ಉಡುಪಿ: ಕಾರ್ಮಿಕ ಇಲಾಖೆ ಅಧಿಕಾರಿಗಳಿಂದ ಜಂಟಿ ಕಾರ್ಯಾಚರಣೆ; ಚಿನ್ನದ ಅಂಗಡಿಯಲ್ಲಿದ್ದ ಮೂವರು ಬಾಲಕಾರ್ಮಿಕರ ರಕ್ಷಣೆ
ಉಡುಪಿ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕರನ್ನು ಕೆಲಸಕ್ಕೆ ಇಟ್ಟುಕೊಳ್ಳುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಉಡುಪಿ ನಗರದ ಚಿತ್ತರಂಜನ್ ವೃತ್ತದ ಬಳಿಯ ಚಿನ್ನದ ಅಂಗಡಿ ಮೇಲೆ ಕಾರ್ಮಿಕ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮೂವರು ಬಾಲಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ಚಿನ್ನದ ಪಾಲಿಶ್ ಮಾಡುವ ಕೆಲಸದಲ್ಲಿ ತೊಡಗಿದ್ದ ಮೂವರು ಬಾಲ ಕಾರ್ಮಿಕರನ್ನು ರಕ್ಷಿಸಿ ಮಕ್ಕಳ ಅನಾಥಾಶ್ರಮದಲ್ಲಿ ಪುನರ್ವಸತಿ ಮಾಡಲಾಗಿದೆ.
ಉಡುಪಿ, ಫೆ.9: ನಗರದ ಚಿತ್ತರಂಜನ್ ವೃತ್ತದ ಬಳಿಯ ಚಿನ್ನದ ಅಂಗಡಿಯಲ್ಲಿ (Gold Shop) ಬಾಲಕಾರ್ಮಿಕರನ್ನು ದುಡಿಸಿಕೊಳ್ಳಲಾಗುತ್ತಿದೆ ಎಂಬ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಮಹಿಳಾ ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ನಾಗರಿಕ ಸಮಿತಿ ಮಂಗಳವಾರ (ಫೆಬ್ರವರಿ 8) ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಬಾಲಕರನ್ನು ರಕ್ಷಣೆ ಮಾಡಲಾಗಿದೆ.
ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ಚಿನ್ನ ಪಾಲಿಶ್ ಮಾಡುವ ಕೆಲಸದಲ್ಲಿ ತೊಡಗಿದ್ದ ಮೂವರು ಬಾಲ ಕಾರ್ಮಿಕರನ್ನು ರಕ್ಷಿಸಿ ಮಕ್ಕಳ ಅನಾಥಾಶ್ರಮದಲ್ಲಿ ಪುನರ್ವಸತಿ ಮಾಡಲಾಗಿದೆ. ಕಾರ್ಮಿಕ ಇಲಾಖೆಯ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕಿ ಅಮರತಾ, ಕಾರ್ಮಿಕ ನಿರೀಕ್ಷಕ ಸಂಜಯ್, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಹೇಶ್, ಯೋಗೀಶ್, ಮಕ್ಕಳ ಸಹಾಯವಾಣಿ ಸಿಬ್ಬಂದಿ ಜ್ಯೋತಿ, ಪ್ರಕಾಶ್, ನಗರ ಠಾಣೆ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: ಉಡುಪಿ: ಪರಶುರಾಮ ಥೀಮ್ ಪಾರ್ಕ್ ಹಗರಣವನ್ನು ಸಿಐಡಿ ತನಿಖೆಗೆ ಆದೇಶಿಸಿದ ಸಿಎಂ
ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡರೆ ಸಹಾಯವಾಣಿಗೆ ಕರೆ ಮಾಡಿ ತಿಳಿಸಲು ಕಾರ್ಮಿಕ ಇಲಾಖೆ ಸಾರ್ವಜನಿಕರನ್ನು ವಿನಂತಿಸಿದೆ. ಮಕ್ಕಳ ರಕ್ಷಣೆಗಾಗಿ ಮಕ್ಕಳ ಸಹಾಯವಾಣಿ-1098 ಮತ್ತು ಪೊಲೀಸ್ ಇಲಾಖೆ ಸಹಾಯವಾಣಿ-112 ಗೆ ತಕ್ಷಣ ಕರೆ ಮಾಡುವಂತೆ ಮನವಿ ಮಾಡಲಾಗಿದೆ.
ಬಾಲಕಾರ್ಮಿಕರನ್ನು ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಅಪಾಯಕಾರಿ ಕೈಗಾರಿಕೆಗಳಲ್ಲಿ ಕೆಲಸಕ್ಕೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತರನ್ನು ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಮತ್ತು ಅಂತಹ ಕೈಗಾರಿಕೆ ಮಾಲೀಕರನ್ನು ವಾರಂಟ್ ಇಲ್ಲದೆ ಬಂಧಿಸಬಹುದು. ಅಲ್ಲದೆ, ಕನಿಷ್ಠ 6 ತಿಂಗಳಿಂದ ಗರಿಷ್ಠ 2 ವರ್ಷಗಳ ವರೆಗೆ ಜೈಲು ಶಿಕ್ಷೆ ಮತ್ತು 20,000 ರೂಪಾಯಿಯಿಂದ 50,000 ರೂಪಾಯಿ ವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