
ಭಾರಿ ಕುತೂಹಲ ಮೂಡಿಸಿರುವ ‘418’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ದೊಡ್ಡ ಮಟ್ಟದ ಸಿನಿಮಾಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿರುವ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವಿ ಮೇಕರ್ಸ್’ ಈ ಸಿನಿಮಾವನ್ನು ನಿರ್ಮಿಸಿದೆ. ಈ ಸಂಸ್ಥೆಯಿಂದ ನಿರ್ಮಾಣವಾಗಿರುವ ‘418’ ಹಾರರ್ ಸಿನಿಮಾ ಬಿಡುಗಡೆ ಸಜ್ಜಾಗಿದೆ. ‘ಕೆಜಿಎಫ್’ ನಿರ್ದೇಶಕ ಪ್ರಶಾಂತ್ ನೀಲ್ ಅವರು ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಹೊಸ ನಿರ್ದೇಶಕ ಕೀರ್ತನ್ ನಾಡಗೌಡ ಅವರು ಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ.
‘418’ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ನವೀನ್ ಯೆರ್ನೇನಿ ಮತ್ತು ಯಲಮಂಚಿಲಿ ರವಿಶಂಕರ್ ಅವರು ಬಂಡವಾಳ ಹೂಡಿರುವ ಈ ಹಾರರ್-ಥ್ರಿಲ್ಲರ್ ಸಿನಿಮಾದಲ್ಲಿ ಕನ್ನಡದ ನಟಿ ಚೈತ್ರಾ ಆಚಾರ್ ಅವರು ಪ್ರಮುಖ ಪಾತ್ರವನ್ನು ಮಾಡಿದ್ದಾರೆ. ಸೂರ್ಯ ರಾಜ್, ಚರಣ್ ಲಕ್ಕರಾಜು, ಪ್ರೀತಿ ಪಗಡಾಲ ಹಾಗೂ ಶಶಾಂಕ್ ಪಾಟೀಲ್ ಕೂಡ ಇನ್ನುಳಿದ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
‘ಆ ಮನೆಯೊಳಗೆ ಒಂದು ಹಕ್ಕಿಯೂ ಕಾಲಿಟ್ಟಿಲ್ಲ’ ಎಂಬ ಸಂಭಾಷಣೆಯೊಂದಿಗೆ ಟ್ರೇಲರ್ ಶುರುವಾಗಿದೆ. ಆರಂಭದಲ್ಲೇ ಯಾವುದೋ ಅದೃಶ್ಯ ಶಕ್ತಿಯ ಉಪಸ್ಥಿತಿಯ ಸುಳಿವು ನೀಡುತ್ತದೆ. ವಾಸ್ತವ ಮತ್ತು ಭ್ರಮೆಗಳ ನಡುವೆ ಸಿಲುಕಿ ಒದ್ದಾಡುವ ವಿವೇಕ್ ಎಂಬ ಯುವಕನ ಸುತ್ತ ಕಥೆಯ ಎಳೆ ತೆರೆದುಕೊಳ್ಳುತ್ತದೆ. ಸ್ಥಳೀಯರ ಪ್ರಬಲ ವಿರೋಧದ ನಡುವೆಯೂ ಬರೋಬ್ಬರಿ 15 ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಕಟ್ಟಡವನ್ನು ಮರುಪ್ರವೇಶಿಸಿದಾಗ ನಿಗೂಢತೆ ಇನ್ನಷ್ಟು ಗಾಢವಾಗುತ್ತದೆ.
ಆ ಕಟ್ಟಡದ ‘ರೂಮ್ ನಂ. 418’ ಬಗ್ಗೆ ಹಲವು ಕಥೆಗಳಿವೆ. ಅದರಲ್ಲಿ ಅಡಗಿಸಿಕೊಂಡಿರುವ ಭಯಾನಕ ರಹಸ್ಯವೇನು ಎಂಬ ಕುತೂಹಲದ ನಡುವೆ, ದೇವಿಕಾ ಪಾತ್ರದ ಆಗಮನವಾಗುತ್ತಿದ್ದಂತೆ ನೈಜ ಹಾರರ್ ಅನುಭವ ಶುರುವಾಗುತ್ತದೆ. ಮೊದಲಿಗೆ ವಾಸ್ತವ ಮತ್ತು ಕಲ್ಪನೆಗಳ ನಡುವಿನ ಸೈಕಲಾಜಿಕಲ್ ಥ್ರಿಲ್ಲರ್‌ನಂತೆ ಭಾಸವಾದರೆ, ನಂತರ ಹಾರರ್ ಅಂಶಗಳ ಭಯಾನಕ ದರ್ಶನ ಆಗುತ್ತದೆ.
ಇದನ್ನೂ ಓದಿ: ಪ್ರಶಾಂತ್ ನೀಲ್ ಹಾರರ್ ಸಿನಿಮಾಗೆ ಸೆನ್ಸಾರ್ ಕಿರಿಕ್? ಭಯಾನಕವಾಗಿದೆ ‘418’ ಸಿನಿಮಾ?
ನಿರ್ದೇಶಕ ಕೀರ್ತನ್ ನಾಡಗೌಡ ಅವರು ಪ್ರತಿಯೊಂದು ಫ್ರೇಮ್‌ನಲ್ಲೂ ಪ್ರೇಕ್ಷಕರ ಎದೆಬಡಿತ ಹೆಚ್ಚಿಸಲಿದ್ದಾರೆ ಎಂಬುದಕ್ಕೆ ಟ್ರೇಲರ್ನಲ್ಲಿ ಸುಳಿವು ಸಿಕ್ಕಿದೆ. ಚೈತ್ರಾ ಆಚಾರ್ ಅವರು ನಿಭಾಯಿಸಿರುವ ಪಾತ್ರದ ಹಿನ್ನೆಲೆ ಏನು ಎಂಬ ಕುತೂಹಲ ಮೂಡಿದೆ. ದಿನೇಶ್ ದಿವಾಕರ್ ಅವರು ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ವೆಂಕಿ ಜಿಜಿ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.