ಸ್ಯಾಂಟ್ರೋ ರವಿ ಲೀಲೆಗಳು ಬಗೆದಷ್ಟು ಬೆಚ್ಚಿ ಬೀಳಿಸುವ ಕಥೆ: ಸ್ಯಾಂಟ್ರೋ ‘ಸರ್ವೀಸ್’ ಜಾಲದಲ್ಲಿ ನಟಿ, ಮಾಡೆಲ್ಗಳು..!
ಸ್ಯಾಂಟ್ರೋ ರವಿ ಪತ್ನಿ ದೂರು ಕೊಟ್ಟಿದ್ದೇ ತಡ, ಬಯಲಾದ ಅವನ ಮತಿಗೇಡಿ ಕೆಲಸ ಒಂದೆರಡಲ್ಲ. ಪೊಲೀಸ್ ತನಿಖಾ ಮೂಲಗಳಿಂದ ಒಂದಷ್ಟು ಸತ್ಯಗಳು ರಿವೀಲ್ ಆಗುತ್ತಿದ್ದರೆ, ಮತ್ತೊಂದು ಕಡೆ ಸ್ಯಾಂಟ್ರೋ ರವಿಗೆ ಮನೆ ಕೊಟ್ಟ ಮಾಲೀಕ ದೊಡ್ಡ ದೊಡ್ಡ ಬಾಂಬ್ಗಳನ್ನೇ ಸಿಡಿಸಿದ್ದಾರೆ.
ಬೆಂಗಳೂರು: ಸ್ಯಾಂಟ್ರೋ ರವಿಯ (Santro Ravi) ಲೀಲೆಗಳು ಬಗೆದಷ್ಟು ಬೆಚ್ಚಿ ಬೀಳಿಸುವ ಕಥೆ. ಕೆದಕಿದಷ್ಟು ಕರ್ಮಕಾಂಡ. ತನಿಖೆಗಿಳಿದಷ್ಟು ಕರಾಳ ಮುಖವಾಡ. ಸ್ಯಾಂಟ್ರೋ ಸರ್ವಿಸ್ ಹಿಂದಿದೆ ಮಹಾ ಸೀಕ್ರೆಟ್ ಅಡ್ಡ. ಕುಮಾರಕೃಪಾದ ಬಳಿ ಧೀರನಂತೆ ಓಡಾಡ್ತೀನಿ ಅಂದವನ ದಗ್ಬಾಲಜಿತನ ಒಂದೊಂದಾಗಿ ಹೊರ ಬೀಳ್ತಿದ್ದು ಎಲ್ಲರಿಗೂ ಅಚ್ಚರಿ ಮೂಡಿಸುವಂತಿದೆ. ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡವನ ಕಥೆಯೇ ರಣ ರೋಚಕವಾಗಿದೆ.
ಬಾಂಬ್ ಸಿಡಿಸಿದ ಅಪಾರ್ಟ್ಮೆಂಟ್ ಮಾಲೀಕ
ಸ್ಯಾಂಟ್ರೋ ರವಿ ಪತ್ನಿ ದೂರು ಕೊಟ್ಟಿದ್ದೇ ತಡ, ಬಯಲಾದ ಅವನ ಮತಿಗೇಡಿ ಕೆಲಸ ಒಂದೆರಡಲ್ಲ. ಪೊಲೀಸ್ ತನಿಖಾ ಮೂಲಗಳಿಂದ ಒಂದಷ್ಟು ಸತ್ಯಗಳು ರಿವೀಲ್ ಆಗುತ್ತಿದ್ದರೆ, ಮತ್ತೊಂದು ಕಡೆ ಸ್ಯಾಂಟ್ರೋ ರವಿಗೆ ಮನೆ ಕೊಟ್ಟ ಮಾಲೀಕ ದೊಡ್ಡ ದೊಡ್ಡ ಬಾಂಬ್ಗಳನ್ನೇ ಸಿಡಿಸಿದ್ದಾರೆ. ಸ್ಯಾಂಟ್ರೋ ರವಿ ಅಪಾರ್ಟ್ಮೆಂಟ್ನಲ್ಲಿ ಬಾಡಿಗೆ ಇದ್ದಾಗ ಮನೆಗೆ ನಟಿಯರು, ಮಾಡೆಲ್, ಸರ್ಕಾರಿ ಅಧಿಕಾರಿಗಳು ಬರುತ್ತಿದ್ದ ಎಂದು ಆರೋಪ ಮಾಡಿದ್ದಾರೆ.
