ವಿಡಿಯೋ ಮುಂದಿಟ್ಟು ಕಾಂಗ್ರೆಸ್ ನಾಯಕನಿಗೆ ಬ್ಲ್ಯಾಕ್‌ಮೇಲ್: ಲೇಡಿ ಫೋನ್​ನಲ್ಲಿ 8 ಜನರ ವಿಡಿಯೋಗಳು ಪತ್ತೆ

ಸಲುಗೆ ಮಾತುಕತೆಯ ಆಡಿಯೋ-ವಿಡಿಯೋ ಬಿಡುಗಡೆ ಮಾಡದಿರಲು 20 ಲಕ್ಷ ರು. ಹಣ ನೀಡುವಂತೆ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾ‌ರ್ ಅವರಿಗೆ ಬ್ಲ್ಯಾಕ್‌ಮೇಲ್ ಮಾಡಿದ ಘಟನೆ ನಡೆದಿದೆ. ಈ ಪ್ರಕರಣ ಸಂಬಂಧ ಕಲಬುರಗಿ ಜಿಲ್ಲೆಯ ಮಹಮ್ಮದ್ ನಲಪಾಡ್ ಬ್ರಿಗೇಡ್ ಅಧ್ಯಕ್ಷೆ ಹಾಗೂ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಹನಿಟ್ರ್ಯಾಪ್​ ಲೇಡಿ ಮೊಬೈಲ್​ನಲ್ಲಿ ಎಂಟು ಜನರ ವಿಡಿಯೋಗಳ ಇರುವುದು ಪತ್ತೆಯಾಗಿದೆ.

ವಿಡಿಯೋ ಮುಂದಿಟ್ಟು ಕಾಂಗ್ರೆಸ್ ನಾಯಕನಿಗೆ ಬ್ಲ್ಯಾಕ್‌ಮೇಲ್: ಲೇಡಿ ಫೋನ್​ನಲ್ಲಿ 8 ಜನರ ವಿಡಿಯೋಗಳು ಪತ್ತೆ
ಮಾಲೀಕಯ್ಯ ಗುತ್ತೆದಾರ, ಮಂಜುಳಾ ಪಾಟೀಲ್
Follow us
| Updated By: ರಮೇಶ್ ಬಿ. ಜವಳಗೇರಾ

Updated on:Oct 27, 2024 | 10:57 AM

ಬೆಂಗಳೂರು(ಅ.27): ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್​ ಅವರಿಗೆ ವಾಟ್ಸಪ್​ ಮೂಲಕ ವಿಡಿಯೊ ಕರೆಗಳನ್ನು ಮಾಡಿ ಬಳಿಕ ಅವುಗಳನ್ನು ರೆಕಾರ್ಡ್‌ ಮಾಡಿಕೊಂಡು ಬಳಿಕ ಹಣಕ್ಕೆ ಬ್ಲ್ಯಾಕ್​ ಮೇಲ್ ಮಾಡುತ್ತಿದ್ದ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆಡಿಯೋ-ವಿಡಿಯೋ ಬಿಡುಗಡೆ ಮಾಡದಿರಲು 20 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ನಲಪಾಡ್ ಬ್ರಿಗೇಡ್‌ನ ಕಲಬುರಗಿ ಘಟಕದ ಅಧ್ಯಕ್ಷೆ ಹಾಗೂ ಆಕೆಯ ಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಜುಳಾ ಪಾಟೀಲ ಹಾಗೂ ಆಕೆಯ ಪತಿ ಶಿವರಾಜ್‌ ಪಾಟೀಲ ಬಂಧಿತರು. ಆರೋಪಿಗಳು ಕಲಬುರಗಿಯ ಆಳಂದ ರಸ್ತೆಯ ವಿಜಯನಗರ ಕಾಲೊನಿ ನಿವಾಸಿಗಳು. ಮಂಜುಳಾ ಪಾಟೀಲ್ ಖೆಡ್ಡಾಗೆ ಮಾಜಿ ಸಚಿವರು ಮಾತ್ರ ಅಲ್ಲ, ಇನ್ನು ಹಲವರನ್ನ ಖೆಡ್ಡಾಗೆ ಕೇಡುವಿದ ಮಾಹಿತಿ ಆಕೆಯ ಮೊಬೈಲ್​ನಲ್ಲಿ ಪತ್ತೆಯಾಗಿದೆ.

