AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ನನ್ನ ಜೀವನದ ಎರಡನೇ ಅದ್ಭುತ ಜಯ ಎಂದ ಪವನ್ ಕಲ್ಯಾಣ್, ಮೊದಲ ಜಯ ಯಾವುದು?

ಪವನ್ ಕಲ್ಯಾಣ್ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ಇದು ಪವನ್​ಗೆ ರಾಜಕೀಯವಾಗಿ ಜನ್ಮ ನೀಡಿದ ಚುನಾವಣೆ ಎನ್ನಲಾಗುತ್ತಿದೆ. ಆದರೆ ಈ ಜಯವನ್ನು ತಮ್ಮ ಜೀವನದ ಎರಡನೇ ಅದ್ಭುತ ಜಯ ಎಂದಿದ್ದಾರೆ ಪವನ್. ಹಾಗಿದ್ದರೆ ಮೊದಲನೇ ಜಯ ಯಾವುದು?

ಇದು ನನ್ನ ಜೀವನದ ಎರಡನೇ ಅದ್ಭುತ ಜಯ ಎಂದ ಪವನ್ ಕಲ್ಯಾಣ್, ಮೊದಲ ಜಯ ಯಾವುದು?
ಮಂಜುನಾಥ ಸಿ.
|

Updated on: Jun 05, 2024 | 3:22 PM

Share

ಪವನ್ ಕಲ್ಯಾಣ್ (Pawan Kalyan) ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಜಯ ಸಾಧಿಸಿದ್ದಾರೆ. ಜನಸೇನಾ ಪಕ್ಷದ ಸಂಸ್ಥಾಪಕರಾದ ಪವನ್ ಕಲ್ಯಾಣ್, ಟಿಡಿಪಿ ಹಾಗೂ ಬಿಜೆಪಿ ಜೊತೆ ಸೇರಿ ಚುನಾವಣೆ ಎದುರಿಸಿದ್ದರು. ಈ ಚುನಾವಣೆಯಲ್ಲಿ ಅವರಿಗೆ 21 ಕ್ಷೇತ್ರಗಳನ್ನು ನೀಡಲಾಗಿತ್ತು. ಆ 21 ಕ್ಷೇತ್ರಗಳಲ್ಲಿಯೂ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿದ್ದಾರೆ. ಆ ಮೂಲಕ ಭಾರಿ ರಾಜಕೀಯ ಜಯವನ್ನು ಪವನ್ ಪಡೆದಿದ್ದಾರೆ. ಪವನ್ ಪಾಲಿಗೆ ಇದು ಅಭೂತಪೂರ್ವ ಜಯ ಎನ್ನಲಾಗುತ್ತಿದೆ. ಇಲ್ಲಿಂದಲೇ ಪವನ್​ರ ರಾಜಕೀಯ ಪಯಣ ಪ್ರಾರಂಭವಾಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಪವನ್ ಕಲ್ಯಾಣ್ ಮಾತ್ರ, ಈ ಜಯ ತಮ್ಮ ಪಾಲಿಗೆ ಎರಡನೇ ಅದ್ಭುತ ಜಯ ಎಂದಿದ್ದಾರೆ.

ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಮಾತನಾಡಿರುವ ಪವನ್ ಕಲ್ಯಾಣ್, ‘ನನಗೆ ಏನು ಮಾತನಾಡಬೇಕು ಎಂಬುದು ಸಹ ತಿಳಿಯುತ್ತಿಲ್ಲ. ನನ್ನ ಜೀವನದಲ್ಲಿ ಈವರೆಗೆ ಬಹಳ ದೊಡ್ಡ ಜಯಗಳನ್ನೇನೂ ನಾನು ಪಡೆದಿಲ್ಲ. ಸಿನಿಮಾಗಳಲ್ಲಿ ನಟಿಸುವಾಗ ‘ತೊಲಿ ಪ್ರೇಮ’ ಎಂಬ ಸಿನಿಮಾ ಮಾಡಿದ್ದೆ. ಆಗ ಭಾರಿ ಗೆಲುವನ್ನು ನೋಡಿದ್ದೆ. ಅದಾದ ಬಳಿಕ ಯಾರೊಬ್ಬರೂ ಬಂದು ನೀನು ಗೆದ್ದಿದ್ದೀಯ, ನಿನ್ನ ಸಿನಿಮಾ ಭಾರಿ ದೊಡ್ಡ ಗೆಲುವು ಕಂಡಿದೆ, ಹಣ ಬಂದಿದೆ ಎಂದು ಹೇಳಿರಲಿಲ್ಲ’ ಎಂದಿದ್ದಾರೆ.

