ಬೆಂಗಳೂರು: ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ ಮಾಡಿರುವ ಘಟನೆ ಕೆಂಗೇರಿಯ ಹರ್ಷ ಲೇಔಟ್ ಬಳಿಯ ರೈಲ್ವೆ ಟ್ರ್ಯಾಕ್ ಬಳಿ ನಡೆದಿದೆ. ಎಂಟಿಎಸ್ ಲೇಔಟ್ ನಿವಾಸಿ ಭರತ್(20) ಕೊಲೆಯಾದವರು. ಹತ್ಯೆಯಾದ ಭರತ್ ಟಿವಿ ಶೋ ರೂಮ್ನಲ್ಲಿ ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ಬೆಂಗಳೂರು ನಗರ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಏಪ್ರಿಲ್ 23 ನಿನ್ನೆ ರಾತ್ರಿ ಕೆಂಗೇರಿ ಕರಗ ನಡೀತಿತ್ತು. ಹೀಗಾಗಿ ಸ್ನೇಹಿತರಿಬ್ಬರ ಜೊತೆ ಕರಗ ನೋಡಲು ಮೃತ ಭರತ್ ಬಂದಿದ್ದ. ಈ ವೇಳೆ ಆರೋಪಿಯ ಡಿಯೋ ಬೈಕ್ ಭರತ್ ಕೈಗೆ ಟಚ್ ಆಗಿತ್ತು. ತಕ್ಷಣ ಗಾಡಿ ನಿಲ್ಲಿಸಿ ನೋಡ್ಕೊಂಡು ಗಾಡಿ ಓಡಿಸಿ ಎಂದು ಭರತ್ ಮತ್ತು ಸ್ನೇಹಿತರು ಅವಾಜ್ ಹಾಕಿದ್ದಾರೆ. ಈ ವೇಳೆ ಆರೋಪಿ ಮತ್ತು ಭರತ್ ನಡುವೆ ಮಾತಿನ ಚಕಮಕಿ ನಡೆದಿದೆ. ನಿನ್ನ ನೋಡಿಕೊಳ್ತೀನಿ ಅಂತಾ ಹೇಳಿ ಹೋಗಿದ್ದ ಆರೋಪಿ ಕೆಲ ಹೊತ್ತು ಬಿಟ್ಟು ಮತ್ತೆ ತನ್ನ ಗ್ಯಾಂಗ್ ಕರೆದುಕೊಂಡು ಬಂದು ಭರತ್ ಜೊತೆ ಕಿರಿಕ್ ಮಾಡಿ ಹಲ್ಲೆ ನಡೆಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಸಿಟಿ ರೈಲ್ವೆ ಪೊಲೀಸರು ಬಲೆ ಬೀಸಿದ್ದಾರೆ.
ಲೋನ್ ನೀಡುವುದಾಗಿ ವಂಚಿಸುತ್ತಿದ್ದ ನಾಲ್ವರು ಅರೆಸ್ಟ್ ಬೆಂಗಳೂರು: ಲೋನ್ ನೀಡುವುದಾಗಿ ವಂಚಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಬ್ಯುಸಿನೆಸ್ ಲೋನ್ ಕೊಡಿಸುವುದಾಗಿ ಹೇಳಿ ನಂಬಿಸಿ ಫೀಸ್ ಹೆಸರಿನಲ್ಲಿ ಲಕ್ಷಾಂತರ ರೂ. ವಸೂಲಿ ಮಾಡುತ್ತಿದ್ದ ಸತೀಶ್, ಉದಯ್, ಜಯರಾಮ್, ವಿನಯ್ನನ್ನು ಪೊಲೀಸರು ಬಂಧಿಸಿದ್ದಾರೆ.
