Karnataka Assembly By-Election Results 2024 highlights: ದೇಶದಲ್ಲಿ ಚುನಾವಣೆಯ ಕಾವು ಜೋರಾಗಿದೆ. ಕರ್ನಾಟಕದ ಮೂರು ವಿಧಾನಸಭೆ ಕ್ಷೇತ್ರಗಳಿಗೆ (Karnataka Assembly By-Election) ಮತ್ತು ಕೇರಳದ ವಯನಾಡು ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಮತದಾನ ನಡೆದಿದೆ. ಮಹಾರಾಷ್ಟ್ರ ಮತ್ತು ಜಾರ್ಖಾಂಡ್ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಮತದಾನ ಆಗಿದೆ. ಈ ಎಲ್ಲ ಕ್ಷೇತ್ರಗಳ ಫಲಿತಾಂಶ ಶನಿವಾರ (ನ.23) ಪ್ರಕಟವಾಗಿದೆ. ಕರ್ನಾಟಕದಲ್ಲಿ ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ಜಿದ್ದಾಜಿದ್ದಿ ಕ್ಷೇತ್ರವಾಗಿವೆ. ಅದರಲ್ಲಂತೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಎನ್ಡಿಎ ಮೈತ್ರಿಕೂಟ ಮತ್ತು ಕಾಂಗ್ರೆಸ್ ಮಧ್ಯೆ ಪ್ರತಿಷ್ಠೆಯ ಕಣವಾಗಿತ್ತು. ಚನ್ನಪಟ್ಟಣದಿಂದ ಎನ್ಡಿಎ ಮೈತ್ರಿಕೂಟದಿಂದ ನಿಖಿಲ್ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ನಿಂದ ಸಿಪಿ ಯೋಗೇಶ್ವರ್ ಕಣದಲ್ಲಿದ್ದರು. ಶಿಗ್ಗಾಂವಿಯಿಂದ ಎನ್ಡಿಎ ಮೈತ್ರಿಕೂಟದಿಂದ ಭರತ ಬೊಮ್ಮಾಯಿ ಕಾಂಗ್ರೆಸ್ನಿಂದ ಯಾಸಿರ್ ಅಹಮದ್ ಖಾನ್ ಪಠಾಣ್ ಅವರು ಕಣದಲ್ಲಿದ್ದರು. ಕೊನೆಯದಾಗಿ ಸಂಡೂರಲ್ಲಿ ಎನ್ಡಿಎ ಮೈತ್ರಿಕೂಟದಿಂದ ಬಂಗಾರು ಹನುಮಂತು ಮತ್ತು ಕಾಂಗ್ರೆಸ್ನಿಂದ ಅನ್ನಪೂರ್ಣ ತುಕಾರಾಂ ಕಣದಲ್ಲಿದ್ದರು. ಇನ್ನು ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಪ್ರಿಯಾಂಕ ಗಾಂಧಿ ವಾದ್ರಾ ಸ್ಪರ್ಧಿಸಿದ್ದರು. ಈ ಎಲ್ಲ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಿದೆ.
ವಿಧಾನ ಸಭಾ ಉಪಚುನಾವಣೆ ಮತ ಎಣಿಕೆಯ ಕ್ಷಣಕ್ಷಣದ ಅಪ್ಡೇಟ್ ಇಲ್ಲಿದೆ
ಕಾಂಗ್ರೆಸ್ ಗೆಲುವು ಬೆನ್ನಲ್ಲೆ ಹಾಸನ ಜಿಲ್ಲೆಯಲ್ಲಿ ಸಮಾವೇಶ ನಡೆಸಲು ಸಿದ್ದತೆ ನಡೆದಿದೆ. ಡಿ.5 ರಂದು ಹಾಸನದಲ್ಲಿ ಸಮಾವೇಶ ನಡೆಸಲು ಸಿದ್ದತೆ ನಡೆದಿದ್ದು, ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೆ ತಯಾರಿ ನಡೆಸಿದ್ದಾರೆ.