ಆರ್.ಆರ್ ನಗರ ಕೇಸ್.. ಬಯಲಾಯ್ತು ಸ್ಯಾಂಟ್ರೋ ಸೀಕ್ರೆಟ್
ಆರ್.ಆರ್ ನಗರ ಪೊಲೀಸರ ಎದುರೇ ಸ್ಯಾಂಟ್ರೋ ರವಿ ತಾವು ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾನಂತೆ.. ಸರಿ ಸುಮಾರು 3-4 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಸೇವೆ ಮಾಡಿದ್ದಾಗಿ ಪುಂಗಿದ್ದಾನಂತೆ. ಹೀಗಾಗಿ ರವಿ ಏನೆಲ್ಲಾ ಹೇಳಿದ್ದಾನೋ ಅದೆಲ್ಲವನ್ನೂ ಪೊಲೀಸರು ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಇದು ಒಂದು ಕಡೆ ಇರಲಿ, ಇದೇ ರವಿ ವಿರುದ್ಧ ಆರ್.ಆರ್ ನಗರ ನಿವಾಸಿ ಜಗದೀಶ್ ಎಂಬಾತ 2022ರಲ್ಲಿ ದೂರು ನೀಡಿದ್ದು, ದೂರಿನ ಅಂಶಗಳು ದಂಗು ಬಡಿಸುವಂತಿವೆ.
ಗಣ್ಯ ವ್ಯಕ್ತಿಗಳಿಗೆ ಹುಡುಗಿಯರನ್ನ ಸಪ್ಲೈ ಮಾಡುವ ಕೆಲಸ
2000ರಿಂದ 2005ರವರೆಗೆ ಮಂಡ್ಯ, ಮೈಸೂರಿನಲ್ಲಿ ವೃತ್ತಿ ಆರಂಭಿಸಿದ್ದ ಸ್ಯಾಂಟ್ರೋ ರವಿ, ಗಣ್ಯ ವ್ಯಕ್ತಿಗಳಿಗೆ ಹುಡುಗಿಯರನ್ನ ಸಪ್ಲೈ ಮಾಡುವ ಕೆಲಸ ಮಾಡುತ್ತಿದ್ದ.. ಅನೈತಿಕ ಚಟುವಟಿಕೆಗಳಿಂದ ಮುಖಂಡರ ಗೌರವಕ್ಕೆ ಧಕ್ಕೆ ತಂದಿದ್ದಲ್ಲದೇ, ಅಕ್ರಮ ದಂಧೆಗಳಿಂದ ಕೋಟ್ಯಂತರ ರೂ. ಆಸ್ತಿ ಮಾಡಿದ್ದಾನೆ ಎಂದು ರವಿ ವಿರುದ್ಧ ಜಗದೀಶ್ ದೂರಿದ್ದಾರೆ. ಇಷ್ಟೇ ಅಲ್ಲ ತನ್ನ ಪತ್ನಿ ವಕೀಲೆ ಎಂದು ಹೇಳಿಕಂಡು ಹಲವರಿಗೆ ವಂಚಿಸಿದ್ದಾನೆ. ಶೋಕಿಗಾಗಿ ಮೂರ್ನಾಲ್ಕು ಕಾರುಗಳನ್ನ ಇಟ್ಟುಕೊಂಡಿದ್ದಾನೆ ಎಂದು ಆರೋಪ ಮಾಡಿದ್ದಾರೆ.
