Murder: ಹೆಂಡತಿಯನ್ನು ಕೊಂದು ಮನೆಯಲ್ಲೇ ಹೂತಿಟ್ಟ ಗಂಡ; 18 ತಿಂಗಳ ಬಳಿಕ ಕೊಲೆ ರಹಸ್ಯ ಬಯಲು
ಪೊಲೀಸ್ ವಿಚಾರಣೆ ವೇಳೆ ಏನು ಕೇಳಿದರೂ ಆತ ತನಗೇನೂ ಗೊತ್ತಿಲ್ಲವೆಂದು ಹೇಳುತ್ತಿದ್ದ. ಇದರಿಂದ ಪೊಲೀಸರಿಗೆ ಸಜೀವ್ ಮೇಲೆ ಅನುಮಾನ ಮೂಡಿತ್ತು. 1 ವರ್ಷದಿಂದ ಆತನ ಮೇಲೆ ನಿಗಾ ಇರಿಸಲಾಗಿತ್ತು.
ಎರ್ನಾಕುಲಂ: ಸುಮಾರು ಒಂದೂವರೆ ವರ್ಷದ ಹಿಂದೆ ತನ್ನ ಹೆಂಡತಿಯನ್ನು ಕೊಂದು ಮನೆಯ ಅಂಗಳದಲ್ಲಿಯೇ ಹೂತು ಹಾಕಿದ್ದ ಕೇರಳದ (Kerala Crime) ವ್ಯಕ್ತಿಯೊಬ್ಬ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. 18 ತಿಂಗಳ ಬಳಿಕ ಪೊಲೀಸರು ಆರೋಪಿ ಸಜೀವ್ ಎಂಬಾತನನ್ನು ಎರ್ನಾಕುಲಂನಲ್ಲಿರುವ (Ernakulam) ಆತನ ಮನೆಯಲ್ಲಿ ಹೆಂಡತಿಯನ್ನು ಕೊಂದ ಆರೋಪದಲ್ಲಿ ಬಂಧಿಸಿದ್ದಾರೆ.
ಸಜೀವ್ ಎಂಬಾತನ ಪತ್ನಿ ರಮ್ಯಾ 2021ರ ಆಗಸ್ಟ್ ತಿಂಗಳಲ್ಲಿ ನಾಪತ್ತೆಯಾಗಿದ್ದರು. ತನ್ನ ಹೆಂಡತಿ ಕಾಣೆಯಾಗಿದ್ದಾಳೆಂದು ಸಜೀವ್ 2022ರ ಫೆಬ್ರವರಿಯಲ್ಲಿ ಪೊಲೀಸರಿಗೆ ದೂರು ಸಲ್ಲಿಸಿದ್ದರು. ವಿಶೇಷ ಪೊಲೀಸ್ ತಂಡವು ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು. 18 ತಿಂಗಳ ಬಳಿಕ ಕೊನೆಗೂ ಈ ಪ್ರಕರಣಕ್ಕೆ ಅಂತ್ಯ ಸಿಕ್ಕಿದ್ದು, ತಾನೇ ಕೊಲೆ ಮಾಡಿ, ಪೊಲೀಸರ ಮುಂದೆ ನಾಟಕವಾಡಿದ್ದ ಸಜೀವ್ನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Murder: ದೆಹಲಿಯಲ್ಲಿ ಮತ್ತೊಂದು ಬರ್ಬರ ಹತ್ಯೆ; ಮಹಿಳೆಯನ್ನು ಕೊಂದು, ಹೂತಿಟ್ಟ ಹಂತಕರು
ಪೊಲೀಸ್ ವಿಚಾರಣೆ ವೇಳೆ ಏನು ಕೇಳಿದರೂ ಆತ ತನಗೇನೂ ಗೊತ್ತಿಲ್ಲವೆಂದು ಹೇಳುತ್ತಿದ್ದ. ಇದರಿಂದ ಪೊಲೀಸರಿಗೆ ಸಜೀವ್ ಮೇಲೆ ಅನುಮಾನ ಮೂಡಿತ್ತು. 1 ವರ್ಷದಿಂದ ಆತನ ಮೇಲೆ ನಿಗಾ ಇರಿಸಲಾಗಿತ್ತು. ಆತನನ್ನು ವಿಚಾರಣೆಗೆ ಒಳಪಡಿಸಲು ತಂಡವು ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಿದ ನಂತರ ಆತನನ್ನು ಬಂಧಿಸಲಾಯಿತು.
ಪ್ರಾಥಮಿಕ ಮಾಹಿತಿಯ ಪ್ರಕಾರ, ರಮ್ಯಾಳ ಜೊತೆ ಆಕೆಯ ಪತಿ ಸಜೀವ್ ಫೋನ್ನಲ್ಲಿ ಜಗಳವಾಡಿದ ನಂತರ ಮನೆಗೆ ಬಂದು, ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದ. ನಂತರ ಸಜೀವ್ ಆಕೆಯನ್ನು ಮನೆಯ ಬಳಿಯೇ ಹೂತಿಟ್ಟು ಒಂದೂವರೆ ವರ್ಷ ಅದೇ ಮನೆಯಲ್ಲಿದ್ದ. ಆಕೆ ನಾಪತ್ತೆಯಾಗಿದ್ದಾಳೆಂದು ಎಲ್ಲರೆದುರು ನಾಟಕವಾಡಿದ್ದ ಆತ ತನ್ನ ಪತ್ನಿ ಬೇರೆಯವರೊಂದಿಗೆ ಓಡಿ ಹೋಗಿದ್ದಾಳೆ ಎಂದು ಸಂಬಂಧಿಕರು ಹಾಗೂ ಅಕ್ಕಪಕ್ಕದ ಮನೆಯವರ ಮುಂದೆ ಗೋಳಾಡಿ, ತಾನು ಬೇರೆ ಮದುವೆಯಾಗಲು ಸಿದ್ಧತೆ ನಡೆಸಿದ್ದ.
ಇದನ್ನೂ ಓದಿ: Mandya: ಮನೆಯಲ್ಲಿ ಮಲಗಿದ್ದ ಒಂಟಿ ಮಹಿಳೆಯ ಹತ್ಯೆ ಮಾಡಿ ಬೆಂಕಿ ಹಚ್ಚಿದ ಪಾಪಿಗಳು; ಬೆಚ್ಚಿಬಿದ್ದ ಗ್ರಾಮಸ್ಥರು
ಪೊಲೀಸರು ನಡೆಸಿದ ತನಿಖೆಯ ಸಮಯದಲ್ಲಿ, ಮಹಿಳೆಯ ಶವದ ಅವಶೇಷಗಳು ಮನೆಯ ಅಂಗಳದ ಬಳಿ ಕಂಡುಬಂದಿತ್ತು. ಇದು ಮತ್ತು ಇತರ ಸಾಕ್ಷ್ಯಗಳ ಆಧಾರದ ಮೇಲೆ ಸಜೀವ್ನನ್ನು ಕೊಲೆ ಆರೋಪದಡಿ ಮತ್ತು ಸಾಕ್ಷ್ಯ ನಾಶಪಡಿಸಿದ ಆರೋಪದಡಿಯಲ್ಲಿ ಬಂಧಿಸಲಾಗಿದೆ.