ಶಿವಮೊಗ್ಗ: ಮದ್ಯ ನೀಡಲು ನಿರಾಕರಿಸಿದ್ದಕ್ಕೆ ಬಾರ್ ಕ್ಯಾಶಿಯರ್ನ ಹತ್ಯೆ
ಮದ್ಯ ನೀಡಲು ನಿರಾಕರಿಸಿದ್ದಕ್ಕೆ ಬಾರ್ ಕ್ಯಾಶಿಯರ್ನನ್ನು ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ತಾಲೂಕಿನ ಆಯನೂರಿನಲ್ಲಿ ನಡೆದಿದೆ.
ಶಿವಮೊಗ್ಗ: ಮದ್ಯ (Alcohol) ನೀಡಲು ನಿರಾಕರಿಸಿದ್ದಕ್ಕೆ ಬಾರ್ (Bar) ಕ್ಯಾಶಿಯರ್ನನ್ನು ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ (Shivamogga) ತಾಲೂಕಿನ ಆಯನೂರಿನಲ್ಲಿ ನಡೆದಿದೆ. ಸಚಿನ್(27) ಮೃತ ಬಾರ್ ಕ್ಯಾಶಿಯರ್. ಮೂವರು ದುಷ್ಕರ್ಮಿಗಳು ಸಚಿತ್ನನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆ (ಜೂ.05) ಬಾರ್ಗೆ ಗಾಂಜಾ ಅಮಲಿನಲ್ಲಿ ಬಂದ ಮೂವರು ಮದ್ಯ ಕೇಳಿದ್ದಾರೆ. ಅದಕ್ಕೆ ಕ್ಯಾಶಿಯರ್ ಸಚಿನ್ ಸಮಯ ಮುಗದಿದೆ ಮದ್ಯ ನೀಡಲು ಆಗುವುದಿಲ್ಲ ಎಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮೂವರು ಗಲಾಟೆ ಮಾಡಿದ್ದಾರೆ. ನಂತರ ಡ್ರ್ಯಾಗನ್ನಿಂದ ದುಷ್ಕರ್ಮಿಗಳು ಕ್ಯಾಶಿಯರ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಅಲ್ಲದೇ ಆರೋಪಿಗಳು ಬಾರ್ ಸನಿಹ ಗಸ್ತಿಗೆ ನೀಯೋಜಿಸಿದ್ದ ಪೊಲೀಸರ ಮೇಲೂ ಹಲ್ಲೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಇದರಿಂದ ಗಂಭೀರಗೊಂಡ ಕ್ಯಾಶಿಯರ್ ಸಚಿನ್ನನ್ನು ಸ್ಥಳೀಯರು ಕೂಡಲೇ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಚಿನ್ ಸಾವನ್ನಪ್ಪಿದ್ದಾರೆ. ಕುಂಸಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಟ್ಟಿಗೆ ವಿಚಾರಕ್ಕೆ ರೈತನ ಮೇಲೆ ಹಲ್ಲೆ
ಚಿತ್ರದುರ್ಗ: ಜಮೀನಿನಲ್ಲಿದ್ದ ಕಟ್ಟಿಗೆಯನ್ನು ಕಳವು ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ರೈತನ ಮೇಲೆ ಹಲ್ಲೆ ಮಾಡಿರುವ ಘಟನೆ ಚಳ್ಳಕೆರೆ ತಾಲೂಕಿನ ಕರಿಕೆರೆ ಗ್ರಾಮದಲ್ಲಿ ನಡೆದಿದೆ. ಸುರೇಂದ್ರ ಹಲ್ಲೆಗೊಳಗಾದ ರೈತ. ತಿಪ್ಪೇಸ್ವಾಮಿ ಮತ್ತು ಇತರರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಸ್ನೇಹಿತರ ಜೊತೆಗೆ ಪಾರ್ಟಿಗೆ ತೆರಳಿದ್ದ ಯುವಕ ಅನುಮಾನಾಸ್ಪದವಾಗಿ ಸಾವು
ಇನ್ನು ರೈತ ಸುರೇಂದ್ರ ಅವರು ಆಸ್ಪತ್ರೆಗೆ ದಾಖಲಾದರೂ ಆರೋಪಿಗಳು ಬಿಡದೆ ಬೆನ್ನಟ್ಟಿ ಬಂದು ಹಲ್ಲೆ ಮಾಡಿದ್ದಾರೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಿನ್ನೆ (ಜೂ.04) ಸಂಜೆ ಪ್ರಕರಣ ನಡೆದರೂ, ಗಾಯಾಳು ಸುರೇಂದ್ರ ಈವರೆಗೆ ದೂರು ದಾಖಲಿಸಿಲ್ಲ.
