ತೆಲುಗಿನ ಸೂಪರ್ ಸ್ಟಾರ್ ಪವನ್ ಕಲ್ಯಾಣ್ (Pawan Kalyan) ಈಗ ರಾಜಕಾರಣಿಯಾಗಿಯೂ ದೊಡ್ಡ ‘ಹಿಟ್’ ನೀಡಿದ್ದಾರೆ. ಆಂಧ್ರದಲ್ಲಿ ಜಗನ್ ಸರ್ಕಾರವನ್ನು ಉರುಳಿಸಿಯೇ ಸಿದ್ಧ ಎಂದು ಕಳೆದ ನಾಲ್ಕು ವರ್ಷಗಳಿಂದಲೂ ಸತತ ಹೋರಾಟ ಮಾಡುತ್ತಲೇ ಬಂದಿದ್ದ ಪವನ್ಗೆ ಈಗ ಭರ್ಜರಿ ಗೆಲುವು ಧಕ್ಕಿದೆ. ಸ್ವತಃ ಪ್ರಧಾನಿ ಮೋದಿಯವರೇ ಪವನ್ ಕುರಿತು, ‘ನೀವು ಪವನ್ (ಗಾಳಿ) ಅಲ್ಲ ಬಿರುಗಾಳಿ’ ಎಂದಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಪವನ್ ಆಡಳಿತ ಪಕ್ಷದ ಮೇಲೆ ವಾಗ್ದಾಳಿ ನಡೆಸಿದ್ದರು, ಅವರ ಕಾರ್ಯಗಳನ್ನು ಟೀಕಿಸಿದ್ದರು. ಆದರೆ ಪ್ರತಿಯಾಗಿ ವೈಸಿಪಿ ಮುಖಂಡರು ಪವನ್ ರ ಖಾಸಗಿ ವಿಷಯವನ್ನಿಟ್ಟುಕೊಂಡು ಮಾತ್ರವೇ ಪ್ರತಿದಾಳಿ ನಡೆಸುತ್ತಿದ್ದರು. ಪವನ್ಗೆ ಮೂವರು ಪತ್ನಿಯರು, ಪವನ್ ಇನ್ನೊಂದು ಮದುವೆಯಾಗುತ್ತಾರೆ ಇಂಥಹುದೇ ಎದುರಾಳಿಗಳಿಂದ ಕೇಳಿ ಬರುತ್ತಿದ್ದರು. ವಿಷಯವೆಂದರೆ ಪವನ್, ತಮ್ಮ ಖಾಸಗಿ ಬದುಕಿನ ಬಗ್ಗೆ ತೀರ ಗೌಪ್ಯತನ ಮಾಡಿದ್ದಿಲ್ಲ. ತಮ್ಮ ಈ ಹಿಂದಿನ ವಿಫಲ ಮದುವೆಗಳ ಬಗ್ಗೆ ಬಹಿರಂಗವಾಗಿಯೇ ಮಾತನಾಡಿದ್ದಾರೆ. ಅಂದಹಾಗೆ ಪವನ್ರ ಈ ಹಿಂದಿನ ಪತ್ನಿಯರು ಯಾರು? ಅವರೊಟ್ಟಿಗೆ ವಿಚ್ಛೇದನ ಏಕಾಯಿತು? ಈಗ ಅವರು ಎಲ್ಲಿದ್ದಾರೆ? ಇಲ್ಲಿದೆ ಮಾಹಿತಿ.
ಪವನ್ ಕಲ್ಯಾಣ್ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದು 1996 ರಲ್ಲಿ. ಸಿನಿಮಾಕ್ಕೆ ಕಾಲಿಡುವ ಮುಂಚೆ ಸತ್ಯಾನಂದ ನಟನಾ ಶಾಲೆಯಲ್ಲಿ ನಟನೆ ತರಬೇತಿ ತೆಗೆದುಕೊಂಡಿದ್ದರು. ಅದೇ ಶಾಲೆಯಲ್ಲಿ ನಂದಿನಿ ಎಂಬ ವಿದ್ಯಾರ್ಥಿನಿಯೂ ಇದ್ದರು. ಇಬ್ಬರು ಪರಸ್ಪರ ಪ್ರೀತಿಸಿ 1997 ರಲ್ಲಿ ವಿವಾಹವಾದರು. ವಿಶಾಖಪಟ್ಟಣದಲ್ಲಿ ಅದ್ಧೂರಿಯಾಗಿ ವಿವಾಹ ನಡೆಯಿತು. ನಂದಿನಿ ಸಹ ಶ್ರೀಮಂತ ಕುಟುಂಬದವರೇ ಆಗಿದ್ದರು. ಆಗಿನ ದೊಡ್ಡ ದೊಡ್ಡ ಸಿನಿಮಾ ತಾರೆಯರು, ರಾಜಕಾರಣಿಗಳು ಇವರಿಬ್ಬರ ಮದುವೆಗೆ ಬಂದು ಹರಸಿದ್ದರು.
