
ದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (National Eligibility-cum-Entrance Test – NEET) ಸೆಪ್ಟೆಂಬರ್ 11ರಂದು ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ವಿಷಯವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವೀಯ ಮಂಗಳವಾರ ಟ್ವೀಟ್ ಮೂಲಕ ತಿಳಿಸಿದ್ದಾರೆ. ಕೊವಿಡ್ ಶಿಷ್ಟಾಚಾರಗಳನ್ನು ಅನುಸರಿಸಿಯೇ ಸೆಪ್ಟೆಂಬರ್ 12ರಂದು ನೀಟ್ (ಯುಜಿ) ಪರೀಕ್ಷೆ ನಡೆಯಸಲಾಗುವುದು ಎಂದು ಕೇಂದ್ರ ಸರ್ಕಾರ ನಿನ್ನೆಯಷ್ಟೇ (ಜುಲೈ 12) ಪ್ರಕಟಿಸಿತ್ತು.
ಎನ್ಟಿಎ ವೆಬ್ಸೈಟ್ ಮೂಲಕ ಇಂದಿನಿಂದಲೇ (ಜುಲೈ 12) ಅರ್ಜಿ ಸಲ್ಲಿಸಬಹುದಾಗಿದೆ. ಈ ಮೊದಲು ಪರೀಕ್ಷಾ ದಿನಾಂಕವನ್ನು 1ನೇ ಆಗಸ್ಟ್ಗೆ ನಿಗದಿಪಡಿಸಲಾಗಿತ್ತು. ಸಾಮಾಜಿಕ ಅಂತರ ಪಾಲನೆಯನ್ನು ದೃಢಪಡಿಸುವ ಉದ್ದೇಶದಿಂದಾಗಿ ಈ ವರ್ಷ ಪರೀಕ್ಷಾ ನಡೆಯುವ ನಗರಗಳ ಸಂಖ್ಯೆಯನ್ನು 198ಕ್ಕೆ ಹೆಚ್ಚಿಸಲಾಗಿದೆ. ಈ ಮೊದಲು 155 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿತ್ತು ಎಂದು ಕೇಂದ್ರ ಶಿಕ್ಷಣ ಇಲಾಖೆ ತಿಳಿಸಿದೆ.
ಈ ವರ್ಷ ಒಟ್ಟು 3862 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಹಿಂದೆ 2020 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿತ್ತು. ಪರೀಕ್ಷಾ ಕೇಂದ್ರ ಪ್ರವೇಸಿಸುವ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಲ್ಲಿಯೇ ಮಾಸ್ಕ್ ವಿತರಿಸಲಾಗುವುದು ಎಂದು ಶಿಕ್ಷಣ ಸಚಿವಾಲಯ ಹೇಳಿದೆ.
ಎಲ್ಲ ಅಭ್ಯರ್ಥಿಗಳೂ ಒಮ್ಮೆಲೆ ಪ್ರವೇಶ ಮತ್ತು ನಿರ್ಗಮನ ಇರುವುದಿಲ್ಲ. ಪ್ರವೇಶ-ನಿರ್ಗಮನಕ್ಕೂ ಸಮಯವನ್ನು ಮೊದಲೇ ಸೂಚಿಸಲಾಗುತ್ತದೆ. ಯಾವುದೇ ಸಂಪರ್ಕವಿಲ್ಲದ ನೋಂದಣಿ, ಸ್ಯಾನಿಟೈಸೇಶನ್ ಪ್ರಕ್ರಿಯೆ, ಸಾಮಾಜಿಕ ಅಂತರ ನಿಯಮಗಳಿಗೆ ಅನುಗುಣವಾದ ಸೀಟಿಂಗ್ ವ್ಯವಸ್ಥೆ ಇರುತ್ತದೆ.
ಪರೀಕ್ಷೆಗಳು ಆರಂಭವಾಗುವ ಮೊದಲು ಮತ್ತು ಮುಗಿದ ನಂತರ ಸೀಟುಗಳನ್ನು ಸ್ಯಾನಿಟೈಸ್ ಮಾಡಲಾಗುತ್ತದೆ. ಎಲ್ಲ ಪರೀಕ್ಷಾ ಕೊಠಡಿಗಳಲ್ಲಿ ತೆರೆದ ಕಿಟಕಿಗಳು ಮತ್ತು ಸರಿಯಾದ ಕ್ರಮದಲ್ಲಿ ಗಾಳಿಯ ಪರಿಚಲನೆಗೆ ಅನುವು ಮಾಡಿಕೊಡುವ ಫ್ಯಾನ್ಗಳ ವ್ಯವಸ್ಥೆಯನ್ನು ಹೊಂದಿರುತ್ತದೆ. ಕೊರೊನಾ ನಿರ್ಬಂಧಗಳ ನಡುವೆಯೂ ಕಳೆದ ವರ್ಷ ಸೆಪ್ಟೆಂಬರ್ 13ರಂದು ನೀಟ್ ಪರೀಕ್ಷೆ ನಡೆಸಲಾಗಿತ್ತು. ಒಟ್ಟು 13.66 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 7,71,500 ವಿದ್ಯಾರ್ಥಿಗಳು ಅರ್ಹತೆ ಪಡೆದುಕೊಂಡಿದ್ದರು.
ಕಳೆದ ವರ್ಷದಿಂದ ದೇಶದ ವಿವಿಧೆಡೆಯಿರುವ 13 ಏಮ್ಸ್ ಮತ್ತು ಪುದುಚೇರಿಯ ಜವಾಹರ್ಲಾಲ್ ವೈದ್ಯಕೀಯ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರಕ್ಕೂ ನೀಟ್ ಮೂಲಕವೇ ಪ್ರವೇಶ ನೀಡಲಾಗುತ್ತಿದೆ. ನೀಟ್ ಪರೀಕ್ಷೆಯನ್ನು 11 ಭಾಷೆಗಳಲ್ಲಿ ಬರೆಯಲು ಅವಕಾಶವಿದೆ. ಕನ್ನಡ, ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮರಾಠಿ, ಒಡಿಯಾ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ನೀಟ್ ಪರೀಕ್ಷೆ ಬರೆಯಬಹುದಾಗಿದೆ.
(NEET PG 2021 exam to be conducted on 11th september tweets union minister Mansukh Mandaviya)
ಇದನ್ನೂ ಓದಿ: NEET Exam 2021: ವಿದ್ಯಾರ್ಥಿಗಳೇ ಗಮನಿಸಿ; ನೀಟ್ ಪರೀಕ್ಷೆಯ ದಿನಾಂಕ ಘೋಷಿಸಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್
Published On - 6:18 pm, Tue, 13 July 21