69ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ (Natoinal Film Awards) ಇಂದು (ಆಗಸ್ಟ್ 24) ಸಂಜೆ ದೆಹಲಿಯಲ್ಲಿ ಆಗಲಿದೆ. ಈ ಬಾರಿ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ದಕ್ಷಿಣ ಭಾರತದ ಸಿನಿಮಾಗಳು ಪಾರುಪತ್ಯ ಸಾಧಿಸಲಿವೆ. 2021 ರಲ್ಲಿ ಬಿಡುಗಡೆ ಆದ ಅಥವಾ 2021ರಲ್ಲಿ ಸೆನ್ಸಾರ್ (Censor) ಆದ ಸಿನಿಮಾಗಳಿಲ್ಲಿ ಅತ್ಯುತ್ತಮ ಸಿನಿಮಾ, ನಟ, ತಂತ್ರಜ್ಞರಿಗೆ 69ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ನೀಡಲಾಗುತ್ತದೆ.
ಈ ಬಾರಿ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ದಕ್ಷಿಣದ ಸಿನಿಮಾಗಳು ಪಾರುಪತ್ಯ ಮೆರೆಯುವುದು ಬಹುತೇಕ ಪಕ್ಕಾ ಆಗಿದೆ. ಬಾಲಿವುಡ್ನ ‘ಗಂಗೂಬಾಯಿ ಕಾಠಿಯಾವಾಡಿ‘ ಸೇರಿದಂತೆ ಇನ್ನು ಒಂದೆರಡು ಸಿನಿಮಾಗಳಿಂದ ತುಸು ಪ್ರತಿಸ್ಪರ್ಧೆ ವ್ಯಕ್ತವಾಗುತ್ತದೆಯಾದರೂ ದಕ್ಷಿಣ ಭಾರತದ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗೆಲ್ಲುವುದು ಬಹುತೇಕ ಖಾತ್ರಿ.
ತಮಿಳಿನ ‘ಜೈ ಭೀಮ್‘, ‘ಕರ್ಣನ್‘, ‘ಸರ್ಪಟ್ಟ ಪರಂಬರೈ‘, ‘ಮಾನಾಡು‘, ‘ರಾಕೆಟ್ರಿ: ದಿ ನಂಬಿ ಎಫೆಕ್ಟ್‘ ಇನ್ನೂ ಕೆಲವು ಸಿನಿಮಾಗಳು ಸ್ಪರ್ಧೆಯಲ್ಲಿವೆ. ಅತ್ಯುತ್ತಮ ನಟ ವಿಭಾಗದಲ್ಲಿಯೂ ತಮಿಳಿನ ಸೂರ್ಯಾ, ಧನುಶ್, ಆರ್ಯಾ, ಸಿಲಂಬರಸನ್, ಮಾಧವನ್ ನಡುವೆ ತುರುಸಿನ ಸ್ಪರ್ಧೆ ನಡೆಯಲಿದೆ. ತಮಿಳಿನ ಇನ್ನೂ ಕೆಲವು ಸಿನಿಮಾಗಳು ರೇಸ್ನಲ್ಲಿವೆ.
ಇದನ್ನೂ ಓದಿ:ಸೈಮಾ 2023: ಪ್ರಶಸ್ತಿಗಾಗಿ ಸೆಣೆಸುತ್ತಿರುವ ಕನ್ನಡ ಸಿನಿಮಾ, ತಂತ್ರಜ್ಞರ ಸಂಪೂರ್ಣ ಪಟ್ಟಿ
ಇನ್ನು ತೆಲುಗಿನಲ್ಲಿ ‘ಆರ್ಆರ್ಆರ್‘ ಸಿನಿಮಾ ಸ್ಪರ್ಧೆಯಲ್ಲಿದ್ದು ಈ ಸಿನಿಮಾವು ಹಲವು ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಳ್ಳಲಿದೆ. ‘ಆರ್ಆರ್ಆರ್‘ ಸಿನಿಮಾ 2022 ರಲ್ಲಿ ಬಿಡುಗಡೆ ಆಗಿದ್ದರೂ ಸೆನ್ಸಾರ್ ಆಗಿದ್ದು 2021ರಲ್ಲಿ ಆದ್ದರಿಂದ ಸಿನಿಮಾವನ್ನು 69ನೇ ವರ್ಷದ ಪ್ರಶಸ್ತಿಗೆ ಪರಿಗಣಿಸಲಾಗಿದೆ. ಅಲ್ಲು ಅರ್ಜುನ್ ನಟನೆಯ ‘ಪುಷ್ಪ‘ ಸಿನಿಮಾ ಸಹ ಸ್ಪರ್ಧೆಯಲ್ಲಿದ್ದು, ಅತ್ಯುತ್ತಮ ನಟ ಪ್ರಶಸ್ತಿಗಾಗಿ ರಾಮ್ ಚರಣ್, ಜೂ ಎನ್ಟಿಆರ್ ಹಾಗೂ ಅಲ್ಲು ಅರ್ಜುನ್ ನಡುವೆ ತುರುಸಿನ ಸ್ಪರ್ಧೆಯಿದೆ. ತೆಲುಗಿನ ‘ಜಾತಿ ರತ್ನಾಲು‘, ‘ಉಪ್ಪೆನ‘ ಇನ್ನೂ ಕೆಲವು ಸಿನಿಮಾಗಳು ಸಹ ಸ್ಪರ್ಧೆಯಲ್ಲಿವೆ.
ಇನ್ನು ಮಲಯಾಳಂನಲ್ಲಿ ‘ದಿ ಗ್ರೇಟ್ ಇಂಡಿಯನ್ ಕಿಚನ್‘, ‘ಮಿನ್ನಲ್ ಮುರಲಿ‘, ‘ನಾಯಟ್ಟು‘, ‘ಮೇಪ್ಪಾದಿಯಾನ್‘ ಸಿನಿಮಾಗಳು ಸ್ಪರ್ಧೆಯಲ್ಲಿವೆ. ಇನ್ನು ಕನ್ನಡದ ‘ಗರುಡಗಮನ ವೃಷಭ ವಾಹನ‘ ಸೇರಿದಂತೆ ಕೆಲವು ಕಲಾತ್ಮಕ ಸಿನಿಮಾಗಳು ಪಟ್ಟಿಯಲ್ಲಿವೆ. ಬಾಲಿವುಡ್ನ ‘ಗಂಗೂಬಾಯಿ ಕಾಠಿಯಾವಾಡಿ’, ಕಂಗನಾ ನಟನೆಯ ‘ತಲೈವಿ’ ಸಿನಿಮಾ ಸಹ ರೇಸ್ನಲ್ಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:29 pm, Thu, 24 August 23