ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ದಿನಾಂಕ ನಿಗದಿಯಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿ ಆಡಳಿತರೂಢ ಬಿಜೆಪಿ ವಿರುದ್ಧ ರಣಕಹಳೆ ಮೊಳಗಿಸಿವೆ. ಇದೀಗ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಭರ್ಜರಿ ಕಸರತ್ತು ನಡೆಸಿದ್ದು, ಅಭ್ಯರ್ಥಿಗಳ ಆಯ್ಕೆಗೆ ವಿನೂತನ ಮಾದರಿ ಅನುಸರಿಸಿದೆ. ಹೌದು.. ಶುಕ್ರವಾರ ಎಲ್ಲ ವಿಧಾನಸಭಾ ಕ್ಷೇತ್ರಗಳ ಪದಾಧಿಕಾರಿಗಳು ಹಾಗೂ ಶಕ್ತಿ ಕೇಂದ್ರಗಳ ಪ್ರಮುಖರಿಂದ ಮತದಾನ ವ್ಯವಸ್ಥೆ ಮೂಲಕ ಅಭ್ಯರ್ಥಿಗಳ ಹೆಸರುಗಳನ್ನು ಸಂಗ್ರಹಿಸಿದ್ದ ಬಿಜೆಪಿ ರಾಜ್ಯ ನಾಯಕರು ನಂತರ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಎಲ್ಲ ಜಿಲ್ಲೆಗಳ ಕೋರ್ ಕಮಿಟಿಗಳ ಸದಸ್ಯರನ್ನು ಬೆಂಗಳೂರಿಗೆ ಕರೆಸಿಕೊಂಡು ಅವರ ಅಭಿಪ್ರಾಯವನ್ನೂ ಸಂಗ್ರಹಿಸಿದ್ದಾರೆ. ಕ್ಷೇತ್ರವಾರು ಅಭ್ಯರ್ಥಿಗಳ ಫೈನಲ್ ಮಾಡಲು ಬೆಂಗಳೂರಿನ ಗೋಲ್ಡನ್ ಪಾಮ್ ರೆಸಾರ್ಟ್‌ನಲ್ಲಿ ನಡೆದ ಎರಡು ದಿನಗಳ ಕೋರ್‌ಕಮಿಟಿ ಸಭೆಯಲ್ಲಿ ಆಕಾಂಕ್ಷಿಗಳ ಹೆಸರನ್ನು ಅಳೆದು ತೂಗಿ ಚರ್ಚಿಸಲಾಗಿದೆ.
ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವುದರಲ್ಲಿ 28 ಕ್ಷೇತ್ರಗಳಿರುವ ಬೆಂಗಳೂರೇ ನಿರ್ಣಾಯಕ. ಹೀಗಾಗಿ ಬೆಂಗಳೂರಿನಲ್ಲಿ ಯಾವ ಕ್ಷೇತ್ರಗಳಿಗೆ ಯಾರಿಗೆಲ್ಲ ಟಿಕೆಟ್ ನೀಡಬೇಕು ಎಂದು ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ. ಕೆಲವು ಕ್ಷೇತ್ರಗಳಿಗೆ ಒಂದು ಇನ್ನು ಕೆಲವು ಕ್ಷೇತ್ರಗಳಿಗೆ ಇಬ್ಬರಿಂದ ಮೂವರ ಹೆಸರನ್ನು ಶಿಫಾರಸು ಮಾಡಲಾಗಿದೆ. ಹಾಗಿದ್ರೆ ಯಾರ್ಯಾರ ಹೆಸರು ಪ್ರಸ್ತಾಪವಾಗಿದೆ ಎನ್ನುವುದನ್ನು ನೋಡುವುದಾದರೆ
ಇದನ್ನೂ ಓದಿ: ಕೊನೆಗೂ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ ನಿಗದಿ, ಇಲ್ಲಿದೆ ಸಂಭವನೀಯ ಅಭ್ಯರ್ಥಿಗಳ 2ನೇ ಪಟ್ಟಿ
ಇನ್ನು ಸಿದ್ದರಾಮಯ್ಯ ಸ್ಪರ್ಧೆಯಿಂದಾಗಿ ಮೈಸೂರು ಜಿಲ್ಲೆಯ ವರುಣ ಕ್ಷೇತ್ರ ಹೈವೋಲ್ಟೇಜ್ ಕಣವಾಗಿದೆ. ಹೀಗಾಗಿ ಈ ಕ್ಷೇತ್ರದ ಬಗ್ಗೆ ಗಹನ ಚರ್ಚೆ ನಡೆಸಲಾಗಿದೆ. ಮೈಸೂರು ನಗರ ಮತ್ತು ಗ್ರಾಮಾಂತರ ಬಿಜೆಪಿ ಕೋರ್‌ಕಮಿಟಿ ಮುಖಂಡರು ವರುಣಗೆ ಒಟ್ಟು ಐವರು ಆಕಾಂಕ್ಷಿಗಳ ಹೆಸರು ಉಲ್ಲೇಖಿಸಿದ್ದಾರೆ. ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಬೇಕು, ಚಾಮುಂಡೇಶ್ವರಿ ಅಭ್ಯರ್ಥಿ ವಿಚಾರದಲ್ಲಿ ಪಕ್ಷ ಸೂಕ್ತ ಗಮನ ಹರಿಸಬೇಕು ಅಂತೇಳಿದ್ದಾರೆ.
