ಸ್ವೀಟ್ ತರುವಷ್ಟರಲ್ಲಿ ಮಕ್ಕಳೂ ಇಲ್ಲ, ಕಾರೂ ಇಲ್ಲ; ಯಾವ ಸಿನಿಮಾಗೂ ಕಡಿಮೆಯಿಲ್ಲ ಈ ಕತೆ!
ಸ್ವೀಟ್ ತರಲು ಹೋಗಿದ್ದ ವ್ಯಕ್ತಿಯೊಬ್ಬರು ಕಾರನ್ನು ಆನ್ ಮಾಡಿಟ್ಟು ಅದರಲ್ಲಿ ತಮ್ಮ ಇಬ್ಬರು ಮಕ್ಕಳನ್ನು ಬಿಟ್ಟು ಹೋಗಿದ್ದರು. ಆದರೆ, ಶಾಪಿಂಗ್ ಮುಗಿಸಿ ಪಾರ್ಕಿಂಗ್ ಏರಿಯಾಕ್ಕೆ ಬಂದಾಗ ಅವರ ಕಾರೂ ಇರಲಿಲ್ಲ, ಮಕ್ಕಳೂ ಇರಲಿಲ್ಲ. ಇದರಿಂದ ಗಾಬರಿಯಾದ ಆತ ಪೊಲೀಸರಿಗೆ ಮಾಹಿತಿ ನೀಡಿದರು. ಆಮೇಲಾಗಿದ್ದು ಸಿನಿಮೀಯ ಘಟನೆ.
ನವದೆಹಲಿ: ನೀವು ಕೂಡ ಮಕ್ಕಳನ್ನು ಕಾರಿನಲ್ಲೇ ಕೂರಿಸಿ ಕಾರು ಆನ್ ಮಾಡಿಟ್ಟು ಹೋಗುವ ಅಭ್ಯಾಸವಿಟ್ಟುಕೊಂಡಿದ್ದೀರಾ? ಹಾಗಾದರೆ ತಪ್ಪದೆ ಈ ಸುದ್ದಿಯನ್ನು ಓದಲೇಬೇಕು. ದೆಹಲಿಯಲ್ಲಿ ಹೊರಗೆ ಮಳೆಯಿದೆ ಎಂದು ತಮ್ಮ 2 ಮತ್ತು 11 ವರ್ಷದ ಮಕ್ಕಳನ್ನು ಕಾರಿನಲ್ಲೇ ಕೂರಿಸಿ, ಕಾರಿನ ಇಂಜಿನ್ ಆನ್ ಮಾಡಿಟ್ಟು ಸ್ವೀಟ್ ತರಲು ಹೋಗಿದ್ದ ತಂದೆ ವಾಪಾಸ್ ಬರುವಷ್ಟರಲ್ಲಿ ಕಾರೂ ಇರಲಿಲ್ಲ, ಮಕ್ಕಳೂ ಇರಲಿಲ್ಲ. ಮಕ್ಕಳಿಗೆ ಏನಾಯಿತೆಂದು ತಿಳಿಯದೆ ಕಂಗಾಲಾದ ಆ ತಂದೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಆ ವ್ಯಕ್ತಿ ಪಕ್ಕದಲ್ಲೇ ಇದ್ದ ಸ್ವೀಟ್ ಶಾಪ್ಗೆ ಸ್ವೀಟ್ ತರಲು ಹೋಗುತ್ತಿದ್ದಂತೆ ಆನ್ ಆಗಿಯೇ ಇದ್ದ ಕಾರಿನ ಬಾಗಿಲು ತೆರೆದು ಒಳಗೆ ಕುಳಿತ ಕಳ್ಳನೊಬ್ಬ ಆ ಕಾರನ್ನು ಚಲಾಯಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಆ ಕಾರಿನೊಳಗೆ ಇದ್ದ ಇಬ್ಬರು ಮಕ್ಕಳನ್ನು ನೋಡಿ ಆತನಿಗೆ ಮತ್ತೊಂದು ಐಡಿಯಾ ಬಂದಿದೆ. ಕಾರಿನ ಜೊತೆಗೆ ಹಣವೂ ಸಿಗುತ್ತದೆ ಎಂಬ ಆಸೆಯಲ್ಲಿ ಆತ ಆ ಮಕ್ಕಳ ಬಳಿ ಫೋನ್ ನಂಬರ್ ಪಡೆದು ಅವರ ಪೋಷಕರಿಗೆ ಫೋನ್ ಮಾಡಿ 50 ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದಾನೆ. ಹಣ ಕೊಡದಿದ್ದರೆ ಕಾರಿನೊಳಗೇ ಮಕ್ಕಳಿಬ್ಬರನ್ನೂ ಕೊಲ್ಲುವುದಾಗಿ ಹೆದರಿಸಿದ್ದಾನೆ.
