹಿತ್ ಗಾರ್ಗ್ ವಿಶೇಷ ತಂಡವೊಂದನ್ನು ರಚಿಸಿದ್ದರು. ಅಲ್ಲದೆ ನಾಲ್ಕು ಕಡೆಗಳಲ್ಲಿ ಈ ತಂಡವನ್ನು ನೇಮಿಸಿ ಕಾರ್ಯಾಚರಣೆಯ ರೂಪುರೇಷೆಗಳನ್ನು ಸಿದ್ದಪಡಿಸಿದ್ದರು. ಅದರಂತೆ ಮೇಕೆ ಕಳ್ಳರ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಬಲರಾಮ್ಪುರ ಪೊಲೀಸರಿಗೆ ಕೊನೆಗೂ ಖದೀಮರು ಸಿಕ್ಕಿ ಬಿದ್ದಿದ್ದಾರೆ. ಅದು ಕೂಡ ಐಷಾರಾಮಿ ಕಾರುಗಳಲ್ಲಿ ಎಂಬುದು ಇಲ್ಲಿ ವಿಶೇಷ.
ಅಂದರೆ ರಾತ್ರಿಯಾಗುತ್ತಿದ್ದಂತೆ ಮೇಕೆ ಕಳ್ಳರ ಗ್ಯಾಂಗ್ ಐಷಾರಾಮಿ ಕಾರುಗಳಲ್ಲಿ ಬರುತ್ತಿದ್ದರು. ಅಲ್ಲದೆ ಸಿಕ್ಕ ಮೇಕೆಗಳನ್ನು ಕಾರಿನಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದರು. ಇತ್ತ ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಿದ್ದ ಕಾರಣ ಜನರಿಗೂ ಈ ಕಳ್ಳರ ಬಗ್ಗೆ ಅನುಮಾನ ಮೂಡಿರಲಿಲ್ಲ. ಅತ್ತ ಪೊಲೀಸರು ಕೂಡ ಕಾರು ನೋಡಿ ಅನುಮಾನಗೊಂಡಿರಲಿಲ್ಲ. ಇದಾಗ್ಯೂ ವಿಶೇಷ ತಂಡ ರಚನೆಯಾದ ಬಳಿಕ ಕಾರು ಓಡಿಸುತ್ತಿದ್ದ ವ್ಯಕ್ತಿಗೂ ಕಾರಿನ ಲುಕ್ಗೂ ಯಾವುದೇ ತಾಳೆಯಾಗದಿರುವುದು ಕಂಡು ಬಂದಿದೆ. ಅಂದರೆ ಕಾರು ಓಡಿಸುತ್ತಿದ್ದ ವ್ಯಕ್ತಿಯು ಕಳ್ಳನ ಲುಕ್ನಲ್ಲಿದ್ದರೆ, ಕಾರು ಮಾತ್ರ ಶ್ರೀಮಂತರ ವಾಹನದಂತಿತ್ತು.
ಇದರಿಂದ ಅನುಮಾನಗೊಂಡ ವಿಶೇಷ ಪೊಲೀಸ್ ತಂಡ ಕಾರನ್ನು ಫಾಲೋ ಮಾಡಿದ್ದಾರೆ. ಈ ವೇಳೆ ಕಾರು ಮತ್ತಷ್ಟು ವೇಗ ಪಡೆದುಕೊಂಡಿದ್ದು, ಇದರಿಂದ ಕಾರಿನಲ್ಲಿರುವವರ ಬಗ್ಗೆ ಸಂಶಯ ಹೆಚ್ಚಾಯಿತು. ಅಷ್ಟೇ ಅಲ್ಲದೆ ಈ ವಿಷಯವನ್ನು ತಕ್ಷಣವೇ ಉಳಿದ ತಂಡಗಳಿಗೂ ತಿಳಿಸಲಾಗಿದೆ. ಅತ್ತ ಕಡೆಯಿಂದ ಅವರು ಕೂಡ ಕಾರ್ಯಾಚರಣೆಗೆ ಇಳಿದಿದ್ದು, ಅದರಂತೆ ಪ್ರಮುಖ ರಸ್ತೆಯನ್ನು ತಡೆಗಟ್ಟಿದ್ದಾರೆ. ಅಂತಿಮವಾಗಿ ತಪ್ಪಿಸಿಕೊಳ್ಳಲು ದಾರಿಯಿಲ್ಲದೆ ಖದೀಮರ ತಂಡ ಪೊಲೀಸರಿಗೆ ಶರಣಗಾಗಿದ್ದಾರೆ. ಈ ವೇಳೆ ಕಾರನ್ನು ಪರಿಶೀಲಿಸಿದಾಗ 5 ಮೇಕೆಗಳು ಕಂಡು ಬಂದಿವೆ.