ಇನ್ನು ಮಂಡ್ಯ ಜಿಲ್ಲಾ ಬಿಜೆಪಿ ಕೋರ್‌ಕಮಿಟಿ ಸಭೆ ಜಿಲ್ಲೆಯ 7 ಕ್ಷೇತ್ರಗಳಿಗೆ ಶಿಫಾರಸು ಮಾಡಿದೆ. ಮಂಡ್ಯ ಕ್ಷೇತ್ರ- ಅಶೋಕ್ ಜಯರಾಂ, ಡಾ.ಸಿದ್ದರಾಮಯ್ಯ ಹಾಗೂ ಚಂದಗಾಲು ಶಿವಣ್ಣ, ವಿದ್ಯಾ ನಾಗೇಂದ್ರ ಹೆಸರು ಪ್ರಸ್ತಾಪವಾಗಿದೆ.
ಇನ್ನು ಚಾಮರಾಜನಗರ ಜಿಲ್ಲಾ ಕೋರ್‌ಕಮಿಟಿ ಮುಖಂಡರು ಸಚಿವ ವಿ.ಸೋಮಣ್ಣ ಹೆಸರಿಗೆ ಪರ, ವಿರೋಧ ವ್ಯಕ್ತಪಡಿಸಿದ್ದಾರೆ. ಚಾಮರಾಜನಗರ ಕ್ಷೇತ್ರಕ್ಕೆ ಸೋಮಣ್ಣ ಸೇರಿ ಐವರು ಹೆಸರನ್ನು ಪ್ರಸ್ತಾಪಿಸಲಾಗಿದ್ರೆ, ಕೊಳ್ಳೆಗಾಲ ಮತ್ತು ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಹಾಲಿ ಶಾಸಕರು ಸೇರಿ ತಲಾ 2 ಆಕಾಂಕ್ಷಿಗಳ ಹೆಸರು ಉಲ್ಲೇಖಿಸಲಾಗಿದೆ. ಆದ್ರೆ ಈಗಾಗಲೇ ಚಾಮರಾಜನಗರ ಜಿಲ್ಲೆಗೆ 4-5 ಜನ ಹೊರಗಿನವರೇ ಬಂದಿದ್ದಾರೆ. ಸ್ಥಳೀಯರಿಗೆ ಕೊಟ್ಟರೆ ಉತ್ತಮ ಎಂದು ಕೆಲ ಸದಸ್ಯರು ಸೋಮಣ್ಣಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇನ್ನು ಪ್ರತಿಷ್ಠಿತ ಕಣವಾಗಿರುವ ಕೋಲಾರ ಕ್ಷೇತ್ರಕ್ಕೆ ಬಿಜೆಪಿ ಕೋರ್‌ಕಮಿಟಿ ಸಭೆಯಲ್ಲಿ ಜಿಲ್ಲಾ ಮುಖಂಡರು ವರ್ತೂರು ಪ್ರಕಾಶ್ ಸೇರಿ ಮೂವರ ಹೆಸರನ್ನು ಶಿಫಾರಸು ಮಾಡಿದ್ದಾರೆ. ಇನ್ನು ಕೆಜಿಎಫ್ ಕ್ಷೇತ್ರಕ್ಕೆ ಸಂಸದ ಮುನಿಸ್ವಾಮಿ ಅವರ ಪತ್ನಿ ಶೈಲಜಾ ಹೆಸರು ಪ್ರಸ್ತಾಪಿಸಲಾಗಿದೆ.
ಇನ್ನು ಜಿದ್ದಾಜಿದ್ದಿನ ಅಖಾಡವಾಗಿರುವ ರಾಮನಗರದ ನಾಲ್ಕು ಕ್ಷೇತ್ರಗಳಿಗೆ ತಲಾ ಒಂದೊಂದು ಹೆಸರನ್ನು ಜಿಲ್ಲಾ ಕೋರ್ ಕಮಿಟಿ ಸದಸ್ಯರು ಶಿಫಾರಸು ಮಾಡಿದ್ದಾರೆ. ರಾಮನಗರ ಕ್ಷೇತ್ರಕ್ಕೆ ಗೌತಮ್ ಗೌಡ ಹಾಗೂ ಚನ್ನಪಟ್ಟಣ ಕ್ಷೇತ್ರ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ಮಾಗಡಿ ಕ್ಷೇತ್ರ- ಪ್ರಸಾದ್ ಗೌಡ ಕನಕಪುರ ಕ್ಷೇತ್ರ- ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಅಪ್ಪಾಜಿ ಗೌಡ ಹೆಸರು ಚರ್ಚೆಯಾಗಿದೆ.
ಕೊಡಗು ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ, ಹಾಲಿ ಇಬ್ಬರು ಶಾಸಕರ ಬದಲಾಗಿ ಈ ಬಾರಿ ಬೇರೆಯವರಿಗೆ ಕೊಡುವ ಬಗ್ಗೆ ಕಾರ್ಯಕರ್ತರ ಅಭಿಪ್ರಾಯ ವ್ಯಕ್ತವಾಗಿದೆ. ಹಾಲಿ ಶಾಸಕರು 5 ಬಾರಿ, 3 ಬಾರಿ ಗೆದ್ದು ಬಂದಿದ್ದಾಗಿದೆ, ಈಗ ಬಾರಿ ಯುವ ಮುಖಕ್ಕೆ ಅವಕಾಶದ ಬಗ್ಗೆ ಸಾರ್ವಜನಿಕ ಮತ್ತು ಕಾರ್ಯಕರ್ತರ ಮನಸ್ಸಿನಲ್ಲಿದೆ ಎಂದು ಸಭೆಯಲ್ಲಿ ಕೋರ್‌ಕಮಿಟಿ ಸದಸ್ಯರು ಹೇಳಿದ್ದಾರೆ.
ಮಧ್ಯಕರ್ನಾಟಕ, ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕದಲ್ಲೂ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಜೋರಾಗಿದ್ದು, ಸ್ವಲ್ಪ ಹೆಚ್ಚು ಕಮ್ಮಿಯಾದ್ರೂ ಹಲವು ಕ್ಷೇತ್ರಗಳಲ್ಲಿ ಬಂಡಾಯ ಭುಗಿಲೇಳುವ ಆತಂಕವಿದೆ. ಅಥಣಿಯಲ್ಲಿ ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಬೇಕೆಂದು ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ. ಕುಮಟಳ್ಳಿ ಪರ ಬಲವಾಗಿ ನಿಂತು, ಕೋರ್‌ಕಮಿಟಿ ಸಭೆಯಲ್ಲಿ ವಾಗ್ವಾದ ಕೂಡ ನಡೆಸಿದ್ದಾರೆ. ಇನ್ನು ಶಿವಮೊಗ್ಗ ನಗರದಲ್ಲಿ ಮಾಜಿ ಸಚಿವ ಈಶ್ವರಪ್ಪಗೆ ಟಿಕೆಟ್ ನೀಡಲು ಸ್ಥಳೀಯ ಮುಖಂಡರಿಂದ ವಿರೋಧ ವ್ಯಕ್ತವಾಗಿದೆ, ಇದಲ್ಲದೆ ಹೊಳಲ್ಕೆಕೆ ಶಾಸಕ ಎಂ.ಚಂದ್ರಪ್ಪ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.
ಒಟ್ಟಾರೆ ಮೊನ್ನೆ 14 ಸಂಘಟನಾತ್ಮಕ ಜಿಲ್ಲೆಗಳ 114 ಕ್ಷೇತ್ರಗಳು ನಿನ್ನೆ 15 ಜಿಲ್ಲೆಗಳ ಒಟ್ಟು 110 ಕ್ಷೇತ್ರಗಳ ಜಿಲ್ಲಾ ಕೋರ್ ಕಮಿಟಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಶಿಫಾರಸಿನ ಅನ್ವಯ ಟಿಕೆಟ್ ಹಂಚಿಕೆಗೆ ತೀರ್ಮಾನ ಕೈಗೊಂಡರೇ ಬಿಜೆಪಿಯಲ್ಲಿ ಬಂಡಾಯ ಭುಗಿಲೇಳುವ ಸಾಧ್ಯತೆ ಇದೆ. ಇನ್ನು ಏಪ್ರಿಲ್ 5-6 ರಂದು ರಾಜ್ಯ ಕೋರ್ ಕಮಿಟಿ ಸಭೆ ನಡೆಯುವ ಸಾಧ್ಯತೆ ಇದ್ದು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ದೆಹಲಿಗೆ ಶಿಫಾರಸಾಗಲಿದೆ. ಬಳಿಕ ಕೇಂದ್ರ ಸಂಸದೀಯ ಮಂಡಳಿ ಸಭೆ ಸೇರಿ ಅಭ್ಯರ್ಥಿಗಳ ಹೆಸರುಗಳನ್ನು ಆಯ್ಕೆ ಮಾಡಲಿದೆ. ಬಹುತೇಕ ಈ ಏಪ್ರಿಲ್ 7 ಅಥವಾ 8ರಂದು ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.
ಇನ್ನಷ್ಟು ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