ಇದನ್ನೂ ಓದಿ: Viral Video: ಕಳ್ಳನೊಬ್ಬ ಬುರ್ಖಾ ಧರಿಸಿ ಜ್ಯುವೆಲ್ಲರಿ ಶಾಪ್ನಲ್ಲಿ ದರೋಡೆಗೆ ಯತ್ನ; ಸಿಸಿಟಿವಿ ವಿಡಿಯೋ ವೈರಲ್
ಶುಕ್ರವಾರ ರಾತ್ರಿ 11.40ರ ಸುಮಾರಿಗೆ ಈ ಘಟನೆ ನಡೆದಿದೆ. ದೆಹಲಿಯ ಲಕ್ಷ್ಮೀ ನಗರದಲ್ಲಿ ಕಾರು ನಿಲ್ಲಿಸಿ ಸ್ವೀಟ್ ಶಾಪ್ನಿಂದ ಮಕ್ಕಳಿಗೆ ಸ್ವೀಟ್ ತರಲು ಹೋದ ತಂದೆಗೆ ವಾಪಾಸ್ ಬಂದಾಗ ಶಾಕ್ ಕಾದಿತ್ತು. ತಮ್ಮ ಇಬ್ಬರು ಮಕ್ಕಳನ್ನು ಕಾರಿನಲ್ಲಿಯೇ ಬಿಟ್ಟು ಎಂಜಿನ್ ಚಾಲನೆಯಲ್ಲಿರಿಸಿ, ಎಸಿ ಆನ್ ಮಾಡಿಟ್ಟು ಅವರು ಶಾಪ್ಗೆ ಹೋಗಿದ್ದರು. ಅವರು ಸ್ವೀಟ್ ತರುವಷ್ಟರಲ್ಲಿ ಸಿಕ್ಕ ಸಣ್ಣ ಗ್ಯಾಪ್ನಲ್ಲಿ ಕಳ್ಳನು ಕಾರಿನ ಬಾಗಿಲು ತೆರೆದು ಆ ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ಪರಾರಿಯಾಗಿದ್ದಾನೆ.
ಮಕ್ಕಳನ್ನು ವಾಪಾಸ್ ಕೊಡಲು 50 ಲಕ್ಷ ರೂ. ಹಣ ಡಿಮ್ಯಾಂಡ್ ಮಾಡಿದಾಗ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಕಾರನ್ನು ಬೆನ್ನಟ್ಟಲು ಆರಂಭಿಸಿದರು.
ಸುಮಾರು 20 ಪೊಲೀಸ್ ವಾಹನಗಳು ಸುಮಾರು 3 ಗಂಟೆಗಳ ಕಾಲ ವೇಗವಾಗಿ ಆ ಕಾರನ್ನು ಬೆನ್ನಟ್ಟಿದ ನಂತರ, ಆ ಕಳ್ಳ ಮಕ್ಕಳೊಂದಿಗೆ ಆ ಕಾರನ್ನು ಕೂಡ ಬಿಟ್ಟು ಪರಾರಿಯಾಗಿದ್ದಾನೆ. ಅದೃಷ್ಟವಶಾತ್, ಇಬ್ಬರೂ ಮಕ್ಕಳು ಸುರಕ್ಷಿತವಾಗಿ ತಮ್ಮ ಪೋಷಕರನ್ನು ಸೇರಿಕೊಂಡಿದ್ದಾರೆ.
ಇದನ್ನೂ ಓದಿ: Triple Murder: ಕಸದ ರಾಶಿಯಲ್ಲಿದ್ದ ಟಿಕೆಟ್ನಿಂದ ತ್ರಿವಳಿ ಕೊಲೆಯ ಸುಳಿವು; ಭೀಕರ ಹತ್ಯೆ ಹಿಂದೆ ಲವ್ ಸ್ಟೋರಿ
“ಆ ಕಳ್ಳ ನಿರಂತರವಾಗಿ ತಮ್ಮ ಮಾರ್ಗವನ್ನು ಬದಲಾಯಿಸುತ್ತಿದ್ದ. ಅವನು ಅಶೋಕ್ ನಗರ ಮತ್ತು ನಂತರ ಹೊರ ಉತ್ತರ ಜಿಲ್ಲೆಯ ಮೂಲಕ ವಜೀರಾಬಾದ್ ತಲುಪಿದ. ಪೊಲೀಸರು ತನ್ನನ್ನು ಬೆನ್ನಟ್ಟುತ್ತಿದ್ದಾರೆ ಎಂದು ಗೊತ್ತಾಗಿದ್ದರಿಂದ ಆತ ಮಾರ್ಗವನ್ನು ಬದಲಾಯಿಸುತ್ತಲೇ ಇದ್ದ” ಎಂದು ಪೂರ್ವ ಹೆಚ್ಚುವರಿ ಡಿಸಿಪಿ ಅವ್ನಿಶ್ ಕುಮಾರ್ ಹೇಳಿದ್ದಾರೆ. 3 ಗಂಟೆಗಳ ಸಿನಿಮೀಯ ರೀತಿಯ ಚೇಸಿಂಗ್ ನಂತರ ಮಕ್ಕಳನ್ನು ಕಾಪಾಡಲಾಗಿದೆ.
ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ಆರೋಪಿಯನ್ನು ಗುರುತಿಸಲು ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ. ನಾಪತ್ತೆಯಾಗಿರುವ ಆರೋಪಿಯನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:31 pm, Sat, 29 June 24