ಸಿಬಿಎಸ್ಇ 12ನೇ ತರಗತಿ ಫಲಿತಾಂಶವು 30:30:40 ಮಾದರಿಯಲ್ಲಿರಲಿದೆ; ಸುಪ್ರೀಂಗೆ ಮಾಹಿತಿ ನೀಡಿರುವ ಬೋರ್ಡ್
CBSE Class 12 Exam: 10 ಮತ್ತು 11ನೇ ತರಗತಿಯಿಂದ ಪರಿಗಣಿಸಲ್ಪಡುವ ಶೇ.60ರಷ್ಟು ಅಂಕಗಳಲ್ಲಿ ಶೇ.30ರಷ್ಟು ಅಂಕ 11ನೇ ತರಗತಿಯ ಅಂತಿಮ ಪರೀಕ್ಷೆಯದ್ದಾಗಿರಲಿದ್ದು, ಇನ್ನುಳಿದ ಶೇ.30ರಷ್ಟು ಅಂಕ 10ನೇ ತರಗತಿಗಳಲ್ಲಿ ನಡೆಸಲಾದ ಪರೀಕ್ಷೆಗಳಿಂದ ಬೆಸ್ಟ್ ಆಫ್ ತ್ರೀ ಮಾದರಿಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಬೋರ್ಡ್ ಅಭಿಪ್ರಾಯ ವ್ಯಕ್ತಪಡಿಸಿದೆ.
ದೆಹಲಿ: ಸಿಬಿಎಸ್ಇ 12ನೇ ತರಗತಿಯ ಫಲಿತಾಂಶ ಜುಲೈ 31ರ ಹಾಗೆ ಪ್ರಕಟವಾಗುವ ಸಾಧ್ಯತೆ ಇದೆ. ಇದಕ್ಕೂ ಮೊದಲು ಫಲಿತಾಂಶಕ್ಕೆ ಸಂಬಂಧಿಸಿದಂತೆ ಅಂಕ ಪರಿಗಣನೆಯ ಮಾನದಂಡದ ಕುರಿತು ಸುಪ್ರೀಂಕೋರ್ಟ್ಗೆ ಮಾಹಿತಿ ನೀಡುತ್ತಿರುವ ಸಿಬಿಎಸ್ಇ ಬೋರ್ಡ್, 12ನೇ ತರಗತಿ ಮಕ್ಕಳ ಅಂಕವನ್ನು 11ನೇ ತರಗತಿ ಮತ್ತು 10ನೇ ತರಗತಿ ಪರೀಕ್ಷಾ ಫಲಿತಾಂಶದ ಸಹಾಯದೊಂದಿಗೆ ನಿರ್ಧರಿಸುವುದಾಗಿ ತಿಳಿಸಿದೆ. ಅಲ್ಲದೇ, ಒಟ್ಟಾರೆ ಫಲಿತಾಂಶಕ್ಕೆ 12ನೇ ತರಗತಿ ಮಕ್ಕಳ ಈ ಹಿಂದಿನ ಪೂರ್ವ ಸಿದ್ಧತಾ ಪರೀಕ್ಷೆಗಳ ಅಂಕವೂ ಪರಿಗಣಿಸಲ್ಪಡುತ್ತದೆ ಎಂದು ಮಾಹಿತಿ ನೀಡಿದೆ.
ಈ ಪೈಕಿ ಶೇ.40ರಷ್ಟು ಅಂಕವು 12ನೇ ತರಗತಿಯಲ್ಲಿ ನಡೆಸಲಾದ ಬೇರೆ ಪರೀಕ್ಷೆಗಳ ಆಧಾರದಿಂದ ಪರಿಗಣಿಸಲ್ಪಟ್ಟರೆ ಶೇ.60ರಷ್ಟು ಅಂಕವು 11 ಹಾಗೂ 10ನೇ ತರಗತಿಯ ಪರೀಕ್ಷೆಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸುಪ್ರೀಂಕೋರ್ಟ್ಗೆ ತಿಳಿಸಲಾಗಿದೆ. ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ಹಾಗೂ ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ಪೀಠವು ಬೋರ್ಡ್ನ ಅಭಿಪ್ರಾಯವನ್ನು ಇಂದು (ಜೂನ್ 17) ಆಲಿಸುತ್ತಿದ್ದು, ಶೀಘ್ರದಲ್ಲಿ ಸ್ಪಷ್ಟ ಚಿತ್ರಣ ದೊರಕಲಿದೆ.