ವಿಡಿಯೋ ಮುಂದಿಟ್ಟು ಬ್ಲ್ಯಾಕ್ ಮೇಲ್

ಹಲವು ವರ್ಷಗಳಿಂದ ಕಾಂಗ್ರೆಸ್​ನಲ್ಲಿ ಸಕ್ರಿಯವಾಗಿದ್ದ ಮಂಜುಳಾ, ಜಿಲ್ಲೆಯ ಮಹಮ್ಮದ್ ನಲಪಾಡ್ ಬ್ರಿಗೇಡ್ ಅಧ್ಯಕ್ಷೆಯಾಗಿದ್ದಳು. ಪಕ್ಷದಲ್ಲಿದ್ದ ಕಾರಣ ಮಾಲೀಕಯ್ಯಗೆ ಆಕೆಯ ಪರಿಚಯವಾಗಿತ್ತು. ಬಳಿಕ ಇಬ್ಬರೂ ನಿತ್ಯ ಮೊಬೈಲ್‌ನಲ್ಲಿ ಸಲುಗೆಯಲ್ಲಿ ಮಾತನಾಡುತ್ತಿದ್ದರು. ಈ ನಡುವೆ ವಿಡಿಯೋ ಕಾಲ್‌ಗಳನ್ನು ರೆಕಾರ್ಡ್ ಮಾಡಿಕೊಂಡಿದ್ದ ಆಕೆ, ಬಳಿಕ ಇವುಗಳನ್ನು ಮುಂದಿಟ್ಟು ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡಲಾರಂಭಿಸಿದ್ದಳು. 2 ದಿನ ಹಿಂದೆ ಬೆಂಗಳೂರಿನಲ್ಲಿ ನೆಲೆಸಿರುವ ಮಾಲೀಕಯ್ಯ ಪುತ್ರ ರಿತೀಶ್ ಭೇಟಿಯಾಗಿ ಡೀಲ್ ನಡೆಸಲು ಮಂಜುಳಾ ದಂಪತಿ ಮುಂದಾಗಿದ್ದರು. ಬಳಿಕ ಈ ಬಗ್ಗೆ ರಿತೇಶ್ ನೀಡಿದ್ದ ದೂರಿನ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಮತ್ತೊಂದು ಹನಿಟ್ರ್ಯಾಪ್​ ಪ್ರಕರಣ ಬೆಳಕಿಗೆ: ಉದ್ಯಮಿಗಳೇ ಇವರ ಟಾರ್ಗೆಟ್​