ಉಪಚುನಾವಣೆಯಲ್ಲಿ ಮೂರುಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ನನಗೆ ತುಂಬಾ ಖುಷಿಯಾಗಿದೆ ಎಂದು ದಾವಣಗೆರೆಯಲ್ಲಿ ಗೀತಾ ಶಿವರಾಜಕುಮಾರ ಸಂತಸ ವ್ಯಕ್ತಪಡಿಸಿದ್ದಾರೆ. ನನಗೆ ಚನ್ನಾಗಿ ಗೊತ್ತಿರುವ ಯೋಗೇಶ್ವರ ಅವರು ಗೆದ್ದಿದ್ದಾರೆ. ಜೊತೆಗೆ ಶಿಗ್ಗಾಂವ್ ಮತ್ತು ಸಂಡೂರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ.
ಗೆಲುವಿನ ನಂತರ ಕ್ಷೇತ್ರಕ್ಕೆ ಯೋಗೇಶ್ವರ್ ಆಗಮಿಸಿದ್ದು, ಭರ್ಜರಿ ಸ್ವಾಗತ ಮಾಡಲಾಗಿದೆ. ಪಟಾಕಿ ಸಿಡಿಸಿ ಕಾರ್ಯಕರ್ತರು ಸ್ವಾಗತ ಕೋರಿದ್ದಾರೆ. ಚನ್ನಪಟ್ಟಣದ ಮುಖ್ಯ ರಸ್ತೆಯಲ್ಲಿ ತೆರೆದ ವಾಹನದಲ್ಲಿ ಸಿ.ಪಿ.ಯೋಗೇಶ್ವರ್ ಮೆರವಣಿಗೆ ಮಾಡಲಾಗಿದೆ.
ಗದಗನಲ್ಲಿ ಸಚಿವ ಹೆಚ್ ಕೆ ಪಾಟೀಲ್ ಪ್ರತಿಕ್ರಿಯಿಸಿದ್ದು, ಬಿಜೆಪಿಗೆ ರಾಜ್ಯದ ಜನ ಮಂಗಳಾರತಿ ಮಾಡಿದ್ದಾರೆ. ರಾಜ್ಯದ ಉಪಚುನಾವಣೆ ಬಹಳ ಮಹತ್ವದ್ದಾಗಿತ್ತು. ರಾಜ್ಯದ ಹಲವಾರು ಬೆಳೆವಣಿಗೆಗಳಿಗೆ ಸಮರ್ಪಕ ಉತ್ತರ ನೀಡಿ ಮಂಗಳಾರತಿ ಮಾಡಿದ್ದಾರೆ ಎಂದಿದ್ದಾರೆ.
ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ಕರ್ನಾಟಕದ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ.
ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಎನ್ಡಿಎ ಅಭ್ಯರ್ಥಿಗಳಿಗೆ ಸೋಲಾಗಿದೆ.
ಕರ್ನಾಟಕ ಮೂರು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ. ಶಿಗ್ಗಾಂವಿ ಕ್ಷೇತ್ರದಲ್ಲೂ ಕಾಂಗ್ರೆಸ್ ವಿಜಯಪತಾಕೆ ಹಾರಿಸಿದೆ. ಶಿಗ್ಗಾಂವಿಯಲ್ಲಿ ಕಾಂಗ್ರೆಸ್ನ ಯಾಸಿರ್ ಅಹಮದ್ ಖಾನ್ ಪಠಾಣ್ ಗೆಲುವು ಸಾಧಿಸಿದ್ದಾರೆ. ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಮಗ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರಿಗೆ ಸೋಲಾಗಿದೆ.
ಯಾಸೀರ್ ಪಠಾಣ್ಗೆ 13,448 ಮತಗಳ ಅಂತರದಲ್ಲಿ ಗೆಲುವು#Shiggaon #ByElectionResults #Congress #YasirAhmedKhanPathanhttps://t.co/mFGE8kxonD
— TV9 Kannada (@tv9kannada) November 23, 2024
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ ಇಡೀ ದೇಶದ ಗಮನ ಸೆಳೆದಿತ್ತು. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಅವರಿಗೆ ಗೆಲುವಾಗಿದೆ. ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಸೋಲಾಗಿದೆ. ಈ ಮೂಲಕ ನಿಖಿಲ್ ಕುಮಾರಸ್ವಾಮಿ ಅವರಿಗೆ ಇದು ಮೂರನೇ ಸೋಲಾಗಿದೆ.
