
ಬೆಂಗಳೂರು, ಜೂನ್ 06: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (UGCET) ಫಲಿತಾಂಶವನ್ನು ಇಂದು ಪ್ರಕಟಿಸಿದೆ. ಈ ಬಾರಿ ಕೂಡ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಆದರೆ ಇದೀಗ ತಾಂತ್ರಿಕ ಸಮಸ್ಯೆ ಒಂದು ಎದುರಾಗಿದೆ. ಮಧ್ಯಾಹ್ನ 2 ಗಂಟೆಯ ನಂತರ ಫಲಿತಾಂಶ ನೋಡಬಹುದು ಎಂದು ಕೆಇಎ ಹೇಳಿತ್ತು, ಆದರೆ ತಾಂತ್ರಿಕ ಸಮಸ್ಯೆಯಿಂದ ಸಿಇಟಿ ಫಲಿತಾಂಶ ನೋಡಲು ಸಾಧ್ಯವಾಗದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಸದ್ಯ ತಾಂತ್ರಿಕ ಸಮಸ್ಯೆಯಿಂದಾಗಿ ಲಾಗಿನ್ ಪ್ರಕ್ರಿಯೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೆಲವು ಗಂಟೆ ವೆಬ್ಸೈಟ್ಗೆ ಲಾಗಿನ್ ಆಗದಂತೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಅವರು ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ. ಅಲ್ಲದೆ, ಪರ್ಯಾಯ ವ್ಯವಸ್ಥೆಯಾಗಿ ಪ್ರತಿ ವಿದ್ಯಾರ್ಥಿಯ ಫಲಿತಾಂಶವನ್ನು ಅವರ ವಾಟ್ಸಾಪ್ಗೆ ನೇರವಾಗಿ ಕಳುಹಿಸಿಕೊಡುವುದಾಗಿ ಪ್ರಾಧಿಕಾರ ಭರವಸೆ ನೀಡಿದೆ.
ಇದನ್ನೂ ಓದಿ: KCET Result 2026: ಕೆಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್ ನೋಡಲು ಡೈರೆಕ್ಟ್ ಲಿಂಕ್ ಇಲ್ಲಿದೆ..
ಏಪ್ರಿಲ್ 22 ರಿಂದ 24ರವರೆಗೆ ನಡೆದಿದ್ದ ಯುಜಿ ಸಿಇಟಿ 2026ರ ಫಲಿತಾಂಶ ಇಂದು ಹೊರಬಿದ್ದಿದೆ. ಕೃಷಿ ವಿಭಾಗದಲ್ಲಿ ಬೆಂಗಳೂರಿನ ಜಯನಗರದ ಆರ್.ವಿ. ಪಿಯು ಕಾಲೇಜಿನ ವಿದ್ಯಾರ್ಥಿ ನಿನಾದ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಧಾರವಾಡದ ಅರ್ಜುನ್ ಸೈನ್ಸ್ ಕಾಲೇಜಿನ ಅನ್ಮೋಲ್ ದ್ವಿತೀಯ ಸ್ಥಾನ ಗಳಿಸಿದರೆ, ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಎ.ಎಸ್. ಸಮಯ್ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಇನ್ನು ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಈ ವರ್ಷ ಒಟ್ಟು 3.36 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಇವರಲ್ಲಿ 3,09,014 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಒಟ್ಟು 2,92,782 ವಿದ್ಯಾರ್ಥಿಗಳು ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಅರ್ಹತೆ ಪಡೆದಿದ್ದಾರೆ. ಜೊತೆಗೆ ಈ ಬಾರಿಯ ಪರೀಕ್ಷೆಯ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಲ್ಲಿ ಅಭ್ಯರ್ಥಿಗಳಿಗೆ ತಲಾ ಒಂದು ಕೃಪಾಂಕವನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.