ಆದರೆ ಪವನ್ ಹಾಗೂ ನಂದಿನಿ ನಡುವಿನ ಪ್ರೇಮ ಹೆಚ್ಚು ದಿನ ಗಟ್ಟಿಯಾಗಿರಲಿಲ್ಲ. ಈ ಇಬ್ಬರ ನಡುವೆ ಕೌಟುಂಬಿಕ ಭಿನ್ನಾಭಿಪ್ರಾಯಗಳು ಆರಂಭವಾದವು. ಇದರ ನಡುವೆ ಪವನ್ ಸಹ ದೊಡ್ಡ ಸ್ಟಾರ್ ನಟರಾಗಿ ಬೆಳೆಯಲು ಆರಂಭಿಸಿದರು. 2001 ರಲ್ಲಿ ಪವನ್ ಕಲ್ಯಾಣ್ ನಟಿ ರೇಣು ದೇಸಾಯಿ ಜೊತೆ ಪ್ರೀತಿಗೆ ಬಿದ್ದರು. ಈ ಇಬ್ಬರೂ ಒಟ್ಟಿಗೆ ಇರಲು ಆರಂಭಿಸಿದರು. 2004 ರಲ್ಲಿ ಪವನ್ ಹಾಗೂ ರೇಣು ದೇಸಾಯಿಗೆ ಮೊದಲ ಮಗ ಅಕಿರಾ ಜನಿಸಿದ. ಆ ಸಮಯದಲ್ಲಿ ಪವನ್ರ ಮೊದಲ ಪತ್ನಿ ನಂದಿನಿ, ಪವನ್ ಕಲ್ಯಾಣ್ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದರು.
ಇದನ್ನೂ ಓದಿ:ಪವನ್ ಕಲ್ಯಾಣ್ಗೆ ತುಚ್ಛ ಪದ ಬಳಸಿದ್ದ ಪೋಸಾನಿ ಕೃಷ್ಣ ಸಿನಿಮಾ ಬದುಕು ಅಂತ್ಯ?
ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಎರಡನೇ ಮದುವೆ ಆಗಿದ್ದಾರೆಂದು ಪವನ್ರ ಮೊದಲ ಪತ್ನಿ ಆರೋಪ ಮಾಡಿದರು. ವಿಶಾಖಪಟ್ಟಣಂ ಕೌಟುಂಬಿಕ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದ ಪವನ್ ಕಲ್ಯಾಣ್, ತಾವು ರೇಣು ದೇಸಾಯಿಯನ್ನು ವಿವಾಹವಾಗಿಲ್ಲ ಎಂದಿದ್ದರು. ಆ ಬಳಿಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪವನ್ ಕಲ್ಯಾಣ್, 2008 ರಲ್ಲಿ ಬರೋಬ್ಬರಿ ಐದು ಕೋಟಿ ರೂಪಾಯಿ ಜೀವನಾಂಶವನ್ನು ನೀಡಿ ನಂದಿನಿ ಅವರಿಂದ ವಿಚ್ಛೇದನ ಪಡೆದುಕೊಂಡರು. ಪವನ್ರಿಂದ ವಿಚ್ಛೇದನ ಪಡೆದ ನಂದಿನಿ, ತಮ್ಮ ಹೆಸರನ್ನು ಜಾನ್ಹವಿ ಎಂದು ಬದಲಾಯಿಸಿಕೊಂಡು ಡಾ ಕಲ್ಯಾಣ್ ಎಂಬುವರನ್ನು ವಿವಾಹವಾಗಿ ವಿದೇಶಕ್ಕೆ ತೆರಳಿದರು. ಅಲ್ಲಿ ಆಸ್ಪತ್ರೆ ಚೈನ್ ಪ್ರಾರಂಭಿಸಿ, ಸುಮಾರು 400 ಕೋಟಿ ಆಸ್ತಿಯ ಒಡೆಯರಾಗಿದ್ದಾರೆ ಎನ್ನಲಾಗುತ್ತದೆ.