ಸಂಸದ ಇ ತುಕಾರಾಂ ಪತ್ನಿ ಅನ್ನಪೂರ್ಣ ತುಕಾರಾಂ ಅವರಿಗೆ ಗೆಲುವಾಗಿದೆ. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಅವರ ವಿರುದ್ಧ ವಿಜಯಶಾಲಿಯಾಗಿದ್ದಾರೆ.
Sandur Election Result 2024: ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂಗೆ ಗೆಲವು
ಕೊನೆ ಕ್ಷಣದಲ್ಲಿ ಅಭ್ಯರ್ಥಿ ಘೋಷಣೆ ಮಾಡಿದ್ದು ಬಿಜೆಪಿ ಸೋಲಿಗೆ ಕಾರಣ. ನಾವು ಒಂದು ವರ್ಷ, ಆರು ತಿಂಗಳಿಂದಲೇ ಅಭ್ಯರ್ಥಿ ತಯಾರು ಮಾಡಿ ಬಿಟ್ಟಿದ್ದರೆ ಮೂರು ಕ್ಷೇತ್ರಗಳಲ್ಲಿ ಒಳ್ಳೆಯ ಫಲಿತಾಂಶ ಬರುತ್ತಿತ್ತು
ನಾವು ಕೊನೆಯ ಹಂತದಲ್ಲಿ ಚುನಾವಣೆ ಘೋಷಣೆ ಆದಮೇಲೆ ಅಭ್ಯರ್ಥಿ ತಯಾರು ಮಾಡಿದ್ದು ಕೂಡಾ ಹಿನ್ನೆಡೆ ಆಯ್ತು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದರು.
ಚನ್ನಪಟ್ಟಣ ಮತ್ತು ಶಿಗ್ಗಾಂವಿಯಲ್ಲಿ ಕೊನೆಯವರೆಗೂ ನಾವು ಅಭ್ಯರ್ಥಿ ಘೋಷಿಸಿರಲಿಲ್ಲ. ಬೇಗ ಅಭ್ಯರ್ಥಿ ಘೋಷಣೆ ಮಾಡಿದ್ದು ಕಾಂಗ್ರೆಸ್ಗೆ ಪ್ಲಸ್ ಪಾಯಿಂಟ್ ಆಗಿದೆ. ರಾಜೀನಾಮೆ ಕೊಟ್ಟ ಕೂಡಲೇ ನಮ್ಮ ಅಭ್ಯರ್ಥಿ ಘೋಷಣೆ ಮಾಡಿದ್ದರೆ ಗೆಲುವು ಆಗುತ್ತಿತ್ತು ಎಂದರು.
ಸಂಡೂರಿನಲ್ಲಿ ಹಣ ಬಲ ಕೆಲಸ ಮಾಡಿದೆ. ಸೋಲಿನ ಹೊಣೆ ನಾನೇ ಹೊರುವೆ ಎಂದು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಹೇಳಿದರು. ಚುನಾವಣೆಯಲ್ಲಿ ದುಡಿದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸುವೆ ಎಂದರು.
ಸಂಡೂರಿನಲ್ಲಿ 17ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ 9105 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟ 220 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಗೆ ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಭೇಟಿ ನೀಡಿದ್ದಾರೆ.
10ನೇ ಸುತ್ತಿನಲ್ಲೂ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಸಿಪಿ ಯೋಗೇಶ್ವರ್ 18,898 ಮತಗಳ ಅಂತರಿಂದ ಮುನ್ನಡೆ ಸಾಧಿಸಿದ್ದಾರೆ.
ಚನ್ನಪಟ್ಟಣದಲ್ಲಿ ಎಂಟನೇ ಸುತ್ತಿನ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಸಿಪಿ ಯೋಗೇಶ್ವರ 11,178 ಮತಗಳ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.
ಚನ್ನಪಟ್ಟಣದಲ್ಲಿ ಏಳನೇ ಸುತ್ತಿನ ಮತ ಎಣಿಕೆಯಾಗುತ್ತಿದೆ. ಏಳನೇ ಸುತ್ತಿನಲ್ಲಿ ಸಿಪಿ ಯೋಗೇಶ್ವರ್ 3663 ಸಾವಿರ ಮತಗಳ ಅಂತರದಿಂದ ಭಾರಿ ಮುನ್ನಡೆ ಸಾಧಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರನ್ನು ಹಿಂದಿಕ್ಕಿ ಸಿಪಿ ಯೋಗೆಶ್ವರ್ ಮುನ್ನಡೆ ಸಾಧಿಸಿದ್ದಾರೆ. ನಗರದ ಪ್ರದೇಶದ ಎಣಿಕಾ ಕಾರ್ಯದಲ್ಲಿ ಸಿಪಿ ಯೋಗೇಶ್ವರ ಮುನ್ನಡೆ ಸಾಧಿಸಿದ್ದಾರೆ.
ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಮುನ್ನಡೆ ಸಾಧಿಸಿದ್ದಾರೆ. ಬರ್ಹೈತ್ ಕ್ಷೇತ್ರ-ಜೆಎಮ್ಎಮ್ ಅಭ್ಯರ್ಥಿ ಹೇಮಂತ್ ಸೊರೇನ್ ಮುನ್ನಡೆ.
ಮಹಾರಾಷ್ಟ್ರದಲ್ಲಿ ಎಂಎನ್ಎಸ್ ಸ್ಥಾಪಕ ರಾಜ್ಠಾಕ್ರೆ ಪುತ್ರ ಅಮಿತ್ಗೆ ಹಿನ್ನಡೆಯಾಗಿದೆ. ಮಾಹಿಮ್ - ಮಹಾಯುತಿ ಅಭ್ಯರ್ಥಿ ಅಮಿತ್ ಠಾಕ್ರೆ ಅವರಿಗೆ ಹಿನ್ನಡೆಯಾಗಿದೆ. ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆಗೆ 5447 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಬಾರಮತಿ ಕ್ಷೇತ್ರ- ಮಹಾಯುತಿ ಅಭ್ಯರ್ಥಿ ಅಜಿತ್ ಪವಾರ್ಗೆ ಹಿನ್ನಡೆಯಾಗಿದೆ. ಮುಂಬೈನ ವರ್ಲಿ ಕ್ಷೇತ್ರ-ಶಿವಸೇನೆ ಅಭ್ಯರ್ಥಿ ಆದಿತ್ಯ ಠಾಕ್ರೆ ಮುನ್ನಡೆ ಸಾಧಿಸಿದ್ದಾರೆ. ಮುಂಬಾದೇವಿ ಕ್ಷೇತ್ರ-ಕಾಂಗ್ರೆಸ್ ಅಭ್ಯರ್ಥಿ ಅಮಿತ್ ಪಟೇಲ್ ಮುನ್ನಡೆ ಸಾಧಿಸಿದ್ದಾರೆ. ಸಾಕೋಲಿ ಕ್ಷೇತ್ರ-ಕಾಂಗ್ರೆಸ್ ಅಭ್ಯರ್ಥಿ ನಾನಾಪಟೋಲೆಗೆ ಹಿನ್ನಡೆಯಾಗಿದೆ.
ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರು 600 ಮತಗಳ ಮುನ್ನಡೆ ಸಾಧಿಸಿದ್ದಾರೆ. ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಹಿನ್ನಡೆಯಾಗಿದೆ.
ಶಿಗ್ಗಾಂವಿಯಲ್ಲಿ ನಾಲ್ಕನೇ ಸುತ್ತಿನಲ್ಲೂ ಭರತ್ ಬೊಮ್ಮಾಯಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹಮದ್ ಖಾನ್ ಪಠಾಣ್ಗಿಂತ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ 1219 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ನಾಲ್ಕನೇ ಸುತ್ತಿನ ಮತ ಎಣಿಕೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಮುನ್ನಡೆ ಕಾಯ್ದುಕೊಂಡಿದ್ದಾರೆ. ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ 1,001 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರಿಗೆ ಈವರೆಗೆ 20,128 ಮತಗಳು ಬಂದಿವೆ. ಸಂಡೂರು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತುಗೆ 19,127 ಮತಗಳು ಬಂದಿವೆ.
ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಅವರು 2,750 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಜಾರ್ಖಾಂಡ್ 81 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ. ಅಲ್ಲಿಯೂ ಕೂಡ ಮತ ಎಣಿಕೆ ಕಾರ್ಯ ಇಂದೇ ನಡೆಯಲಿದೆ. ಮತ ಎಣಿಕೆ ಆರಂಭವಾಗಿದೆ. ಮೊದಲಿಗೆ ಅಂಚೆ ಮತ ಎಣಿಕೆಯಾಗುತ್ತಿದ್ದು, ಬಳಿಕ ಇವಿಎಂ ಮತ ಎಣಿಕೆ ಮಾಡಲಾಗುತ್ತದೆ.
