Assembly Elections 2022: ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾದ ಬಿಜೆಪಿ
ಒಂದು ವೇಳೆ ಬಿಜೆಪಿ ಎರಡೂ ರಾಜ್ಯಗಳಲ್ಲಿ ಬಹುಮತ ಗಳಿಸಿ, ಅಧಿಕಾರ ಹಿಡಿಯಲು ಸಾಧ್ಯವಾದರೆ ಭಾರತದ ರಾಜಕಾರಣದಲ್ಲಿ ಹಲವು ದಾಖಲೆಗಳನ್ನು ಸರಿಗಟ್ಟಿದಂತೆ ಅಷ್ಟೇ ಅಲ್ಲ, ಹಲವು ಹೊಸ ದಾಖಲೆಗಳು ನಿರ್ಮಾಣವಾದಂತೆ ಆಗುತ್ತವೆ.
ದೆಹಲಿ: ಇಡೀ ದೇಶವು ಕಾತರದಿಂದ ನಿರೀಕ್ಷಿಸುತ್ತಿರುವ ಗುಜರಾತ್ (Gujarat Assembly Elections) ಮತ್ತು ಹಿಮಾಚಲ ಪ್ರದೇಶ (Himachal Pradesh Assembly Elections) ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಗುಜರಾತ್ನಲ್ಲಿ ಬಿಜೆಪಿಯು ನಿಚ್ಚಳ ಬಹುಮತದತ್ತ ದಾಪುಗಾಲು ಹಾಕುತ್ತಿದೆ. ಆದರೆ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ. ಹಲವು ಕ್ಷೇತ್ರಗಳಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿ ಪೈಪೋಟಿ ಕಂಡುಬಂದಿದೆ. ಒಂದು ವೇಳೆ ಬಿಜೆಪಿ ಎರಡೂ ರಾಜ್ಯಗಳಲ್ಲಿ ಬಹುಮತ ಗಳಿಸಿ, ಅಧಿಕಾರ ಹಿಡಿಯಲು ಸಾಧ್ಯವಾದರೆ ಭಾರತದ ರಾಜಕಾರಣದಲ್ಲಿ ಹಲವು ದಾಖಲೆಗಳನ್ನು ಸರಿಗಟ್ಟಿದಂತೆ ಅಷ್ಟೇ ಅಲ್ಲ, ಹಲವು ಹೊಸ ದಾಖಲೆಗಳು ನಿರ್ಮಾಣವಾದಂತೆ ಆಗುತ್ತವೆ.
ಗುಜರಾತ್ನಲ್ಲಿ ಬಿಜೆಪಿಯು ಈ ಬಾರಿಯು ಬಹುಮತ ಪಡೆದರೆ ಸಿಪಿಎಂ (ಭಾರತೀಯ ಕಮ್ಯುನಿಸ್ಟ್ ಪಾರ್ಟಿ – ಮಾರ್ಕ್ಸಿಸ್ಟ್) ಪಕ್ಷದ ಸಾಧನೆಯನ್ನು ಸರಿಗಟ್ಟಿದಂತೆ ಆಗುತ್ತದೆ. ಪಶ್ಚಿಮ ಬಂಗಾಳದಲಲ್ಲಿ ಸತತ 34 ವರ್ಷಗಳ ಕಾಲ, ಅಂದರೆ 1977ರಿಂದ 2011ರವರೆಗೆ ಸಿಪಿಐ (ಎಂ) ಆಳ್ವಿಕೆ ನಡೆಸಿತ್ತು. ಏಳು ವಿಧಾನಸಭಾ ಚುನಾವಣೆಗಳಲ್ಲಿ ಸತತ ಜಯಗಳಿಸಿತ್ತು.