ಪ್ರಕರಣದ ಸಂಬಂಧ ಮಾಲೀಕಯ್ಯ ಗುತ್ತೇದಾರ್ ಅವರ ಪುತ್ರ ರಿತೇಶ್ ಗುತ್ತೇದಾರ್‌ ಅವರು ಶುಕ್ರವಾರ ದೂರು ನೀಡಿದ್ದರು. ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಶನಿವಾರವೇ ಬೆಂಗಳೂರಿನ ಗರುಡಾ ಮಾಲ್‌ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನ್ಯಾಯಾಲಯವು ಆರೋಪಿಗಳನ್ನು ಎಂಟು ದಿನ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿದೆ. ಆರೋಪಿಗಳನ್ನು ವಿಚಾರಣೆ ನಡೆಸಿ ಇನ್ನಷ್ಟು ಮಾಹಿತಿ ಕಲೆ ಹಾಕಲಾಗುವುದು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್ 21ರಂದು ರಿತೇಶ್ ಅವರಿಗೆ ಕರೆ ಮಾಡಿದ್ದ ಆರೋಪಿ ಮಂಜುಳಾ, ತಾನು ನಲಪಾಡ್‌ ಬ್ರಿಗೇಡ್‌ ಅಧ್ಯಕ್ಷೆ ಎಂದು ಪರಿಚಯಿಸಿಕೊಂಡಿದ್ದರು. ಮಾಲೀಕಯ್ಯ ಗುತ್ತೇದಾರ್ ಅವರು ತನಗೆ ನಿಂದನೆಯ ಸಂದೇಶ ಕಳುಹಿಸುತ್ತಿದ್ದಾರೆ. ಈ ಸಂಬಂಧ ತಮ್ಮೊಂದಿಗೆ ಚರ್ಚಿಸಬೇಕೆಂದು ಕೇಳಿಕೊಂಡಿದ್ದರು. ನಂತರ, ಕೊಡಿಗೇಹಳ್ಳಿಯ ಸ್ವಾತಿ ಗಾರ್ಡೆನಿಯಾ ಹೋಟೆಲ್‌ನಲ್ಲಿ ರಿತೇಶ್ ಅವರನ್ನು ಆರೋಪಿಗಳು ಭೇಟಿ ಮಾಡಿದ್ದರು ಎಂದು ಪೊಲೀಸರು ಹೇಳಿದರು.

ಹಣಕ್ಕೆ ಬೇಡಿಕೆ: ಮಾಲೀಕಯ್ಯ ಅವರ ವಿರುದ್ಧ ಪೊಲೀಸರಿಗೆ ಯಾವುದೇ ದೂರು ನೀಡದಿರಲು ಹಾಗೂ ಮಾಧ್ಯಮಗಳಿಗೆ ಮಾಹಿತಿ ನೀಡದಿರಲು 20 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅಕ್ಟೋಬರ್ 23 ಹಾಗೂ 24ರಂದು ಪದೇ ಪದೇ ವಾಟ್ಸಪ್ ಕರೆ ಮಾಡಿ ಹಣ ನೀಡಿದರೆ ನಿಂದನೆ ಸಂದೇಶಗಳನ್ನು ಡಿಲಿಟ್ ಮಾಡುತ್ತೇವೆ. ಇಲ್ಲದಿದ್ದರೆ ಬಹಿರಂಗ ಪಡಿಸುವುದಾಗಿ ಆರೋಪಿಗಳು ಬೇಡಿಕೆ ಇಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಂಜುಳಾ ಪಾಟೀಲ್ ಫೋನ್​ಗಳಲ್ಲಿ 8 ಜನರ ವಿಡಿಯೋ ಪತ್ತೆ

ಹನಿಟ್ರ್ಯಾಪ್​ ಮಾಡಲು ಹೋಗಿ ಸಿಸಿಬಿ ಬಲೆಗೆ ಬಿದ್ದಿರುವ ಮಂಜುಳಾ ಪಾಟೀಲ್ ಬ್ಯಾಗ್ ನಲ್ಲಿ 6 ಸ್ಮಾರ್ಟ್ ಪೋನ್ ಪತ್ತೆ‌ಯಾಗಿವೆ. ಈ ಆರು ಫೋನ್​ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ಪರಿಶೀಲನೆ ಮಾಡಿದಾಗ ಬರೋಬ್ಬರಿ ಎಂಟು ಜನರ ಖಾಸಗಿ ವಿಡಿಯೋಗಳು ಪತ್ತೆಯಾಗಿವೆ. ಮೊಬೈಲ್ ನಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ, ಪೊಲೀಸ್ ಅಧಿಕಾರಿ , ಪಿಡಬ್ಲೂಡಿ ಅಧಿಕಾರಿ ಸೇರಿ ಎಂಟು ಜನರ ವಿಡಿಯೋಗಳು ಪತ್ತೆಯಾಗಿದ್ದು, ಈ ಬಗ್ಗೆ ಸಿಸಿಬಿ ಪೊಲೀಸರು ಒಂದೊಂದಾಗಿ ಪರಿಶೀಲನೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:47 am, Sun, 27 October 24