Gauribidanur Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟಗೊಂಡಿದೆ. ಮೇ 10 ರಂದು ನಡೆದ ಮತದಾನದಲ್ಲಿ ಗೌರಿಬಿದನೂರು ಕ್ಷೇತ್ರದಲ್ಲಿ (Gauribidanur Assembly Elections 2023) ಶೇ. 85.09 ರಷ್ಟು ಮತದಾನವಾಗಿತ್ತು. ಪಕ್ಷೇತರ ಅಭ್ಯರ್ಥಿ ಕೆ.ಎಚ್. ಪುಟ್ಟಸ್ವಾಮಿಗೌಡ ಗೆಲುವು ಸಾಧಿಸಿದ್ದು 83177 ಮತ ಪಡೆದಿದ್ದಾರೆ. ಗೆಲುವಿನ ಅಂತರ-37142 ಮತಗಳು. ಸೋತ ಹುರಿಯಾಳುಗಳಾದ ಕಾಂಗ್ರೆಸ್ ಪಕ್ಷದ ಎನ್.ಎಚ್.ಶಿವಶಂಕರ್ ರೆಡ್ಡಿ- 46035 ಮತ್ತು ಬಿಜೆಪಿ ಎಚ್.ಎಸ್. ಶಶಿಧರ್- 8024 ಮತ ಪಡೆದಿದ್ದಾರೆ. ಕಳೆದ 20 ವರ್ಷಗಳಿಂದ ಸ್ಥಳೀಯರಾದ ಗೌರಿಬಿದನೂರು ತಾಲ್ಲೂಕಿನ ನಾಗಸಂದ್ರ ನಿವಾಸಿ ಎನ್.ಹೆಚ್. ಶಿವಶಂಕರರೆಡ್ಡಿ (NH Shivashankar Reddy) ಶಾಸಕರಾಗಿದ್ದರು.
ಗೌರಿಬಿದನೂರು ವಿಧಾನಸಭಾ ಕ್ಷೇತ್ರ ರಾಜಧಾನಿ ಬೆಂಗಳೂರಿನಿಂದ 70 ಕಿ.ಮೀ. ದೂರದಲ್ಲಿದೆ. ದೇಶದ ಬಹುತೇಕ ರೈಲುಜಾಲ ಗೌರಿಬಿದನೂರು ಮೂಲಕ ಹಾದುಹೋಗಿದೆ. ಗೌರಿಬಿದನೂರು ತಾಲ್ಲೂಕಿನಲ್ಲಿ ವಿದುರಾಶ್ವತ್ಥ ಕ್ಷೇತ್ರವಾಗಿದೆ. ವಿದುರಾಶ್ವತ್ಥದಲ್ಲಿ ಅಶ್ವತ್ಥನಾರಾಯಣಸ್ವಾಮಿ ದೇವಾಲಯ ಖ್ಯಾತಿಯಾಗಿದೆ. ಕರ್ನಾಟಕ ಜಲಿಯನ್ ವಾಲಾಬಾಗ್ ಎಂದೇ ಖ್ಯಾತಿಯಾಗಿರುವ ಸ್ವಾತಂತ್ರ್ಯ ಸೇನಾನಿಗಳ ತ್ಯಾಗ ಭೂಮಿ ಇದೆ. ವಿದುರಾಶ್ವತ್ಥದಲ್ಲಿ ಹುತಾತ್ಮ ವೀರಯೋಧರ ಸ್ತೂಪ ಇದೆ. ಸ್ವಾತಂತ್ರ್ಯ ಸೇನಾನಿಗಳ ನೆನಪಿಗಾಗಿ ಪೋಟೋ ಗ್ಯಾಲರಿ, ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಕ್ಷೇತ್ರದಲ್ಲಿ ಶಿಕ್ಷಣ ತಜ್ಞ, ವೈಚಾರಿಕ ತಜ್ಞ, ಹೆಚ್.ನರಸಿಂಹಯ್ಯ (ಹೆಚ್‌ಎನ್) ಹುಟ್ಟೂರಿದೆ. ನರಸಿಂಹಯ್ಯನವರ ಸವಿನೆನಪಿಗಾಗಿ ನೆಹರು ತಾರಾಲಯ ಮಾದರಿಯಲ್ಲಿ ವಿಜ್ಞಾನಪಾರ್ಕ್ ನಿರ್ಮಾಣ ಮಾಡಲಾಗಿದೆ.
ಕ್ಷೇತ್ರದಲ್ಲಿ ದಿನಾಂಕ 20-04-2023 ರಂತೆ ಪುರುಷ ಮತದಾರರು 104041, ಮಹಿಳಾ ಮತದಾರರು 106339, ಇತರೆ 5 ಜನ ಸೇರಿ ಒಟ್ಟು 210385 ಮತದಾರರಿದ್ದಾರೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎನ್.ಹೆಚ್ ಶಿವಶಂಕರರೆಡ್ಡಿ 69000 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಕೆ.ಜೈಪಾಲ್‌ರೆಡ್ಡಿ 34759 ಮತಗಳನ್ನು ಪಡೆದಿದ್ದರು. ಜೆಡಿಎಸ್‌ನಿಂದ ಸಿ.ಆರ್.ನರಸಿಂಹಮೂರ್ತಿ 59832 ಮತಗಳನ್ನು ಪಡೆದಿದ್ದರು.
ಈ ಬಾರಿಯ 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಎನ್.ಹೆಚ್.ಶಿವಶಂಕರ್‌ರೆಡ್ಡಿ, ಬಿಜೆಪಿಯಿಂದ ಡಾ. ಹೆಚ್.ಎಸ್.ಶಶಿಧರ್, ಜೆಡಿಎಸ್‌ನಿಂದ ಸಿ.ಆರ್.ನರಸಿಂಹಮೂರ್ತಿ ಸ್ಪರ್ಧಿಸಿದ್ದು ಮೂವರು ಪ್ರಬಲ ಅಭ್ಯರ್ಥಿಗಳಿಗೆ ಪಕ್ಷೇತರ ಅಭ್ಯರ್ಥಿಯಾಗಿರುವ ಉದ್ಯಮಿ ಹಾಗೂ ಹೊಸಕೋಟೆ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡರವರ ಮಾವ ಕೆ.ಹೆಚ್. ಪುಟ್ಟಸ್ವಾಮಿಗೌಡ ಪ್ರಬಲ ಪೈಪೋಟಿ ನೀಡಿದ್ದಾರೆ. ಕ್ಷೇತ್ರದಲ್ಲಿ ಅಂದಾಜು ಜಾತಿವಾರು ಮತಗಳ ವಿವರ ಹೀಗಿದೆ. ಎಸ್‌ಟಿ 45 ಸಾವಿರ, ಎಸ್‌ಸಿ 40 ಸಾವಿರ, ಕುರುಬ 20 ಸಾವಿರ, ಸಾದರಗೌಡ 20 ಸಾವಿರ, ರೆಡ್ಡಿ 30 ಸಾವಿರ, ಮುಸ್ಲಿಂ 18 ಸಾವಿರ, ಲಿಂಗಾಯತ/ಬ್ರಾಹ್ಮಣ 5 ಸಾವಿರ, ಬಲಜಿಗ 12 ಸಾವಿರ, ಇತರೆ 10 ಸಾವಿರಕ್ಕೂ ಹೆಚ್ಚು ಎನ್ನುವ ಮಾಹಿತಿ ಹರಿದಾಡುತ್ತಿದೆ.
Published On - 2:58 am, Sat, 13 May 23