ಅನೈತಿಕ ಸಂಬಂಧ ಶಂಕಿಸಿ ಪತ್ನಿಯನ್ನು ಭೀಕರವಾಗಿ ಕೊಚ್ಚಿ ಕೊಂದ ಪತಿ
ಬೆಂಗಳೂರು: ಅನುಮಾನಂ ಪೆದ್ದ ರೋಗಂ ಎಂಬ ಮಾತಿನಂತೆ ಒಮ್ಮೆ ಮನುಷ್ಯನಲ್ಲಿ ಅನುಮಾನ ಹುಟ್ಟಿಕೊಂಡರೆ ಅದು ಜೀವನವನ್ನು ನಾಶ ಮಾಡದೆ ಬಿಡದು. ಅದರಂತೆ ಅನೈತಿಕ ಸಂಬಂಧ ಆರೋಪ ಹಿನ್ನೆಲೆ ಪತಿಯಿಂದಲೇ ಪತ್ನಿಯ ಹತ್ಯೆ ನಡೆದಿರುವ ಭಯಾನಕ ಘಟನೆ ಬೆಂಗಳೂರಿನ ಬಸವೇಶ್ವರ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ(Husband killed his wife). ಚಾಕುವಿನಿಂದ ಇರಿದು ಪತಿ ಅಯ್ಯಪ್ಪ ತನ್ನ ಪತ್ನಿ ನಾಗರತ್ನ(32) ಹತ್ಯೆಗೈದಿದ್ದಾರೆ. ಚಾಕುವಿನಿಂದ ಮನಸೋ ಇಚ್ಚೆ ಹಲ್ಲೆ ನಡೆಸಿ, ಮಹಿಳೆಯ ಗುಪ್ತಾಂಗಕ್ಕೂ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ.
ಅಪ್ಪ-ಅಮ್ಮ ಇಲ್ಲದೆ ಅನಾಥಾಶ್ರಮದಲ್ಲಿ ಬೆಳೆದ ನಾಗರತ್ನಳನ್ನು 12 ವರ್ಷಗಳ ಹಿಂದೆ ಅಯ್ಯಪ್ಪ ಮದುವೆಯಾಗಿದ್ದ. ದಂಪತಿಗೆ 11 ವರ್ಷದ ಮಗ ಹಾಗೂ 7 ವರ್ಷದ ಮಗಳು ಇದ್ದಾಳೆ. ಅಯ್ಯಪ್ಪ ತನ್ನ ಅಕ್ಕನ ಮನೆಯಲ್ಲಿ ಮಕ್ಕಳನ್ನು ಬಿಟ್ಟಿದ್ದ. ಇತ್ತೀಚೆಗೆ ಹೆಂಡತಿ ಮೇಲೆ ಅನುಮಾನ ಪಡುತ್ತಾ ಇದ್ದ. ಈ ವಿಚಾರಕ್ಕೆ ಮೂರು ದಿನಗಳಿಂದ ದಂಪತಿ ಮಧ್ಯೆ ಗಲಾಟೆ ನಡೀತಾ ಇತ್ತು. ಸದ್ಯ ಪತ್ನಿ ನಾಗರತ್ನ ಕೊಲೆಗೈದ ಪತಿ ಅಯ್ಯಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಬಸವೇಶ್ವರ ನಗರ ಪೊಲೀಸರು ಘಟನಾ ಸ್ಥಳದ ಪರಿಶೀಲನೆ ನಡೆಸಿದ್ದಾರೆ.
ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