ಪಿಯುಸಿ ಹಾಗೂ ಸಿಇಟಿ ವಿದ್ಯಾರ್ಥಿಗಳಿಗೆ ಕೆಇಎ ಬಿಗ್ ರಿಲೀಫ್: ಇನ್ಮುಂದೆ ‘ಒಂದು ಅರ್ಜಿ, ಎರಡು ಪರೀಕ್ಷೆ’; ಸಾಲು ಸಾಲು ಎಡವಟ್ಟುಗಳಿಗೆ ಬ್ರೇಕ್

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ದ್ವಿತೀಯ ಪಿಯುಸಿ ಮತ್ತು UG-CET ಗೆ 'ಒಂದೇ ಅರ್ಜಿ' ಸಲ್ಲಿಸುವ ಹೊಸ ನಿಯಮ ಜಾರಿಗೊಳಿಸಿದೆ. ಇದರಿಂದ ವಿದ್ಯಾರ್ಥಿಗಳ ಸರ್ವರ್ ಸಮಸ್ಯೆ, ತಪ್ಪು ಮಾಹಿತಿ ಸಲ್ಲಿಕೆ ಹಾಗೂ ಮಾನಸಿಕ ಒತ್ತಡ ನಿವಾರಣೆಯಾಗಲಿದೆ. ಪಿಯುಸಿ ಪ್ರವೇಶ ಪಡೆಯುವಾಗಲೇ CET ಆಯ್ಕೆ ನಮೂದಿಸಿ, ಶುಲ್ಕ ಪಾವತಿಸಿ ನೇರವಾಗಿ ಪ್ರವೇಶಪತ್ರ ಪಡೆಯಬಹುದು. ಇದು ಲಕ್ಷಾಂತರ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಗ್ರಾಮೀಣ ಭಾಗದವರಿಗೆ ವರದಾನವಾಗಲಿದೆ.

ಪಿಯುಸಿ ಹಾಗೂ ಸಿಇಟಿ ವಿದ್ಯಾರ್ಥಿಗಳಿಗೆ ಕೆಇಎ ಬಿಗ್ ರಿಲೀಫ್: ಇನ್ಮುಂದೆ ಒಂದು ಅರ್ಜಿ, ಎರಡು ಪರೀಕ್ಷೆ; ಸಾಲು ಸಾಲು ಎಡವಟ್ಟುಗಳಿಗೆ ಬ್ರೇಕ್
ಸಾಂದರ್ಭಿಕ ಚಿತ್ರ
Edited By:

Updated on: Jun 13, 2026 | 9:57 AM

ಬೆಂಗಳೂರು, ಜೂ.13: ದ್ವಿತೀಯ ಪಿಯುಸಿ ಹಾಗೂ ಸಿಇಟಿ (UG-CET) ಪರೀಕ್ಷೆ ಬರೆಯುವ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಹಿ ಸುದ್ದಿ ನೀಡಿದೆ. ಪ್ರತಿ ವರ್ಷ ಸಿಇಟಿ ಅರ್ಜಿ ಸಲ್ಲಿಕೆ ವೇಳೆ ಸರ್ವರ್ ಸಮಸ್ಯೆ, ತಪ್ಪು ಮಾಹಿತಿ ಸಲ್ಲಿಕೆಯಂತಹ ಸಾಲು ಸಾಲು ಅವಾಂತರಗಳಿಂದ ಕಂಗಾಲಾಗುತ್ತಿದ್ದ ವಿದ್ಯಾರ್ಥಿಗಳ ನೆರವಿಗೆ ಧಾವಿಸಿರುವ ಪ್ರಾಧಿಕಾರ, ಇನ್ಮುಂದೆ ಪಿಯುಸಿ ಹಾಗೂ ಸಿಇಟಿ ಎರಡಕ್ಕೂ ಸೇರಿ ‘ಒಂದೇ ಅರ್ಜಿ’ ಸಲ್ಲಿಸುವ ಕ್ರಾಂತಿಕಾರಿ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ.

ವಿದ್ಯಾರ್ಥಿಗಳಿಗೆ ಸಿಇಟಿ ಬಗ್ಗೆ ಸಮಗ್ರ ಮಾಹಿತಿ ನೀಡಿ, ಸುಲಭವಾಗಿ ಅರ್ಜಿ ಸಲ್ಲಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಇಎ ಹಾಗೂ ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಗಳು ಕೈಜೋಡಿಸಿವೆ. ಹೊಸ ನಿಯಮದ ಪ್ರಕಾರ, ವಿದ್ಯಾರ್ಥಿಗಳು ಮುಂಬರುವ ಶೈಕ್ಷಣಿಕ ಸಾಲಿನಿಂದ ಸಾಮಾನ್ಯ ಪ್ರವೇಶ ಪರೀಕ್ಷೆಗೆ (UG-CET) ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ಬದಲಾಗಿ, ದ್ವಿತೀಯ ಪಿಯುಸಿ ಪ್ರವೇಶ ಪಡೆಯುವ ಸಂದರ್ಭದಲ್ಲೇ ನೀಡಲಾಗುವ ಅರ್ಜಿಯಲ್ಲಿ ‘ಸಿಇಟಿ ಆಯ್ಕೆ’ಯನ್ನು ನಮೂದಿಸಬಹುದು. ಅಲ್ಲಿಯೇ ನಿಗದಿತ ಶುಲ್ಕ ಪಾವತಿಸಿದ ಬಳಿಕ ನೇರವಾಗಿ ಪ್ರವೇಶಪತ್ರ ಪಡೆಯುವ ಸರಳ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ.

