ಐವರು ಯುವಕರಿಂದ ಸೆಕ್ಯೂರಿಟಿಗಾರ್ಡ್ ಮೇಲೆ ಮನಬಂದಂತೆ ಹಲ್ಲೆ: ಮೂವರು ಅಂದರ್, ಇಬ್ಬರೂ ಪರಾರಿ
ಐವರು ಯುವಕರಿಂದ ಸೆಕ್ಯೂರಿಟಿಗಾರ್ಡ್ ಮೇಲೆ ಮನಬಂದಂತೆ ಹಲ್ಲೆ ಮಾಡಿರುವಂತಹ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಮಂಚನಬೆಲೆ ಡ್ಯಾಂನಲ್ಲಿ ನಡೆದಿದೆ.
ರಾಮನಗರ: ಐವರು ಯುವಕರಿಂದ ಸೆಕ್ಯೂರಿಟಿಗಾರ್ಡ್ (Security guard) ಮೇಲೆ ಮನಬಂದಂತೆ ಹಲ್ಲೆ ಮಾಡಿರುವಂತಹ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಮಂಚನಬೆಲೆ ಡ್ಯಾಂನಲ್ಲಿ ನಡೆದಿದೆ. ನರಸಿಂಹ ಹಲ್ಲೆಗೊಳಗಾದ ಸೆಕ್ಯೂರಿಟಿಗಾರ್ಡ್. ಜಲಾಶಯವನ್ನು ವೀಕ್ಷಿಸಲು ಐವರು ಯುವಕರು ಬಂದಿದ್ದಾರೆ. ಈ ವೇಳೆ ಡ್ಯಾಂ ಆವರಣಕ್ಕೆ ತೆರಳಲು ಸೆಕ್ಯೂರಿಟಿಗಾರ್ಡ್ ಅವಕಾಶ ನೀಡಿರಲಿಲ್ಲ. ಹಾಗಾಗಿ ಕುಪಿತಗೊಂಡು ಮೂಗು, ಕಿವಿಯಲ್ಲಿ ರಕ್ತ ಬರುವಂತೆ ಸೆಕ್ಯೂರಿಟಿಗಾರ್ಡ್ ನರಸಿಂಹ ಮೂರ್ತಿ ಮೇಲೆ ಯುವಕರು ಹಲ್ಲೆ ಮಾಡಿದ್ದಾರೆ. ಅಷ್ಟೊತ್ತಿಗೆ ಮೂವರು ಯುವಕರನ್ನು ಹಿಡಿದು ಥಳಿಸಿ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಸೆಕ್ಯೂರಿಟಿಗಾರ್ಡ್ ಮೇಲೆ ಹಲ್ಲೆ ಬಳಿಕ ಇಬ್ಬರು ಯುವಕರು ಪರಾರಿ ಆಗಿದ್ದಾರೆ. ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಶಾರ್ಟ್ ಸರ್ಕ್ಯೂಟ್ನಿಂದ ಸುಟ್ಟು ಭಸ್ಮವಾದ ಗೃಹೋಪಯೋಗಿ ವಸ್ತುಗಳು
ಕೋಲಾರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವಂತಹ ಘಟನೆ ಕೋಲಾರದ ಗಾಂಧಿನಗರದಲ್ಲಿ ನಡೆದಿದೆ. ಪೊಲೀಸ್ ಇಲಾಖೆಯಲ್ಲಿರುವ ರವಿ ಎಂಬುವರಿಗೆ ಸೇರಿದ ಮನೆಯಲ್ಲಿ ಅನಾಹುವಾಗಿದ್ದು, ಅಂದಾಜು 3 ಲಕ್ಷಕ್ಕೂ ಹೆಚ್ಚು ಮನೆಯ ಗೃಹೋಪಯೋಗಿ ವಸ್ತುಗಳೆಲ್ಲಾ ಸುಟ್ಟು ಭಸ್ಮವಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳೀಯರು ಮತ್ತು ಅಗ್ನಿ ಶಾಮಕ ಸಿಬ್ಬಂದಿಯಿಂದ ಬೆಂಕಿನಂದಿಸಲಾಗಿದೆ. ಗಲ್ ಪೇಟೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಇದನ್ನೂ ಓದಿ: ನಾಲ್ಕು ಮಕ್ಕಳ ತಾಯಿ ಮುಸ್ಲಿಂ ಯುವಕನ ಜತೆ ಪರಾರಿ: ಲವ್ ಜಿಹಾದ್ ಆರೋಪ
