ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ನಡೆಸುವ ಈ ವರ್ಷದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET 2021) ನೋಟಿಫಿಕೇಷನ್ ಬಿಡುಗಡೆ ಮಾಡಿದ್ದು, ಬಿಎಸ್ಸಿ ನರ್ಸಿಂಗ್ ಕೋರ್ಸ್ಗಳಿಗೆ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆ ಮೂಲಕ ಸೇರಲಿಚ್ಛಿಸುವ ಅಭ್ಯರ್ಥಿಗಳಿಗೆ ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಬಿಎಸ್ಸಿ ನರ್ಸಿಂಗ್ ಕೋರ್ಸ್ಗೆ ಸೇರಲು ಬಯಸುವ ಅಭ್ಯರ್ಥಿಗಳಿಗೆ ಡಿಸೆಂಬರ್ 31ರ ವೇಳೆಗೆ ಕನಿಷ್ಠ 17 ವರ್ಷ ಪೂರ್ತಿಯಾಗಬೇಕು ಎಂದು ಎನ್ಟಿಎ ಆದೇಶ ಹೊರಡಿಸಿದೆ.
ದೇಶದ ನಾನಾ ಕಾಲೇಜುಗಳಲ್ಲಿ ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ ಬಿಎಸ್ಸಿ ನರ್ಸಿಂಗ್ ಕೋರ್ಸ್ಗೆ ದಾಖಲಾತಿ ಪಡೆಯುವ ವಿದ್ಯಾರ್ಥಿಗಳು ಆ ಕಾಲೇಜು/ ವಿಶ್ವವಿದ್ಯಾಲಯ/ ಶಿಕ್ಷಣ ಸಂಸ್ಥೆಗಳಲ್ಲಿನ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿಕೊಳ್ಳಬೇಕು. ಆ ಕಾಲೇಜುಗಳಲ್ಲಿ ವಿಧಿಸಲಾಗುವ ನಿರ್ಬಂಧಗಳಿಗೂ ಎನ್ಟಿಎಗೂ ಯಾವುದೇ ಸಂಬಂಧವಿರುವುದಿಲ್ಲ ಎಂದು ಈಗಾಗಲೇ ಐಎನ್ಸಿ ಸೂಚಿಸಿದೆ ಎಂದು ಎನ್ಟಿಎ ಖಚಿತಪಡಿಸಿದೆ.
ಬಿಎಸ್ಸಿ ನರ್ಸಿಂಗ್ಗೆ ಸೇರಲಿಚ್ಛಿಸುವ ಅಭ್ಯರ್ಥಿಗಳು ಪಿಸಿಬಿ (ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ) ಹಾಗೂ ಇಂಗ್ಲಿಷ್ನಲ್ಲಿ ಶೇ. 45 ಅಂಕಗಳನ್ನಾದರೂ ಪಡೆದಿರಬೇಕು. ಪಿಯುಸಿಯಲ್ಲಿ ಪಿಸಿಬಿ ಕಾಂಬಿನೇಷನ್ ಪಡೆದಿರಬೇಕು ಎಂದು ಶೈಕ್ಷಣಿಕ ಅರ್ಹತೆಯ ಬಗ್ಗೆ ಎನ್ಟಿಎ ತಿಳಿಸಿದೆ.
ಎಸ್ಸಿ/ ಎಸ್ಟಿ ಅಥವಾ ಒಬಿಸಿ ಸಮುದಾಯಕ್ಕೆ ಸೇರಿರುವ ಅಭ್ಯರ್ಥಿಗಳು ಪಿಯುಸಿಯಲ್ಲಿ ಪಿಸಿಬಿ ಕಾಂಬಿನೇಷನ್ ಪಡೆದು ಶೇ. 40ರಷ್ಟು ಅಂಕವನ್ನು ಗಳಿಸಿರಬೇಕು. ಜನರಲ್ ಕೆಟಗರಿಯವರಾದರೆ ಶೇ. 45ರಷ್ಟು ಅಂಕ ಪಡೆದಿರಬೇಕು. ಹಾಗೇ. ದಿವ್ಯಾಂಗರಿಗೆ ಶೇ. 3ರಷ್ಟು ಮೀಸಲಾತಿ ನೀಡಲಾಗುವುದು. ಅವರಿಗೂ ಶೈಕ್ಷಣಿಕ ಅರ್ಹತೆ ಹಾಗೂ ವಯಸ್ಸಿನ ನಿಯಮಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಎನ್ಟಿಎ ಮಾಹಿತಿ ನೀಡಿದೆ.
ಸೆಪ್ಟೆಂಬರ್ 12ಕ್ಕೆ ನೀಟ್ ಪರೀಕ್ಷೆ (NEET 2021) ನಡೆಯಲಿದೆ. ನೀಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 10 ಕೊನೆಯ ದಿನವಾಗಿದೆ. ಈ ಮೊದಲು ನೀಟ್ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಆ. 6ಕ್ಕೆ ನಿಗದಿ ಮಾಡಲಾಗಿತ್ತು. ಬಳಿಕ ಆ ದಿನಾಂಕವನ್ನು ಆ. 10ರವರೆಗೆ ವಿಸ್ತರಿಸಲಾಗಿದೆ. ಸೆಪ್ಟೆಂಬರ್ 12ರಂದು ನಡೆಯುವ ನೀಟ್ ಪರೀಕ್ಷೆ ಫಲಿತಾಂಶವನ್ನು ಬಿಎಸ್ಸಿ ನರ್ಸಿಂಗ್ ಪ್ರವೇಶಾತಿಗೆ ಬಳಸಬಹುದಾಗಿದೆ. ಒಟ್ಟು 198 ನಗರಗಳಲ್ಲಿ ಈ ನೀಟ್ ಪರೀಕ್ಷೆ ನಡೆಯಲಿದೆ. ಹಾಗೇ 2020ರಲ್ಲಿ ಒಟ್ಟು 3862 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಆದರೆ ಈ ಬಾರಿ ಅದರ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ.
(NEET 2021 NTA released Notice for Admissions to BSc Nursing Courses through NEET UG Exam)
Published On - 2:31 pm, Sat, 7 August 21