2001 ರಿಂದ ರೇಣು ದೇಸಾಯಿ ಜೊತೆ ಸಹಜೀವನ ನಡೆಸುತ್ತಿದ್ದ ಪವನ್ ಕಲ್ಯಾಣ್ 2009 ರಲ್ಲಿ ರೇಣು ಅವರನ್ನು ಅಧಿಕೃತವಾಗಿ ಮದುವೆಯಾದರು. ಅದಾಗಲೇ ಅವರಿಗೆ ಐದು ವರ್ಷದ ಮಗನಿದ್ದು, ಬಳಿಕ 2010 ರಲ್ಲಿ ಅವರಿಗೆ ಹೆಣ್ಣು ಮಗು ಜನಿಸಿತು. ಆ ಮಗುವಿಗೆ ಆದ್ಯ ಎಂದು ಹೆಸರಿಟ್ಟಿದ್ದಾರೆ. ಅದೇ ಸಮಯದಲ್ಲಿ ಪವನ್ ಕಲ್ಯಾಣ್ ರಾಜಕೀಯದಲ್ಲಿ ಸಕ್ರಿಯರಾಗಲು ತೊಡಗಿದರು. ಅಣ್ಣ ಮೆಗಾಸ್ಟಾರ್ ಚಿರಂಜೀವಿಯವರು ತಾವು ಸ್ಥಾಪಿಸಿದ ಪ್ರಜಾರಾಜ್ಯಂ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡಿದಾಗ ಪವನ್ ಪಕ್ಷದಿಂದ ಹೊರಬಂದು ಹೊಸ ಪಕ್ಷ ಸ್ಥಾಪಿಸಲು ಪ್ರಕ್ರಿಯೆ ಪ್ರಾರಂಭಿಸಿದರು. ಆ ಸಮಯದಲ್ಲಿ ಪತ್ನಿ ರೇಣು ದೇಸಾಯಿ ಒಟ್ಟಿಗೆ ಭಿನ್ನಾಭಿಪ್ರಾಯಗಳು ಪ್ರಾರಂಭವಾಗಿ 2012 ರಲ್ಲಿ ಈ ಜೋಡಿ ವಿಚ್ಛೇದನ ಪಡೆದು ದೂರಾಯ್ತು. ಇಬ್ಬರು ಮಕ್ಕಳು ಹಾಗೂ ರೇಣು ದೇಸಾಯಿಗೆ ಜೀವನಾಂಶವನ್ನು ಪವನ್ ಕಲ್ಯಾಣ್ ನೀಡುತ್ತಿದ್ದಾರೆ.
2018ರ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರೇಣು ದೇಸಾಯಿ, ‘ವಿಚ್ಛೇದನಕ್ಕೆ ನನ್ನ ಸಮ್ಮತಿ ಇರಲಿಲ್ಲ. ಸಾಕಷ್ಟು ಬಾರಿ ಬೇಡ ಎಂದರೂ ಸಹ ಪವನ್, ವಿಚ್ಚೇದನಕ್ಕಾಗಿ ಬಲವಂತ ಮಾಡಿದರು ಅಲ್ಲದೆ ಇಬ್ಬರೂ ವಿಚ್ಛೇದನ ಪಡೆದಿರುವ ವಿಷಯವನ್ನು ಬಹಿರಂಗಪಡಿಸಬಾರದು’ ಎಂದು ಸಹ ಒತ್ತಾಯಿಸಿದ್ದರು ಎಂದಿದ್ದರು. ಈಗ ಮಕ್ಕಳಾದ ಅಕಿರಾ ಹಾಗೂ ಆದ್ಯ ರೇಣು ದೇಸಾಯಿಯ ಸುಪರ್ಧಿಯಲ್ಲಿ ಬೆಳೆಯುತ್ತಿದ್ದಾರೆ. ಇತ್ತೀಚೆಗೆ ಚುನಾವಣೆ ಗೆದ್ದ ಬಳಿಕ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಲು ಹೋದಾಗ ಪವನ್ ತಮ್ಮ ಮಗ ಅಕಿರಾ ಅನ್ನು ಜೊತೆಗೆ ಕರೆದೊಯ್ದಿದ್ದರು.
