AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್ ಚುನಾವಣೆಗೆ 34 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

Punjab assembly Elections ಮೊದಲ ಪಟ್ಟಿಯಲ್ಲಿ 12 ರೈತ ಕುಟುಂಬಗಳು, ಎಂಟು ಪರಿಶಿಷ್ಟ ಜಾತಿಯವರು ಮತ್ತು ವೃತ್ತಿಪರರು ಇದ್ದಾರೆ ಎಂದು ತರುಣ್ ಚುಗ್ ಹೇಳಿದರು.

ಪಂಜಾಬ್ ಚುನಾವಣೆಗೆ 34 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
ತರುಣ್ ಚುಗ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jan 21, 2022 | 7:12 PM

Share

ದೆಹಲಿ: 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಗೆ ಚುನಾವಣೆಗೆ (Punjab polls) 13 ಸಿಖ್ ಸೇರಿದಂತೆ 34 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ (BJP) ಶುಕ್ರವಾರ ಬಿಡುಗಡೆ ಮಾಡಿದೆ. ಪಟ್ಟಿಯನ್ನು ಬಿಡುಗಡೆ ಮಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ಪಕ್ಷವು ಸಮಾಜದ ಎಲ್ಲಾ ವರ್ಗಗಳಿಗೆ ಪ್ರಾತಿನಿಧ್ಯವನ್ನು ನೀಡಿದೆ. ಮೊದಲ ಪಟ್ಟಿಯಲ್ಲಿ 12 ರೈತ ಕುಟುಂಬಗಳು, ಎಂಟು ಪರಿಶಿಷ್ಟ ಜಾತಿಯವರು ಮತ್ತು ವೃತ್ತಿಪರರು ಇದ್ದಾರೆ ಎಂದು ತರುಣ್ ಚುಗ್  ಹೇಳಿದರು. ಮಾಜಿ ಸಚಿವ ಮನೋರಂಜನ್ ಕಾಲಿಯಾ, ಕಾಂಗ್ರೆಸ್ ತೊರೆದ ಹಾಲಿ ಶಾಸಕ ರಾಣಾ ಗುರ್ಮೀತ್ ಸಿಂಗ್ ಸೋಧಿ, ಅರವಿಂದ್ ಖನ್ನಾ ಮತ್ತು ದಿವಂಗತ ಅಕಾಲಿ ದಿಗ್ಗಜ ಗುರುಚರಣ್  ಸಿಂಗ್ ತೋಹ್ರಾ ಅವರ ಮೊಮ್ಮಗ ಕನ್ವರ್ವೀರ್ ಸಿಂಗ್ ತೋಹ್ರಾ ಅವರ ಹೆಸರುಗಳು ಇವೆ. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಪಂಜಾಬ್ ರಾಷ್ಟ್ರದ ಹೆಮ್ಮೆ. ಆದರೆ ಅಲ್ಲಿ ಪರಿಸ್ಥಿತಿಯು ಕೆಟ್ಟದಾಗಿದೆ ಎಂದು ಹೇಳಿದರು. 

ಬಿಜೆಪಿ ಪಕ್ಷವು ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ ಮತ್ತು ಸುಖದೇವ್ ಸಿಂಗ್ ದಿಂಡ್ಸಾ ಅವರ ಎಸ್ಎಡಿ (ಸಂಯುಕ್ತ) ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ. ಮೂರು ಪಕ್ಷಗಳು ಸೀಟು ಹಂಚಿಕೆ ಸೂತ್ರವನ್ನು ನಿರ್ಧರಿಸಲು ಮೂರು ಪಕ್ಷಗಳಿಂದ ತಲಾ ಇಬ್ಬರು ಆರು ಸದಸ್ಯರ ಸಮಿತಿಯನ್ನು ರಚಿಸಿವೆ. ಮೂರು ಪಕ್ಷಗಳು ಸಾಮಾನ್ಯ ಪ್ರಣಾಳಿಕೆಯನ್ನೂ ಮಾಡಲಿವೆ.

ಬಿಜೆಪಿಯ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ವೈದ್ಯರು, ವಕೀಲರು, ಕ್ರೀಡಾಪಟುಗಳು, ರೈತರು, ಯುವಕರು, ಮಹಿಳೆಯರು ಮತ್ತು ಮಾಜಿ ಐಎಎಸ್ ಅಧಿಕಾರಿಗಳು ಇದ್ದಾರೆ ಎಂದು ಚುಗ್ ಹೇಳಿದರು.

ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ಮಾಜಿ ಸಹಾಯಕಿ ನಿಮಿಷಾ ಮೆಹ್ತಾ ಅವರನ್ನು ಗಢಶಂಕರ್ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿದೆ. ಮೆಹ್ತಾ ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದರು.  ಮೆಹ್ತಾ ಹೊರತುಪಡಿಸಿ, ಮತ್ತೊಬ್ಬ ಮಹಿಳಾ ಅಭ್ಯರ್ಥಿ ರೇಣು ಕಶ್ಯುಪ್ ದಿನಾನಗರದಿಂದ ಕಣಕ್ಕಿಳಿದಿದ್ದಾರೆ. ಕಬಡ್ಡಿ ಆಟಗಾರ ರಂಜಿತ್ ಸಿಂಗ್ ಖೋಜೆವಾಲಾ ಅವರನ್ನು ಕಪುರ್ತಲಾ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಗಿಲ್ ವಿಧಾನಸಭಾ ಕ್ಷೇತ್ರದಿಂದ ನಿವೃತ್ತ ಐಎಎಸ್ ಅಧಿಕಾರಿ ಎಸ್ ಆರ್ ಲದ್ಧರ್ ಅವರನ್ನು ಕಣಕ್ಕಿಳಿಸಲಾಗಿದೆ. ವರದಿಗಳ ಪ್ರಕಾರ, ಬಿಜೆಪಿ 34 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ, ಅದರ ಮೈತ್ರಿ ಪಾಲುದಾರರು ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡುತ್ತಾರೆ.

ಪಂಜಾಬ್​​ನಲ್ಲಿ ಫೆಬ್ರವರಿ 20 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಮಾರ್ಚ್ 10ರಂದು  ಮತ ಎಣಿಕೆಯಾಗಲಿದೆ.

ಇದನ್ನೂ ಓದಿ: ಅಮರ್ ಜವಾನ್ ಜ್ಯೋತಿಯ ಮಹತ್ವವೇನು? ಅದನ್ನು ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯೊಂದಿಗೆ ಲೀನಗೊಳಿಸಿದ್ದೇಕೆ?

Published On - 7:03 pm, Fri, 21 January 22