CBSE 12th Result 2022: ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಪ್ರಕಟ
ಸಿಬಿಎಸ್ಇ ಶುಕ್ರವಾರ 12ನೇ ತರಗತಿ ಫಲಿತಾಂಶ ಪ್ರಕಟಿಸಿದೆ. cbseresults.nic.in ಮತ್ತು results.cbse.nic.in ವೆಬ್ಸೈಟ್ನಲ್ಲಿ ಫಲಿತಾಂಶ ಲಭ್ಯವಾಗಲಿವೆ.
ದೆಹಲಿ: ಸಿಬಿಎಸ್ಇ (Central Board of Secondary Education – CBSE) ಶುಕ್ರವಾರ 12ನೇ ತರಗತಿ ಫಲಿತಾಂಶ ಪ್ರಕಟಿಸಿದೆ. ಫಲಿತಾಂಶದ ವಿವರಗಳು ಶೀಘ್ರದಲ್ಲಿಯೇ cbseresults.nic.in ಮತ್ತು results.cbse.nic.in ವೆಬ್ಸೈಟ್ನಲ್ಲಿ ಲಭ್ಯವಾಗಲಿವೆ. ಫಲಿತಾಂಶದ ವಿವರಗಳನ್ನು ವಿದ್ಯಾರ್ಥಿಗಳು ಮಂಡಳಿಯ ವೆಬ್ಸೈಟ್ಗಳಿಂದ ನೇರವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ರೋಲ್ ನಂಬರ್, ಜನ್ಮದಿನಾಂಕ ಮತ್ತು ಶಾಲೆಯ ಕೋಡ್ಗಳನ್ನು ಇದಕ್ಕಾಗಿ ನಮೂದಿಸಬೇಕಾಗುತ್ತದೆ.
ಸಿಬಿಎಸ್ಇ ಮಂಡಳಿಯ ಅಧಿಕೃತ ವೆಬ್ಸೈಟ್ಗಳ ಜೊತೆಗೆ results.gov.in ಮತ್ತು digilocker.gov.in ಜಾಲತಾಣಗಳಲ್ಲಿಯೂ ಫಲಿತಾಂಶ ಲಭ್ಯವಿರಲಿದೆ. 12ನೇ ತರಗತಿಯಲ್ಲಿ ಶೇ 33ರ ಅಂಕ ಪಡೆದ ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಾರೆ. ಥಿಯರಿ ಮತ್ತು ಪ್ರಾಕ್ಟಿಕಲ್ಸ್ಗೆ ಇದು ಅನ್ವಯವಾಗುತ್ತದೆ.
ಪ್ರಸಕ್ತ ಸಾಲಿನಲ್ಲಿ ಒಟ್ಟು 14,44,341 ಮಂದಿ ಪರೀಕ್ಷೆಗಾಗಿ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 14,35,366 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. 13,30,662 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ತೇರ್ಗಡೆಯ ಸರಾಸರಿ ಶೇ 92.71 ಇದೆ. ತಿರುವನಂತಪುರ ವಲಯವು ಶೇ 98.83ರ ಫಲಿತಾಂಶದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಪ್ರಯಾಗ್ರಾಜ್ ವಲಯವು ಶೇ 83.71ರ ಫಲಿತಾಂಶದೊಂದಿಗೆ ಕೊನೆಯ ಸ್ಥಾನ ಪಡೆದಿದೆ.
ವಲಯವಾರು ಫಲಿತಾಂಶ ಹೀಗಿದೆ
ತಿರುವನಂತಪುರ: ಶೇ 98.83, ಬೆಂಗಳೂರು ಶೇ 98.16, ಚೆನ್ನೈ ಶೇ 97.79, ದೆಹಲಿ ಪೂರ್ವ ಶೇ 96.29, ದೆಹಲಿ ಪಶ್ಚಿಮ ಶೇ 96.29, ಅಜ್ಮೇರ್ ಶೇ 96.01, ಚಂಡೀಗಡ ಶೇ 95.74, ಪಂಚಕುಲ ಶೇ 94.48, ಭುವನೇಶ್ವರ ಶೇ 90.37, ನೊಯ್ಡಾ ಶೇ 90.27, ಡೆಹ್ರಾಡೂನ್ ಶೇ 85.39, ಪ್ರಯಾಗ್ರಾಜ್ ಶೇ 83.71.
ಬಾಲಕಿಯರ ಮೇಲುಗೈ
ಪ್ರತಿವರ್ಷದಂತೆ ಈ ವರ್ಷವೂ ತೇರ್ಗಡೆ ಸರಾಸರಿಯಲ್ಲಿ ಬಾಲಕಿಯರದ್ದೇ ಮೇಲುಗೈ. ಬಾಲಕಿಯರು ಶೇ 94.54ರಷ್ಟು ಹಾಗೂ ಬಾಲಕರು ಶೇ 91.25ರ ಸರಾಸರಿಯಲ್ಲಿ ತೇರ್ಗಡೆಯಾಗಿದ್ದಾರೆ. ಕಳೆದ ವರ್ಷದಂತೆ ಈ ವರ್ಷವೂ ಮೆರಿಟ್ ಲಿಸ್ಟ್ ಅನ್ನು ಸಿಬಿಎಸ್ಇ ಒದಗಿಸುತ್ತಿಲ್ಲ. ವಿವಿಧ ವಿಷಯಗಳಲ್ಲಿ ಹೆಚ್ಚು ಅಂಕ ಪಡೆದವರಿಗೆ ಸರ್ಟಿಫಿಕೇಟ್ಗಳನ್ನು ಕೊಡುತ್ತಿದೆ.
10ನೇ ತರಗತಿ ಫಲಿತಾಂಶ
10ನೇ ತರಗತಿ ಫಲಿತಾಂಶವನ್ನು ಎಂದು ಪ್ರಕಟಿಸಲಾಗುವುದು ಎನ್ನುವ ಬಗ್ಗೆ ಸಿಬಿಎಸ್ಇ ಯಾವುದೇ ಮಾಹಿತಿ ನೀಡಿಲ್ಲ. ವಿದ್ಯಾರ್ಥಿಗಳು ಸಿಬಿಎಸ್ಇ ವೆಬ್ಸೈಟ್ ನಿಯಮಿತವಾಗಿ ಪರಿಶೀಲಿಸಬೇಕು ಎಂದಷ್ಟೇ ಮಂಡಳಿಯು ತಿಳಿಸಿದೆ.
Published On - 10:07 am, Fri, 22 July 22