ಸಾಮಾನ್ಯವಾಗಿ ದ್ವಿತೀಯ ಪಿಯುಸಿ ಪರೀಕ್ಷೆಯ ಸಿದ್ಧತೆಯ ಭರದಲ್ಲಿ ಮತ್ತು ತೀವ್ರ ಮಾನಸಿಕ ಒತ್ತಡದಲ್ಲಿರುವ ಕಾರಣ, ಬಹುತೇಕ ವಿದ್ಯಾರ್ಥಿಗಳು ಸಿಇಟಿಗೆ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಲು ವಿಫಲರಾಗುತ್ತಿದ್ದರು. ಸೈಬರ್ ಸೆಂಟರ್‌ಗಳ ಮೂಲಕ ಅರ್ಜಿ ಸಲ್ಲಿಸುವಾಗ ಹೆಸರು, ಜಾತಿ ಪ್ರಮಾಣಪತ್ರ, ಆರ್​ಡಿ ನಂಬರ್ ಸೇರಿದಂತೆ ಅನೇಕ ತಪ್ಪುಗಳನ್ನು ದಾಖಲಿಸಿ ಕೌನ್ಸಿಲಿಂಗ್ ವೇಳೆ ಪರದಾಡುತ್ತಿದ್ದರು.

ಆದರೆ, ವಿದ್ಯಾರ್ಥಿಗಳು ಪಿಯುಸಿಗೆ ದಾಖಲಾಗುವಾಗ ಕಾಲೇಜು ಪ್ರಾಂಶುಪಾಲರ ನೇರ ಉಸ್ತುವಾರಿಯಲ್ಲೇ ಕಂಪ್ಲೀಟ್ ಮಾಹಿತಿ ಹಾಗೂ ದಾಖಲೆಗಳನ್ನು ಸಲ್ಲಿಸುವುದರಿಂದ ಯಾವುದೇ ತಪ್ಪುಗಳಾಗುವ ಸಂಭವ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಪಿಯುಸಿ ಅರ್ಜಿಯನ್ನೇ ಸಿಇಟಿಗೂ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಸಮಯ ವ್ಯಯವಾಗುವುದು ತಪ್ಪಲಿದ್ದು, ಮಾನಸಿಕ ಒತ್ತಡವೂ ನಿವಾರಣೆಯಾಗಲಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಎಚ್. ಪ್ರಸನ್ನ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ನೀಟ್ ಮರುಪರೀಕ್ಷೆ ಒತ್ತಡದಲ್ಲಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಈ ವರ್ಷ ಮೆಡಿಕಲ್, ಡೆಂಟಲ್ ಕೋರ್ಸ್ ಶುಲ್ಕ ಹೆಚ್ಚಳವಿಲ್ಲ

ರಾಜ್ಯದಲ್ಲಿ ಸಿಇಟಿ ಪರೀಕ್ಷೆ ಬರೆಯುವ ಒಟ್ಟು ವಿದ್ಯಾರ್ಥಿಗಳಲ್ಲಿ ಶೇಕಡಾ 85 ಕ್ಕಿಂತ ಹೆಚ್ಚು ಆಕಾಂಕ್ಷಿಗಳು ರಾಜ್ಯ ಪಠ್ಯಕ್ರಮದ ಹಿನ್ನೆಲೆಯುಳ್ಳವರಾಗಿದ್ದಾರೆ. ಹೀಗಾಗಿ ಪದವಿಪೂರ್ವ ನಿರ್ದೇಶನಾಲಯದ ಸಹಯೋಗದಲ್ಲಿ ಸಿದ್ಧವಾಗುತ್ತಿರುವ ಈ ಹೊಸ ಸ್ವರೂಪದ ಸಂಯೋಜಿತ ಅರ್ಜಿ ವ್ಯವಸ್ಥೆಯು ಗ್ರಾಮೀಣ ಹಾಗೂ ನಗರ ಭಾಗದ ವಿದ್ಯಾರ್ಥಿಗಳಿಗೆ ವರದಾನವಾಗಲಿದ್ದು, ಈ ನೂತನ ಪ್ರಯೋಗವು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:56 am, Sat, 13 June 26

Vinay Kashappanavar
Follow Us