ಈ ಮಾನದಂಡದ ಆಧಾರದಲ್ಲಿ ಫಲಿತಾಂಶ ನೀಡುವ ಬಗ್ಗೆ 13 ಸದಸ್ಯರ ಸಮಿತಿ ಸಿಬಿಎಸ್ಇಗೆ ಶಿಫಾರಸು ಮಾಡಿದ್ದು, ಇಂದು ಈ ಬಗ್ಗೆ ಸುಪ್ರೀಂಕೋರ್ಟ್ಗೆ ಸಿಬಿಎಸ್ಇ ತನ್ನ ತೀರ್ಮಾನ ತಿಳಿಸುತ್ತಿದೆ. ಸದ್ಯ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ಆರಂಭವಾಗಿದ್ದು, ಸಿಬಿಎಸ್ಇ ಪರ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ವಾದ ಮಂಡಿಸುತ್ತಿದ್ದಾರೆ. 1929 ರಿಂದ ಸಿಬಿಎಸ್ಇ ಆಸ್ತಿತ್ವದಲ್ಲಿದೆ, ಈ ರೀತಿಯ ಪರಿಸ್ಥಿತಿ ಹಿಂದೆಂದೂ ಬಂದಿರಲಿಲ್ಲ ಎಂದು ತಿಳಿಸಿದ್ದಾರೆ.
ಸಿಬಿಎಸ್ಇ, ಐಸಿಎಸ್ಇ ಫಲಿತಾಂಶದ ಮಾನದಂಡದ ವಿವರ ನೀಡಿದ್ದಾರೆ. ಅದನ್ನು ಈಗ ಸಿಬಿಎಸ್ಇ ಪರ ವಕೀಲರು ವಿವರಿಸಲಿ ಎಂದು ಸುಪ್ರೀಂಕೋರ್ಟ್ ಅಪೇಕ್ಷಿಸಿದ್ದು, ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ಹಾಗೂ ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸುತ್ತಿದೆ.
30:30:40 ರ ಅನುಪಾತದಲ್ಲಿ ಅಂಕ ನೀಡಿ 12 ನೇ ತರಗತಿಯ ಫಲಿತಾಂಶ ಪ್ರಕಟ 10 ಮತ್ತು 11ನೇ ತರಗತಿಯಿಂದ ಪರಿಗಣಿಸಲ್ಪಡುವ ಶೇ.60ರಷ್ಟು ಅಂಕಗಳಲ್ಲಿ ಶೇ.30ರಷ್ಟು ಅಂಕ 11ನೇ ತರಗತಿಯ ಅಂತಿಮ ಪರೀಕ್ಷೆಯದ್ದಾಗಿರಲಿದ್ದು, ಇನ್ನುಳಿದ ಶೇ.30ರಷ್ಟು ಅಂಕ 10ನೇ ತರಗತಿಗಳಲ್ಲಿ ನಡೆಸಲಾದ ಪರೀಕ್ಷೆಗಳಿಂದ ಬೆಸ್ಟ್ ಆಫ್ ತ್ರೀ ಮಾದರಿಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಬೋರ್ಡ್ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಮಾದರಿಯನ್ನು ಅನುಸರಿಸಿದ ನಂತರವೂ ಯಾರೂ ಉತ್ತೀರ್ಣರಾಗುವ ಹಂತ ತಲುಪುವುದಿಲ್ಲವೋ ಅವರಿಗೆ ಮತ್ತೊಂದು ಅವಕಾಶ ನೀಡಲಾಗುವುದು. ಜತೆಗೆ, ಫಲಿತಾಂಶದ ಬಗ್ಗೆ ಅಸಮಾಧಾನ ಹೊಂದಿರುವ ವಿದ್ಯಾರ್ಥಿಗಳು ಕೂಡಾ ಪರಿಸ್ಥಿತಿ ತಿಳಿಯಾದ ನಂತರ ಪರೀಕ್ಷೆ ಬರೆಯಲು ಅವಕಾಶ ಪಡೆಯವಬಹುದು ಎಂದು ಹೇಳಲಾಗಿದೆ.
ಕೊರೊನಾ ಕಾರಣದಿಂದ ಈ ಬಾರಿ 12ನೇ ತರಗತಿ ಪರೀಕ್ಷೆ ರದ್ದಾದ ನಂತರ ಫಲಿತಾಂಶ ಪ್ರಕಟಣೆ ಬಗ್ಗೆ ಬೋರ್ಡ್ ಸಾಕಷ್ಟು ಚಿಂತೆ ಮಾಡಿತ್ತು. ಪರೀಕ್ಷೆ ನಡೆಸದಿದ್ದರೂ ವಿದ್ಯಾರ್ಥಿಗಳಿಗೆ ಸೂಕ್ತ ನ್ಯಾಯ ದೊರಕಿಸಿಕೊಡಬಲ್ಲ ಫಲಿತಾಂಶ ನೀಡಲಿದ್ದೇವೆ. ಯಾವುದೇ ಗೊಂದಲಗಳಿಗೆ ಆಸ್ಪದ ನೀಡದ ರೀತಿಯಲ್ಲಿ ಪಾರದರ್ಶಕವಾಗಿ ಅಂಕ ನೀಡುವುದಾಗಿ ಭರವಸೆ ನೀಡಿತ್ತು.
ಇದನ್ನೂ ಓದಿ: CBSE 12th Board Exam 2021: 12 ನೇ ತರಗತಿಯ ಸಿಬಿಎಸ್‌ಇ, ಸಿಐಎಸ್‌ಸಿಇ ಪರೀಕ್ಷೆ ರದ್ದು: ಪ್ರಧಾನಿ ಮೋದಿ
Published On - 12:48 pm, Thu, 17 June 21