ಮತದಾನ ಆರಂಭ: ಎಲ್ಲರೂ ಮತ ಹಾಕುವ ಮೂಲಕ ಪ್ರಜಾಪ್ರಭುತ್ವದ ಹಬ್ಬದ ದಿನವನ್ನಾಗಿ ಆಚರಿಸಿ

ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರದಳು ಸೇರಿದಂತೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ  ಮತದಾನಕ್ಕೆ ಚುನಾವಣಾ ಅಯೋಗ ಭರ್ಜರಿ ತಯಾರಿ ಮಾಡಿಕೊಂಡಿದ್ದು ಮತದಾನ ಆರಂಭವಾಗಿದೆ. 

ಮತದಾನ ಆರಂಭ: ಎಲ್ಲರೂ ಮತ ಹಾಕುವ ಮೂಲಕ ಪ್ರಜಾಪ್ರಭುತ್ವದ ಹಬ್ಬದ ದಿನವನ್ನಾಗಿ ಆಚರಿಸಿ
ಮತದಾನ ಆರಂಭ
Follow us
ಆಯೇಷಾ ಬಾನು
| Updated By: ಕಿರಣ್ ಹನುಮಂತ್​ ಮಾದಾರ್

Updated on: May 10, 2023 | 7:30 AM

ಬೆಂಗಳೂರು: ಐದು ವರ್ಷಕ್ಕೊಮ್ಮೆ ಬರುವ ಪ್ರಜಾಪ್ರಭುತ್ವದ ಹಬ್ಬಕ್ಕೆ ಇಡೀ ರಾಜ್ಯ ಸಜ್ಜಾಗಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಸುದೀರ್ಘ ಕಾಲ ನಡೆದ ಅಬ್ಬರದ ಪ್ರಚಾರ, ನಾನಾ ರಣತಂತ್ರಗಳಿಗೆ ಇಂದು ಮತದಾರ ಉತ್ತರ ನೀಡಲಿದ್ದಾನೆ. ಇನ್ನು ರಾಜ್ಯದ್ದೇ ಒಂದು ಲೆಕ್ಕವಾದ್ರೆ ರಾಜ್ಯ ರಾಜಧಾನಿ ಬೆಂಗಳೂರಿನದ್ದೇ ಒಂದು ಲೆಕ್ಕ. ಇಲ್ಲಿ ಬರೋಬ್ಬರಿ 28 ಕ್ಷೇತ್ರಗಳು ಇರೋದ್ರಿಂದ ಮೂರು ಪಕ್ಷಗಳ ಕಣ್ಣು ಬೆಂಗಳೂರಿನ ಮೇಲೆಯೇ ಇದೆ. ಹೀಗಾಗಿ ಮೂರು ಪಕ್ಷಗಳು ಇಲ್ಲಿ ಅಬ್ಬರದ ಪ್ರಚಾರವನ್ನೇ ಮಾಡಿದ್ವು. ಅದೇ ಪ್ರಚಾರಕ್ಕೆ ಇಂದು ಉತ್ತರ ಸಿಗಲಿದೆ. ಮತದಾರನ ಹಕ್ಕು ಚಲಾವಣೆಗೆ ಸಮಯ ನಿಗದಿಯಾಗಿದ್ದು ಮತದಾನ ಶುರುವಾಗಿದೆ.

ಬೆಳಗ್ಗೆ 7 ರಿಂದ ಸಂಜೆ 6 ರವರೆಗೂ ಮತದಾನ

ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರದಳು ಸೇರಿದಂತೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ  ಮತದಾನಕ್ಕೆ ಚುನಾವಣಾ ಅಯೋಗ ಭರ್ಜರಿ ತಯಾರಿ ಮಾಡಿಕೊಂಡಿದ್ದು ಮತದಾನ ಆರಂಭವಾಗಿದೆ.  ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಏಕ ಕಾಲದಲ್ಲಿ ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಮತಗಟ್ಟೆಗಳಿಗೆ, ಇವಿಎಂ ಹಾಗೂ ವಿವಿಪ್ಯಾಟ್ ಗೆ ಪೂಜೆ ಸಲ್ಲಿಸಲಾಗಿದ್ದು ಮತದಾನ ಶುರುವಾಗಿದೆ.

ಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಸಿ ಕ್ಯಾಮಾರ ಕಣ್ಗಾವಲು

ಇನ್ನು ಚುನಾವಣಾ ಆಯೋಗ ಬೆಂಗಳೂರಿನ ಮತಗಟ್ಟೆಯ ಸುತ್ತ ಸಿಸಿ ಕ್ಯಾಮಾರ ಅಳವಡಿಕೆ ಮಾಡಿದ್ದು ಜಿಲ್ಲಾ ಚುನಾವಣಾ ಆಯೋಗ ಪ್ರತಿ ಮತಗಟ್ಟೆಗೆ 5 ಜನ ಅಧಿಕಾರಿಗಳನ್ನು ನಿಯೋಜನೆ ಮಾಡಿದೆ. ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಸಿ ಕ್ಯಾಮಾರ ಅಳವಡಿಕೆ ಮಾಡಿದೆ. 60 ವರ್ಷ ಮೇಲ್ಪಟ್ಟ ವೃದ್ಧರಿಗೆ, ಅಂಗವಿಕಲರಿಗೆ ಉಚಿತ ಕ್ಯಾಬ್ ವ್ಯವಸ್ಥೆ ಮಾಡಿದ್ದು ಮತ ಕೇಂದ್ರದ ಬಳಿ ಕಾರ್ ಪಾರ್ಕಿಂಗ್ ಹಾಗೂ ಌಪ್ ಮೂಲಕ ನೊಂದಣಿ ಮಾಡಿಕೊಂಡವರಿಗೆ ನೇರವಾಗಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮತಗಟ್ಟೆಯ 200 ಮೀಟರ್ ಒಳಗೆ ಯಾವುದೇ ಪಕ್ಷದ ಚಿಹ್ನೆ ಬಳಸದಂತೆ ನಿಷೇಧ ಮಾಡಿ ಆಯೋಗ ಆದೇಶ ಹೊರಡಿಸಿದೆ.

ಇದನ್ನೂ ಓದಿ: ರಾಜ್ಯದ ‘ಗದ್ದುಗೆ’ ಭವಿಷ್ಯ ನಿರ್ಧಾರಕ್ಕೆ ಕೌಂಟ್‌ಡೌನ್‌: ತಪ್ಪದೇ ಮತ ಚಲಾಯಿಸಿ ಉತ್ತಮರನ್ನು ಆಯ್ಕೆ ಮಾಡಿ

ಗಮನ ಸೆಳೆಯುತ್ತಿವೆ ವಿಶೇಷ ಮತಗಟ್ಟೆಗಳು

ಮತದಾರರನ್ನ ಮತಗಟ್ಟೆಗೆ ಸೆಳೆಯೋ ಉದ್ದೇಶದಿಂದ ಥೀಮ್ ಬೇಸ್ಡ್ ಮತಗಟ್ಟೆಗಳ ನಿರ್ಮಾಣ ಮಾಡಿದೆ. ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 264 ಮತಗಟ್ಟೆ ನಿರ್ಮಾಣ ಮಾಡಲಾಗಿದೆ. ಮಹಿಳಾ ಮತದಾರರನ್ನ ಪ್ರೋತ್ಸಾಹಿಸಲು ಪಿಂಕ್ ಮತಗಟ್ಟೆ, ಯುವ ಮತದಾರರನ್ನ ಸೆಳೆಯಲು ಯುವ ಮತಗಟ್ಟೆ , ಸಿರಿಧಾನ್ಯ ಮತಗಟ್ಟೆ ಹಾಗೂ ವಿಶೇಷ ಚೇತನ ಮತಗಟ್ಟೆ, ಸಂಸ್ಕೃತಿ ಮತಗಟ್ಟೆ, ಪರಿಸರ ಮತಗಟ್ಟೆ, ವಿಜ್ಞಾನ ಮತ್ತು ತಂತ್ರಜ್ಞಾನ ಮತಗಟ್ಟೆ, ಮಾಜಿ ಸೈನಿಕ ಮತಗಟ್ಟೆ, ತೃತೀಯ ಲಿಂಗಿಯ ಮತಗಟ್ಟೆ, ಕ್ರೀಡಾ ಮತಗಟ್ಟೆ ಅಂತೆಲ್ಲಾ ಹಲವು ಮಾದರಿಯ ಮತಗಟ್ಟೆಗಳನ್ನ ನಿರ್ಮಾಣ ಮಾಡಿದೆ. ಮಹಿಳೆಯರಿಗಾಗಿ ಪ್ರತಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಐದು ಸಖಿ ಮತಗಟ್ಟೆಗಳನ್ನ ನಿರ್ಮಾಣ ಮಾಡಿದೆ.

97 ಲಕ್ಷ ಮತದಾರರಿಂದ ಹಕ್ಕು ಚಲಾವಣೆ

ಬಿಬಿಎಂಪಿ ವ್ಯಾಪ್ತಿಯ28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 8802 ಮತಗಟ್ಟೆಗಳಿದ್ದು, 97ಲಕ್ಷಕ್ಕೂ ಹೆಚ್ಚು ಮತದಾರರು ಮತ ಚಲಾವಣೆ ಮಾಡಲಿದ್ದಾರೆ. 1.43 ಲಕ್ಷ ಯುವ ಮತದಾರರು ಈ ಬಾರಿ ಈ ಪಟ್ಟಿಯಲ್ಲಿ ಸೇರಿರುವುದು ವಿಶೇಷವಾಗಿದೆ.

ಡಿಸ್ಕೌಂಟ್ ಕೊಡುವವರಿಗೆ ಆಯೋಗದ ಬ್ರೇಕ್

ಜನರಲ್ಲಿ ಮತಜಾಗೃತಿಗೆ ಮುಂದಾಗಿದ್ದ ಹೋಟೆಲ್ ಮಾಲೀಕರಿಗೆ ಚುನಾವಣಾ ಆಯೋಗ ಶಾಕ್ ನೀಡಿದೆ. ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಈ ಹಿನ್ನಲೆ ಈ ರೀತಿಯ ಪ್ರಕಟನೆ ನೀಡುವ ಮಾಲೀಕರ ವಿರುದ್ಧ ಕ್ರಮಕ್ಕೆ ಮುಂದಾಗ್ತೀವೆ ಅಂದಿದ್ದಾರೆ.

ರಾಜ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