Shocking News: ಅಂಗಡಿಯೊಳಗೆ ಬಾಕ್ಸ್ನಲ್ಲಿ ಮನುಷ್ಯನ ಕಣ್ಣು, ಕಿವಿ, ಮೆದುಳು ಪತ್ತೆ!
ಮೂರ್ನಾಲ್ಕು ದಿನಗಳಿಂದ ಬೀಗ ಹಾಕಲಾಗಿದ್ದ ಅಂಗಡಿಯೊಂದರಿಂದ ದುರ್ನಾತ ಬರುತ್ತಿದ್ದ ಕಾರಣ ಅಕ್ಕಪಕ್ಕದವರಿಗೆ ಅನುಮಾನ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಪೊಲೀಸರಿಗೆ ಈ ವಿಷಯ ತಿಳಿಸಿದ್ದರು.
ಮುಂಬೈ: ಮಹಾರಾಷ್ಟ್ರದ ನಾಸಿಕ್ ನಗರದ ಮುಂಬೈ ನಾಕಾ ಪ್ರದೇಶದ ಕಟ್ಟಡದ ನೆಲಮಾಳಿಗೆಯಲ್ಲಿ ಬೀಗ ಹಾಕಲಾಗಿದ್ದ ಅಂಗಡಿಯೊಂದರಲ್ಲಿ ಮಾನವನ ದೇಹದ ಭಾಗಗಳು ಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದೆರಡು ದಿನಗಳಿಂದ ಅಂಗಡಿಯಿಂದ ದುರ್ವಾಸನೆ ಬರುತ್ತಿದ್ದುದರಿಂದ ಸ್ಥಳೀಯರು ಭಾನುವಾರ ತಡರಾತ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗ ಈ ವಿಷಯ ಬಯಲಾಗಿದೆ.
ಮೂರ್ನಾಲ್ಕು ದಿನಗಳಿಂದ ಬೀಗ ಹಾಕಲಾಗಿದ್ದ ಅಂಗಡಿಯೊಂದರಿಂದ ದುರ್ನಾತ ಬರುತ್ತಿದ್ದ ಕಾರಣ ಅಕ್ಕಪಕ್ಕದವರಿಗೆ ಅನುಮಾನ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಪೊಲೀಸರಿಗೆ ಈ ವಿಷಯ ತಿಳಿಸಿದ್ದರು. ಆಗ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಂಗಡಿಯ ಬಾಗಿಲು ಒಡೆದು ನೋಡಿದಾಗ ನೆಲಮಾಳಿಗೆಯಲ್ಲಿ ತುಂಬಿಡಲಾಗಿದ್ದ ಗುಜರಿ ವಸ್ತುಗಳ ಮಧ್ಯೆ ಮನುಷ್ಯರ ಕಣ್ಣು, ಕಿವಿ, ಮೆದುಳು, ಮುಖದ ಕೆಲವು ಭಾಗಗಳು ಪತ್ತೆಯಾಗಿವೆ.
“ಆ ಅಂಗಡಿಯು ಸ್ಕ್ರ್ಯಾಪ್ ವಸ್ತುಗಳಿಂದ ತುಂಬಿತ್ತು. ಅದರಲ್ಲಿದ್ದ ಎರಡು ಪ್ಲಾಸ್ಟಿಕ್ ಪಾತ್ರೆಗಳನ್ನು ತೆರೆದಾಗ ಅದರಲ್ಲಿ ಮಾನವನ ಕಿವಿ, ಮೆದುಳು, ಕಣ್ಣುಗಳು ಮತ್ತು ಕೆಲವು ಮುಖದ ಭಾಗಗಳು ಕಂಡುಬಂದಿವೆ. ಹೆಚ್ಚಿನ ತನಿಖೆಗಾಗಿ ಫೋರೆನ್ಸಿಕ್ ತಂಡವು ಮಾನವನ ಅವಶೇಷಗಳನ್ನು ವಶಕ್ಕೆ ತೆಗೆದುಕೊಂಡಿದೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
“ಆ ಅಂಗಡಿಯ ಮಾಲೀಕನ ಇಬ್ಬರು ಪುತ್ರರು ವೈದ್ಯರಾಗಿದ್ದಾರೆ. ಆದ್ದರಿಂದ ಈ ಭಾಗಗಳನ್ನು ವೈದ್ಯಕೀಯ ಉದ್ದೇಶಗಳಿಗಾಗಿ ಸಂರಕ್ಷಿಸಿಟ್ಟಿರುವ ಸಾಧ್ಯತೆಯಿದೆ. ಆದರೆ, ಎಲ್ಲಾ ಆಯಾಮಗಳಿಂದ ತನಿಖೆ ನಡೆಯುತ್ತಿದೆ. ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ” ಎಂದು ಮುಂಬೈ ನಾಕಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: Shocking News: ಮನುಷ್ಯನ ರಕ್ತದಲ್ಲಿ ಪ್ಲಾಸ್ಟಿಕ್!; ಅಧ್ಯಯನದಲ್ಲಿ ಮೊಟ್ಟ ಮೊದಲ ಬಾರಿಗೆ ಶಾಕಿಂಗ್ ವಿಚಾರ ಪತ್ತೆ
Shocking News: ಹೆಂಡತಿ ಮಟನ್ ಕರಿ ಮಾಡದಿದ್ದಕ್ಕೆ 6 ಬಾರಿ ಪೊಲೀಸರಿಗೆ ಫೋನ್ ಮಾಡಿ ಕಾಟ ಕೊಟ್ಟ ಗಂಡ!
Published On - 5:15 pm, Mon, 28 March 22