ಬೆಂಗಳೂರಿನಲ್ಲಿ ಕತ್ತು ಸೀಳಿ ಕೂಲಿ ಕಾರ್ಮಿಕನ ಹತ್ಯೆ, ಹೇರೊಹಳ್ಳಿ ಕೆರೆಯಲ್ಲಿ ತೇಲಿ ಬಂತು ವ್ಯಕ್ತಿ ಶವ
ಕೂಲಿ ಕಾರ್ಮಿಕನೊರ್ವನನ್ನ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೆ.ಆರ್ ರಸ್ತೆಯ ಬಸ್ ನಿಲ್ದಾಣದ ಬಳಿ ನಡೆದರೇ, ಇತ್ತ ಬ್ಯಾಡರಹಳ್ಳಿಯ ಹೇರೊಹಳ್ಳಿ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.
ಬೆಂಗಳೂರು: ನಿನ್ನೆ(ಮೇ.29) ರಾತ್ರಿ ಕೂಲಿ ಕಾರ್ಮಿಕ ಆನಂದ್ ಎಂಬಾತನನ್ನ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದ್ದು, ಕೆ.ಆರ್ ರಸ್ತೆಯ ಬಸ್ ನಿಲ್ದಾಣದ ಬಳಿ ಆನಂದ್ ಶವ ಪತ್ತೆಯಾಗಿದೆ. ಕೆ.ಆರ್ಮಾರ್ಕೆಟ್(KR Market)ನಲ್ಲಿ ಇತ ಕೂಲಿ ಕೆಲಸ ಮಾಡುತ್ತಿದ್ದ. ನಿನ್ನೆ ಜಗಳವಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ವಿವಿಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ನಂತರ ಕೊಲೆಗೆ ನಿಖರ ಕಾರಣ ತಿಳಿದು ಬರಬೇಕಿದೆ.
ಕೆರೆಯಲ್ಲಿ ತೇಲಿ ಬಂತು ವ್ಯಕ್ತಿ ಶವ
ಬೆಂಗಳೂರು: ಬ್ಯಾಡರಹಳ್ಳಿಯ ಹೇರೊಹಳ್ಳಿ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಇಂದು(ಮೇ30) ಮುಂಜಾನೆ ಕೆರೆ ದಂಡೆಯಲ್ಲಿ ಕೆಲವರು ವಾಯು ವಿಹಾರ ನಡೆಸುತ್ತಿದ್ದಾಗ, ವ್ಯಕ್ತಿಯ ಶವ ಕಂಡು ಬಂದಿದೆ. ಕೂಡಲೇ ನೀರಲ್ಲಿ ತೇಲುತ್ತಿದ್ದ ಶವ ಕಂಡು ಸಾರ್ವಜನಿಕರು ಬ್ಯಾಡರಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಇನ್ನು ಇತನನ್ನು ಅಂದಾಜು 38-40ವರ್ಷದ ವ್ಯಕ್ತಿಯೆಂದು ಗುರುತಿಸಲಾಗಿದೆ. ಸದ್ಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ವಿದ್ಯುತ್ ತಂತಿ ತುಂಡಾಗಿ 11 ಜಾನುವಾರುಗಳು ಸ್ಥಳದಲ್ಲೇ ಸಾವು
ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಕಳ್ಳಮಳ್ಳಿ ತಾಂಡಾದಲ್ಲಿ ವಿದ್ಯುತ್ ತಂತಿ ತುಂಡಾಗಿ 11 ಜಾನುವಾರುಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ನಿನ್ನೆ(ಮೇ.29) ಬಿರುಗಾಳಿ, ಮಳೆಯಿಂದ ವಿದ್ಯುತ್ ತಂತಿ ತುಂಡಾಗಿ ಈ ಅವಘಡ ಸಂಭವಿಸಿದೆ. ವಿದ್ಯುತ್ ತಂತಿ ಸ್ಪರ್ಶಿಸಿ ರಾಮಪ್ಪ ಪವಾರ್ ಎಂಬುವರಿಗೆ ಸೇರಿದ 2 ಎತ್ತು, 7 ಆಕಳು, 2 ಎಮ್ಮೆ ದುರ್ಮರಣ ಹೊಂದಿದ್ದು, ಭದ್ರಪ್ಪ ಪವಾರ್ ಎಂಬುವರಿಗೆ ಸೇರಿದ ಎರಡು ಎಮ್ಮೆ ಸಾವನ್ನಪ್ಪಿದೆ. ಘಟನಾ ಸ್ಥಳಕ್ಕೆ ತಾವರಗೇರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
‘ಶೌಚಾಲಯಕ್ಕೆ ಹೋಗುವಾಗ ಹೃದಯಾಘಾತವಾಗಿ ವ್ಯಕ್ತಿ ಸಾವು
ಬೆಂಗಳೂರು: ಶೌಚಾಲಯಕ್ಕೆ ಹೋಗುವ ಸಂಧರ್ಭದಲ್ಲಿ ಕಟ್ಟಾ ಮುತ್ತು (53) ಎಂಬಾತ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಕಮ್ಮನಹಳ್ಳಿ ಕುಳ್ಳಪ್ಪ ಸರ್ಕಲ್ ಬಳಿ ನಡೆದಿದೆ. ಇತ ಬೋರ್ವೇಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಇನ್ನು ಆತನ ಮೃತದೇಹವನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:44 pm, Tue, 30 May 23