ಅಚ್ಚರಿ ಎಂದರೆ ಈ ಖತರ್ನಾಕ್ ಗ್ಯಾಂಗ್, ಮೇಕೆಗಳನ್ನು ಕದಿಯುತ್ತಿದ್ದ ಶೈಲಿ ನೋಡಿ ಖುದ್ದು ಪೊಲೀಸರೇ ದಂಗಾಗಿದ್ದಾರೆ. ಏಕೆಂದರೆ ಇವರು ಮೇಕೆಗಳ ಬಾಯಿಗೆ ಟ್ಯಾಪ್ ಅಂಟಿಸಿ ಅವುಗಳನ್ನು ಕದ್ದುಕೊಂಡು ಹೋಗುತ್ತಿದ್ದರು. ಇದರಿಂದ ಯಾವುದೇ ಶಬ್ದ ಕೇಳಿಸುತ್ತಿರಲಿಲ್ಲ. ಹೀಗಾಗಿ ಮೇಕೆ ಕದಿಯುತ್ತಿದ್ದಾಗ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಹೀಗೆ ಅಕ್ಕ ಪಕ್ಕದ ಗ್ರಾಮಗಳಿಂದ ಸುಮಾರು 250 ಮೇಕೆಗಳನ್ನು ಕದ್ದು ಈ ಗ್ಯಾಂಗ್ ಮಾರಾಟ ಮಾಡಿದ್ದರು.
ಇದೀಗ ಎಸ್ಪಿ ಮೋಹಿತ್ ಗಾರ್ಗ್ ಹಾಗೂ ವಿಶೇಷ ತಂಡದ ಕಾರ್ಯಾಚರಣೆಯ ಫಲವಾಗಿ ಐವರು ಮೇಕೆ ಕಳ್ಳರನ್ನು ಬಂಧಿಸಲಾಗಿದೆ. ರಾಮ್‌ಕುಮಾರ್, ಸಿದ್ಧಾರ್ಥ್, ಅನು ಸಿಂಗ್, ವಾಜಿದ್ ಖಾನ್ ಮತ್ತು ಹುಸೇನ್ ಖಾನ್ ಬಂಧಿತ ಆರೋಪಿಗಳು. ಉಳಿದ ಮೂವರು ಆರೋಪಿಗಳ ಬಂಧನಕ್ಕೆ ತಂಡವನ್ನು ಕಳುಹಿಸಲಾಗಿದೆ. ಅವರನ್ನೂ ಸಹ ಶೀಘ್ರದಲ್ಲೇ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸದ್ಯ ಮಾರುಕಟ್ಟೆಯಲ್ಲಿ ಬಕ್ರೀದ್ ಪ್ರಯುಕ್ತ ಮೇಕೆಗಳಿಗೆ ಭಾರೀ ಬೇಡಿಕೆಯಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಖತರ್ನಾಕ್ ಗ್ಯಾಂಗ್ ಕೊನೆಗೂ ಪೊಲೀಸರ ವಶವಾಗಿರುವುದರಿಂದ ಗ್ರಾಮಸ್ಥರು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ.