Karnataka Election Results: ಬಿಜೆಪಿ ಸೋಲು, ಕಾಂಗ್ರೆಸ್​​ ಗೆಲುವಿಗೆ ನಾಯಕರು ಹೇಳಿದ್ದಲ್ಲ, ನಿಜವಾದ ಕಾರಣ ಇಲ್ಲಿದೆ

ಒಂದು ರಾಜ್ಯ ಸರಕಾರಕ್ಕೆ ಇರುವ ದೊಡ್ಡ ಸವಾಲು ಅಧಿಕಾರ-ವಿರೋಧಿ ಅಲೆ. ಅದು ಇತ್ತೇ? ಹಾಗಿದ್ದರೆ, ಕಾಂಗ್ರೆಸ್ ನಾಯಕರು ಹೇಳಿದ ಕಾರಣಗಳು ಅಧಿಕಾರ ವಿರೋಧಿ ಅಲೆಯ ವ್ಯಾಖ್ಯೆಯ ಒಳಗೆ ಬರುತ್ತಿಲ್ಲವೇ?

Karnataka Election Results: ಬಿಜೆಪಿ ಸೋಲು, ಕಾಂಗ್ರೆಸ್​​ ಗೆಲುವಿಗೆ ನಾಯಕರು ಹೇಳಿದ್ದಲ್ಲ, ನಿಜವಾದ ಕಾರಣ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
ಡಾ. ಭಾಸ್ಕರ ಹೆಗಡೆ
|

Updated on:May 14, 2023 | 9:58 AM

ಇಂಗ್ಲಿಷಿನ ಗಾದೆ ನೆನಪಿಗೆ ಬರುತ್ತಿದೆ- ಗೆಲುವಿಗೆ ಹಲವಾರು ಪೋಷಕರು, ಸೋಲು ಅನಾಥನ ಪಾಲು. ಕರ್ನಾಟಕ ವಿಧಾನಸಭೆ ಚುನಾವಣೆಯ ವಿಶ್ಲೇಷಣೆ ನೋಡಿದರೆ, ಅದು ಅತ್ತ ಸಾಗುತ್ತಿರುವುದು ಕಾಣುತ್ತಿದೆ. ಮೊದಲು ಗೆದ್ದವರು ಕೊಡುತ್ತಿರುವ ಕಾರಣ ನೋಡೋಣ. ಆಮೇಲೆ ಬಿಜೆಪಿ ಸೋಲಿಗೆ ಕಾರಣ ನೋಡಬಹುದು. ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ, ಹೇಳುವ ಪ್ರಕಾರ, ಇಂದಿನ ಫಲಿತಾಂಶ ಕರ್ನಾಟಕದಲ್ಲಿ ದ್ವೇಷದ ಬಾಜಾರ್ ಬಂದ್ ಆಗುವಂತೆ ಮಾಡಿದೆ ಮತ್ತು ಮತ್ತು ಪ್ರೀತಿಯ ಅಂಗಡಿ ತೆರೆದಿದೆ. ಇದರಲ್ಲಿ ಯಾವ ಅರ್ಥ ಹುಡುಕಲೂ ಸಾಧ್ಯವಿಲ್ಲ. ಭಾರತ್ ಜೋಡೋ ಯಾತ್ರೆ ನಂತರ, ತಮ್ಮ ರಾಜಕೀಯ ವ್ಯಕ್ತಿತ್ವದಲ್ಲಿ ಮಹತ್ತರ ಬದಲಾವಣೆ ತರಲು ತುಂಬಾ ಪ್ರಯತ್ನ ಪಡುತ್ತಿರುವ ರಾಹುಲ್ ಗಾಂಧಿ, ಪ್ರೀತಿ ಬಗ್ಗೆ ಪದೇ ಪದೇ ಮಾತನಾಡುತ್ತಿದ್ದಾರೆ. ಅದನ್ನೇ ಇಲ್ಲಿಯೂ ಹೇಳಿದ್ದಾರೆ. ರಾಹುಲ್ ಅವರು ಒಂದು ರೀತಿಯಲ್ಲಿ ಕವಿವಾಣಿಯನ್ನು ಎತ್ತಿಕೊಂಡು ಹೇಳಿದಂತಿದೆ.

ಯಾಕೆಂದರೆ ಇತ್ತೀಚೆಗೆ ಟೈಮ್ಸ್ ಆಫ್ ಇಂಡಿಯಾದಲ್ಲಿ ರುಚಿರ್ ಶರ್ಮಾ ನೀಡಿರುವ ಮಾಹಿತಿ ನೋಡಿದರೆ, ಕರ್ನಾಟಕದ ಬೆಳವಣಿಗೆ ಬಿಜೆಪಿ ಸರಕಾರದ ಅವಧಿಯಲ್ಲಿ ಕೂಡ ಕುಂಠಿತಗೊಂಡಿರಲಿಲ್ಲ. ಸರಕಾರದ ಸವಲತ್ತು ಹಿಂದುಳಿದ ಊರುಗಳಿಗೂ ತಲುಪುತ್ತಿವೆ. ಇದು ರಾಹುಲ್ ಗಾಂಧಿ ಅವರ ಹೇಳಿಕೆಗೆ ವಿರುಧ್ಧವಾಗಿವೆ. ಕರ್ನಾಟಕವನ್ನು ಭಂಡ ಬಂಡವಾಳಿಗರ ಗುಂಪು ನಡೆಸುತ್ತಿರಲಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಅಥವಾ ಹಿಂದುತ್ವದ ಪ್ರಬಲ ಪ್ರತಿಪಾದಕರಾದ ಎಲ್ಲರನ್ನು ಸೋಲಿಸುವದಾಗಿದ್ದಲ್ಲಿ, ಬಸನಗೌಡ ಪಾಟೀಲ್ ಯತ್ನಾಳ್ ಹೇಗೆ ಗೆದ್ದರು. 2013 ರಲ್ಲಿ ಕರಾವಳಿಯಲ್ಲಿ ಬಿಜೆಪಿ ಒಂದೇ ಸೀಟು ಗೆದ್ದಿತ್ತು. ಈ ಬಾರಿ ಹಾಗೇ ಆಗಲಿಲ್ಲ. ಅಲ್ಲಿ, ಕಾಂಗ್ರೆಸ್ ಸೀಟು ಜಾಸ್ತಿ ಆಗಿದೆ. ಆದರೆ, ಬಿಜೆಪಿ ತನ್ನ ಮೂಲ ಬಲ ಇಟ್ಟುಕೊಂಡಂತೆ ಕಾಣುತ್ತಿದೆ. ಇದನ್ನು ನೋಡಿದರೆ, ರಾಹುಲ್ ಮತ್ತು ಸಿದ್ಧರಾಮಯ್ಯ ಅವರ ಹೇಳಿಕೆಯನ್ನ ತರ್ಕ ಇಲ್ಲ ಎಂಬುದು ಎದ್ದು ಕಾಣುತ್ತಿದೆ.

ಎರಡು ಮುಖ್ಯಮಂತ್ರಿ ಮುಖ ಇದ್ದಾಗ್ಯೂ ಎಲ್ಲಿಯೂ ಅದು ತಮ್ಮ ಪಕ್ಷದ ಫಲಿತಾಂಶಕ್ಕೆ ಹೊಡೆತ ಕೊಡಬಾರದು ಎಂದು ಅತೀವ ಎಚ್ಚರಿಕೆಯಿಂದ ಕೆಲಸ ಮಾಡಿದ ಕಾಂಗ್ರೆಸ್​ನ ತಂತ್ರ ಫಲಿಸಿದೆ. ಲಿಂಗಾಯತ ಮುಖ್ಯಮಂತ್ರಿ ಮುಖ ಇಲ್ಲದೇ ಲಿಂಗಾಯತ ಮತ ಸೆಳೆದಿದ್ದು ಕಾಂಗ್ರೆಸ್​ನ ಮತ್ತೊಂದು ಪ್ಲಸ್​ ಪಾಯಿಂಟ್​. ಲಿಂಗಾಯತರಲ್ಲಿ ಸ್ಥಳೀಯವಾಗಿ ತುಂಬಾ ಪ್ರಬಲರಾಗಿರುವ ನಾಯಕರನ್ನು ಅವಲಂಬಿಸಿದ್ದು ಅವರಿಗೆ ಟಿಕೆಟ್​ ಕೊಟ್ಟಿದ್ದು ಮತ್ತೊಂದು ಧನಾತ್ಮಕ ಅಂಶ. ಯಡಿಯೂರಪ್ಪ ನಿವೃತ್ತಿ ಘೋಷಿಸಿದ ಹಂತದಲ್ಲಿ, ಅಲ್ಲಲ್ಲಿ ಇರುವ ಲಿಂಗಾಯತರು, ತಮ್ಮ ಸ್ಥಳೀಯ ನಾಯಕರತ್ತ ಸದ್ಯಕ್ಕೆ ವಾಲಿರಬಹುದು.

ಕಾಂಗ್ರೆಸ್ ನಾಯಕರು ಭಾರತ್ ಜೋಡೋ ಯಾತ್ರೆಯಿಂದ ಪಕ್ಷ ಗೆಲ್ಲಲು ಸಹಾಯವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ಎಲ್ಲಾ ಎಕ್ಸಿಟ್ ಪೋಲ್ ಮತ್ತು ಚುನಾವಣಾಪೂರ್ವ ಸಮೀಕ್ಷೆ ನೀಡಿದ ವಿವರಗಳಲ್ಲಿ ಈ ಕಾರಣ ಎಲ್ಲೂ ಎದ್ದು ಕಾಣುತ್ತಿಲ್ಲ. ಹಾಗಾಗಿ ಇದು ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ.

ಹಾಗಾದರೆ ಬಿಜೆಪಿ ಸೋತಿದ್ದು ಏಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ ಅಲ್ಲವೇ?

ಒಂದು ರಾಜ್ಯ ಸರಕಾರಕ್ಕೆ ಇರುವ ದೊಡ್ಡ ಸವಾಲು ಅಧಿಕಾರ-ವಿರೋಧಿ ಅಲೆ. ಅದು ಇತ್ತೇ? ಹಾಗಿದ್ದರೆ, ಕಾಂಗ್ರೆಸ್ ನಾಯಕರು ಹೇಳಿದ ಕಾರಣಗಳು ಅಧಿಕಾರ ವಿರೋಧಿ ಅಲೆಯ ವ್ಯಾಖ್ಯೆಯ ಒಳಗೆ ಬರುತ್ತಿಲ್ಲವೇ? ಖಂಡಿತ ಇಲ್ಲ. ಕರ್ನಾಟಕದಲ್ಲಿ ಯಾವತ್ತೂ ಭ್ರಷ್ಟಾಚಾರ ಕಡಿಮೆ ಆಗಿಲ್ಲ, ಕಾಂಗ್ರೆಸ್ ಸರಕಾರ ಇದ್ದಾಗ ಕೂಡ. ಅದನ್ನು ಎಲ್ಲ ಪಕ್ಷಗಳು ಖಾಸಗಿಯಾಗಿ ಒಪ್ಪಿಕೊಳ್ಳುತ್ತಿವೆ. ಆದರೆ, ಹೊರಗೆ ಮಾತನಾಡುವಾಗ, ಸಾರ್ವಜನಿಕರಿಗೆ ಒಪ್ಪಿಗೆಯಾಗುವ ಮತ್ತು ಸರಿಯಾಗಿ ಇರುವ ಮಾತನ್ನು ಹೇಳುತ್ತಾರೆ. ಕೈ ನಾಯಕರು ಹೇಳಿದ್ದು ಅದನ್ನೆ.

ತುಂಬಾ ಕೆಲಸ ಮಾಡಿ ಸಾವಿರಾರು ಕೋಟಿ ಹಣವನ್ನು ತಮ್ಮ ತಮ್ಮ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗಿ ಅಭಿವೃದ್ಧಿಗೆ ನಾಂದಿ ಹಾಡಿದ ಹಲವಾರು ಜನ ಈ ಬಾರಿ ಸೋತಿದ್ದಾರೆ. ಅದಕ್ಕೆ ಉದಾಹರಣೆ, ಚಿಕ್ಕಬಳ್ಳಾಪುರದ ಡಾ. ಕೆ. ಸುಧಾಕರ್. ಅವರು ತಮ್ಮ ಕ್ಷೇತ್ರವನ್ನು, ಜನರನ್ನು ಯಾವತ್ತು ಕಡೆಗಣಿಸಿದವರಲ್ಲ. ಆದರೂ ಅವರು ಸೋತರು. ಅಧಿಕಾರ ವಿರೋಧಿ ಅಲೆ ಹುಟ್ಟುವುದು ಐದು ಕಾರಣಗಳಿಂದ. 1. ಕ್ಷೇತ್ರಗಳ ಅಭಿವೃದ್ಧಿ ಮಾಡದೇ ಇರುವುದು 2. ಸರಕಾರದ ಜನಾನುರಾಗಿ ಕಾರ್ಯಕ್ರಮದ ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಸೇರದಿರುವುದರಿಂದ ಬರುವು ಸಿಟ್ಟು 3. ಫಲಾನುಭವಿಗಳ ಪಟ್ಟಿ ಸೇರಿ, ಭೃಷ್ಠಾಚಾರದ ಕಬಂಧ ಬಾಹುವಿಗೆ ಸಿಕ್ಕಿ ಕಾರ್ಯಕ್ರಮದ ಪ್ರಯೋಜನ ಪಡೆಯಲಾಗದೇ ಇರುವುದು ಅಥವಾ ಪಡೆದರೂ ಅದರ ಖುಷಿ ಸಿಗದಿರುವುದು 4. ಜನ ಪ್ರತಿನಿಧಿಗಳ ಜೊತೆ ಇರುವ ದುಷ್ಟ ಕೂಟಗಳು, ಜನಪ್ರತಿನಿಧಿಯ ಹೆಸರಿನಲ್ಲಿ ಮೂರು ನಾಲ್ಕು ಅವಧಿಯಲ್ಲಿ ಯಾವುದೇ ಸಾಕ್ಷ್ಯಾಧಾರವನ್ನು ಬಿಟ್ಟಿಲ್ಲದೇ ಆ ಕ್ಷೇತ್ರದ ಜನರಿಗೆ ತೊಂದರೆ ಕೊಡುವುದು ಮತ್ತು ಆ ಮೂಲಕ ಜನರ ವೈಯಕ್ತಿಕ ಘನತೆ, ಗೌರವಕ್ಕೆ ಧಕ್ಕೆ ತರುವುದು 5. ಅಧಿಕಾರಿಗಳ ಆವಾಂತರದಿಂದ ಆಗುವ ಅಚಾತುರ್ಯಕ್ಕೆ ಜನರಿಗೆ ನ್ಯಾಯ ಸಿಗದೇ ಇರುವುದು. 6. ಭೃಷ್ಠಾಚಾರದಿಂದ ಜನ ರೋಸಿ ಹೋಗುವುದು 7. ತಮ್ಮ ಜಾತಿಯ ನಾಯಕನಿಗೆ ಸಿಗದ ಗೌರವ, ಮಾನ್ಯತೆ ಅದಕ್ಕೆ ಪ್ರತೀಕಾರ ತೆಗೆದುಕೊಳ್ಳುವುದು. 8. ಜಾತಿ ಅಥವಾ ಯಾವುದೇ ಧರ್ಮದ ಮತದಾರರು ತಮ್ಮ ಸಮುದಾಯಕ್ಕೆ ಆಗುತ್ತಿದೆ ಎನ್ನಲಾದ ತೊಂದರೆ ತೊಡಕು, ಕಿರುಕುಳವನ್ನು ಎತ್ತಿ ತೋರಿಸಿ ಪಕ್ಷಗಳಿಗೆ ಮತ ನೀಡದೇ ಇರುವುದು 9. ಬಂಡಾಯ ಅಭ್ಯರ್ಥಿ ಪಕ್ಷದ ಅಧಿಕೃತ ಅಭ್ಯರ್ಥಿ ಸೋಲಿಸಿ ಮೂರನೇ ವ್ಯಕ್ತಿಗೆ ಸಹಾಯವಾಗುವುದು 10. ಒಂದೇ ಸಮುಧಾಯದ ಅಥವಾ ಜನಾನುರಾಗದ ಪಟ್ಟಿಯಲ್ಲಿ ಅತ್ಯಂತ ಪ್ರಬಲರಾದ ಎರಡು ಅಭ್ಯರ್ಥಿಗಳ ಹೊಡೆದಾಟದಲ್ಲಿ ಮೂರನೇ ಅಭ್ಯರ್ಥಿ ಗೆದ್ದು ಬರುವುದು.

ಇಲ್ಲಿ ಇನ್ನೊಂದು ಅಂಶವನ್ನು ಇಲ್ಲಿ ಹೇಳಲೇಬೇಕು: ವಿದೇಶದಲ್ಲಿ ಇದ್ದಂತೆ ನಮ್ಮ ಪ್ರಜಾಪ್ರಭುತ್ವ ಕೆಲಸ ಮಾಡುತ್ತಿಲ್ಲ. ಅಂದರೆ? ಅಥವಾ ಅವಳಿಗೆ, ಒಳ್ಳೇ ಕೆಲಸ ಮಾಡಿದ್ದರೂ ಸೋಲು ಯಾಕೆ ಬಂತು ಎಂಬ ಪ್ರಶ್ನೆಗೆ ಉತ್ತರ ಸಿಗುವುದೇ ಇಲ್ಲ. ಅದಕ್ಕೆ ಎರಡು ಮುಖ್ಯ ಕಾರಣ ಕಾಣಬಹುದು: ನಮ್ಮಲ್ಲಿ, ಜನ ಅಧಿಕಾರಿಶಾಹಿಯನ್ನು ಬೇರೆ ಅಂಗ ಎಂದು ಪರಿಗಣಿಸುತ್ತ ಬಂದಿಲ್ಲ. ಅದನ್ನು ಜನಪ್ರತಿನಿಧಿಯ ಸಾಮಂತ ವರ್ಗವಾಗಿಯೇ ನೋಡುವುದು ನಮ್ಮಲ್ಲಿನ ವಾಡಿಕೆ. ಅಧಿಕಾರಿ ವರ್ಗ ಮಾಡಿದ ಒಳ್ಳೇ ಕೆಲಸದ ಗರಿಮೆಯನ್ನು ರಾಜಕಾರಿಣಿ ಅಥವಾ ಪ್ರಜಾ ಪ್ರತಿನಿಧಿ ತೆಗೆದುಕೊಳ್ಳುತ್ತಾನೆ ಅಥವಾ ಜನರೇ ಖುದ್ದಾಗಿ ಅವರಿಗೆ ನೀಡುತ್ತಾರೆ. ತಮ್ಮ ನಾಯಕ ಇದ್ದಿದ್ದರಿಂದ ಅಧಿಕಾರಿ ವರ್ಗ ಕೆಲಸ ಮಾಡಿತು ಎನ್ನುತ್ತಾರೆ. ಸ್ವಾಭಾವಿಕವಾಗಿ, ಅದೇ ಅಧಿಕಾರಿ ವರ್ಗ ಮಾಡಿದ ಎಡವಟ್ಟಿಗೆ, ಕೆಟ್ಟ ಕೆಲಸಕ್ಕೆ ಅವರನ್ನು ಜನ ದೂಷಿಸುವುದಿಲ್ಲ. ಪುನಃ ತಮ್ಮ ಪ್ರತಿನಿಧಿಯನ್ನೇ ಜವಾಬ್ದಾರರನ್ನಾಗಿ ಮಾಡುತ್ತಾರೆ. ಇದನ್ನು ರಾಜಕಾರಿಣಿ ಮರೆತುಬಿಡುತ್ತಾನೆ. ಈ ರೀತಿಯ ವಿಚಾರವನ್ನು ಹೇಳಲು ಹೋದರೆ ಅದು ತುಂಬಾ ನೀರಸ ಪಠ್ಯಪುಸ್ತಕದ ವಿಷಯಾಗುವುದರಿಂದ ಇಂತಹ ವಿಚಾರ ಹೇಳುವುದಿಲ್ಲ. ತಮ್ಮ ಸೋಲಿನ ನಿಜವಾದ ಕಾರಣ ನೀಡದೇ ಜನರ ಹಾದಿ ತಪ್ಪಿಸಿ ತಿಪ್ಪೆ ಸಾರಿಸಿ ಬಿಡುತ್ತಾರೆ.

ಮುಂದಿನ ಮುಖ್ಯಮಂತ್ರಿಯಾಗುವ ಸಾಲಿನಲ್ಲಿ ನಿಂತಿರುವ ಸಿದ್ದರಾಮಯ್ಯ ಅವರ ಪ್ರಕಾರ ಜನ ಬಿಜೆಪಿಯ ಭ್ರಷ್ಟ ಸರಕಾರವನ್ನು ಕಿತ್ತೊಗಯಲು ಸಿದ್ದರಾಗಿದ್ದರು. ಅದರ ಜೊತೆಗೆ ನಮ್ಮ ಜನಕ್ಕೆ ಬಿಜೆಪಿಯ ದ್ವೇಷ ಬಿತ್ತುವ ರಾಜಕಾರಣ ಬೇಕಾಗಿಲ್ಲ. ಅದಕ್ಕೇ ಈ ಬಾರಿ ಕಾಂಗ್ರೆಸ್ಗೆ ಮತ ನೀಡಿದ್ದಾರೆ. ರಾಹುಲ್ ಇನ್ನೊಂದು ಮಾತು ಹೇಳಿದ್ದಾರೆ. ಒಂದೆಡೆ ಕರ್ನಾಟಕದ ಬಡ ಜನತೆ ಇದ್ದರು, ಇನ್ನೊಂದೆಡೆ, crony capitalism ಅಂದರೆ ಭಂಡ ಬಂಡವಾಳಿಗರ ಗುಂಪು ಇತ್ತು. ಕರ್ನಾಟಕದ ಬಡ ಜನತೆ ಕಾಂಗ್ರೆಸ್ನ ಕೈ ಹಿಡಿದಿದ್ದಾರೆ ಅಂತ. ಅದೂ ಕೂಡ ತಪ್ಪು ಅಂತ ಅನ್ನಿಸುತ್ತಿದೆ. ರಾಹುಲ್ ಅವರ ಹೇಳಿಕೆಯನ್ನು ಅಕ್ಷರಶಃ ವಿಶ್ಲೇಷಿಸಿದರೆ, ಅದು ನೇತ್ಯಾತ್ಮಕ ಅರ್ಥವನ್ನು ಕೊಡುತ್ತದೆ. ಅಂದರೆ, ಕರ್ನಾಟದ ಜನ ಇನ್ನೂ ಬಡವರು. ಹಾಗಾಗಿ ಅವರು ಕಾಂಗ್ರೆಸ್ಸಿಗೆ ಮತ ಹಾಕಿರುವ ಸಾಧ್ಯತೆ ಕಾಣತ್ತಿದೆ.

ಶೇಕಡಾವಾರು ಮತಗಳ ಲೆಕ್ಕಾಚಾರದಲ್ಲಿ ಯಾವ ಆಡಳಿತ ಪಕ್ಷ ಮಾಡಿದ್ದನ್ನು, ಸೋತ ಬಿಜೆಪಿ ಮಾಡಿದೆ. ಕಳೆದ ಬಾರಿ ಪಡೆದ 36 ಪ್ರತಿಶತ ಮತಕ್ಕೆ ನಿಂತಿದ್ದು ಬಿಜೆಪಿಯ ತಂತ್ರಗಾರಿಕೆಯ ಒಂದು ಧನಾತ್ಮಕ ಅಂಶ. ಕಿತ್ತೂರು, ಮತ್ತು ಮಧ್ಯ ಕರ್ನಾಟಕ ಮತ್ತು ಮಲೆನಾಡಿನಲ್ಲಿ ಕಳೆದು ಹೋದ ಮತ, ಬೆಂಗಳೂರು ಮತ್ತು ಹಳೇ ಮೈಸೂರಿನಲ್ಲಿ ಬಿಜೆಪಿಗೆ ಬಂದಿದೆ. ಹಳೇ ಮೈಸೂರಿನಲ್ಲಿ ಪಕ್ಷದ ಹುರಿಯಾಳುಗಳು ಮೂರು ನಾಲ್ಕು ಸಾವಿರ ಮತಗಳಿಂದ, ಮೂವತ್ತು ನಲ್ವತ್ತು ಸಾವರ ಮತಕ್ಕೆ ಏರಿದ್ದಾರೆ.

ಈ ಮೇಲಿನ ಹತ್ತು ಕಾರಣಗಳಲ್ಲಿ ಎಲ್ಲಾ ಕಾರಣಗಳು ಎಲ್ಲಾ ಕಡೆ ವ್ಯಕ್ತವಾಗಿರುವುದಿಲ್ಲ. ಸೋತ ಅಭ್ಯರ್ಥಿಗೆ ಗೊತ್ತಿರುತ್ತೆ ತಾನು ಸೋತಿದ್ದು ಯಾಕೆ ಎಂದು. ಆದರೆ, ಅದನ್ನು ಆತ ಹೇಳುವುದಿಲ್ಲ ಅಷ್ಟೆ.

ಬಿಜೆಪಿ ಸೋಲಿಗೆ ಕಾರಣಗಳು

1. ಪ್ರಾಯಶಃ, ಹಾಸನದ ಒಂದು ಕ್ಷೇತ್ರವನ್ನು ಪ್ರತಿಷ್ಠೆಯ ಕಣವನ್ನಾಗಿ ಮಾಡಿಕೊಂಡ ಎಚ್.ಡಿ. ಭವಾನಿ ರೇವಣ್ಣ ಅವರ ಹಠ ಇಡೀ ಹಳೇ ಮೈಸೂರು ಭಾಗದಲ್ಲಿ, ಒಕ್ಕಲಿಗ ಸಮುದಾಯಕ್ಕೆ ಒಂದು ತಪ್ಪು ಸಂದೇಶ ಕೊಟ್ಟಿತು. ಈ ಕುಟುಂಬ ಬರೀ ತಮ್ಮ ಬಗ್ಗೆ ಮಾತ್ರ ವಿಚಾರ ಮಾಡುತ್ತಾರೆ. ಕುಮಾರಸ್ವಾಮಿ ಕೂಡ ಈ ಮನೆಯೊಳಗೆ ಮುಗಿಸಿಕೊಂಡಿದ್ದರೆ ಬೇರೆ ಕ್ಷೇತ್ರಗಳಲ್ಲಿ ಗೆಲ್ಲಬಹುದಿತ್ತು. ಬರೀ ಸ್ವಾರ್ಥಿ ಎಂಬ ಸಂದೇಶ ಕೊಟ್ಟಂತೆ ಕಾಣುತ್ತಿದೆ. ಹಾಗಾಗಿ ಜನ, ಅವರನ್ನು ಕೈ ಬಿಟ್ಟರು ಮತ್ತು ಕೈ ಪಡೆಯ ಜೊತೆ ಸೇರಿದರು. ಅದಕ್ಕೆ ಸರಿಯಾಗಿ ಈ ಬಾರಿ ಸಿದ್ಧರಾಮಯ್ಯ ದೇವೇಗೌಡ ಕುಟುಂಬದ ಬಗ್ಗೆ ಚಕಾರ ಎತ್ತದೇ, ತಮ್ಮ ಪಕ್ಷ ಒಕ್ಕಲಿಗರ ಮನಗೆಲ್ಲಲು ಸಹಕಾರಿಯಾಗಿದ್ದನ್ನು ಇಲ್ಲಿ ಗಮನಿಸಬೇಕು.

2. ಒಕ್ಕಲಿಗ-ಕುರುಬ, ಮುಸ್ಲಿಂ, ಓಬಿಸಿ, ಎಸ್ಸಿ ಬಲಗೈ ಹಾಗೂ ಸ್ವಲ್ಪ ಪ್ರಮಾಣದ ಲಿಂಗಾಯತ ಮತ ಕೈ ಪಡೆಗೆ ಬಂದಿದ್ದರಿಂದ, 2013 ಕ್ಕಿಂತ 13 ಸೀಟು ಜಾಸ್ತಿ ಕೈ ಪಡೆಗೆ ಬಂದಂತೆ ಕಾಣುತ್ತಿದೆ.

3. ಬಿ.ಎಲ್. ಸಂತೋಷ್ ಅವರ ನಡೆ ಲಿಂಗಾಯತ ಸಮುದಾಯದ ಜಾಸ್ತಿ ಮತದಾರರಲ್ಲಿ ಸಿಟ್ಟು ತಂದಂತೆ ಕಾಣುತ್ತಿದೆ. ಅದಕ್ಕೆ ಸರಿಯಾಗಿ ಅವರ ವಿರುದ್ಧ ನಡೆದ ಅಪಪ್ರಚಾರ ಕೂಡ ಜನರಿಗೆ ತಲುಪಿರಬಹುದು. ಕರ್ನಾಟಕದಲ್ಲಿ ಬ್ರಾಹ್ಮಣರ ಪ್ರಭುತ್ವವನ್ನು ಜನ ಒಪ್ಪಿಕೊಳ್ಳಲು ತಯಾರಾಗಿಲ್ಲ. ಇದು ನಿಜ.

4. 72 ಹೊಸ ಮುಖಗಳಲ್ಲಿ 14 ಜನ ಮಾತ್ರ ಗೆದ್ದಿದ್ದಾರೆ. ಈ ಪ್ರಯೋಗದ ಮೂಲ ತತ್ವ ಸರಿ ಇದೆ. ಯಾವ ಕ್ಷೇತ್ರಗಳಲ್ಲಿ ಇದನ್ನು ತರಬೇಕಿತ್ತೋ ಅಲ್ಲಿ ತಂದಿಲ್ಲ. ಅಂದರೆ? ಐದು, ಆರು ಬಾರಿ ಆಯ್ಕೆ ಆಗಿದ ಕೆಲವು ಶಾಸಕರ ದರ್ಪಕ್ಕೆ ಜನ ರೋಸಿ ಹೋಗಿ ಅವರನ್ನು ಸೋಲಿಸುವ ಮೂಲಕ ಜನ ಉತ್ತರ ಕೊಟ್ಟಿದ್ದಾರೆ. ಅಂತಹ ಶಾಸಕರನ್ನು ಬದಲಿಸಿ ಬಿಟ್ಟಿದ್ದರೆ ಪ್ರಾಯಶಃ ಬಿಜೆಪಿಗೆ ಅನುಕೂಲವಾಗಬಹುದಿತ್ತು. ಆಗ ಒಂದು ಸವಾಲು ಇರುತ್ತಿತ್ತು. ಇಷ್ಟು ವರ್ಷಗಳ ಕಾಲ ಇದ್ದ ಶಾಸಕ ಬಂಡಾಯವಾಗಿ ಆ ಮೂಲಕ ವಿರೋಧ ಪಕ್ಷಕ್ಕೆ ಸಹಾಯವಾಗುವ ಸಾಧ್ಯತೆ ಕೂಡ ಇರುತ್ತಿತ್ತು.

5. ಮೀಸಲಾತಿಯ ಕತ್ತಿ ಬಿಜೆಪಿಗೆ ವಿರೋಧವಾದಂತೆ ಕಾಣುತ್ತಿದೆ. ಕೋವಿಡ್ ನಂತರ ರಾಜ್ಯದಲ್ಲಿ ಹಣಕಾಸಿನ ತೊಂದರೆ ಆದ ಕಾರಣ ಸರಕಾರ ಹಲವಾರು ಕಾಯರ್ಕ್ರಮಕ್ಕೆ ಯೋಜನಾ ವೆಚ್ಚದಲ್ಲಿ ಕಡಿತಗೊಳಿಸಿತ್ತು. ಉದಾ: ಎಸ್ ಸಿ ಸಮುದಾಯದ ಸ್ನಾಕೋತ್ತರ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನದಲ್ಲಿ ಕಡಿತವಾಗಿತ್ತು. ಕಾಂಗ್ರೆಸ್ ಒಂದು ಸಮಿತಿ ಮಾಡಿ ರಾಜ್ಯಾದ್ಯಾಂತ ಎಸ್ ಸಿ ಕ್ಷೇತ್ರಗಳಿಗೆ ಕಳಿಸಿ, ಬಿಜೆಪಿ ಸರಕಾರ ಹೇಗೆ ಜನ ವಿರೋಧಿ ಮತ್ತು ಎಸ್ ಸಿ ವಿರೋಧಿ ಎಂಬುದನ್ನು ವ್ಯವಸ್ಥಿವಾಗಿ ಬಿಂಬಿಸಿತು. ಇದು ಒಂದು ಸಮುದಾಯಕ್ಕೆ ಮಾತ್ರ ಸೀಮಿತ ಆಗಿರಲಿಲ್ಲ. ಆಯಾ ಪ್ರಾಂತ್ಯದಲ್ಲಿ ಇರುವ ಘಟಾನುಘಟಿ ಒಂದು ಸಮುದಾಯದ ನಾಯಕರನ್ನು ಸೇರಿಸಿ ಅಲ್ಲಿ ಬಿಜೆಪಿ ವಿರುದ್ಧ ತೊಡೆ ತಟ್ಟಲು ಇಳಿಸಿದ್ದು ಯಾರಿಗೂ ಕಾಣಿಸಲೇ ಇಲ್ಲ.

6. 40 ಪ್ರತಿಶತ ಭೃಷ್ಠಾಚಾರ ಎನ್ನುವ ಮಾತಿಗೆ ಸರಿಯಾಗಿ ಜನರಿಗೆ ಯೋಜನಗೆಳ ಫಲ ಸಿಗದೇ ಅಥವಾ ಸಿಕ್ಕರೂ ಭೃಷ್ಠಾಚಾರದಲ್ಲಿ ಎಲ್ಲವನ್ನು ಕಳೆದುಕೊಳ್ಳುವ ಹಂತಕ್ಕೆ ಜನ ಹೋಗಿದ್ದರಿಂದ ಅವರು ರೋಸಿ ಹೋಗಿದ್ದಂತೆ ಕಂಡಿತು. 7. ಬಸವರಾಜ ಬೊಮ್ಮಾಯಿ, ಓರ್ವ ನಿಷ್ಫರಿಣಾಮಕಾರಿ ಮುಖ್ಯಮಂತ್ರಿ ಆಗಿದ್ದರು ಎಂಬ ಜನಾಭಿಪ್ರಾಯವನ್ನು ಬದಲಿಸಲು ಕೊನೆಗೂ ಅವರಿಂದ ಆಗಲೇ ಇಲ್ಲ.

8. ಕಾಂಗ್ರೆಸ್ ಓರ್ವ ತಂತ್ರಗಾರಿಕೆ ಏಜೆನ್ಸಿ ಇಟ್ಟುಕೊಂಡು ಫೇ ಸಿಎಮ್ ಮುಂತಾದ ಕಾರ್ಯಕ್ರಮ ಮಾಡಿ ತಮ್ಮ ಪದಾತಿ ದಳವನ್ನು ಸಿದ್ಧ ಮಾಡುತ್ತಿದ್ದಾಗ ಬಿಜೆಪಿ ಸರಕಾರ ಅದನ್ನು ಕಾನೂನಾತ್ಮಕವಾಗಿ, ಆಡಳಿತಾತ್ಮಕವಾಗಿ ಎದುರಿಸಲು ಸಾಧ್ಯವಾಗಲೇ ಇಲ್ಲ. 2019 ರ ಚುನಾವಣೆಯಲ್ಲಿ, ಇದೇ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮೇಲೆ ಭೃಷ್ಠಾಚಾರದ ಆರೋಪ ಹೊರಿಸಿ, ಅದಾನಿ-ಅಂಬಾನಿ ಎಂದು ಹೇಳುತ್ತ ರಫಾಲ್ ವಿಮಾನದಲ್ಲಿ ಭೃಷ್ಠಾಚಾರ ಆಗಿದೆ, ಪ್ರಧಾನಿ ಮೋದಿ ಅದರ ಫಲ ಉಂಡಿದ್ದಾರೆ ಎಂದರು. ಅತ್ಯಂತ ತೀವ್ರ ತರಹದ ಆರೋಪಕ್ಕೆ ಜನ ತಲೆಕೆಡಿಸಿಕೊಳ್ಳಲಿಲ್ಲ. ಬದಲಾಗಿ ಹೆಚ್ಚು ಸೀಟನ್ನು ಬಿಜೆಪಿಗೆ ಕೊಟ್ಟರು. ಕರ್ನಾಟಕದಲ್ಲಿ ಇಂತಹ ಆರೋಪ ಇಡೀ ಸರಕಾರದ ಮೇಲೆ ಬಂದಾಗ ಯಾಕೆ ಸರಕಾರದ ಮೇಲಿನಿ ಆರೋಪವನ್ನು ಸತ್ಯ ಎಂದು ನಂಬಿದಿದ್ದರೂ ಇವರು ಸಾಚಾ ಇರಲಿಕ್ಕಿಲ್ಲ ಎಂದು ಸಂಶಯದಿಂದ ನೋಡಿದರು. ಅದಕ್ಕೆ ಕಾರಣ, ಇವತ್ತಿಗೂ ಜನ ಮೋದಿಯವರಲ್ಲಿ ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಣುತ್ತಾರೆ. ಅದೇ ಸ್ಥಳೀಯ ನಾಯಕರಲ್ಲಿ ಕಾಣಲಿಲ್ಲ. ರೈತಾಪಿ ಜನ, ಆಟೋ ಚಾಲಕರು ಇವರಿಗೆಲ್ಲ, ಬೆಲೆ ಏರಿಕೆಯ ಸಿಟ್ಟಿತ್ತು. ಹಾಗಾಗಿ aವರು ಕಾಂಗ್ರೆಸ್​ನ ಗ್ಯಾರೆಂಟಿಯ ಸೆಳೆತಕ್ಕೆ ಒಳಗಾದರು. ಸ್ವಲ್ಪ ಮೇಲಿನ ಸ್ಥರಕ್ಕೆ ಬಂದರೆ, ಮಧ್ಯಮ ವರ್ಗದವರಿಗೆ ಭೃಷ್ಠಾಚಾರದ ಬಗ್ಗೆ ಸಿಟ್ಟಿತ್ತು. ಅದು ಕೆಲಸ ಮಾಡಿತು.

9. ಒಂದು ಹಂತಕ್ಕೂ ಮೀರಿ ಹಿಂದುತ್ವವನ್ನು ಎಳೆದು ಅದನ್ನೇ ಅಜೆಂಡಾ ಮಾಡಲು ಹೋಗಿದ್ದು. ಉದಾಹರಣೆಗೆ ಉರಿ ಗೌಡ-ನಂಜೇ ಗೌಡ ವಿಚಾರ. ಇದು ತುಂಬಾ ಜನರಲ್ಲಿ ಬಿಜೆಪಿ ಸರಕಾರದ ಮೂಲ ಉದ್ದೇಶದ ಬಗ್ಗೆ ಸಂಶಯ ಹುಟ್ಟಿಹಾಕದ್ದರೆ ಅದು ತಪ್ಪಿಲ್ಲ.

10. ಹಳೇ ಮೈಸೂರು ಭಾಗ ಬಿಟ್ಟು ಉಳಿದ ಭಾಗದಲ್ಲಿ, ಜೆಡಿಎಸ್ ಸೀಟು ಜಾಸ್ತಿ ಗೆಲ್ಲದಿರಬಹುದು. ಆದರೆ, ಆ ಚಿಹ್ನೆಯ ಮೇಲೆ ನಿಂತು ಬಹಳ ಹುರಿಯಾಳುಗಳು ತುಂಬಾ ಮತ ಪಡೆದಿದ್ದು ಕಾಣುತ್ತಿದೆ. ಅದಕ್ಕೆ ಎರಡು ಕಾರಣಗಳು. ಒಂದು, ಬಿಜೆಪಿಯಿಂದ ಅಲ್ಲಿಗೆ ಹೋಗಿ ನಿಂತು, ಅಲ್ಲಿ ಗೆಲ್ಲಲಾಗದೇ ಸೋತು ಆಡಳಿತ ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣರಾಗಿರಬಹುದು. ಇನ್ನೊಂದು ಜೆಡಿಎಸ್ ಖುದ್ದಾಗಿ ನಿಲ್ಲಿಸಿದ ಅಭ್ಯರ್ಥಿ ಹೆಚ್ಚುಮತ ಪಡೆದು ತ್ರಿಕೋಣ ಸ್ಪರ್ಧೆ ಆಗುವಂತೆ ಮಾಡಿ ಬಿಜೆಪಿ ಸೋಲಿಗೆ ಕಾರಣರಾಗಿರುವ ಸಾಧ್ಯತೆ ಇದೆ.

11. ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್ ಕೊಟ್ಟ ಗ್ಯಾರೆಂಟಿ ಕಾರ್ಡ ಗ್ರಾಮೀಣ ಭಾಗದಲ್ಲಿ ಮುಗ್ಧ ಜನರಲ್ಲಿ ಹೊಸ ಆಸೆ ಮೂಡಿಸಿರಬಹುದು. ಬಿಜೆಪಿ ಮೇಲೆ ಸಿಟ್ಟು ಬಂದ ಸಂದರ್ಭಕ್ಕೆ ಸರಿಯಾಗಿ ಕಾಂಗ್ರೆಸ್ ನೀಡಿದ ಈ ಆಶ್ವಾಸನೆ ಕೆಲಸ ಮಾಡಿದ್ದರಲ್ಲಿ ಸಂಶಯವಿಲ್ಲ.

12. 1989 ರ ನಂತರ ಮೊದಲ ಬಾರಿಗೆ, ಲಿಂಗಾಯತ ನಾಯಕ ಇಲ್ಲದೇ ಕಾಂಗ್ರೆಸ್ ಮತ ಪಡೆದಿದ್ದು. ಬಿ.ಎಸ್. ಯಡಿಯೂರಪ್ಪ ನಿವೃತ್ತಿ ನಂತರ ಅವರ ಮಗನಿಗೆ ಪಟ್ಟ ಕಟ್ಟುವ ಆಸೆಗೆ ಬಿಜೆಪಿ ಪಕ್ಷ ಎಳ್ಳು ನೀರು ಬಿಟ್ಟು ಮುಂದೆ ಹೋಗುವಾಗ ಈ ಶೂನ್ಯ ಕಾಲದ ಸಂಪಾದನೆಯನ್ನು ಕಾಂಗ್ರೆಸ್ ಮಾಡಿಕೊಂಡಂತೆ ಕಾಣುತ್ತಿದೆ.

13. ಇನ್ನೊಂದು ಅಂಶ. ಈ ಬಾರಿ ಕಾಂಗ್ರೆಸ್​ ತುಂಬಾ ಅಪರೂಪದ ಆಟ ಆಡಿದೆ. ಚಿಕ್ಕಮಗಳೂರು, ಶಿರಸಿ ಸೇರಿದಂತೆ ತುಂಬಾ ಕಡೆ, ಶಾಸಕರ ಬಲಗೈಯಂತಿರುವ ತುಂಬಾ ವಿಶ್ವಾಸಾರ್ಹ ವ್ಯಕ್ತಿ (ಕ್ಷೇತ್ರದಲ್ಲಿ ಅತ್ಯಂತ ಪ್ರಬಲರಾಗಿರುವವರನ್ನು) ತನ್ನತ್ತ ಕೆಲವೆಡೆ ಸೆಳೆದು ಟಿಕೆಟ್​ ಕೊಟ್ಟಿದೆ. ಅಥವಾ ಅವರ ಜೊತೆ ಒಳ ಒಪ್ಪಂದ ಮಾಡಿ ಬಿಜೆಪಿಯ ಹುರಿಯಾಳನ್ನು ಸೋಲಿಸಿದೆ.

ಹಾಗಾದರೆ ಇದು, 2024 ಕ್ಕೆ ಹೇಗೆ ಮುನ್ನುಡಿ? ಪ್ರಧಾನಿ ಮೋದಿ ಬಂದಾಗ ಇದೇ ಕಾಂಗ್ರೆಸ್ ಹೇಳಿತ್ತು-ಇದು ಸ್ಥಳೀಯ ಚುನಾವಣೆ. ಇಲ್ಲಿ ರಾಷ್ಟ್ರೀಯ ವಿಚಾರದ ಚರ್ಚೆಗೆ ಜನ ಮರುಳಾಗುವುದಿಲ್ಲ ಎಂದು. ಈಗ ಗೆದ್ದ ನಂತರ ಈ ತೀರ್ಪು 2024 ಗೆಲುವಿಗೆ ಮುನ್ನುಡಿ ಹೇಗೆ ಆಗಲು ಸಾಧ್ಯ? ಆದ್ದರಿಂದ, ಇದರ ಫಲಿತಾಂಶವನ್ನು ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ರಾಷ್ಟ್ರೀಯ ನಾಯಕರನ್ನು ಖುಷಿ ಪಡಿಸಲು ಹಾಗೇ ಹೇಳುತ್ತಿದ್ದಾರೆ. ಅದು ರಾಜಕೀಯ, ತಪ್ಪೇನಿಲ್ಲ ಬಿಡಿ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 6:46 pm, Sat, 13 May 23

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