Telangana Election 2023 Results: ತೆಲಂಗಾಣದಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್; ಮುಖಭಂಗ ಅನುಭವಿಸಿದ ಕೆಸಿಆರ್ ಅಂಡ್ ಟೀಮ್
Congress Wins Telangana: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ 119 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷ ಬಹುಮತಕ್ಕೆ ಬೇಕಾದ 60ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಫಲವಾಗಿದೆ. ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ ಮುಖಭಂಗ ಅನುಭವಿಸಿದೆ. ಸಿಎಂ ಕೆ ಚಂದ್ರಶೇಖರ್ ರಾವ್ ಒಂದು ಕ್ಷೇತ್ರದಲ್ಲಿ ಸೋಲನ್ನೂ ಅನುಭವಿಸಿದ್ದಾರೆ. ತೆಲಂಗಾಣದ ಮುಂದಿನ ಸಿಎಂ ಯಾರು ಎಂಬುದು ಪ್ರಶ್ನೆಯಾಗಿದ್ದು, ಮುಖ್ಯಮಂತ್ರಿ ರೇಸ್ನಲ್ಲಿ ರೇವಂತ್ ರೆಡ್ಡಿ ಸೇರಿ ಮೂವರು ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
ಹೈದರಾಬಾದ್, ಡಿಸೆಂಬರ್ 3: ಪಂಚರಾಜ್ಯ ಚುನಾವಣೆಯಲ್ಲಿ ಐದು ರಾಜ್ಯಗಳ (Five states assembly elections 2023) ಪೈಕಿ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಂದಿದೆ. ತೆಲಂಗಾಣದಲ್ಲಿ ಅಧಿಕಾರ ಬದಲಾವಣೆ ಆಗಿದೆ. ತೆಲಂಗಾಣ ರಾಜ್ಯ ರಚನೆ ಆದಾಗಿನಿಂದ ಸತತವಾಗಿ ಅಧಿಕಾರದಲ್ಲಿರುವ ಕೆ ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ (ಹಿಂದಿನ ಟಿಆರ್ಎಸ್) ಕೊನೆಗೂ ಗದ್ದುಗೆಯಿಂದ ಕೆಳಗಿಳಿದಿದೆ. ಕಾಂಗ್ರೆಸ್ ಪಕ್ಷ ಮೊದಲ ಬಾರಿಗೆ ತೆಲಂಗಾಣದ (Telangana Assembly Elections) ಆಡಳಿತ ಚುಕ್ಕಾಣಿ ಹಿಡಿದಿದೆ. 119 ಕ್ಷೇತ್ರಗಳ ಪೈಕಿ ಬಹುಮತಕ್ಕೆ ಬೇಕಾದ 60 ಸ್ಥಾನಗಳನ್ನು ಕಾಂಗ್ರೆಸ್ ಪಡೆಯಲು ಸಫಲವಾಗಿದೆ. ಕಾಂಗ್ರೆಸ್ 64 ಸ್ಥಾನಗಳನ್ನು ಗೆದ್ದರೆ ಬಿಎಚ್ಆರ್ಎಸ್ ಪಕ್ಷ 39 ಸ್ಥಾನ ಪಡೆದಿದೆ. 20ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಉಮೇದಿನಲ್ಲಿದ್ದ ಬಿಜೆಪಿಗೆ 8 ಸ್ಥಾನಗಳು ಸಿಕ್ಕಿವೆ. ಎಐಎಂಐಎಂ ಪಕ್ಷಕ್ಕೆ ಕಳೆದ ಬಾರಿಗಿಂತಲೂ ಕಡಿಮೆ ಸ್ಥಾನಗಳು ಸಿಕ್ಕಿವೆ.
