ಹಲ್ಲುಜ್ಜುವ ವಿಚಾರಕ್ಕೆ ಕೊಲೆ ನಡೆಯುತ್ತಾ? ಭಾರತದಲ್ಲಿ ಹೀಗೂ ನಡೆಯುತ್ತೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಹಲ್ಲುಜ್ಜದ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ಕೇರಳದ ಪಾಲಕ್ಕಾಡ್ನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಅವಿನಾಶ್ ಕೊಯಂಬತ್ತೂರಿನ ದೀಪಿಕಾ ಎಂಬವರನ್ನು ವಿವಾಹವಾಗಿದ್ದರು. ಈ ದಂಪತಿಗಳು ಹಲವು ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿದ್ದರು. ಆದರೆ ಎರಡು ತಿಂಗಳ ಹಿಂದೆಯಷ್ಟೇ ಕೇರಳದ ಮನ್ನಾರ್ಕಾಡ್ ಎಂಬಲ್ಲಿಗೆ ತಮ್ಮ ವಾಸವನ್ನು ಬದಲಿಸಿದ್ದರು.
ಮನ್ನಾರ್ಕಾಡ್ನ ಕರಕ್ಕುರಿಸ್ಸಿಯಲ್ಲಿ ವಾಸವಿದ್ದ ಈ ದಂಪತಿಯ ನಡುವೆ ಮಂಗಳವಾರ ಹಲ್ಲುಜ್ಜದ ವಿಷಯಕ್ಕೆ ಜಗಳವಾಗಿದೆ. ಅವಿನಾಶ್ ತನ್ನ ಮಗನಿಗೆ ಹಲ್ಲುಜ್ಜದೆ ಮುತ್ತಿಡಲು ಹೋಗಿದಕ್ಕೆ ಪತ್ನಿ ದೀಪಿಕಾ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಗಿದ್ದು, ಕೋಪದ ಭರದಲ್ಲಿ ಅವಿನಾಶ್ ಮಗನ ಎದುರೇ ದೀಪಿಕಾ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಅಷ್ಟೇ ಅಲ್ಲದೆ ಆಕೆಯ ಕುತ್ತಿಗೆ, ಕಾಲು ಮತ್ತು ಕೈಗಳ ಮೇಲೆ ಮಚ್ಚು ಬೀಸಿದ್ದಾನೆ.
ಮಗುವಿನ ಕಿರುಚಾಟ ಹಾಗೂ ರಕ್ತ ಮಡುವಿನಲ್ಲಿದ್ದ ದೀಪಿಕಾ ಚೀರಾಟ ಕೇಳಿದ ಅಕ್ಕಪಕ್ಕದವರು ಮನೆಗೆ ಓಡಿ ಬಂದಿದ್ದಾರೆ. ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ದೀಪಿಕಾಳನ್ನು ಮಗ ಐವಿನ್ ಅಳುತ್ತಾ ತಬ್ಬಿಕೊಳ್ಳುತ್ತಿರುವ ಹೃದಯ ವಿದ್ರಾವಕ ದೃಶ್ಯ ಕಂಡು ಬಂದಿದೆ. ನೆರೆ ಹೊರೆಯವರು ಆಗಮಿಸಿದ್ದನ್ನು ನೋಡಿ ಮಚ್ಚಿನಿಂದ ಬೆದರಿಸಿ ಅವಿನಾಶ್ ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ.
ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯರು ತಕ್ಷಣವೇ ದೀಪಿಕಾ ಅವರನ್ನು ಸುಮಾರು 40 ಕಿಮೀ ದೂರದಲ್ಲಿರುವ ಪೆರಿಂತಲ್ಮನ್ನ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ತೀವ್ರ ರಕ್ತಸ್ರಾವ ಆಗಿದ್ದ ಕಾರಣ ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮತ್ತೊಂದೆಡೆ ಈ ಭೀಕರ ಹತ್ಯೆಯ ಬಗ್ಗೆ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಅದರಂತೆ ಅವಿನಾಶ್ನನ್ನು ಬಂಧಿಸಿರುವ ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ.
ಈ ವೇಳೆ ನಡೆದಿರುವ ಘಟನೆಯ ಬಗ್ಗೆ ಅವಿನಾಶ್ ಬಾಯಿಬಿಟ್ಟಿದ್ದಾನೆ. ಬೆಳಗ್ಗೆ ಏಳುತ್ತಿದ್ದಂತೆ 30 ವರ್ಷದ ಅವಿನಾಶ್ ಮಗನಿಗೆ ಮುತ್ತು ಕೊಡಲು ಯತ್ನಿಸಿದ್ದಾನೆ. ಆದರೆ, ಪತಿ ಹಲ್ಲುಜ್ಜದ ಕಾರಣ 28ರ ಹರೆಯದ ದೀಪಿಕಾ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಇದರಿಂದ ಇಬ್ಬರ ನಡುವೆ ವಾಗ್ವಾದ ಶುರುವಾಗಿದೆ. ಇದೇ ವೇಳೆ ಕೋಪದಲ್ಲಿ ಕೈಗೆ ಸಿಕ್ಕ ಮಚ್ಚಿನಿಂದ ಹೆಂಡತಿಯನ್ನು ಅವಿನಾಶ್ ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.