ಇದನ್ನೂ ಓದಿ:ಇದು ನನ್ನ ಜೀವನದ ಎರಡನೇ ಅದ್ಭುತ ಜಯ ಎಂದ ಪವನ್ ಕಲ್ಯಾಣ್, ಮೊದಲ ಜಯ ಯಾವುದು?
ಎರಡನೇ ಪತ್ನಿ ರೇಣು ದೇಸಾಯಿ ಜೊತೆ ವಿಚ್ಛೇದನ ಪಡೆಯುವ ಮುಂಚೆ 2010 ರಲ್ಲಿ ಪವನ್ ಕಲ್ಯಾಣ್ ‘ತೀನ್ ಮಾರ್’ ಸಿನಿಮಾದ ಚಿತ್ರೀಕರಣಕ್ಕಾಗಿ ರಷ್ಯಾಕ್ಕೆ ತೆರಳಿದ್ದರು. ಅಲ್ಲಿ ಮಾಡೆಲ್ ಅನ್ನಾ ಲೆಜ್ನೋವಾರ ಪರಿಚಯವಾಯಿತು. ಅನ್ನಾ ಜೊತೆಗಿನ ಪರಿಚಯ ಪ್ರೀತಿಗೆ ತಿರುಗಿತು. 2012 ರಲ್ಲಿ ರೇಣು ದೇಸಾಯಿಗೆ ವಿಚ್ಛೇದನ ನೀಡಿದ ಪವನ್ ಕಲ್ಯಾಣ್, 2013 ಸ್ಪೆಷಲ್ ಮ್ಯಾರೇಜ್ ಆಕ್ಟ್ ಅಡಿಯಲ್ಲಿ ಅನ್ನಾ ಜೊತೆ ವಿವಾಹವಾದರು. ಅನ್ನಾ ವಿದೇಶಿಗರಾದರೂ ಭಾರತೀಯ ಸಂಸ್ಕೃತಿಯ ಬಗ್ಗೆ ಅಪಾರ ಗೌರವವುಳ್ಳವರಾಗಿದ್ದಾರೆ. ಇತ್ತೀಚೆಗೆ ಪವನ್ ಕಲ್ಯಾಣ್ ಗೆದ್ದಾಗ ಪವನ್ಗೆ ಆರತಿ ಮಾಡಿ ಅವರ ಹಣೆಗೆ ತಿಲಕವಿಟ್ಟ ವಿಡಿಯೋ ಇನ್ನಿತರೆ ವಿಡಿಯೋಗಳು ಸಖತ್ ವೈರಲ್ ಆಗುತ್ತಿದೆ.
ಅನ್ನಾ ಲೆಜ್ನೋವಾ ಹಾಗೂ ಪವನ್ಗೆ ಇಬ್ಬರು ಮಕ್ಕಳಿದ್ದಾರೆ. ಮಗಳಿಗೆ ಪೊಲೇನಾ ಅಂಜನಾ ಪವನೋವಾ ಎಂದು ಹೆಸರಿಟ್ಟಿದ್ದಾರೆ. ಮಗನಿಗೆ ಮಾರ್ಕ್ ಶಂಕರ್ ಪವನೋವಿಚ್ ಎಂದು ಹೆಸರಿಟ್ಟಿದ್ದಾರೆ. ಪವನ್ ಹಾಗೂ ರೇಣು ದೇಸಾಯಿ ಪುತ್ರ ಅಕಿರಾ ಶೀಘ್ರವೇ ಬೆಳ್ಳಿ ತೆರೆಗೆ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ. ರೇಣು ದೇಸಾಯಿಗೂ ಮಗ ಅವರ ಅಪ್ಪನಂತೆ ಯಶಸ್ವಿ ನಾಯಕ ನಟ ಆಗಬೇಕೆಂಬ ಆಸೆ ಇದೆಯಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