ಸ್ಯಾಂಟ್ರೋ ರವಿ ವರ್ಗಾವಣೆ ಲಿಸ್ಟ್
ಐನಾತಿ ರವಿಯ ಕಥೆಗಳು ಇಷ್ಟಕ್ಕೆ ನಿಂತಿಲ್ಲ ಬದಲಾಗಿ, ಪೊಲೀಸರ ವರ್ಗಾವಣೆಯಲ್ಲಿ ಭಾಗಿಯಾಗಿರೋದಕ್ಕೆ ಸಾಕ್ಷ್ಯಗಳು ಸಿಕ್ಕಿವೆಯಂತೆ. ಇದಕ್ಕೆ ಪುಷ್ಠಿ ನೀಡುವಂತೆ ಒಂದು ಕಡೆ ಆಡಿಯೋಗಳು ವೈರಲ್ ಆಗಿದ್ರೆ, R.R. ನಗರ ಕೇಸ್ನಲ್ಲಿ ಖುದ್ದು ರವಿಯೇ ಈ ಬಗ್ಗೆ ಬಾಯ್ಬಿಟ್ಟಿದ್ದಾನಂತೆ.
ಸ್ಯಾಂಟ್ರೋ ರವಿ ವರ್ಗಾವಣೆ ಮಾಡಿಸಿದವರ ಲಿಸ್ಟ್ನಲ್ಲಿ ಇನ್ಸ್ಪೆಕ್ಟರ್ ಜಿ.ಕೆ. ಸುಬ್ರಹ್ಮಣ್ಯ ಇದ್ದಾರಂತೆ. ಕರ್ನಾಟಕ ರಾಜ್ಯ ಗುಪ್ತವಾರ್ತೆಯಲ್ಲಿ ಕೆಲಸ ಮಾಡ್ತಿದ್ದ ಇವರನ್ನ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿಸಿದ್ದನಂತೆ.ಇಷ್ಟೇ ಅಲ್ಲ, ಮಂಡ್ಯದ ಹಲಗೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಸಬ್ಇನ್ಸ್ಪೆಕ್ಟರ್ ರವಿಕುಮಾರ್ರನ್ನ ಮಂಡ್ಯದ ಮಳವಳ್ಳಿ ಠಾಣೆಗೆ ಇದೇ ಸ್ಯಾಂಟ್ರೋ ರವಿ ವರ್ಗಾವಣೆ ಮಾಡಿಸಿದ್ದ ಎನ್ನುವ ಬಗ್ಗೆ ಮಾಹಿತಿ ಇದೆ.
ರವಿಗೆ ಎನ್ಕೌಂಟರ್ ಭಯ
ಸ್ಯಾಂಟ್ರೋ ರವಿ ನಾಪತ್ತೆಯಾಗಿ ಇಂದಿಗೆ 9 ದಿನಗಳೇ ಕಳೆದಿವೆ. ಆದ್ರೂ ಕೂಡ ರವಿ ಎಲ್ಲಿದ್ದಾನೆ ಎನ್ನುವುದು ಪೊಲೀಸ್ನವರಿಗೆ ಗೊತ್ತಾಗಿಲ್ಲ.. ಈ ನಡುವೆ ಸ್ಯಾಂಟ್ರೋ ರವಿ ಅನಾರೋಗ್ಯ ಕಾಡುತ್ತಿದೆ, ಮತ್ತೊಂದು ಕಡೆ ಮೈಸೂರಿಗೆ ಅಲೋಕ್ ಕುಮಾರ್ ಹೋಗಿ ಬಂದಾಗಿನಿಂದ ರವಿಗೆ ಎನ್ಕೌಂಟರ್ ಭಯ ಕಾಡುತ್ತಿದೆಯಂತೆ. ಹೀಗಾಗಿ ನ್ಯಾಯಾಲಯದ ಮೂಲಕ ಸ್ಯಾಂಟ್ರೋ ರವಿ ಶರಣಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಸ್ಯಾಂಟ್ರೋ ರವಿ ಸೀಕ್ರೆಟ್ಗಳೇ ದೊಡ್ಡವರಿಗೆ ಶಾಕ್ ಕೊಡುವಂತಿವೆ.. ಪೊಲೀಸರಂತೂ ಸ್ಯಾಂಟ್ರೋವನ್ನ ಏನಾದ್ರೂ ಮಾಡಿ ಪಂಕ್ಚರ್ ಮಾಡಲೇಬೇಕು ಎಂದು ತಂಡ ಕಟ್ಟಿಕೊಂಡು ಮೂಲೆ ಮೂಲೆಯಲ್ಲೂ ಜಾಲಾಡುತ್ತಿದ್ದಾರೆ.
ಇನ್ನಷ್ಟು ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