ಫ್ಲವರ್ ಡೆಕೋರೇಷನ್ ಗೋದಾಮಿನಲ್ಲಿ ಬೆಂಕಿ ಬೆಂಗಳೂರು ಗ್ರಾಮಾಂತರ: ಆನೇಕಲ್ನ ತಿಮ್ಮರಾಯಸ್ವಾಮಿ ದೇಗುಲದ ರಸ್ತೆಯಲ್ಲಿರುವ ಕುಮಾರ್ ಎಂಬುವವರ ಫ್ಲವರ್ ಡೆಕೋರೇಷನ್ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಅಗ್ನಿ ಅವಘಡದಲ್ಲಿ ಲಕ್ಷಾಂತರ ರೂಪಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಒಂದು ಕೋಟಿ ಮೌಲ್ಯದ ಯಂತ್ರಗಳು, ಪೀಠೋಪಕರಣಗಳು ಭಸ್ಮ ವಿಜಯಪುರ: ಜಿಲ್ಲೆ ಇಂಡಿ ಪಟ್ಟಣದಲ್ಲಿ ಪೀಠೋಪಕರಣ ಮಾರಾಟ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಒಂದು ಕೋಟಿ ಮೌಲ್ಯದ ಯಂತ್ರಗಳು, ಪೀಠೋಪಕರಣಗಳು ಸುಟ್ಟು ಭಸ್ಮಗೊಂಡಿವೆ. ಶಾಂತಪ್ಪ ಬಡಿಗೇರ, ಬಸವರಾಜ ಬಡಿಗೇರ, ಸಂಗು ಬಡಿಗೇರ, ಮಲ್ಲಿಕಾರ್ಜುನ ಬಡಿಗೇರ, ಸಂತೋಷ ಬಡಿಗೇರಗೆ ಸೇರಿದ ಮಳಿಗೆ ಅವಘಡಕ್ಕೆ ಒಳಗಾಗಿದೆ. ಮುಂಜಾನೆ 5 ಗಂಟೆ ಸುಮಾರಿಗೆ ಮಳಿಗೆಗಳು ಹೊತ್ತಿಉರಿದಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಇಂಡಿ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೊಲೆರೊ ವಾಹನ ಡಿಕ್ಕಿ, ಇಬ್ಬರ ಸಾವು ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ತಾಲೂಕಿನ ಬೋಕಿಕೆರೆ ಗ್ರಾಮದ ಬಳಿ ಮರಕ್ಕೆ ಬೊಲೆರೊ ವಾಹನ ಡಿಕ್ಕಿ ಹೊಡೆದು ಇಬ್ಬರ ಮೃತಪಟ್ಟ ಘಟನೆ ನಡೆದಿದೆ. ಹೊನ್ನಾವರ ಮೂಲದ ಪ್ರಮೋದ್(43), ವಿನಾಯಕ(30) ಮೃತರು. ಬೊಲೆರೊ ವಾಹನದಲ್ಲಿದ್ದ ಮತ್ತಿಬ್ಬರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮಲಿಂಗೇಶ್ವರ ದೇಗುಲದಲ್ಲಿ ಶಿವಲಿಂಗ ಕಳವು ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ತಾಲೂಕಿನ ಬುರಡೇಕಟ್ಟೆ ಗ್ರಾಮದಲ್ಲಿ ರಾಮಲಿಂಗೇಶ್ವರ ದೇಗುಲದಲ್ಲಿ ಸುಮಾರು 5 ಅಡಿ ಎತ್ತರವಿದ್ದ ಶಿವಲಿಂಗ ಕಳವಾಗಿದೆ. ಜೀರ್ಣೋದ್ಧಾರಗೊಂಡು ಲೋಕಾರ್ಪಣೆಗೆ ಸಿದ್ದಗೊಂಡಿದ್ದ ದೇಗುಲ ಕಳ್ಳತನ ಮಾಡಲಾಗಿದೆ. ನಿಧಿ ಆಸೆಗಾಗಿ ಶಿವಲಿಂಗ ತೆಗೆದು ನಿಧಿಗಳ್ಳರು ಗುಂಡಿ ಅಗೆದಿರುವ ಶಂಕೆ ವ್ಯಕ್ತವಾಗಿದೆ. 500 ವರ್ಷಗಳ ಹಿಂದೆ ಚೋಳರ ಕಾಲದಲ್ಲಿ ಈ ದೇಗುಲ ನಿರ್ಮಾಣವಾಗಿತ್ತು.
ಇದನ್ನೂ ಓದಿ: ಸುದೀಪ್ ಜೀವನದಲ್ಲಿ ಬದಲಾವಣೆಗೆ ಕಾರಣವಾದ ಇಬ್ಬರು ಡೈರೆಕ್ಟರ್ ಇವರು; ವೇದಿಕೆಯಲ್ಲಿ ವಿವರಿಸಿದ ಕಿಚ್ಚ