ಮೂವರು ಅನಾಥ ಸಹೋದರಿಯರು ಆತ್ಮಹತ್ಯೆಗೆ ಶರಣು
ತುಮಕೂರು: ಮೂವರು ಅನಾಥ ಸಹೋದರಿಯರು ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬರಕನಹಾಲ್ ತಾಂಡಾದಲ್ಲಿ ನಡೆದಿದೆ. ರಂಜಿತಾ(24), ಬಿಂದು(21), ಚಂದನಾ(18) ಆತ್ಮಹತ್ಯೆ ಮಾಡಿಕೊಂಡ ಸೋದರಿಯರು. ಕಳೆದ 9 ದಿನಗಳ ಹಿಂದೆಯೇ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಕೊಳೆತ ವಾಸನೆ ಬಂದ ಬಳಿಕ ಸ್ಥಳೀಯರು ಗಮನಿಸಿದಾಗ ಪ್ರಕರಣ ಇಂದು(ಜನವರಿ 19) ಬೆಳಕಿಗೆ ಬಂದಿದೆ.
ಹಲವು ವರ್ಷಗಳ ಹಿಂದೆಯೇ ತಂದೆ-ತಾಯಿ ಮೃತಪಟ್ಟಿದ್ದರು. ತಂದೆ-ತಂದೆಯನ್ನು ಕಳೆದುಕೊಂಡ ಅನಾಥರಾಗಿದ್ದ ಸಹೋದರಿಯರು ಅಜ್ಜಿ ಜೊತೆಯಲ್ಲಿ ವಾಸವಿದ್ದರು. ಆದ್ರೆ, ಆಸರೆಯಾಗಿದ್ದ ಅಜ್ಜಿಯೂ ಸಹ ಇತ್ತೀಚೆಗೆ ಮರಣ ಹೊಂದಿದ್ದರು. ಬಳಿಕ ಸಹೋದರಿಯರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಬಿಸಿ ನೀರಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ: ಇಬ್ಬರು ಆರೋಪಿಗಳ ಬಂಧನ
ಆಕಸ್ಮಿಕ ಬೆಂಕಿ ತಗುಲಿ 32 ಎಕರೆ ಕಬ್ಬು ಸಂಪೂರ್ಣ ಭಸ್ಮ
ಗದಗ: ಆಕಸ್ಮಿಕ ಬೆಂಕಿ ತಗುಲಿ 32 ಎಕರೆ ಕಬ್ಬು ಸಂಪೂರ್ಣ ಭಸ್ಮವಾಗಿರುವಂತಹ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಬಿದರಳ್ಳಿಯಲ್ಲಿ ನಡೆದಿದೆ. ರೈತ ವೈ. ಶೇಷಗಿರಿರಾವ್ಗೆ ಸೇರಿದ 32 ಎಕರೆ ಕಬ್ಬು ನಾಶವಾಗಿದ್ದು, ಲಕ್ಷಾಂತರ ರೂ. ಸಾಲ ಮಾಡಿ ಬೆಳೆದಿದ್ದ ಕಬ್ಬು ಬೆಂಕಿಗಾಹುತಿಯಾಗಿದೆ. ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಯತ್ನಿಸಿದ್ದು, ನಿರಂತರ ಪ್ರಯತ್ನಿಸಿದ್ರೂ ಬೆಂಕಿ ಹತೋಟಿಗೆ ಬರಲಿಲ್ಲ. ಬೆಂಕಿ ಕೆನ್ನಾಲಿಗೆ ನೋಡಿ ರೈತ ವೈ.ಶೇಷಗಿರಿರಾವ್ ಕಂಗಾಲಾದರು. ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ರೈತರು ಆಗ್ರಹಿಸಿದರು. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಮತ್ತಷ್ಟ ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:31 pm, Sat, 21 January 23