
ನಟನಾಗಿ, ನಿರ್ದೇಶಕನಾಗಿ ಉಪೇಂದ್ರ ಅವರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ನಿರ್ದೇಶನದ ‘ಎ’ ಸಿನಿಮಾ (A Movie) ತೆರೆಗೆ ಬಂದು ಇಂದಿಗೆ (ಜನವರಿ 16) 25 ವರ್ಷ ತುಂಬಿದೆ. ಉಪೇಂದ್ರ ವೃತ್ತಿಜೀವನದಲ್ಲಿ ಇದು ವಿಶೇಷ ಸಿನಿಮಾ ಎನಿಸಿಕೊಂಡಿದೆ. ನಟನಾಗಿ, ನಿರ್ದೇಶಕನಾಗಿ ಉಪೇಂದ್ರ (Upendra) ಅವರು ಈ ಚಿತ್ರದ ಮೂಲಕ ಗಮನ ಸೆಳೆದರು. ಈ ಚಿತ್ರವನ್ನು ಈಗಲೂ ಎಲ್ಲರೂ ನೆನಪಿಸಿಕೊಳ್ಳುತ್ತಾರೆ.
1992ರಲ್ಲಿ ತೆರೆಗೆ ಬಂದ ‘ತರ್ಲೆ ನನ್ಮಗ’ ಸಿನಿಮಾ ಮೂಲಕ ಉಪೇಂದ್ರ ಅವರು ನಿರ್ದೇಶನಕ್ಕೆ ಕಾಲಿಟ್ಟರು. ‘ಶ್’, ‘ಓಂ’, ‘ಆಪರೇಷನ್ ಅಂತ’ ಸಿನಿಮಾಗಳನ್ನು ನೀಡಿ ಉಪೇಂದ್ರ ಫೇಮಸ್ ಆದರು. 1998ರಲ್ಲಿ ತೆರೆಗೆ ಬಂದ ಉಪೇಂದ್ರ ನಿರ್ದೇಶನದ ‘ಎ’ ಸಿನಿಮಾ ಯಶಸ್ಸು ಕಂಡಿತು. ಈ ಚಿತ್ರದ ಮೂಲಕ ಅವರು ಮೊದಲ ಬಾರಿಗೆ ಪೂರ್ಣ ಪ್ರಮಾಣದ ಹೀರೋ ಆಗಿ ಕಾಣಿಸಿಕೊಂಡರು.
ಉಪ್ಪಿ ಎಂಟರ್ಟೈನರ್ಸ್ ಮೂಲಕ ಬಿ. ಜಗನ್ನಾಥ್ ಹಾಗೂ ಬಿ.ಜಿ. ಮಂಜುನಾಥ್ ಮೂಲಕ ‘ಎ’ ಸಿನಿಮಾ ಮೂಡಿಬಂದಿತ್ತು. ಕೋಟಿ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ 20 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಉಪೇಂದ್ರ ಅವರು ಸಿದ್ಧಸೂತ್ರಗಳನ್ನು ಬದಿಗಿಟ್ಟು ಗಮನ ಸೆಳೆದಿದ್ದರು. ಈ ಮೂಲಕ ಬೇರೆ ರೀತಿಯಲ್ಲಿ ಆಲೋಚನೆ ಮಾಡುವುದನ್ನು ಹೇಳಿಕೊಟ್ಟರು.
‘ಎ’ ಚಿತ್ರದ ‘ಮಾರಿ ಕಣ್ಣು..’ ಮೊದಲಾದ ಹಾಡುಗಳು ಹಿಟ್ ಆದವು. ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜನೆ ಮಾಡಿದ್ದರು. ಗುರುಕಿರಣ್ ಸಂಗೀತ ಚಿತ್ರಕ್ಕೆ ಮತ್ತಷ್ಟು ಬಲ ಕೊಟ್ಟಿತ್ತು. ಈ ಚಿತ್ರದಲ್ಲಿ ಉಪ್ಪಿಗೆ ಜತೆಯಾಗಿ ಚಾಂದಿನಿ ಮೊದಲಾದವರು ನಟಿಸಿದ್ದರು. ಈ ಸಿನಿಮಾ ಸೈಕಾಲಾಜಿಕಲ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬಂದಿತ್ತು. ಆರಂಭದಲ್ಲೇ ಕ್ಲೈಮ್ಯಾಕ್ಸ್ ತೋರಿಸಿ ಎಲ್ಲರ ತಲೆಗೆ ಹುಳಬಿಟ್ಟಿದ್ದರು ಉಪೇಂದ್ರ.
ಇದನ್ನೂ ಓದಿ: ಪಾಕ್ ಆಕ್ರಮಿತ ಪ್ರದೇಶ ಮರಳಿ ಪಡೆಯಲು ಭಾರತೀಯ ಸೈನ್ಯ ಸಿದ್ಧ: ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ
ಸೋಶಿಯಲ್ ಮೀಡಿಯಾದಲ್ಲಿ ‘ಎ’ ಚಿತ್ರವನ್ನು ನೆನಪಿಸಿಕೊಳ್ಳಲಾಗುತ್ತಿದೆ. ಈ ಸಿನಿಮಾ ಈಗಲೂ ಕ್ಲಾಸಿಕ್ ಚಿತ್ರ ಎನಿಸಿಕೊಂಡಿದೆ. ಈ ಚಿತ್ರವನ್ನು ಭಕ್ತಿಯಿಂದ ನೋಡುವವರ ಸಂಖ್ಯೆ ದೊಡ್ಡದಿದೆ. ಈ ರೀತಿಯ ಚಿತ್ರಗಳನ್ನು ಉಪೇಂದ್ರ ಮತ್ತೆ ಮಾಡಲಿ ಎಂಬುದು ಪ್ರೇಕ್ಷಕರ ಆಸೆ. ಸದ್ಯ, ಉಪೇಂದ್ರ ಅವರು ‘ಯುಐ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರ ಈ ವರ್ಷ ತೆರೆಗೆ ಬರುವ ನಿರೀಕ್ಷೆ ಇದೆ. ಉಪೇಂದ್ರ ಅವರು ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಜತೆಗೆ ಸಿನಿಮಾದಲ್ಲಿ ಅವರು ಬಣ್ಣ ಹಚ್ಚಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