ನನ್ನ ಸಹೋದರನಿಗಾಗಿ ನಾನು ಪ್ರಾಣ ನೀಡಬಲ್ಲೆ,ಅವನು ನನಗಾಗಿ ಪ್ರಾಣ ನೀಡಬಲ್ಲ: ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್ ಗಾಂಧಿ ನಡುವಿನ ಭಿನ್ನಾಭಿಪ್ರಾಯವು ಕಾಂಗ್ರೆಸ್ ಪಕ್ಷವನ್ನು ಉರುಳಿಸಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ...
ದೆಹಲಿ: ನಾನು ನನ್ನ ಸಹೋದರನಿಗಾಗಿ ನನ್ನ ಪ್ರಾಣವನ್ನು ನೀಡಬಲ್ಲೆ ಮತ್ತು ಅವನು ನನಗಾಗಿ ತನ್ನ ಪ್ರಾಣವನ್ನು ನೀಡಬಲ್ಲ” ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಹೇಳಿದ್ದಾರೆ. ಸಹೋದರರ-ಸಹೋದರಿ ನಡುವೆ ಸಂಘರ್ಷವಿದೆ ಎಂಬ ಬಿಜೆಪಿ (BJP) ಆರೋಪಕ್ಕೆ ಪ್ರಿಯಾಂಕಾ ಈ ರೀತಿ ಉತ್ತರಿಸಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್ ಗಾಂಧಿ ನಡುವಿನ ಭಿನ್ನಾಭಿಪ್ರಾಯವು ಕಾಂಗ್ರೆಸ್ ಪಕ್ಷವನ್ನು ಉರುಳಿಸಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Yogi Adityanath) ಹೇಳಿದ್ದಾರೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ನಮ್ಮ ನಡುವೆ ಭಿನ್ನಾಭಿಪ್ರಾಯ ಎಲ್ಲಿದೆ? ಎಂದು ಕೇಳಿದ್ದಾರೆ. ಆರೋಪಗಳಿಗೆ ನಗುತ್ತಲೇ ಪ್ರತಿಕ್ರಿಯಿಸಿದ ಪ್ರಿಯಾಂಕಾ ” ಸಂಘರ್ಷ ಯೋಗಿ ಜಿ ಅವರ ಮನಸ್ಸಿನಲ್ಲಿದೆ. ಬಿಜೆಪಿಯಲ್ಲಿ ಸಂಘರ್ಷವಿದೆ, ಕಾಂಗ್ರೆಸ್‌ನಲ್ಲಿ ಅಲ್ಲ. ಯೋಗಿ ಜಿ, ಮೋದಿ ಜಿ ಮತ್ತು ಅಮಿತ್ ಶಾ ಹಿತಾಸಕ್ತಿ ಸಂಘರ್ಷವನ್ನು ಹೊಂದಿರಬಹುದು ಎಂದಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಹೆಲಿಕಾಪ್ಟರ್‌ನಲ್ಲಿ ಕುಳಿತಿದ್ದಾಗ ಪ್ರಿಯಾಂಕಾ ಈ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಉತ್ತರ ಪ್ರದೇಶದ ಉಸ್ತುವಾರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಜಕೀಯವಾಗಿ ಮಹತ್ವದ ರಾಜ್ಯದಲ್ಲಿ ಪಕ್ಷದ ಚುನಾವಣಾ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ. ರಾಜಕೀಯ ರ್ಯಾಲಿಗಳಿಂದ ಹಿಡಿದು ಲಡ್ಕಿ ಹೂಂ ಲಡ್ ಸಕ್ತಿ ಹೂಂ ಎಂಬ ಪ್ರಚಾರದವರೆಗೆ, ಕಾಂಗ್ರೆಸ್ ನಾಯಕಿ ತನ್ನ ಪಕ್ಷದ ಪ್ರಚಾರವನ್ನು ಮುನ್ನಡೆಸುತ್ತಿದ್ದಾರೆ. ಏಕೆಂದರೆ ಅದು ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ಸವಾಲಾಗಿರುವ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವನ್ನು ಎದುರಿಸುತ್ತಿದೆ.
I can sacrifice my life for my brother (Rahul Gandhi) and even he can do the same for me. There is conflict in BJP, not in Congress. Yogi Ji, Modi Ji and Amit Shah might have a conflict of interest: Congress leader Priyanka Gandhi Vadra pic.twitter.com/JTAUr3rr6L
— ANI (@ANI) February 13, 2022
ಕಳೆದ ತಿಂಗಳು ವಾದ್ರಾ ಅವರು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಬಹುದು ಎಂಬ ಊಹಾಪೋಹಗಳಿಗೆ ತೆರೆ ಎಳೆದರು. ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಪಕ್ಷದ ಆಯ್ಕೆಯ ಕುರಿತು ಕೇಳಿದ ಪ್ರಶ್ನೆಗೆ, “ನೀವು ನನ್ನ ಮುಖವನ್ನು ಎಲ್ಲೆಡೆ ನೋಡಬಹುದು, ಅಲ್ಲವೇ?” ಎಂದು ವಾದ್ರಾ ಉತ್ತರಿಸಿದರು.
ಆದಾಗ್ಯೂ, ಮರುದಿನ ಈ ಬಗ್ಗೆ ಸ್ಪಷ್ಟನೆ ನೀಡಿದ ವಾದ್ರಾ, ಅದೇ ಪ್ರಶ್ನೆಯನ್ನು ಪದೇ ಪದೇ ಕೇಳಿದಾಗ “ಸ್ವಲ್ಪ ಉತ್ಪ್ರೇಕ್ಷೆ ರೀತಿಯಲ್ಲಿ” ಹೇಳಿದೆ ಎಂದಿದ್ದರು. “ನಾನೊಬ್ಬಳೇ ಎಂದು ನಾನು ಹೇಳುತ್ತಿಲ್ಲ, ನಾನು ಅದನ್ನು ಸ್ವಲ್ಪ ಉತ್ಪ್ರೇಕ್ಷೆ ರೀತಿಯಲ್ಲಿ ಹೇಳಿದ್ದೇನೆ ಏಕೆಂದರೆ ನೀವು ಪದೇ ಪದೇ ಪ್ರಶ್ನೆಯನ್ನು ಕೇಳುತ್ತೀರಿ ಎಂದು ಪ್ರಿಯಾಂಕಾ ಹೇಳಿದ್ದರು.