‘ನನ್ನ ಜೀವನದಲ್ಲಿ ಹೊಡೆತ ತಿಂದಿದ್ದೀನಿ, ಬೈಗುಳಗಳನ್ನು ಕೇಳಿಸಿಕೊಂಡಿದ್ದೀನಿ, ಬಿದ್ದಿದ್ದೀನಿ, ಎದ್ದಿದ್ದೀನಿ. ಅದೆಷ್ಟು ಎತ್ತರಕ್ಕೆ ಬೆಳಿದ್ದೀನಿ ಎಂಬುದು ಸಹ ನನಗೆ ಗೊತ್ತಿಲ್ಲ. ನಿಮ್ಮ ಹೃದಯಗಳಲ್ಲಿ ನನ್ನನ್ನು ಕೂರಿಸಿಕೊಂಡು 21 ಕ್ಕೆ 21 ಕ್ಷೇತ್ರಗಳನ್ನು ನನಗೆ ಗೆಲ್ಲಿಸಿಕೊಟ್ಟಿದ್ದೀರಿ. ಈ ಗೆಲುವು ಬಂದ ಬಳಿಕವೇ ನನಗೆ ಗೊತ್ತಾಗುತ್ತಿದೆ. ನೀವು ನನ್ನನ್ನು ಎಷ್ಟು ಪ್ರೀತಿಸಿದ್ದೀರೆಂದು’ ಎಂದು ಪವನ್ ಕಲ್ಯಾಣ್ ಭಾವುಕರಾಗಿ ಹೇಳಿದ್ದಾರೆ.

ಇದನ್ನೂ ಓದಿ:ಚುನಾವಣೆಯಲ್ಲಿ ಗೆದ್ದ ಪವನ್ ಕಲ್ಯಾಣ್​ಗೆ ಪತ್ನಿಯಿಂದ ವೀರತಿಲಕ

ಪವನ್ ಕಲ್ಯಾಣ್, ಅವರ ಅಣ್ಣ ಚಿರಂಜೀವಿ ಪ್ರಜಾರಾಜ್ಯಂ ರಾಜಕೀಯ ಪಕ್ಷ ಸ್ಥಾಪಿಸಿದಾಗ ಅದರ ಯುವಘಟಕದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಆದರೆ ಚಿರಂಜೀವಿ ಗೆ ರಾಜಕೀಯದಲ್ಲಿ ದೊಡ್ಡ ಗೆಲುವು ಧಕ್ಕಲಿಲ್ಲ. ಕೊನೆಗೆ ಪವನ್ ಕಲ್ಯಾಣ್ ಜನಸೇನಾ ಪಕ್ಷ ಸ್ಥಾಪಿಸಿ ರಾಜಕೀಯಕ್ಕೆ ಧುಮುಕಿದರು. ಕಳೆದ ಚುನಾವಣೆಯಲ್ಲಿ ಜನಸೇನಾದ ಒಬ್ಬ ಅಭ್ಯರ್ಥಿ ಸಹ ಗೆದ್ದಿರಲಿಲ್ಲ. ಸ್ವತಃ ಎರಡು ಕ್ಷೇತ್ರದಿಂದ ಚುನಾವಣೆಗೆ ನಿಂತಿದ್ದ ಪವನ್ ಸಹ ಎರಡೂ ಕಡೆ ಸೋತಿದ್ದರು. ಆದರೆ ಈ ಬಾರಿ 21 ಕ್ಷೇತ್ರದಲ್ಲಿ ಮಾತ್ರವೇ ಜನಸೇನಾ ಅಭ್ಯರ್ಥಿಗಳು ಸ್ಪರ್ಧಿಸಿ ಆ 21 ಕ್ಷೇತ್ರಗಳಲ್ಲಿಯೂ ಜನಸೇನಾ ಅಭ್ಯರ್ಥಿಗಳು ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ.

ಆಂಧ್ರದಲ್ಲಿ ಜಗನ್ ಸರ್ಕಾರವನ್ನು ತೆರವುಗೊಳಿಸಬೇಕೆಂಬ ಸಿಂಗಲ್ ಅಜೆಂಡ ಮೂಲಕ ಈ ಬಾರಿ ಪವನ್ ಚುನಾವಣೆಗೆ ಇಳಿದಿದ್ದರು, ಅದರಂತೆ ತಮ್ಮ ಗುರಿಯನ್ನು ಸಾಧಿಸಿದ್ದಾರೆ. ಆಂಧ್ರದ ಹೊಸ ಸಿಎಂ ಆಗಿ ಚಂದ್ರಬಾಬು ನಾಯ್ಡು ಜೂನ್ 9ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪವನ್ ಕಲ್ಯಾಣ್​ಗೆ ಆಂಧ್ರ ಸರ್ಕಾರದಲ್ಲಿ ಪ್ರಬಲವಾದ ಸಚಿವ ಸ್ಥಾನವೇ ಸಿಗಬಹುದು ಎಂಬ ನಿರೀಕ್ಷೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