ಹಿಮಾಚಲ ಪ್ರದೇಶದಲ್ಲಿ 1985ರ ನಂತರ ಯಾವುದೇ ಪಕ್ಷವು ಸತತ 2ನೇ ಬಾರಿಗೆ ಅಧಿಕಾರಕ್ಕೆ ಬಂದಿಲ್ಲ. ಬಿಜೆಪಿಯು ಈ ಬಾರಿ ಗೆಲುವು ಸಾಧಿಸಿದರೆ ಸತತ 2ನೇ ಬಾರಿಗೆ ಅಧಿಕಾರಕ್ಕೆ ಬಂದ ಪಕ್ಷ ಎನಿಸಿಕೊಳ್ಳುತ್ತದೆ. ಗುಡ್ಡಗಾಡು ರಾಜ್ಯದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದರೆ ಅದೊಂದು ದಾಖಲೆಯೇ ಆಗುತ್ತದೆ. ಬಹುತೇಕ ಮತಗಟ್ಟೆ ಸಮೀಕ್ಷೆಗಳು ಗುಜರಾತ್ನಲ್ಲಿ ಬಿಜೆಪಿ ನಿಚ್ಚಳ ಬಹುಮತನದ ಮುನ್ಸೂಚನೆ ಕೊಟ್ಟಿವೆ. ಹಿಮಾಚಲ ಪ್ರದೇಶದಲ್ಲಿ ಅಧಿಕಾರ ಉಳಿಸಿಕೊಳ್ಳಬಹುದು ಎಂದು ಭವಿಷ್ಯ ನುಡಿದಿವೆ. ಇದು ನಿಜವಾಗಲಿ ಎಂದು ಬಿಜೆಪಿ ನಾಯಕರು ಹಂಬಲಿಸುತ್ತಿದ್ದಾರೆ.
182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ 2002ರಲ್ಲಿ 127 ಸ್ಥಾನ ಪಡೆದಿತ್ತು. ಇದು ಗುಜರಾತ್ನಲ್ಲಿ ಈವರೆಗಿನ ಬಿಜೆಪಿಯ ಅತ್ಯುತ್ತಮ ಸಾಧನೆಯಾಗಿದೆ. ಈ ಬಾರಿ ಮತಗಟ್ಟೆ ಸಮೀಕ್ಷೆಗಳು ಬಿಜೆಪಿಗೆ 117ರಿಂದ 151 ಕ್ಷೇತ್ರಗಳಲ್ಲಿ ಗೆಲುವು ಸಿಗಬಹುದು ಎಂದು ಭವಿಷ್ಯ ನುಡಿದಿವೆ. ಇದು ನಿಜವಾದರೆ ಬಿಜೆಪಿಯು 2002ರ ತನ್ನದೇ ದಾಖಲೆಯನ್ನು ಮುರಿದಂತೆ ಆಗುತ್ತದೆ.
1985ರಲ್ಲಿ ಕಾಂಗ್ರೆಸ್ ಪಕ್ಷವು ಮಾಧವಸಿನ್ಹಾ ಸೋಲಂಕಿ ಅವರ ನಾಯಕತ್ವದಲ್ಲಿ ಗುಜರಾತ್ನಲ್ಲಿ 149 ಸ್ಥಾನಗಳಲ್ಲಿ ಜಯಗಳಿಸಿತ್ತು. ಬಿಜೆಪಿಯು ಈ ಸಂಖ್ಯೆಗಳನ್ನು ಮೀರಿ ಜಯಗಳಿಸಿದರೆ ಅದು ಸಾರ್ವಕಾಲಿಕ ದಾಖಲೆಯೇ ಆಗುತ್ತದೆ. ಗುರುವಾರ (ಡಿ 8) ಬೆಳಿಗ್ಗೆ 8.50ರ ಸಮಯದಲ್ಲಿ ಬಿಜೆಪಿಯು ಗುಜರಾತ್ನಲ್ಲಿ 126 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು.
ಗುಜರಾತ್ನಲ್ಲಿ ಭಾರೀ ಬಹುಮತ ಮತ್ತು ಹಿಮಾಚಲದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವಷ್ಟು ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡರೆ ಅದು ರಾಷ್ಟ್ರ ರಾಜಕಾರಣದ ಮೇಲೆಯೂ ಪರಿಣಾಮ ಬೀರಲಿದೆ. ಲೋಕಸಭೆ ಚುನಾವಣೆಗೆ ಮೊದಲು ಬಿಜೆಪಿ ಕಾರ್ಯಕರ್ತರ ಉತ್ಸಾಹ ಮತ್ತಷ್ಟು ಹೆಚ್ಚಾಗುತ್ತದೆ. 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲಬೇಕೆಂಬ ಆಕಾಂಕ್ಷೆ ಹೊಂದಿರುವ ಬಿಜೆಪಿ ನಾಯಕರಿಗೆ ಇದು ಬೂಸ್ಟರ್ ಡೋಸ್ ಆಗಿ ಕೆಲಸ ಮಾಡುತ್ತದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.
Published On - 9:08 am, Thu, 8 December 22