ತೆಲಂಗಾಣ ರಾಜ್ಯ ವಿಧಾನಸಭೆ ಫಲಿತಾಂಶ ವಿವರ:
ಒಟ್ಟು ಕ್ಷೇತ್ರಗಳು: 119 ಬಹುಮತಕ್ಕೆ: 60
- ಕಾಂಗ್ರೆಸ್: 64
- ಭಾರತ್ ರಾಷ್ಟ್ರ ಸಮಿತಿ: 39
- ಬಿಜೆಪಿ: 8
- ಎಐಎಂಐಎಂ: 7
- ಸಿಪಿಐ: 1
ಇದನ್ನೂ ಓದಿ: ತೆಲಂಗಾಣದಲ್ಲಿ ಕಾಂಗ್ರೆಸ್ ಸೂಪರ್ ಕಂಬ್ಯಾಕ್ ಮಾಡಲು ಪ್ರಮುಖ ಕಾರಣಗಳೇನು? ಗ್ಯಾರಂಟಿಗಳಾ, ಮುಸ್ಲಿಮ್ ವೋಟ್ಗಳಾ?
ಈ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಿಎಂ ಕೆ ಚಂದ್ರಶೇಖರ್ ರಾವ್ ಒಂದರಲ್ಲಿ ಸೋಲನುಭವಿಸಿದ್ದಾರೆ. ಗಜ್ವೆಲ್ ಕ್ಷೇತ್ರದಲ್ಲಿ ಅವರು ಸುಲಭವಾಗಿ ಗೆದ್ದರೆ, ಕಾಮರೆಡ್ಡಿ ಕ್ಷೇತ್ರದಲ್ಲಿ ಹೀನಾಯ ಸೋಲನುಭವಿಸಿದ್ದಾರೆ. ಈ ಕ್ಷೇತ್ರದಲ್ಲಿ ಕೆಸಿಆರ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿರುವುದು ದುರಂತದ ಸಂಗತಿ. ತೆಲಂಗಾಣ ಪ್ರತ್ಯೇಕ ರಾಜ್ಯ ನಿರ್ಮಾಣದ ಸೂತ್ರದಾರನಿಗೆ ಈ ಸೋಲು ಮರ್ಮಾಘಾತವಾಗಬಹುದು.
ತೆಲಂಗಾಣಕ್ಕೆ ಮುಂದ್ಯಾರು ಮುಖ್ಯಮಂತ್ರಿ?
ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿರುವುದು ಈಗ ಮುಂದಿನ ಸಿಎಂ ಯಾರು ಎಂಬುದು ಆ ಪಕ್ಷಕ್ಕೆ ಆಯ್ಕೆಯ ಬಿಕ್ಕಟ್ಟು ಸೃಷ್ಟಿಸಿದೆ. ಸಿಎಂ ಸ್ಥಾನಕ್ಕೆ ಕಾಂಗ್ರೆಸ್ನಲ್ಲಿ ಹಲವರು ಆಕಾಂಕ್ಷಿಗಳಿದ್ದಾರೆ. ಮಾಜಿ ಟಿಡಿಪಿ ಮುಖಂಡ ರೇವಂತ್ ರೆಡ್ಡಿ ಈ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ.
ಇದನ್ನೂ ಓದಿ: ತೆಲಂಗಾಣ: ಕೆಸಿಆರ್ ಲೋಕಸಭಾ ಚುನಾವಣಾ ಕನಸಿಗೆ ತಣ್ಣೀರೆರೆಚುತ್ತಾ ವಿಧಾನಸಭಾ ಚುನಾವಣಾ ಫಲಿತಾಂಶ?
ಕಾಂಗ್ರೆಸ್ನೊಳಗೆ ಬಹಳ ಜನಬೆಂಬಲ ಹೊಂದಿರುವ ಹಾಗೂ ಮಲ್ಲಿಕಾರ್ಜು ಖರ್ಗೆಯ ಆಪ್ತರೆನಿಸಿರುವ ಮಲ್ಲು ಭಟ್ಟಿ ವಿಕ್ರಮಾರ್ಕ ಹೆಸರೂ ಕೇಳಿಬರುತ್ತಿದೆ. ಇವರು ದಲಿತ ಸಮುದಾಯಕ್ಕೆ ಸೇರಿದವರೂ ಹೌದು. ಹಾಗೆಯೇ, ಮಾಜಿ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ ಹೆಸರೂ ರೇಸ್ನಲ್ಲಿ ಇದೆ.
ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