ಮಹಾರಾಷ್ಟ್ರದಲ್ಲಿ 288 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ. ಅಲ್ಲಿಯೂ ಕೂಡ ಮತ ಎಣಿಕೆ ಕಾರ್ಯ ಇಂದೇ ನಡೆಯಲಿದೆ. ಮತ ಎಣಿಕೆ ಕೆಲವೇ ಕ್ಷಣದಲ್ಲಿ ಆರಂಭವಾಗಲಿದೆ. ಮೊದಲಿಗೆ ಅಂಚೆ ಮತ ಎಣಿಕೆಯಾಗಲಿದೆ. ನಂತರ ಇವಿಎಂ ಮತಗಳನ್ನು ಎಣಿಕೆ ಮಾಡಲಾಗುತ್ತದೆ.
ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆಗೆ ರಾಮನಗರದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿದೆ. ಕಾಲೇಜಿನ 3 ಹಾಲ್ನಲ್ಲಿ ಒಟ್ಟು 20 ಸುತ್ತಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಶೇಕಡಾ 88.81ರಷ್ಟು ಮತದಾನವಾಗಿತ್ತು.
ಫಲಿತಾಂಶ ಹಿನ್ನೆಲೆಯಲ್ಲಿ ಇಡೀ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಭಾನುವಾರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ನಿಷೇಧಾಜ್ಞೆ ವೇಳೆ ಬಹಿರಂಗ ಸಭೆ, ಸಾರ್ವಜನಿಕ ಭಾಷಣ, ಸಂಭ್ರಮಾಚರಣೆ ಮಾಡದಂತೆ ರಾಮನಗರ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಆದೇಶ ಹೊರಡಿಸಿದ್ದಾರೆ.
ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಕೆಲವೇ ಕ್ಷಣದಲ್ಲಿ ಆರಂಭವಾಗಲಿದೆ. 8 ಗಂಟೆಗೆ ಅಂಚೆ ಮತಗಳ ಎಣಿಕೆ ಕಾರ್ಯ ಆರಂಭವಾಗುತ್ತದೆ. ನಂತರ ಇವಿಎಂ ಮತಗಳ ಎಣಿಕೆ ಆರಂಭಾಗಲಿದೆ. ಮತ ಎಣಿಕೆಗೆ ಪ್ರತಿ ಟೇಬಲ್‌ಗೆ ಒಬ್ಬರು ಮೇಲ್ವಿಚಾರಕರು ಹಾಗೂ ಒಬ್ಬರು ಎಣಿಕೆ ಸಹಾಯಕರು ನೇಮಕ ಮಾಡಿಲಾಗಿದೆ. ಹಾಗೇ ಒಬ್ಬರು ಎಣಿಕೆ ಮೈಕ್ರೋ ಅಬ್ಸರವರ್ ನೇಮಿಸಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತಮುತ್ತ ಬಂದೋಬಸ್ತ್ ಮಾಡಲಾಗಿದೆ.
ನಾಲ್ವರು ಡಿವೈಎಸ್ಪಿ ಹಾಗೂ 9 ಸಿಪಿಐ, 25 ಪಿಎಸ್ಐ, 29 ಎಎಸ್ಐ, 250 ಕಾನ್ಸ್ಟೇಬಲ್, ಹೆಡ್ಕಾನ್ಸ್ಟೇಬಲ್, ಕೆಎಸ್ಆರ್ಪಿಯ ಎರಡು ತುಕಡಿ ಮತ್ತು ಭದ್ರತೆಗೆ 4 ಡಿಎಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಕರ್ನಾಟಕದ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಮತದಾನ ನಡೆದಿದ್ದು, ಮತ ಎಣಿಕೆ ಕೆಲವೇ ಕ್ಷಣದಲ್ಲಿ ಆರಂಭವಾಗಲಿದೆ. ಮತ ಎಣಿಕೆಗೆ ಚುನಾವಣಾ ಆಯೋಗ ಸಕಲ ಸಿದ್ದತೆ ಮಾಡಿಕೊಂಡಿದೆ.
Published On - 7:27 am, Sat, 23 November 24